Bangalore Rains: ಅಕ್ಟೋಬರ್‌ನಲ್ಲೂ ಭಾರೀ ಮಳೆ, 124 ವರ್ಷದಲ್ಲಿ ನಾಲ್ಕನೇ ಬಾರಿಗೆ ದಾಖಲೆ ಬರೆದ ಬೆಂಗಳೂರು; ಕಾರಣ ಏನಿರಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Rains: ಅಕ್ಟೋಬರ್‌ನಲ್ಲೂ ಭಾರೀ ಮಳೆ, 124 ವರ್ಷದಲ್ಲಿ ನಾಲ್ಕನೇ ಬಾರಿಗೆ ದಾಖಲೆ ಬರೆದ ಬೆಂಗಳೂರು; ಕಾರಣ ಏನಿರಬಹುದು

Bangalore Rains: ಅಕ್ಟೋಬರ್‌ನಲ್ಲೂ ಭಾರೀ ಮಳೆ, 124 ವರ್ಷದಲ್ಲಿ ನಾಲ್ಕನೇ ಬಾರಿಗೆ ದಾಖಲೆ ಬರೆದ ಬೆಂಗಳೂರು; ಕಾರಣ ಏನಿರಬಹುದು

ಬೆಂಗಳೂರಿನಲ್ಲಿ ಮಳೆ ಈ ಬಾರಿ ಅಕ್ಟೋಬರ್‌ನಲ್ಲಿ ಕೊಂಚ ಹೆಚ್ಚೇ ಸುರಿದಿದೆ. ಅದೂ 124 ವರ್ಷಗಳ ಬೆಂಗಳೂರು ಅಕ್ಟೋಬರ್‌ ಮಳೆ ಇತಿಹಾಸದಲ್ಲಿ ಇದು ನಾಲ್ಕನೇ ಅತ್ಯಧಿಕ ಎನ್ನುವುದು ಹವಾಮಾನ ಇಲಾಖೆ ವಿವರಣೆ.

ಬೆಂಗಳೂರಿನಲ್ಲಿ ಎರಡು ದಶಕದ ಬಳಿಕ ಅಕ್ಟೋಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಎರಡು ದಶಕದ ಬಳಿಕ ಅಕ್ಟೋಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.

ಬೆಂಗಳೂರು: ಅಕ್ಟೋಬರ್‌ ಮಳೆಗೆ ಉದ್ಯಾನನಗರಿ ಬೆಂಗಳೂರು ಬೆಚ್ಚಿ ಬಿದ್ದಿದೆ. 124 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಅಕ್ಟೋಬರ್‌ ತಿಂಗಳಲ್ಲಿ ದಾಖಲೆ ಮಳೆ ಒಂದೇ ದಿನ ಸುರಿದಿದೆ. ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಭಾರೀ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. ಅದರಲ್ಲೂ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಲೇ ಇದೆ. ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳವಾರ ಸುರಿದ ಮಳೆ ಪ್ರಮಾನ ವಾಡಿಕೆಗಿಂತ ಅಧಿಕವಾಗಿದ್ದು ಅಕ್ಟೋಬರ್‌ ತಿಂಗಳಲ್ಲಿ ಇಷ್ಟೊಂದು ಮಳೆ 124 ವರ್ಷದಲ್ಲಿ ಸುರಿದಿರುವುದು ನಾಲ್ಕನೇ ಬಾರಿ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಹೇಳಿದೆ. ಇದಕ್ಕೆ ಕಾರಣ ಏನಿರಬಹುದು ಎನ್ನುವ ವರದಿಯನ್ನು ಹವಾಮಾನ ಇಲಾಖೆಯು ಸಿದ್ದಪಡಿಸುತ್ತಿದೆ.

ಬೆಂಗಳೂರಿನಲ್ಲಿ ಜೂನ್‌ ಆರಂಭಕ್ಕೂ ಮುನ್ನವೇ ಮಳೆ ಆರಂಭವಾಗುತ್ತದೆ. ಮುಂಗಾರು ಮಳೆ ಬೆಂಗಳೂರಿನಲ್ಲಿ ಕೆಲವು ವರ್ಷ ಬಿಟ್ಟರೆ ಉತ್ತಮ ಪ್ರಮಾಣದಲ್ಲಿ ಆಗಿದೆ. ಈ ವರ್ಷದ ಜೂನ್‌ನಲ್ಲಿ ದಾಖಲೆ ಮಳೆಯೇ ಆಗಿತ್ತು. ಅದರಲ್ಲೂ2024ರ ಜೂನ್ 2 ರಂದು ಸುರಿದಿದ್ದ ಮಳೆ ದಾಖಲೆ ನಿರ್ಮಿಸಿತ್ತು. ಅಂದರೆ ಕಳೆದ 133 ವರ್ಷಗಳಲ್ಲಿ ಜೂನ್‌ನಲ್ಲಿ ಒಂದೇ ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ.ಜೂನ್ 1 ಮತ್ತು ಜೂನ್ 2 ರಂದು ಎರಡು ದಿನದಲ್ಲಿ 140.7 ಮಿಮೀ ಮಳೆಯಾಗಿದೆ. ಇದು ಜೂನ್ ತಿಂಗಳ ಸರಾಸರಿಯನ್ನು ಮೀರಿಸಿದೆ. ಆದರೆ ಭಾನುವಾರ 111 ಮಿಮೀ ಮಳೆಯಾಗಿದ್ದು, ಜೂನ್‌ನಲ್ಲಿ ಒಂದೇ ದಿನದಲ್ಲಿ ಸುರಿದ ಈ ಮಳೆ 133 ವರ್ಷಗಳ ದಾಖಲೆಯನ್ನು ಮುರಿದಿದೆ. 1891, ಜೂನ್ 16 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(IMD)ಯ ವಿಜ್ಞಾನಿ ಎನ್ ಪುವಿಯರಸನ್ ಹೇಳಿದ್ದರು.

ಇದಾದ ನಂತರ ಈಗ ಅಕ್ಟೋಬರ್‌ನಲ್ಲೂ ಬೆಂಗಳೂರಿನಲ್ಲಿ ಭಾರೀ ಮಳೆಯೇ ಆಗುತ್ತಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ 241 ಮಿ.ಮೀ ಮಳೆಯಾಗಿದೆ. ಇದು ಸಾಮಾನ್ಯ ಮಳೆ 118 ಮಿ.ಮೀಗಿಂತಲೂ ದುಪ್ಪಟ್ಟು ಆಗಿದೆ. ಈ ಹಿಂದೆ ಬೆಂಗಳೂರು ನಗರದಲ್ಲಿ ಅಕ್ಟೋಬರ್‌ ತಿಂಗಳಲ್ಲಿ 2005ರಲ್ಲಿ 291 ಮಳೆಯಾಗಿದ್ದು ಅತ್ಯಧಿಕ. ಅದನ್ನು ಬಿಟ್ಟರೆ 1943 ರಲ್ಲಿ 287 ಮಿ.ಮೀ, 1970 ರ ಅಕ್ಟೋಬರ್‌ ತಿಂಗಳಲ್ಲಿ 253 ಮಿ.ಮೀ ಮಳೆ ಸುರಿದಿತ್ತು ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ಈಗಾಗಲೇ ಮುಂಗಾರು ಮುಗಿದು ಹಿಂಗಾರು ಶುರುವಾಗಿದೆ. ಕೆಲವು ಕಡೆ ಮುಂಗಾರು ಇನ್ನೂ ಮುಗಿದಿಲ್ಲ. ಈಶಾನ್ಯ ಮಳೆಗಳು ಅಲ್ಲಲ್ಲಿ ಚಾಲ್ತಿಯಲ್ಲಿವೇ. ಬೆಂಗಳೂರಲ್ಲೂ ಇದೇ ರೀತಿಯ ಮಳೆಯಾಗಿರಬಹುದು. ಅದೂ ಮನೆಗಳು, ರಸ್ತೆಗಳಿಗೆ ನುಗ್ಗಿ ಚರಂಡಿಗಳಿಗೆಲ್ಲಾ ಉಕ್ಕಿ ಹರಿಯುತ್ತಿವೆ. ನದಿಯ ರೂಪವನ್ನು ಪಡೆದು ಅನಾಹುತಗಳು ಸಂಭವಿಸಿವೆ. ಬೆಂಗಳೂರಿನಲ್ಲಿ ಜನಜೀವನವೇ ಅಸ್ತವ್ಯಸ್ತವಾಗುಷ್ಟರ ಮಟ್ಟಿಗೆ ಮಳೆ ಸುರಿದಿರುವುದಲ್ಲಿ ಅಕ್ಟೋಬರ್‌ 22ರ ಬುಧವಾರವೂ ಸೇರಿದೆ ಎಂದು ವಿವರಿಸುತ್ತಾರೆ.

ಕೆಲವು ಕಡೆಗಳಲ್ಲಿ ವಾಯು ಭಾರ ಕುಸಿತವಿದೆ. ಇದರ ಪರಿಣಾಮವಾಗಿಯೂ ಮಳೆಯಾಗಿರಬಹುದು. ಇನ್ನು ಮುಂಗಾರು ಮಳೆ ಕೆಲವೊಮ್ಮೆ ಏರು ಪೇರಾಗಿ ಅಕ್ಟೋಬರ್‌ ವರೆಗೂ ವಿಸ್ತರಿಸಿದ ಉದಾಹರಣೆಗಳಿವೆ. ಎರಡೂ ಸೇರಿಯೇ ಹೆಚ್ಚಿನ ಮಳೆಯಾಗಿರಬಹುದು ಎನ್ನುವ ಅಭಿಪ್ರಾಯವೂ ಇದೆ. ಆದರೂ ಹವಾಮಾನ ಇಲಾಖೆ ಅಧಿಕಾರಿಗಳು ಬೆಂಗಳೂರಿನ ದಾಖಲೆ ಮಳೆಗೆ ನಿಖರ ಕಾರಣಗಳನ್ನು ಪಟ್ಟಿ ಮಾಡುತ್ತಿದ್ದಾರೆ.

ಇನ್ನು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಬಹುದು. ನಿಧಾನವಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ. ಅಕ್ಟೋಬರ್‌ 27ರ ಹೊತ್ತಿಗೆ ಹಗುರ ಮಳೆಗಳು ಬಿಟ್ಟರೆ ಭಾರೀ ಮಳೆಯ ಆತಂಕವಿಲ್ಲ. ಮೋಡಗಳೂ ಶುಭ್ರವಾಗಲಿವೆ ಎನ್ನುವ ನಿರೀಕ್ಷೆಯೂ ಇದೆ.

Whats_app_banner