ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ
ಬೆಂಗಳೂರಿನ ಸುಸ್ವರಲಯ ಕಲಾ ಶಾಲೆಯ ರಜತಮಹೋತ್ಸವಕ್ಕೆ ಸಿದ್ದತೆಗಳು ನಡೆದಿವೆ. ಇದರ ನಡುವೆ ವಾರ್ಷಿಕ ಪ್ರಶಸ್ತಿಗೆ ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಉದ್ಯಾನ ನಗರಿಯ ಪ್ರತಿಷ್ಠಿತ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಯನ್ನು ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್ ಅವರಿಗೆ ಘೋಷಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಗಾಯಕ, ವಿದ್ವಾನ್ ಟಿ. ವಿ. ರಾಮ ಪ್ರಸಾದ್‌ಗೆ ‘ಸ್ವರಲಯ ರತ್ನ’ ಮತ್ತು ವಿಶ್ವ ಖ್ಯಾತ ವಯೋಲಿನ್ ವಿದುಷಿ ನಳಿನಾ ಮೋಹನ್ ಅವರಿಗೆ ‘ಸ್ವರಲಯ ಶೃಂಗ’ ಪ್ರಶಸ್ತಿಯನ್ನು ಉನ್ನತ ಮಟ್ಟದ ಆಯ್ಕೆ ಸಮಿತಿ ಪ್ರಕಟಿಸಿದೆ. ಪ್ರಶಸ್ತಿಯು ಸ್ಮರಣಿಕೆ, 10 ಸಾವಿರ ರೂ. ನಗದು ಪುರಸ್ಕಾರ ಮತ್ತು ವಿದ್ವತ್ ಸನ್ಮಾನ ಒಳಗೊಂಡಿದೆ. ನ. 9ರಂದು ಬನಶಂಕರಿ ರಾಮಲಲಿತ ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಸಂಜೆ 4ಕ್ಕೆ ಗಣ್ಯರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಂದು ಸುಸ್ವರಲಯ ಕಲಾಶಾಲೆ ಪ್ರಾಚಾರ್ಯ ವಿದ್ವಾನ್ ಸುಧೀಂದ್ರ ತಿಳಿಸಿದ್ದಾರೆ.
ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಮತ್ತು ಹಿರಿಯ ಮೃದಂಗ ವಿದ್ವಾಂಸ, ಗುರು ಶ್ರೀಮುಷ್ಣಂ ರಾಜಾರಾವ್ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
ವಿಸ್ತಾರ ಜ್ಞಾನ, ವಿಶೇಷ ವಿದ್ವತ್‌ಗೆ ಪ್ರತೀಕ ಟಿ.ವಿ.ರಾಮ ಪ್ರಸಾದ್
ಬೆಂಗಳೂರಿನ ವಿದ್ವಾಂಸ ಟಿ.ವಿ.ರಾಮಪ್ರಸಾದ್ ಹೆಸರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತನ್ನದೇ ಆದ ವಿಶೇಷತೆ ಪಡೆದಿದೆ. ಅವರ ಬೋಧನಾ ಅನುಭವ ಮತ್ತು ಕಛೇರಿ ಶೈಲಿಗಳು ಅನನ್ಯವಾಗಿದ್ದು, ವಿಶ್ವಮಟ್ಟದಲ್ಲಿ ಬೆಳಗಿದೆ. ಭವ್ಯವಾದ ಧ್ವನಿ, ವಿಸ್ತಾರವಾದ ಜ್ಞಾನ, ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಒಲಿದ ಗಾಯನ ಸಾಮರ್ಥ್ಯಗಳು ಅವರ ಘನತೆಯನ್ನು ಆಗ್ರ ಸ್ಥಾನಕ್ಕೆ ಏರಿಸಿವೆ.
ಹಿರಿಯ ಕಲಾವಿದರಾದ ಮಹಾಲಕ್ಷ್ಮಿ ನಟರಾಜನ್ ( ಮುಂಬಯಿ ) ಮತ್ತು ಶಾರದಾ ಸತ್ಯನಾರಾಯಣ ಅವರಲ್ಲಿ ರಾಮ ಪ್ರಸಾದರು ಸಂಗೀತ ಕಲಿಕೆ ಪ್ರಾರಂಭಿಸಿದರು. ಸತತ ಸಾಧನೆಯೇ ಅವರಿಗೆ ವೃತ್ತಿಪರ ಬದ್ಧತೆಗಳನ್ನು ಕರಗತ ಮಾಡಿಸಿತು ಎಂಬುದು ಬಹು ವಿಶೇಷ. ಮನೋಧರ್ಮವನ್ನು ನಿರೂಪಿಸುವಾಗ ಪ್ರಮುಖ ಸಾಂಪ್ರದಾಯಿಕ ಅಂಶಗಳನ್ನು ಅನುಸರಿಸುವುದು ಅವರ ವಿಶೇಷತೆಯಾಗಿದೆ.
ಕಳೆದ 25 ವರ್ಷದಿಂದ ಆಕಾಶವಾಣಿ ಮತ್ತು ದೂರದರ್ಶನದ ಎ-ಗ್ರೇಡ್ ಕಲಾವಿದರಾದ ರಾಮ ಪ್ರಸಾದ್ ಗಾಯನ ಮಾಧುರ್ಯ ನಮ್ಮ ನಾಡನ್ನೂ ದಾಟಿ ಸಾಗರದಾಚೆಗೂ ತಲುಪಿ ಅಲ್ಲಿಯೂ ಕಲಾರಸಿಕರಿಗೆ ಮಾನಸೋಲ್ಲಾಸ ನೀಡಿದೆ. 25 ವಸಂತ ಕಂಡ ಸುಸ್ವರಲಯ ಸಂಸ್ಥೆಯ ಪ್ರಶಸ್ತಿ ಅವರಿಗೆ ಭೂಷಣಪ್ರಾಯವೂ ಆಗಿದೆ.
ಪರಂಪರೆಗೆ ಭೂಷಣ
ಸಂಗೀತ ರಂಗದ ಮಹಾ ದಿಗ್ಗಜಗಳಾದ ಪದ್ಮಭೂಷಣ ಪಿ.ಎಸ್. ನಾರಾಯಣಸ್ವಾಮಿ, ಸಂಗೀತ ಕಲಾಚಾರ್ಯ ಎಸ್. ರಾಜಂ, , ಟಿ.ವಿ.ಗೋಪಾಲಕೃಷ್ಣನ್ ಮತ್ತು ಆರ್.ಆರ್. ಕೇಶವಮೂರ್ತಿ ಅವರೆಲ್ಲರ ಸಿರಿವಂತ, ಭವ್ಯ ಗುರು ಪರಂಪರೆಗೆ ರಾಮಪ್ರಸಾದ್ ಗೌರವ ತಂದುಕೊಟ್ಟ ಮೇಧಾವಿಗಳು. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅಪರೂಪದ ಜ್ಞಾನ ಮೇರು ಎಂದರೂ ಅದು ಅವರಿಗೆ ಕಿರೀಟಪ್ರಾಯವಾಗುತ್ತದೆ. ಐಸಿಸಿಆರ್ ಕಲಾವಿದರೂ ಆಗಿರುವ ರಾಮ ಪ್ರಸಾದ್, ವಿಭಿನ್ನ ಸಂಗೀತ ಸಂಯೋಜಕರಾಗಿ, ಗಾಯಕರಾಗಿ, ನಿರ್ದೇಶಕರಾಗಿ, ಅನ್ವೇಷಕರಾಗಿದ್ದಾರೆ.
ಆನ್‌ಲೈನ್ ವೇದಿಕೆಯಲ್ಲಿ ಮಹತ್ತರ ಸೇವೆ
ಶೈಕ್ಷಣಿಕ ಮತ್ತು ಸಾಮಾಜಿಕ ಅಭ್ಯುದಯಕ್ಕಾಗಿ ಕಲೆಯನ್ನು ಸಮರ್ಥವಾಗಿ ಬಳಸಿಕೊಂಡು ಹೊಸ ಹೊಸ ಉಪಕ್ರಮಗಳನ್ನು, ಜಾಗತಿಕ ಮಟ್ಟದ ಆಂದೋಲನಗಳನ್ನು ಮಾಡುವಲ್ಲಿ ಅವರು ಸಿದ್ಧಹಸ್ತರಾಗಿದ್ದಾರೆ. ಇ-ಅಂಬಲಂ - ನಿರ್ದೇಶಕರಾಗಿ 2011 ರಿಂದ ಅವರು ಜಾಗತಿಕ ಸಮುದಾಯಕ್ಕೆ ಭಾರತೀಯ ಶಾಸ್ತ್ರೀಯ ಕಲೆಗಳನ್ನು ಪರಿಚಯಿಸಿದ ರೀತಿ ಅದ್ಭುತವಾಗಿದೆ. ಆನ್‌ಲೈನ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡು 2014ರಿಂದ ಲೈಫ್ ಆರ್ಟ್ ಎಜ್ಯುಕೇಶನ್ ಪ್ರಾಜೆಕ್ಟ್ ಪ್ರಾರಂಭಿಸಿದ ರಾಮ ಪ್ರಸಾದರು ಕೆ -12 ಆಧಾರಿತ ಕಾರ್ಯಕ್ರಮದ ರೂವಾರಿಯಾಗಿ ಸಂಗೀತ, ನೃತ್ಯ, ಯೋಗ ಮತ್ತು ವ್ಯಕ್ತಿತ್ವ ವಿಕಸನ ಕಲೆಗಳನ್ನು ವಿಶ್ವದ ವಿವಿಧ ಭಾಗದ 25 ದೇಶದ ಸುಮಾರು 50,000 ವಿದ್ಯಾರ್ಥಿಗಳಿಗೆ ತಲುಪಿಸಿರುವುದು ಮಹೋನ್ನತ ಸಾಧನೆಯೇ ಆಗಿದೆ.
ನುಡಿಸಾಣಿಕೆಯ ಮಾಂತ್ರಿಕ ಶಕ್ತಿ ನಳಿನಾ
ಸಿರಿವಂತ ಮನೋಧರ್ಮ ಮತ್ತು ಶುದ್ಧ ಸ್ಥಾಯಿ ಭಾವದ ಪಿಟೀಲು ವಾದನಕ್ಕೆ ಅನ್ವರ್ಥವೇ ವಿದುಷಿ ನಳಿನಾ ಮೋಹನ್. ಅಪ್ಪಟ ಕನ್ನಡ ನಾಡಿನ, ಮೈಸೂರು ಸೀಮೆಯ ಮೇರು ಪ್ರತಿಭೆ. ಚನ್ನಪಟ್ಟಣದ ಸುಸಂಸ್ಕೃತ ಮನೆತನದ ವೇದ ವಿದ್ವಾಂಸರಾದ ವೆಂಕಟರಾಮ ಪುರಾಣಿಕ್ ಮತ್ತು ಗಾಯಕಿ ರಾಜಲಕ್ಷ್ಮೀ ಪುರಾಣಿಕ್ ಅವರ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ 9ನೇ ವಯಸ್ಸಿನಿಂದಲೇ ಗಾಯನ ಕಲಿಕೆ. ನಾರಾಯಣ ಅಯ್ಯಂಗಾರ್ ಅವರೇ ಗುರು. ನಂತರ ಆರ್. ಆರ್. ಕೇಶವಮೂರ್ತಿ ಅವರ ಗರಡಿಯಲ್ಲಿ ಪಿಟೀಲು ಕಲಿಕೆ. ವಿದ್ವಾನ್ ಅನೂರು ರಾಮಕೃಷ್ಣರಲ್ಲಿ ಉನ್ನತ ಕಲಿಕೆ. ಮನೆತದ ಸಂಸ್ಕೃತಿ ಬಳುವಳಿ, ಸ್ವಯಂ ಆಸಕ್ತಿಗಳು ನಳಿನಾ ಅವನ್ನು ಬಹುಬೇಗ ಕಲಾ ಲೋಕದಲ್ಲಿ ಎತ್ತರಕ್ಕೆ ಬೆಳೆಸಿ ವಿಶ್ವ ಮಟ್ಟಕ್ಕೆ ಪರಿಚಯಿಸಿದವು.
ಸಂಗೀತ ಕಲಾನಿಧಿ, ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್, ಪ್ರಸ್ತುತ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರ ಮಾರ್ಗದರ್ಶನದಲ್ಲಿ ನಳಿನಾ ತಮ್ಮ ಕಲಾತ್ಮಕತೆ ಮತ್ತು ನುಡಿಸಾಣಿಕೆ ತಂತ್ರದಿಂದ ಕಲಾಲೋಕದ ಧೃವತಾರೆಯಾಗಿ ಬೆಳಗುತ್ತಿದ್ದಾರೆ. ಏಕವ್ಯಕ್ತಿ ವಾದಕರಾಗಿ, ಪಕ್ಕವಾದ್ಯಕ್ಕಾಗಿ ಕಲಾವಿದೆಯಾಗಿ ಅವರು ಜಾಗತಿಕ ಮಟ್ಟದ ಬಹು ಬೇಡಿಕೆ ಕಲಾವಿದೆಯಾಗಿರುವುದು ಕನ್ನಡ ನಾಡಿಗೆ ಹೆಮ್ಮೆಯಾಗಿದೆ.
ದಿಗ್ಗಜರಿಗೆ ಪಕ್ಕವಾದ್ಯ ನೀಡಿದ ಹಿರಿಮೆ
ಡಾ.ಆರ್.ಕೆ. ಶ್ರೀಕಂಠನ್, ಪ್ರೊ.ಟಿ.ಆರ್. ಸುಬ್ರಹ್ಮಣ್ಯಂ, ಡಾ.ಎನ್. ರಮಣಿ, ಡಾ.ಟಿ.ಕೆ.ಗೋವಿಂದ ರಾವ್, ಟಿ.ವಿ.ಗೋಪಾಲಕೃಷ್ಣನ್, ತ್ಯಾಗರಾಜನ್, ಕದ್ರಿ, ಬಾಂಬೆ ಸಿಸ್ಟರ್ಸ್, ಎಂ.ಎಸ್. ಶೀಲಾ, ಸುಧಾ ರಘುನಾಥನ್ ಮೊದಲಾದ ಅಗ್ರ ಪಂಕ್ತಿಯ ಕಲಾವಿದರ ಗಾಯನ ಕಛೇರಿ ಇನ್ನಷ್ಟು, ಮತ್ತಷ್ಟುಕಳೆಗಟ್ಟಲು ಸಮರ್ಥವಾದ ಪಕ್ಕವಾದ್ಯ ಸಾಥ್ ನೀಡುವಲ್ಲಿ ಸೈ ಎನಿಸಿಕೊಂಡಿರುವುದು ನಳಿನಾರ ಹೆಗ್ಗಳಿಕೆ.
ವಿನೂತನ ಕಂಠಾಭರಣ
ದಕ್ಷಿಣ ವಲಯ ಸಂಗೀತ ಕಚೇರಿಗಳು ಮತ್ತು ಸ್ಪಿರಿಟ್ ಆಫ ಯೂನಿಟಿ ಕಾನ್ಸರ್ಟ್ ಅವರ ಮಹತ್ತರ ಕಲಾಭಿವ್ಯಕ್ತಿಗೆ ಭೂಷಣ. ಅಮೆರಿಕ, ಕೆನಡಾ, ಶ್ರೀಲಂಕಾ, ಫ್ರಾನ್ಸ್ ಸೇರಿದಂತೆ ವಿಶ್ವದ ಪ್ರತಿಷ್ಠಿತ ವೇದಿಕೆಗಳು ಇವರ ತಂತಿವಾದ್ಯ ಪ್ರೌಢಿಮೆಗೆ ತಲೆದೂಗಿವೆ. ‘ಸ್ವರಲಯ ಶೃಂಗ’ ಎಂಬ ಪ್ರಶಸ್ತಿ ಅವರ ಕಲಾಚತುರತೆಗೆ ವಿನೂತನ ಕಂಠಾಭರಣವಾಗಿ ಶೋಭಿಸಲಿದೆ.