Karnataka IT Ratna Award: ಇನ್ಫೋಸಿಸ್ ಗೆ `ಕರ್ನಾಟಕದ ಐಟಿ ರತ್ನ’ ಪುರಸ್ಕಾರ, ಬೆಂಗಳೂರಿನ ಟೆಕ್ ಸಮಾವೇಶದಲ್ಲಿ ಪ್ರದಾನ
Infosys Gets Karnataka IT Ratna Award: ವಿಶ್ವದ ಐಟಿ ದಿಗ್ಗಜ ಸಂಸ್ಥೆಯಾಗಿ ರೂಪುಗೊಂಡಿರುವ ಇನ್ಫೋಸಿಸ್‌ಗೆ ಕರ್ನಾಟಕ ಐಟಿ ರತ್ನ ಪ್ರಶಸ್ತಿಯನ್ನು ಬೆಂಗಳೂರು ಟೆಕ್ ಸಮಾವೇಶದಲ್ಲಿ ( Bangalore Tech Summit) ಪ್ರದಾನ ಮಾಡಲಾಯಿತು.
ಬೆಂಗಳೂರು: ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ. ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ. ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಬುಧವಾರ ಅಭಿಪ್ರಾಯಪಟ್ಟರು.
`ಬೆಂಗಳೂರು ತಂತ್ರಜ್ಞಾನ ಸಮಾವೇಶ’ದಲ್ಲಿ ಅವರು ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕುಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ, ಅತ್ಯುತ್ತಮ ಸಾಧನೆ ಮಾಡಿರುವ ಇನ್ಫೋಸಿಸ್ ಕಂಪನಿಗೆ `ಕರ್ನಾಟಕದ ಐಟಿ ರತ್ನ’ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕಂಪೆನಿಯ ಪರವಾಗಿ ಹಿರಿಯ ಪ್ರತಿನಿಧಿಗಳು ಪ್ರಶಸ್ತಿಯನ್ನು ಸಚಿವರಿಂದ ಇದೇ ವೇಳೆ ಸ್ವೀಕರಿಸಿದರು.
ನವೋದ್ಯಮದಲ್ಲಿ ಪ್ರಗತಿ
ಎಸ್ ಟಿ ಪಿ ಐ ಏಳು ವರ್ಷಗಳ ಹಿಂದೆಯೇ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ `ಸ್ಮಾರ್ಟ್’ (ಸೆಮಿಕಂಡಕ್ಟರ್ ಮೆಷರ್ಮೆಂಟ್ ಅನಾಲಿಸಿಸ್ & ರಿಲೈಯಬಿಲಿಟಿ ಟೆಸ್ಟ್) ತೆರೆದಿದೆ. ಇದರಿಂದ ದೇಶದ ಸೆಮಿಕಂಡಕ್ಟರ್ ಮತ್ತು ಇ ಎಸ್ ಡಿಎಂ ವಲಯಗಳ ಕಾರ್ಯ ಪರಿಸರ ಸುಧಾರಿಸಿತು. ಜೊತೆಗೆ ನವೋದ್ಯಮಗಳು ಮತ್ತು ಸೆಮಿಕಂಡಕ್ಟರ್ ಕಂಪನಿಗಳು ವಿನ್ಯಾಸವನ್ನು ರೂಪಿಸಲು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯಕ್ಕೆ ತೆರೆ ಬಿತ್ತು ಎಂದು ವಿವರಿಸಿದರು.
ಇದಲ್ಲದೆ, ಎಸ್ ಟಿ ಪಿ ಐ ರಾಜ್ಯ ರಾಜಧಾನಿಯಲ್ಲಿ ಸಿಒಇ-ಐಒಟಿ ಓಪನ್-ಲ್ಯಾಬ್ ಕೂಡ ಆರಂಭಿಸಿದೆ. ಇದರಡಿಯಲ್ಲಿ 130 ನವೋದ್ಯಮಗಳು ಆಯ್ಕೆಯಾಗಿದ್ದು, ಈಗಾಗಲೇ 67 ಉದ್ಯಮಗಳು ಕಾರ್ಯ ಚಟುವಟಿಕೆ ಆರಂಭಿಸಿವೆ. ಇದು ದೇಶದ ಐಒಟಿ ವಲಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಎಸ್ ಟಿ ಪಿ ಐ ಅಧ್ಯಕ್ಷ ಸಂಜಯ್ ತ್ಯಾಗಿ ಮುಂತಾದವರು ಉಪಸ್ಥಿತರಿದ್ದರು.
ಟಿಸಿಎಸ್, ಬಾಷ್, ಇಂಟೆಲ್ ಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಬಾಷ್, ಇಂಟೆಲ್ ಮುಂತಾದವುಗಳಿಗೆ ಎಸ್ ಟಿ ಪಿ ಐ-ಐಟಿ ಪುರಸ್ಕಾರವನ್ನು ಸಚಿವ ಎಂ ಬಿ ಪಾಟೀಲ ಪ್ರದಾನ ಮಾಡಿದರು. ಪ್ರಶಸ್ತಿಗೆ ಪಾತ್ರವಾದ ಕಂಪನಿಗಳಾದ ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ ಪಿ ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ & ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್ ಎಲೆಕ್ಟ್ರಿಕ್, ಅಲ್ಟ್ರಾನ್ ಟೆಕ್ ಇಂಡಿಯಾ, ಸ್ಯಾಪ್ ಲ್ಯಾಬ್ಸ್, ವಿಎಂವೇರ್ ಸಾಫ್ಟ್ವೇರ್ಸ್, ಆ್ಯಕ್ಸೆಂಚರ್ ಸಲ್ಯೂಷನ್ಸ್ ಪರವಾಗಿ ಅವುಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.