Bangalore News: ಬೆಂಗಳೂರಿನ ಸಂಚಾರ ಒತ್ತಡ ತಗ್ಗಿಸುವ ವಹಿವಾಟು ಕಾರಿಡಾರ್‌ಗೆ ಸಿದ್ದತೆ, 27,000 ಕೋಟಿ ರೂ. ವೆಚ್ಚದ ಯೋಜನೆ ಹೇಗಿದೆ
Bangalore Business corridor ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಡಿಎ ಬೆಂಗಳೂರು ವಹಿವಾಟು ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆಯಿಂದ ಆಗುವ ಉಪಯೋಗದ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರಿನ ಮಿತಿ ಮೀರಿದ ಒತ್ತಡ ತಗ್ಗಿಸಿ ಸಹಜ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹಲವಾರು ಯೋಜನೆಗಳನ್ನು ರೂಪಿಸಿದರೂ ಬದಲಾವಣೆ ಮಾತ್ರ ಅಷ್ಟಾಗಿ ಕಾಣುತ್ತಿಲ್ಲ. ಬೆಂಗಳೂರು ನಗರದೊಳಗೆ ಬರುವ ವಾಹನಗಳಿಗೆ ಮಿತಿ ಹೇರಿ ಸಂಚಾರ ದಟ್ಟಣೆ ತಗ್ಗಿಸಲು ಬೆಂಗಳೂರು ವಹಿವಾಟು ಕಾರಿಡಾರ್( Bangalore Business Corridor) ಯೋಜನೆ ರೂಪುಗೊಳ್ಳುತ್ತಿದೆ. ಅದೂ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ ಹುಡ್ಕೋ (HUDCO) ಅಡಿ 27,000 ಕೋಟಿ ರೂ. ವೆಚ್ಚ ಮಾಡಿ ಈ ಕಾರಿಡಾರ್ ನಿರ್ಮಿಸುವುದು ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ( BDA) ಉದ್ದೇಶ.
ಉತ್ತರ ಕರ್ನಾಟಕ, ಮಧ್ಯಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗ ಸೇರಿದಂತೆ ನಾನಾ ಭಾಗಗಳಿಂದ ಬೆಂಗಳೂರು ಮಾರ್ಗವಾಗಿ ತಮಿಳುನಾಡು ಕಡೆಗೆ ಹೋಗುವವರು, ಇತರೆ ಭಾಗಕ್ಕೆ ಸಂಚರಿಸುವವರಿಗೆ ಸಂಚಾರ ಒತ್ತಡ ತಗ್ಗಿಸಲು ಈ ಯೋಜನೆ ರೂಪಿಸಲಾಗಿದೆ. ಈ ನಿರ್ಣಾಯಕ ಮೂಲಸೌಕರ್ಯ ಯೋಜನೆಯು ತುಮಕೂರು ರಸ್ತೆಯನ್ನು ಹೊಸೂರು ರಸ್ತೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಭೂಸ್ವಾಧೀನಾಧಿಕಾರಿಗಳ ನಿಯೋಜನೆ
ಪೆರಿಫೆರಲ್ ರಿಂಗ್ ರೋಡ್ (PRR) ಎಂದೂ ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಬೆಂಗಳೂರು ವ್ಯಾಪಾರ ಕಾರಿಡಾರ್ (BBC) ಯೋಜನೆಯು ಮತ್ತೆ ಬಲ ಪಡೆದುಕೊಂಡಿದೆ. ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (HUDCO) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 27,000 ಕೋಟಿ ರೂ.ಗಳ 100 ರಷ್ಟು ಆರ್ಥಿಕ ನೆರವನ್ನು ನೀಡವುದಾಗಿ ದೃಢಪಡಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವರದಿಯ ಪ್ರಕಾರ, ಯೋಜನೆಯನ್ನು ತ್ವರಿತಗೊಳಿಸಲು ಎಂಟು ಹೊಸ ಭೂ ಸ್ವಾಧೀನ ಅಧಿಕಾರಿಗಳನ್ನು ಬಿಡಿಎಗೆ ನೇಮಿಸಲಾಗಿದೆ. ಅವರು ಯೋಜನೆಗೆ ಸಂಬಂಧಿಸಿದಂತಹ ಭೂಸ್ವಾಧೀನದ ಚಟುವಟಿಕೆಯನ್ನು ಆರಂಭಿಸುವರು. 73 ಕಿಮೀ ರಸ್ತೆ ಕಾರಿಡಾರ್‌ಗೆ ಭೂಸ್ವಾಧೀನವನ್ನು ತ್ವರಿತಗೊಳಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿದೆ.
ಯೋಜನೆ ಹೇಗಿರಲಿದೆ
ಬೆಂಗಳೂರು ಮಹಾನಗರದ ನಿರ್ಣಾಯಕ ಮೂಲಸೌಕರ್ಯ ಯೋಜನೆಯು ತುಮಕೂರು ರಸ್ತೆಯನ್ನು ಹೊಸೂರು ರಸ್ತೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಂತಹ ಪ್ರಮುಖ ಸ್ಥಳಗಳ ಮೂಲಕ ಈ ವಹಿವಾಟು ಕಾರಿಡಾರ್ ಸಂಚರಿಸುತ್ತದೆ
ಇದಕ್ಕಾಗಿ ಹೆಚ್ಚುವರಿಯಾಗಿ ಯಲಹಂಕದಲ್ಲಿ ಹೊಸ ಬಿಡಿಎ ಕಚೇರಿಯನ್ನು ಸ್ಥಾಪಿಸಿ ಯೋಜನೆ ತ್ವರಿತಗೊಳಿಸುವುದು, ಜೊತೆಗೆ ಭೂಸ್ವಾಧೀನ ನಡೆಯಲಿರುವ 76 ಹಳ್ಳಿಗಳ ಬಳಿ ಇತರ ಮೂರು ಕಚೇರಿಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.
2,560 ಎಕರೆ ಪ್ರದೇಶವನ್ನು ಒಳಗೊಂಡಿರುವ ಯೋಜನೆಯು ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬವನ್ನು ಎದುರಿಸುತ್ತಾ ಬಂದಿದೆ. ವಿಶೇಷವಾಗಿ 193 ಎಕರೆಗಳನ್ನು 2022 ರಲ್ಲಿ ಹೊರಡಿಸಿದ ಸರ್ಕಾರಿ ಆದೇಶದ ಅಡಿಯಲ್ಲಿ ಬಿಡಿಎಗೆ ಯಾವುದೇ ವೆಚ್ಚವಿಲ್ಲದೆ ಹಸ್ತಾಂತರಿಸಬೇಕಾಗಿತ್ತು. ಅದೂ ವಿಳಂಬವಾಗಿದೆ.ಇವೆಲ್ಲವನ್ನೂ ಸರಿಪಡಿಸುವುದು ಬಿಡಿಎ ಈಗಿನ ಯೋಚನೆ.
ಹುಡ್ಕೋ ಭಾರತದಲ್ಲಿ ಸಾರ್ವಜನಿಕ ವಲಯದ ಕಂಪನಿಯಾಗಿದ್ದು ಅದು ವಸತಿ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ. ಇದನ್ನು ಬಳಸಿಕೊಂಡು ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.
ಪರಿಹಾರ ಹೇಗೆ
ಭೂಸ್ವಾಧೀನ ಹಾಗೂ ಪರಿಹಾರ ವಿತರಣೆಯೇ ಬಿಡಿಎ ಮುಂದಿರುವ ಮೊದಲ ಸವಾಲು. ಭೂಮಾಲೀಕರಿಗೆ ಭೂಮಿ ಹಸ್ತಾಂತರ ಹಾಗೂ ಪರಿಹಾರ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಬಿಡಿಎಯು ಹತ್ತಿರದಲ್ಲೇ ಸೆಟಲೈಟ್ ಕಚೇರಿಗಳನ್ನು ಸ್ಥಾಪಿಸಲಿದೆ. ಭೂಮಾಲೀಕರು ಕೇಂದ್ರ ಬಿಡಿಎ ಕಚೇರಿಗೆ ಪ್ರಯಾಣಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಪರಿಹಾರ ಪಾವತಿಗಳು ಮತ್ತು ಸ್ವಾಧೀನ ಪ್ರಕ್ರಿಯೆಗಳು ಆರು ತಿಂಗಳೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.