Bangalore News: ಬೆಂಗಳೂರು ಸಂಚಾರ ಪೊಲೀಸರ ವಿಶೇಷ ತಪಾಸಣೆ: 10 ಗಂಟೆಯಲ್ಲಿ 18 ಲಕ್ಷ ರೂ. ದಂಡ ಸಂಗ್ರಹ
Bangalore News: ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ಮೇಲೆ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿ ದಂಡ ವಸೂಲಿ ಮಾಡುತ್ತಿದ್ದಾರೆ.
ಬೆಂಗಳೂರು: ಹೊಸ ವರ್ಷದ ಉಮೇದಿನಲ್ಲಿ ಸಂಚಾರ ನಿಯಮ ಮೀರಿ ವಾಹನ ಓಡಿಸಿಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕೀರಿ ಜೋಕೆ. ಸಾವಿರಾರು ರೂ. ದಂಡವನ್ನು ನೀವು ಪಾವತಿಸಬೇಕಾಗುತ್ತದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದನ್ನು ತಡೆಯಲು ಬೆಂಗಳೂರು ಸಂಚಾರ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಸತತ ಎರಡು ದಿನದಿಂದ ಬೆಂಗಳೂರಿನ ನಾನಾ ಕಡೆಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡು ನಿಯಮ ಉಲ್ಲಂಘಿಸುವವರ ಮೇಲೆ ದಂಡ ಪ್ರಯೋಗ ಮಾಡುತ್ತಿದ್ದಾರೆ. ಸೋಮವಾರ ಹಾಗೂ ಮಂಗಳವಾರ ದಿನದಂದು ತಲಾ ಐದು ಗಂಟೆಗಳ ಕಾಲ ತಪಾಸಣೆ ನಡೆಸಿ ಬರೋಬ್ಬರಿ 18 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತರ ಸೂಚನೆ ಮೇರೆಗೆ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಪಾಸಣೆ ಚುರುಕುಗೊಂಡಿದೆ. ಆಯಾ ಸಂಚಾರ ಠಾಣೆ ವ್ಯಾಪ್ತಿಯ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿಶೇಷ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ.
ವಿಶೇಷವಾಗಿ ರಸ್ತೆ ನಿಯಮ ಉಲ್ಲಂಘನೆ, ಟ್ರಿಪಲ್ ರೈಡಿಂಗ್, ಹೆಲ್ಮೆಟ್ ರಹಿತ ಚಾಲನೆ, ಫುಟ್‌ಪಾತ್ ಮೇಲೆ ವಾಹನ ನಿಲುಗಡೆ, ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆ, ಫುಟ್‌ಪಾತ್ ಗಳ ಮೇಲೆ ವಾಹನಸಂಚಾರದಂತಹ ನಿಯಮ ಉಲ್ಲಂಘನೆಗಳನ್ನು ಗಮನಿಸಿ ದಂಡ ವಿಧಿಸಲಾಗುತ್ತಿದೆ. ಇದಲ್ಲದೇ ವಾಹನ ಚಲಾಯಿಸುವಾಗಲೇ ಮೊಬೈಲ್‌ನಲ್ಲಿ ಮಾತನಾಡುವುದು, ಏಕಮುಖ ರಸ್ತೆಯಲ್ಲಿ ಸಂಚಾರ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೇ ಸಂಚರಿಸುವವರ ಮೇಲೂ ನಿಗಾ ಇರಿಸಿ ದಂಡ ಹಾಕಲಾಗುತ್ತಿದೆ.
ಬೆಂಗಳೂರು ಸಂಚಾರ ಪೊಲೀಸರು ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿಶೇಷ ಸಂಚಾರ ನಡೆಸಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ₹5.35 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ದಂಡದ ಸಿಂಹಪಾಲು ಕ್ರಮವಾಗಿ 2.31 ಲಕ್ಷ ಮತ್ತು 1.955 ಲಕ್ಷ ರೂ., ಪ್ರವೇಶ ನಿಷೇಧ ಮತ್ತು ಏಕಮುಖ ಉಲ್ಲಂಘನೆ ವಿರುದ್ಧ ಸವಾರಿ ಸಂಬಂಧಿಸಿದ ಸಂಗ್ರಹಿಸಲಾಗಿದೆ.
ಮಂಗಳವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ವಿಶೇಷ ಅಭಿಯಾನದಲ್ಲಿ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) 6.395 ಲಕ್ಷ ರೂ. ದಂಡವನ್ನು ಸಂಗ್ರಹಿಸಿದ್ದಾರೆ.
372 ಸವಾರರಿಂದ ನೋ ಎಂಟ್ರಿ ಉಲ್ಲಂಘನೆಗಳಿಗಾಗಿ ರೂ 1.88 ಲಕ್ಷ, ಏಕಮುಖವಾಗಿ ಚಾಲನೆ ಮಾಡಿದ 311 ಸವಾರರ ಮೇಲೆ ರೂ 1.56 ಲಕ್ಷ, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 64 ಪ್ರಕರಣಗಳಲ್ಲಿ ರೂ 1.02 ಲಕ್ಷ ಮತ್ತು 178 ನೋ ಪಾರ್ಕಿಂಗ್ ಉಲ್ಲಂಘನೆಗಳಿಂದ ರೂ 90,500 ಸಂಗ್ರಹಿಸಿದೆ.
ಫುಟ್‌ಪಾತ್‌ನಲ್ಲಿ ಟ್ರಿಪಲ್ ರೈಡಿಂಗ್ ಮತ್ತು ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಸಂಚಾರ ಉಲ್ಲಂಘನೆ 1130 ಪ್ರಕರಣ ದಾಖಲಿಸಿದೆ. ಒಟ್ಟು 6,685 ವಾಹನಗಳನ್ನು ಪರಿಶೀಲಿಸಿದ ನಂತರ 120 ಪಾನಮತ್ತ ಚಾಲಕರ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
ಎರಡೂ ದಿನದಲ್ಲಿಯೇ ಸುಮಾರು 18 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಜತೆಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನಗಳು ನಡೆದಿವೆ. ಇದಲ್ಲದೇ ಗುಣಮಟ್ಟವಿಲ್ಲದ ಹಾಗೂ ಐಎಸ್‌ಐ ಮಾರ್ಕ್ ಇರದ ಹೆಲ್ಮೆಟ್‌ಗಳನ್ನು ಹಲವರು ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಸವಾರರಿಗೆ ಜಾಗೃತಿಯನ್ನು ನಡೆಸಲಾಗುತ್ತಿದೆ. ಇದು ಜೀವಕ್ಕೆ ಅಪಾಯಕಾರಿ ಎನ್ನುವುದನ್ನೂ ತಿಳಿಸಿಕೊಡಲಾಗುತ್ತಿದೆ. ಇದು ಇನ್ನೂ ಮುಂದುವರಿಯಲಿದೆ ಎನ್ನುವುದು ಪೊಲೀಸ್ ಅಧಿಕಾರಿಗಳು ನೀಡುವ ಮಾಹಿತಿ.