ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಸಮ್ಮತಿ; ಹೋಳಿ ಹಬ್ಬಕ್ಕೆ ರೈನ್‌ ಡ್ಯಾನ್ಸ್‌ ಬೇಡ ಎಂದ ಜಲಮಂಡಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಸಮ್ಮತಿ; ಹೋಳಿ ಹಬ್ಬಕ್ಕೆ ರೈನ್‌ ಡ್ಯಾನ್ಸ್‌ ಬೇಡ ಎಂದ ಜಲಮಂಡಳಿ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಸಮ್ಮತಿ; ಹೋಳಿ ಹಬ್ಬಕ್ಕೆ ರೈನ್‌ ಡ್ಯಾನ್ಸ್‌ ಬೇಡ ಎಂದ ಜಲಮಂಡಳಿ

BWSSB-IPL 2024 : ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಮ್ಮತಿ ನೀಡಿದೆ. (ವರದಿ-ಎಚ್. ಮಾರುತಿ)

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಸಮ್ಮತಿ
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಸಮ್ಮತಿ (deccan herald)

ಮುಂಬರುವ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಅನುಕೂಲವಾಗುವಂತೆ ಸಂಸ್ಕರಿಸಿದ ನೀರನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒದಗಿಸಲು ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಆಡಳಿತ ಮಂಡಳಿಯ ಮನವಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರನ್ನು ಕೆಎಸ್​ಸಿಎ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಪಂದ್ಯಗಳು ನಡೆಯುವ ಸಂದರ್ಭದಲ್ಲಿ ದಿನವೊಂದಕ್ಕೆ ಸುಮಾರು 75,000 ಲೀಟರ್​​​ಗಳಷ್ಟು ನೀರಿನ ಅವಶ್ಯಕತೆ ಇದೆ. ಇದಕ್ಕಾಗಿ ಕಬ್ಬನ್ ಪಾರ್ಕ್​ನ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಅಗತ್ಯವಿರುವಷ್ಟು ನೀರನ್ನು ಒದಗಿಸುವಂತೆ ಪದಾಧಿಕಾರಿಗಳು ಮನವಿಯಲ್ಲಿ ಉಲ್ಲೇಖಿಸಿದ್ದರು.

ಈ ಬೇಡಿಕೆಗೆ ಜಲಮಂಡಳಿ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ಕಾವೇರಿ ಅಥವಾ ಕೊಳವೆ ಬಾವಿಯ ನೀರು ದುರ್ಬಳಕೆ ಆಗುವುದನ್ನು ತಡೆಯಲು ಕ್ರಿಕೆಟ್ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಒದಗಿಸುವುದಾಗಿ ಮಂಡಳಿ ಅಧ್ಯಕ್ಷರು ಸಮ್ಮತಿ ಸೂಚಿಸಿದ್ದಾರೆ.

ಹೋಳಿ ಹಬ್ಬಕ್ಕೆ ರೈನ್‌ ಡ್ಯಾನ್ಸ್‌, ಪೂಲ್‌ ಡ್ಯಾನ್ಸ್‌ ಬೇಡವೇ ಬೇಡ ಎಂದ ಅಧ್ಯಕ್ಷರು

ಇದೇ ತಿಂಗಳ 25ರಂದು ನಡೆಯಲಿರುವ ಹೋಳಿ ಹಬ್ಬಕ್ಕೆ ಮನರಂಜನೆಯ ಉದ್ದೇಶ ಹೊಂದಿರುವ ರೈನ್‌ ಡ್ಯಾನ್ಸ್‌ ಮತ್ತು ಪೂಲ್‌ ಡ್ಯಾನ್ಸ್‌ ಆಯೋಜನೆ ಮಾಡದಂತೆಯೂ ಜಲ ಮಂಡಳಿ ಮನವಿ ಮಾಡಿಕೊಂಡಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಪ್ರತಿ ಹನಿ ನೀರು ಬಹಳ ಮುಖ್ಯವಾಗಿದ್ದು, ಹೋಳಿ ಹಬ್ಬಕ್ಕೆ ರೈನ್‌ ಡ್ಯಾನ್ಸ್‌ ಮತ್ತು ಪೂಲ್‌ ಡ್ಯಾನ್ಸ್‌ ಹಮ್ಮಿಕೊಳ್ಳಬೇಡಿ ಎಂದು ಜಲ ಮಂಡಳಿ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

ಹೋಳಿ ಹಬ್ಬ ಸಾಂಸ್ಕೃತಿಕವಾಗಿ ತನ್ನದೇ ಆದ ಮಹತ್ವ ಹೊಂದಿರುವ ಹಬ್ಬ. ಈ ಹಬ್ಬವನ್ನು ಮನೆ ಅಥವಾ ವಾಸದ ಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧವನ್ನೂ ಹೇರುವುದಿಲ್ಲ. ಆದರೆ, ಮನರಂಜನೆ ಅಥವಾ ವಾಣಿಜ್ಯ ಉದ್ದೇಶದಿಂದ ರೈನ್‌ ಡ್ಯಾನ್ಸ್‌ ಮತ್ತು ಪೂಲ್‌ ಡ್ಯಾನ್ಸ್‌ ಹಮ್ಮಿಕೊಳ್ಳದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಹೋಳಿ ಹಬ್ಬದ ಆಚರಣೆಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಜಲ ಮಂಡಳಿ ತಿಳಿಸಿದೆ.

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ನಡೆಯುವ ಆರ್​ಸಿಬಿ ಪಂದ್ಯಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮಾರ್ಚ್ 25, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್ - ಮಾರ್ಚ್ 29, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ - ಏಪ್ರಿಲ್ 2, ಬೆಂಗಳೂರು, ಸಂಜೆ 7:30ಕ್ಕೆ

Whats_app_banner