Bangalore News: ಬೆಂಗಳೂರಲ್ಲಿ ಸದ್ಯವೇ ನೀರಿನ ದರದಲ್ಲಿ ಏರಿಕೆ, 10 ವರ್ಷದ ನಂತರ ಕರ ಹೆಚ್ಚಳ, ಸರ್ಕಾರ ಕೊಡುವ ಕಾರಣಗಳೇನು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಸದ್ಯವೇ ನೀರಿನ ದರದಲ್ಲಿ ಏರಿಕೆ, 10 ವರ್ಷದ ನಂತರ ಕರ ಹೆಚ್ಚಳ, ಸರ್ಕಾರ ಕೊಡುವ ಕಾರಣಗಳೇನು

Bangalore News: ಬೆಂಗಳೂರಲ್ಲಿ ಸದ್ಯವೇ ನೀರಿನ ದರದಲ್ಲಿ ಏರಿಕೆ, 10 ವರ್ಷದ ನಂತರ ಕರ ಹೆಚ್ಚಳ, ಸರ್ಕಾರ ಕೊಡುವ ಕಾರಣಗಳೇನು

ಬೆಂಗಳೂರು ನಗರ ನಿವಾಸಿಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾ ಎನ್ನುವ ಆತಂಕ ಇರುವಾಗಲೇ ನೀರಿನ ದರ ಏರಿಕೆ ಬಿಸಿಯೂ ಎದುರಾಗಲಿದೆ. ನೀರಿನ ದರ ಏರಿಕೆಗೆ ಜಲಮಂಡಳಿ ಮುಂದಾಗಿದೆ.

ಬೆಂಗಳೂರಿನಲ್ಲಿ ದರ ಏರಿಕೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಚರ್ಚೆಗಳು ನಡೆದಿವೆ.
ಬೆಂಗಳೂರಿನಲ್ಲಿ ದರ ಏರಿಕೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಚರ್ಚೆಗಳು ನಡೆದಿವೆ.

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹತ್ತು ವರ್ಷದ ಬಳಿಕ ನೀರಿನ ದರ ಏರಿಕೆಯಾಗುವುದು ಖಚಿತವಾಗಿದೆ. ಸತತ ಒಂದು ವರ್ಷದಿಂದ ದರ ಏರಿಕೆ ಕುರಿತು ಚರ್ಚೆ ನಡೆಸುತ್ತಲೇ ಬರುತ್ತಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ (BWSSB) ಈ ಬಾರಿ ಅನಿವಾರ್ಯವಾಗಿ ದರ ಹೆಚ್ಚಳ ಮಾಡಲು ಮುಂದಾಗಿದೆ. ಏರುತ್ತಿರುವ ವೆಚ್ಚಗಳು, ನಷ್ಟದ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಜಲಮಂಡಳಿ ದರ ಏರಿಕೆ ಮಾಡುವತ್ತ ಹೆಜ್ಜೆ ಇಟ್ಟಿದೆ. ಈ ಸಂಬಂಧ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಲಮಂಡಳಿಯಿಂದ ದರ ಏರಿಕೆಗೆ ಸಂಬಂಧಿಸಿದಂತೆ ವರದಿಯನ್ನು ಕೇಳಿದ್ದಾರೆ. ವರದಿ ಆಧರಿಸಿ ಕರ್ನಾಟಕ ಸರ್ಕಾರವು ದರ ಏರಿಕೆ ಮಾಡಲಿದೆ.ಎಷ್ಟು ಪ್ರಮಾಣ ಎನ್ನುವುದು ಒಂದೆರಡು ದಿನದಲ್ಲಿ ಅಂತಿಮವಾಗಬಹುದು.

ಬೆಂಗಳೂರು ಜಲಮಂಡಳಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ನೀರು ನಿರ್ವಹಣೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ದರ ಏರಿಕೆ ಕುರಿತು ಚರ್ಚೆ ನಡೆಸುತ್ತಲೇ ಇದೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರೇ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

10 ವರ್ಷಗಳಿಗೂ ಹೆಚ್ಚು ಕಾಲ ನೀರಿನ ಬಿಲ್‌ಗಳನ್ನು ಪರಿಷ್ಕರಿಸದ ಕಾರಣ, ಬೆಂಗಳೂರು ಜಲ ಮಂಡಳಿ ವರ್ಷಕ್ಕೆ 1,000 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದೆ. ಮಂಡಳಿಯ ವಿದ್ಯುತ್ ಬಿಲ್ 35 ಕೋಟಿಯಿಂದ 75 ಕೋಟಿಗೆ (2014 ಮತ್ತು 2025 ರ ನಡುವೆ) ಹೆಚ್ಚಾಗಿದೆ. ನೀರಿನ ದರವನ್ನು ಪರಿಷ್ಕರಣೆ ಮಾಡದ ಕಾರಣ ತಿಂಗಳಿಗೆ ಸುಮಾರು 85 ಕೋಟಿ ರೂಪಾಯಿಗಳ ನಷ್ಟವಾಗುತ್ತಿರುವ ಅಂದಾಜಿನ ವಿವರವನ್ನು ಅಧಿಕಾರಿಗಳು ನೀಡಿದ್ದಾರೆ. ಅಲ್ಲದೇ ನಿರಂತರ ನಷ್ಟದಿಂದಾಗಿ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸುತ್ತಿರುವುದರಿಂದ ಮಂಡಳಿಯು ಇತರೆ ಸಂಸ್ಥಗಳಿಂದ ಸಾಲ ಇಲ್ಲವೇ ಹಣ ಸಂಗ್ರಹಣೆಯೂ ಕಷ್ಟವಾಗುತ್ತಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಇದರಿಂದಾಗಿ ಪ್ರಮುಖ ಕಾರಣಗಳನ್ನಾಧರಿಸಿ ದರ ಏರಿಕೆ ಅನಿವಾರ್ಯ ಎನ್ನುವ ಸಲಹೆಯನ್ನು ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌, ನೀರಿನ ದರ ಹೆಚ್ಚಳದ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ ಎಂದರು. ಇದನ್ನು ವಿಸ್ತೃತ ಚರ್ಚೆಯ ನಂತರ ನಿರ್ಧರಿಸಲಾಗುವುದು. ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಸಂಬಂಧಿಸಿದಂತೆ ಜಲಮಂಡಳಿಯಿಂದ ವರದಿಯನ್ನು ಈಗಾಗಲೇ ಕೇಳಲಾಗಿದೆ.ನೀರಿನ ದರ ಏರಿಕೆ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಾದ್ಯಂತ ನೀರಿನ ಬಳಕೆ ಕುರಿತು ನಿಖರ ಮಾಹಿತಿ ಸಂಗ್ರಹಿಸಲು ಯೋಜನೆ ರೂಪಿಸಿದ್ದೇವೆ. ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಬೇಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ. ನಮ್ಮ ಸರ್ಕಾರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಹೆಚ್ಚುವರಿಯಾಗಿ, ಉದ್ಯೋಗಿಗಳು ಹೆಚ್ಚುವರಿ ತುಟ್ಟಿ ಭತ್ಯೆಯನ್ನು (ಡಿಎ) ಪಡೆಯುತ್ತಾರೆ. ಆದಾಗ್ಯೂ, ಮಂಡಳಿಯ ನೌಕರರು ಪ್ರಸ್ತುತ ಸಂಬಳವಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಲ್ಲಾ ಅಂಶಗಳನ್ನು ದರ ಏರಿಕೆಗೂ ಮುಂಚೆ ಪರಿಶೀಲಿಸಲಾಗುತ್ತಿದೆ ಎನ್ನುವುದು ಡಿಕೆಶಿ ಹೇಳಿಕೆ.

ಶಿವಕುಮಾರ್ ನೀರಿನ ದರ ಏರಿಕೆ ಕುರಿತು ಮಾತನಾಡಿದ್ದು ಇದೇ ಮೊದಲಲ್ಲ. ಆಗಸ್ಟ್‌ನಲ್ಲಿ, 'ಕಾವೇರಿ ನೀರು ನಿಮ್ಮ ಮನೆ ಬಾಗಿಲಿಗೆ' ಅಭಿಯಾನವನ್ನು ಪ್ರಾರಂಭಿಸುವಾಗ, ನಗರದಲ್ಲಿ ವರ್ಷಗಳಿಂದ ಯಾವುದೇ ನೀರಿನ ದರ ಏರಿಕೆಯಾಗಿಲ್ಲ ಎಂದು ಹೇಳಿದ್ದರು.

Whats_app_banner