Bangalore News: ಬೆಂಗಳೂರಿಗೆ ಕಾವೇರಿ 6ನೇ ಹಂತದ ಘೋಷಣೆ ಮಾಡಿದ ಸಿದ್ದರಾಮಯ್ಯ; ಎಷ್ಟು ಹೆಚ್ಚುವರಿ ನೀರು ಈ ಯೋಜನೆಯಿಂದ ಸಿಗಬಹುದು
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿಗೆ ಕಾವೇರಿ 6ನೇ ಹಂತದ ಘೋಷಣೆ ಮಾಡಿದ ಸಿದ್ದರಾಮಯ್ಯ; ಎಷ್ಟು ಹೆಚ್ಚುವರಿ ನೀರು ಈ ಯೋಜನೆಯಿಂದ ಸಿಗಬಹುದು

Bangalore News: ಬೆಂಗಳೂರಿಗೆ ಕಾವೇರಿ 6ನೇ ಹಂತದ ಘೋಷಣೆ ಮಾಡಿದ ಸಿದ್ದರಾಮಯ್ಯ; ಎಷ್ಟು ಹೆಚ್ಚುವರಿ ನೀರು ಈ ಯೋಜನೆಯಿಂದ ಸಿಗಬಹುದು

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಆರನೇ ಹಂತದ ಕಾವೇರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದೆ. ಯೋಜನೆ ಹೇಗಿರಬಹುದು. ಇಲ್ಲಿದೆ ವಿವರ.

ಬೆಂಗಳೂರಿಗೆ ನೀರು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.
ಬೆಂಗಳೂರಿಗೆ ನೀರು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

ಬೆಂಗಳೂರು: ಬೆಂಗಳೂರಿಗೆ ಈಗಾಗಲೇ ನಾಲ್ಕು ಹಂತದಲ್ಲಿ ಕಾವೇರಿ ನೀರು ಒದಗಿಸುವ ಯೋಜನೆಗಳು ಜಾರಿಯಾಗಿವೆ. ಐದನೇ ಹಂತದ ಯೋಜನೆಯೂ ಮುಕ್ತಾಯವಾಗಿ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ. ಸದ್ಯದಲ್ಲೇ ಬೆಂಗಳೂರು ನಗರದ ಹೆಚ್ಚಿನ ಭಾಗದ ಜನ ಕಾವೇರಿ ನೀರನ್ನು ಪಡೆಯಲಿದ್ದಾರೆ. ಹೀಗಿದ್ದರೂ ಇನ್ನೂ ಕೆಲವು ಭಾಗಗಳಿಗೆ ಕಾವೇರಿ ನೀರಿನ ಭಾಗ್ಯ ಸಿಕ್ಕಿಲ್ಲ. ಉಳಿದ ಬೆಂಗಳೂರಿನ ಭಾಗವನ್ನು ಗಮನದಲ್ಲಿಟ್ಟುಕೊಂಡು ಆರನೇ ಹಂತದ ಕಾವೇರಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಕಾವೇರಿ ತೀರದ ತೊರೆ ಕಾಡನಹಳ್ಳಿ ಗ್ರಾಮದ ಕಾವೇರಿ ನೀರು ಶುದ್ದೀಕರಣ ಘಟಕದ ಆವರಣದಲ್ಲಿ ಐದನೇ ಹಂತದ ಕಾವೇರಿ ಯೋಜನೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಆರನೇ ಹಂತದ ಯೋಜನೆಯನ್ನು ಪ್ರಕಟಿಸಿದರು.

ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಯನ್ನು ಬುಧವಾರ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾವೇರಿ ಕುಡಿಯುವ ನೀರಿನ ಆರನೇ ಹಂತದ ಯೋಜನೆಯಿಂದ 500 ಎಂಎಲ್‌ಡಿ ಕುಡಿಯುವ ನೀರು ಬೆಂಗಳೂರಿಗರಿಗೆ ಸಿಗಲಿದೆ. ಇದನ್ನೂ ನಾವು ಘೋಷಿಸಿದ್ದೀವಿ. ನಾವು ಇದನ್ನೂ ಮಾಡಿ ತೋರಿಸ್ತೀವಿ ಎಂದು ಪ್ರಕಟಿಸಿದರು.

ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದು ಸುಳ್ಳು ಹೇಳದೆ ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ನಾನೇ ಶಂಕುಸ್ಥಾಪನೆ ಮಾಡಿ ನನ್ನಿಂದಲೇ ಉದ್ಘಾಟನೆಯಾಗಿದೆ. ನುಡಿದಂತೆ ನಡೆದದ್ದಕ್ಕೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ವಹಿದಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು

ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಸವಲತ್ತು ಒದಗಿಸುವ ಸವಾಲನ್ನು ನಮ್ಮ ಸರ್ಕಾರ ಸ್ವೀಕರಿಸಿ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು.

ಮೇಕೆದಾಟು ಯೋಜನೆಗೆ ಹೆಚ್ ಡಿ ಕೆ ಯಾಕೆ ಅನುಮತಿ ಕೊಡಿಸುತ್ತಿಲ್ಲ?

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ತೆರಿಗೆಯಲ್ಲಿ ನಮಗೆ ಅನ್ಯಾಯ ಆಗಿದೆ. ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶಕ್ಕೆ ಬಹುಪಾಲು ಹೋಗಿ ರಾಜ್ಯಕ್ಕೆ ಅನ್ಯಾಯ ಮಾಡಿ ಮಲತಾಯಿ ಧೋರಣೆ ತೋರಿದೆ.ಪ್ರತಿ ವರ್ಷ 4 ಲಕ್ಷ ಕೋಟಿಗೂ ಅಧಿಕ ತೆರಿಗೆ ಕೇಂದ್ರಕ್ಕೆ ಕೊಡ್ತಾ ಇದ್ದೀವಿ. ಆದರೆ ವಾಪಾಸ್ ನಮಗೆ ಬರುತ್ತಿರುವುದು 60ಸಾವಿರ ಕೋಟಿ ಮಾತ್ರ. 100 ಪೈಸೆಗೆ 15 ಪೈಸೆ ಮಾತ್ರ ವಾಪಾಸ್ ಬರುತ್ತಿದೆ. ಇದು ಅನ್ಯಾಯ ಅಲ್ವಾ? ಏಕೆ ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಳುತ್ಯಲೇ ಇದ್ದೇವೆ. ಮಹದಾಯಿಗೂ ಅನುಮತಿ ಕೇಳಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ಕೊಡದೆ ಅನ್ಯಾಯ ಮಾಡುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಯಾಕೆ ಅನುಮತಿ ಕೊಡಿಸುತ್ತಿಲ್ಲ? ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿಯ ಸಂಸದರು ಏಕೆ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಏಕೆ ಮಲತಾಯಿ ಧೋರಣೆ ಎಂದು ಕೇಂದ್ರ ಸರ್ಕಾರವನ್ನು ಇವರ್ಯಾರೂ ಪ್ರಶ್ನಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು. ಜೈಕಾ ಪ್ರತಿನಿಧಿಗಳು, ಸಚಿವರು,ಶಾಸಕರು, ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ. ಲೋಕಾರ್ಪಣೆಗೊಳಿಸಿದ ನೆನಪಿಗಾಗಿ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳ ಜೊತಗೂಡಿ ಘಟಕದ ಆವರಣದಲ್ಲಿ ಸಸಿ ನೆಟ್ಟರು.

ಶಾಸಕರಾದ ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ್ ದಾಸ್, ಮಧು ಮಾದೇಗೌಡ, ನಾಗರಾಜ್ ಯಾದವ್, ವಿವೇಕಾನಂದ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಾವೇರಿ-5 ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ, ಹೆಸರು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕೆ

ಬೆಂಗಳೂರು: ಪೂಜೆ ಮುಗಿದ ನಂತರ ಕೊನೆಯಲ್ಲಿ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ-5ನೇ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್‌ ಮುಂದೆ ಬಂದು ಹೆಸರು ಪಡೆದುಕೊಳ್ಳುತ್ತಿದೆ. ಈ ಯೋಜನೆ ಮಾಡಿದ್ದು ಬಿಜೆಪಿ ಎಂದು ಗೊತ್ತಿದ್ದರೂ, ನಾವೇ ಮಾಡಿದ್ದೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕಾವೇರಿ 5 ನೇ ಹಂತದ ಯೋಜನೆಯನ್ನು ತಾವೇ ಮಾಡಿದ್ದು ಎಂದು ಜಂಭ ಕೊಚ್ಚಿಕೊಂಡಿದ್ದಾರೆ. 2018 ರ ಜನವರಿ 24 ರಂದು ಈ ಯೋಜನೆಗೆ 5,500 ಕೋಟಿ ರೂ. ಸಾಲ ಪಡೆಯಲು ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಕಾಮಗಾರಿಗೆ 90 ತಿಂಗಳ ಗಡುವು ವಿಧಿಸಲಾಗಿತ್ತು. ಜೊತೆಗೆ ಕಾಮಗಾರಿ ನಡೆಸುವ ಸಂಸ್ಥೆಗಳನ್ನೂ ನಿಗದಿಪಡಿಸಲಾಗಿತ್ತು. 2019 ರ ಜನವರಿ 1 ರಂದು ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಆಗಲೂ ಬಿಜೆಪಿ ಸರ್ಕಾರವೇ ಇತ್ತು. ಪ್ಯಾಕೇಜ್‌ 2 ನಲ್ಲಿ ನಿತ್ಯ 77.5 ಕೋಟಿ ಲೀಟರ್‌ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್‌ 3 ರಲ್ಲಿ ಟಿ.ಕೆ.ಹಳ್ಳಿ ಪಂಪಿಂಗ್‌ ಘಟಕ, ಪ್ಯಾಕೇಜ್‌ 4 ರಲ್ಲಿ ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ಎರಡು ಪಂಪಿಂಗ್‌ ಸ್ಟೇಶನ್‌, ಪ್ಯಾಕೇಜ್‌ 7 ರಲ್ಲಿ ಟಿ.ಕೆ.ಹಳ್ಳಿ-ಹಾರೋಹಳ್ಳಿ ಪೈಪ್‌ಲೈನ್‌, ಪ್ಯಾಕೇಜ್‌ 8 ರಲ್ಲಿ ಹಾರೋಹಳ್ಳಿ-ವಾಜರಹಳ್ಳಿ ಪೈಪ್‌ಲೈನ್‌, ಪ್ಯಾಕೇಜ್‌ 10 ರಲ್ಲಿ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್‌, ಪ್ಯಾಕೇಜ್‌ 12 ರಲ್ಲಿ ಪೂರ್ವ ಭಾಗದಲ್ಲಿ ನೆಲಮಟ್ಟದ ಜಲಾಗಾರ, ಪ್ಯಾಕೇಜ್‌ 13 ರಲ್ಲಿ ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಎಂದು ವಿವರಿಸಿದರು.

ನಂತರ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿತ್ತು. ಡಿಪಿಆರ್‌, ಹಣ ಹೊಂದಿಕೆ, ಕಾಮಗಾರಿ ಆರಂಭ, ಹೀಗೆ ಎಲ್ಲವನ್ನೂ ಮುಚ್ಚಿಟ್ಟು ಹೆಸರು ತೆಗೆದುಕೊಳ್ಳುತ್ತಿದ್ದಾರೆ. ದೇವರನ್ನು ಕೂರಿಸಿ ಹೋಮವನ್ನು ನಾವು ಮಾಡಿದರೆ, ಮಂಗಳಾರತಿ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಬಂದು ಇದು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದೆ. ಈಗ ಏಕಾಏಕಿ ನಾವೇ ಕಷ್ಟಪಟ್ಟಿದ್ದು ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

ಹಣ ವಾಪಸ್‌

ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ 8,000 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಸುಮಾರು 50% ಕೆಲಸ ಆರಂಭವಾಗಿತ್ತು. ರಾಜಕಾಲುವೆ ಸುಧಾರಣೆಗೆ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಮಾಡುತ್ತೇನೆಂದು ಹೇಳಿ ಇದೇ ಹಿಂದಿನ ಅನುದಾನಗಳನ್ನು ವಾಪಸ್‌ ಪಡೆದುಕೊಂಡರು. ಬಳಿಕ ಹೊಸದಾಗಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಬಿ.ಎಸ್‌.ಯಡಿಯೂರಪ್ಪನವರು ವಿಶೇಷ ಅನುದಾನವನ್ನು ಬೆಂಗಳೂರಿಗೆ ನೀಡಿದ್ದರು. ಬಳಿಕ ಪ್ರತಿ ವರ್ಷ 3-4 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ವಿಶೇಷ ಅನುದಾನವಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದರು.

ಅನುದಾನದ ಬಗ್ಗೆ ಮಾತನಾಡಲು ಮುಂದಾದರೆ ಸಿಎಂ ಸಿದ್ದರಾಮಯ್ಯ ಉಡಾಫೆ ಮಾತಾಡುತ್ತಾರೆ. ಬೆಂಗಳೂರಿಗೆ ಈಗಿನ ರಾಜ್ಯ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ, ಹಿಂದಿನ ಬಿಜೆಪಿ ಸರ್ಕಾರ ಎಷ್ಟು ನೀಡಿದೆ, ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ ಎಂದು ಹೋಲಿಕೆ ಮಾಡಿ ತೋರಿಸಲಿ. ಕೇಂದ್ರ ಸರ್ಕಾರದಿಂದ ತಾರತಮ್ಯ ಎಂದು ಹೇಳುತ್ತಾರೆ. ಹೀಗೆ ಹೇಳುವುದಾದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಮೊದಲಾದ ನಗರಗಳಿಗೆ ತೆರಿಗೆಗೆ ಅನುಗುಣವಾಗಿ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.

ಮನಮೋಹನ್‌ ಸಿಂಗ್‌ ಮತ್ತು ನರೇಂದ್ರ ಮೋದಿಯವರ ಆಡಳಿತವಾಧಿಯಲ್ಲಿ ಎಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ತಿಳಿಸಲಿ. ಅದನ್ನು ಬಿಟ್ಟು ಆಯ್ಕೆ ಮಾಡಿಕೊಂಡು ಕಾಮೆಂಟ್‌ ಮಾಡುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.

ಮಳೆ ಹಾನಿ, ಬ್ಯಾಂಡ್‌ ಬೆಂಗಳೂರು

ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್‌ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್‌ ಬದಲು ಬ್ಯಾಂಡ್‌ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್‌ ಬಾಕಿ ಇದೆ. ಒಂದೋ ಬ್ರ್ಯಾಂಡ್‌ ಬೆಂಗಳೂರು ಘೋಷಣೆಯನ್ನು ವಾಪಸ್‌ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

Whats_app_banner