ಬೆಂಗಳೂರಲ್ಲಿ ಚಳಿಯೊಂದಿಗೆ ಮಳೆ ಸೇರಿ ಕೂಲ್ ವಾತಾವರಣ, ಸಾಮಾನ್ಯ ತಾಪಮಾನಕ್ಕಿಂತ 7.1 ಡಿಗ್ರಿ ಉಷ್ಣಾಂಶ ಕುಸಿತ
Bangalore Weather: ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಬಳಿ ಅಭಿವೃದ್ಧಿ ಹೊಂದುತ್ತಿರುವ ಚಂಡಮಾರುತದ ಪರಿಣಾಮ ಬೆಂಗಳೂರು ಮೇಲೂ ಬೀರಿದೆ.ಅನಿರೀಕ್ಷಿತ ಮಳೆ ಜತೆಗೆ ಚಳಿಯ ಪ್ರಮಾಣದಲ್ಲೂ ವ್ಯತ್ಯಾಸವಾಗಿದೆ.

Bangalore Weather: ಬೆಂಗಳೂರಿನಲ್ಲಿ ಕೆಲವು ಹೊತ್ತು ಮಂಜು ಮುಸುಕಿದ ಚಳಿ, ಮತ್ತೆ ಕೆಲ ಕ್ಷಣ ಮಳೆ, ಆನಂತರ ಕೊಂಚ ಬಿಸಿಲು. ಬೆಂಗಳೂರಿನ ಹವಾಮಾನವೇ ಎರಡು ದಿನದಿಂದ ಬದಲಾಗಿದೆ. ಭಾನುವಾರವಂತೂ ಮಳೆ ಹಾಗೂ ಚಳಿ ನಗರವಾಗಿದ್ದ ಬೆಂಗಳೂರಿನಲ್ಲಿ ಸೋಮವಾರವೂ ಕೊಂಚ ಅದೇ ರೀತಿಯ ವಾತಾವರಣವಿದ. ವಾರಾಂತ್ಯದ ರಜೆ ಮುಗಿಸಿ ಕಚೇರಿಗೆ ಹೋಗುವವರು, ಭಾನುವಾರದ ರಜೆ ನಂತರ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಚಳಿ ಬಿಸಿ ತಟ್ಟಿದೆ. ಬೆಂಗಳೂರು ನಗರದ ತಾಪಮಾನವು 21.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ, ಇದು ಸಾಮಾನ್ಯಕ್ಕಿಂತ 7.1 ಡಿಗ್ರಿ ಸೆಲ್ಸಿಯಸ್ ಕಡಿಮೆ.ಅಲ್ಲದೇ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಮೇಲೂ ಆಗಿದ್ದು ಭಾನುವಾರ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಸೋಮವಾರವೂ ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದು, ಸಣ್ಣ ಮಳೆ ಬರುವ ಸಾಧ್ಯತೆಗಳಿವೆ.
ಬೆಂಗಳೂರಲ್ಲಿ ಮಳೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ತಮಿಳುನಾಡು ಬಳಿಯ ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪೂರ್ವ ಮಾರುತಗಳಲ್ಲಿನ ವಾಯುಭಾರ ಕುಸಿತದಿಂದ ಈ ಮಳೆಯಾಗಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಆದಾಗ್ಯೂ ಭಾನುವಾರಕ್ಕೆ ಹೋಲಿಸಿದಎ ಸೋಮವಾರ ಚಂಡಮಾರುತ ದುರ್ಬಲಗೊಂಡಿದೆ. ಇದರಿಂದ ಮಳೆ ಪ್ರಮಾಣವೂ ಕಡಿಮೆಯಾಗಬಹುದು. ಅಲ್ಲಲ್ಲಿ ತುಂತುರು ಮಳೆ ಬರಬಹುದು ಎನ್ನುವ ನಿರೀಕೆಯಿದೆ.
ಬೆಂಗಳೂರಿನಲ್ಲಿ ಅನಿರೀಕ್ಷಿತ ಮಳೆ ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಬಳಿ ಅಭಿವೃದ್ಧಿ ಹೊಂದುತ್ತಿರುವ ಚಂಡಮಾರುತದಿಂದ ಉಂಟಾದ ದೊಡ್ಡ ಹವಾಮಾನ ವ್ಯವಸ್ಥೆಯ ಭಾಗವಾಗಿದೆ ಎಂದು ಐಎಂಡಿ ವಿವರಿಸಿದೆ. ಈ ಹವಾಮಾನ ವೈಪರೀತ್ಯವು ಬೆಂಗಳೂರು ಮಾತ್ರವಲ್ಲದೇ ಮೈಸೂರು, ತುಮಕೂರು ಸಹಿತ ಕರ್ನಾಟಕದ ಹಲವಾರು ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ.
ಉಷ್ಣಾಂಶದಲ್ಲಿ ಏರಿಳಿತ
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಮುಂಜಾನೆ ಆಳವಿಲ್ಲದ ಮಂಜು ಅಥವಾ ಮಂಜು ಕವಿದಿರುತ್ತದೆ.
ನಗರದಲ್ಲಿ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ನಿಂದ 16 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು ನಗರದಲ್ಲಿ ಈ ಋತುವಿನ ಮೊದಲ ಮಳೆಯಾಗಿದ್ದು, ತಾಪಮಾನವು 21.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಸಾಮಾನ್ಯಕ್ಕಿಂತ 7.1 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ. ಈ ಅನಿರೀಕ್ಷಿತ ಹವಾಮಾನ, ಇತ್ತೀಚಿನ ಕೆಲವು ತುಂತುರು ಮಳೆಯ ಹೊರತಾಗಿ, ನಗರದ ಹವಾಮಾನದಲ್ಲಿ ಬದಲಾವಣೆ ಮಾಡಿಕೊಟ್ಟಿದೆ. ಈ ವಾರವೂ ಇದೇ ರೀತಿ ಚಳಿಯಲ್ಲಿ ಏರಿಳಿತ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಹೇಗಿರಲಿದೆ ಎರಡು ದಿನ
ಬೆಂಗಳೂರಿನಲ್ಲಿ ಮುಂದಿನ ನಲವತ್ತೆಂಟು ಗಂಟೆಗಳ ಕಾಲ ಚಳಿಯ ಅನುಭವ ದಟ್ಟವಾಗಿಯೇ ಇರಲಿದೆ.ಸಾಮಾನ್ಯವಾಗಿ ಮೋಡ ಕವಿತ ವಾತಾವರಣ ಬೆಂಗಳೂರನಲ್ಲ ಕಂಡು ಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಸಾಧಾರಣ ಮಂಜು ಬೀಳುವ ಸಾಧ್ಯತೆಗಳು ಅಧಿಕವಾಗಿವೆ. ಬೆಂಗಳೂರಿನ ಗರಿಷ್ಠ ತಾಪಮಾನವು 23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶದ ಪ್ರಮಾಣವು 16 ಡಿಗ್ರಿ ಸೆಲ್ಸಿಯಸ್ ಇರಬಹುದು.
ಬೆಂಗಳೂರಿನಲ್ಲಿ ಭಾನುವಾರದಂದು ಉಷ್ಣಾಂಶದ ಏರಿಳಿತ ಇತ್ತು. ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶವು 27.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್,
ಕೆಂಪೇಗೌಡ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶವು 27.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 16.8 ಡಿಗ್ರಿ ಸೆಲ್ಸಿಯಸ್, ಜಿಕೆವಿಕೆ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶವು 27.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 16.6 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶವು 27.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಸಂಜೆ ಹೊತ್ತಿಗೆ ಇದು 21 ಡಿಗ್ರಿಗೆ ಇಳಿದಿರುವುದು ಕಂಡು ಬಂದಿತು.
