ನಂದಿನಿ ದೋಸೆ, ಇಡ್ಲಿ ಹಿಟ್ಟು ಪ್ರಸ್ತಾಪ ತಡೆಹಿಡಿದಿದ್ದು ಏಕೆ? ಪ್ರಶ್ನೆಗಳ ಸರಮಾಲೆ ಹುಟ್ಟು ಹಾಕಿದ ಕೆಎಂಎಫ್ ಎಂಡಿ ವರ್ಗಾವಣೆ
ಕರ್ನಾಟಕ ಹಾಲು ಮಹಾಮಂಡಳಿ-ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ, ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಅನುಮಾನಗಳ ನಡುವೆ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದೆ. ನಂದಿನಿ ದೋಸೆ, ಇಡ್ಲಿ ಹಿಟ್ಟಿನ ಪ್ರಸ್ತಾವನೆಗೆ ತಡೆ ನೀಡಿದ್ದು ಯಾಕೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರು: ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸಿವೆ. ಮಂಡಳಿಯ ವ್ಯವಸ್ಥಾಪಕರ ವರ್ಗಾವಣೆಗೆ ಕಾರಣಗಳೇನು? ನಂದಿನಿ ದೋಸೆ ಇಡ್ಲಿ ಹಿಟ್ಟು ಯೋಜನೆಯಿಂದ ಹಿಂದೆ ಸರಿದಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದು ಹಲವಾರು ಶಂಕೆಗಳಿಗೆ ಕಾರಣವಾಗಿದೆ. ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇರಳದ ಲಾಬಿಗೆ ಮಣಿದು ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಂದಿನಿ ಇಡ್ಲಿ ದೋಸೆ ಹಿಟ್ಟು ಪರಿಚಯಿಸುವ ಬೆನ್ನಲ್ಲೇ ಇವರ ವರ್ಗಾವಣೆಯಾಗಿದೆ. ಕಳೆದ ಎರಡು ದಶಕಗಳಿಂದ ದೋಸೆ ಹಿಟ್ಟು ಮಾರಾಟದಲ್ಲಿ ಖಾಸಗಿ ಕಂಪನಿಗಳದ್ದೇ ಪಾರುಪತ್ಯವಾಗಿದೆ.
ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಇಡ್ಲಿ ದೋಸೆ ಹಿಟ್ಟಿಗೆ ಬಹು ದೊಡ್ಡ ಮಾರುಕಟ್ಟೆ ಇದೆ. ಈ ಮಾರುಕಟ್ಟೆ ಪ್ರವೇಶಿಸಲು ಜಗದೀಶ್ ಅಣಿಯಾಗುತ್ತಿರುವಾಗಲೇ ಅವರ ವರ್ಗಾವಣೆಯಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇರಳ ಮೂಲದ ಐಡಿ ದೋಸೆ ಇಡ್ಲಿ ಹಿಟ್ಟಿನ ಬ್ರ್ಯಾಂಡ್ ನ ಮಾಲೀಕ ಮುಸ್ತಾಫ ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಬಿಜೆಪಿ ಆರೋಪ ಮಾಡಿದೆ. 2005ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಐಡಿ ಫ್ರೆಶ್ ಫುಡ್ಸ್ ವಾರ್ಷಿಕ 270 ಮಿಲಿಯನ್ ಡಾಲರ್ ವಹಿವಾಟು ಹೊಂದಿದೆ.
ಭಾರಿ ಸದ್ದು ಮಾಡಿದ್ದ ಅಮುಲ್ ನಂದಿನಿ ವಿಲೀನ ಪ್ರಸ್ತಾಪ
ಜಗದೀಶ್ ಅವರ ಅವಧಿಯಲ್ಲಿ ನಂದಿನಿ ದಾಪುಗಾಲು ಹಾಕಿದ್ದು ಸುಳ್ಳಲ್ಲ. ದುಬೈ, ದೆಹಲಿ ಮಾರುಕಟ್ಟೆ ಪ್ರವೇಶ ಮಾಡಿದ್ದು, ಐಎಸ್ ಎಲ್, ಪ್ರೊ ಕಬಡ್ಡಿ ಮತ್ತು ಅನೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಪ್ರಾಯೋಜಕತ್ವ ಪಡೆದಿದ್ದು, ಸಾಧನೆಯೇ ಸರಿ. 2023ರ ಚುನಾವಣೆ ಸಂದರ್ಭದಲ್ಲಿ ನಂದಿಯನ್ನು ಗುಜರಾತ್ ನ ಅಮುಲ್ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವ ಅಮಿತ್ ಶಾ ಮುಂದಿಟ್ಟಿದ್ದರು. ಇದು ಕನ್ನಡಿಗರ ಹೆಗ್ಗುರತನ್ನು ನಾಶ ಮಾಡುವ ಸಂಚು ಎಂದು ಸಿಡಿದೆದ್ದಾಗ ಶಾ ತಣ್ಣಗಾಗಿದ್ದರು.
ಆದರೆ ಸರ್ಕಾರದ ವಾದವೇ ಬೇರೆ ಇದೆ. ವಾಸ್ತವದಲ್ಲಿ ದೋಸೆ ಹಿಟ್ಟನ್ನು ನಂದಿನಿ ಉತ್ಪಾದಿಸುತ್ತಿರಲಿಲ್ಲ. ಮೂರನೇ ಸಂಸ್ಥೆಯೊಂದು ಉತ್ಪಾದಿಸಿದ ದೋಸೆ ಹಿಟ್ಟನ್ನು ನಂದಿನಿ ಬ್ರ್ಯಾಂಡ್‌ನ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಪ್ರಸ್ತಾವ ಇದಾಗಿತ್ತು. ನಂದಿನಿ ಅಡಿಯಲ್ಲಿ ದೋಸೆ ಹಿಟ್ಟು ಮಾರಾಟಕ್ಕೆ ಮುಂದಾದದ್ದೇ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೆ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಈ ಪ್ರಸ್ತಾಪವನ್ನು 6 ತಿಂಗಳ ಹಿಂದೆಯೇ ತಡೆಹಿಡಿಯಲಾಗಿದೆ. ದೋಸೆ ಹಿಟ್ಟು ಉತ್ಪಾದಿಸುವ ಸ್ವಂತ ಉತ್ಪಾದನಾ ಘಟಕ ನಿರ್ಮಿಸುವ ಪ್ರಸ್ತಾವ ನಮ್ಮ ಮುಂದಿದೆ ಎಂದು ತಿಳಿಸಿದ್ದಾರೆ.
ಹಸಿರು ಪ್ರಾಡಕ್ಟ್ ಎಂಬ ಕಂಪನಿ ತನ್ನ ಘಟಕದಲ್ಲಿ ಉತ್ಪಾದಿಸುವ ದೋಸೆ ಹಿಟ್ಟನ್ನು ನಂದಿನಿ ಹೆಸರಿನ ಅಡಿಯಲ್ಲಿ ಮಾರಾಟ ಮಾಡುವ ಪ್ರಸ್ತಾವವನ್ನು ಕೆಎಂಎಫ್ ಮುಂದಿಟ್ಟಿತ್ತು. ಈ ಹಿಟ್ಟಿನ ಉತ್ಪಾದನೆ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ನಂದಿನಿ ಹೆಸರು ಬಳಕೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಎದುರಾಗಬಹುದು. ಒಂದು ವೇಳೆ ದೋಸೆ ಹಿಟ್ಟಿನ ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ನಂದಿನ ಹೆಸರಿಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಆರು ತಿಂಗಳ ಹಿಂದೆಯೇ ಪ್ರಸ್ತಾವವನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ನಂದಿನಿ ಹೆಸರಿನಲ್ಲಿ ದೋಸೆ ಹಿಟ್ಟು ಮಾರಾಟಕ್ಕೆ ಅನುಮತಿ ನೀಡಿದರೆ ಹೆಚ್ಚೆಂದರೆ ವಾರ್ಷಿಕ 10 ಲಕ್ಷ ಮಾತ್ರ ಲಾಭ ಬರುತ್ತಿತ್ತು. ಇಷ್ಟು ಅಲ್ಪ ಮೊತ್ತಕ್ಕೆ ನಂದಿನಿ ಬ್ರಾಂಡ್ ಹೆಸರು ಕೆಡುವ ನಿರ್ಧಾರ ಕೈಗೊಳ್ಳುವುದು ಉತ್ತಮ ನಿರ್ಧಾರವಲ್ಲ. ನಂದಿನಿಯಿಂದಲೇ ದೋಸೆ ಹಿಟ್ಟು ಉತ್ಪಾದಿಸುವ ಸ್ವಂತ ಘಟಕ ಸ್ಥಾಪಿಸಿ ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸಲು ಪ್ರಸ್ತಾವ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಭೀಮಾನಾಯ್ಕ ಹೇಳಿದ್ದಾರೆ. ಯಾರು ಸರಿ ಯಾರು ತಪ್ಪು ಎಂದು ಕಾಲವೇ ನಿರ್ಧರಿಸಬೇಕಿದೆ.