ಕನ್ನಡ ಸುದ್ದಿ  /  Karnataka  /  Banjara Community Supports Bjp Stone Pelting On Bsy House Hurt The Most Says Cm Bommai

CM Bommai on BSY: ಬಂಜಾರ ಸಮುದಾಯ ಬಿಜೆಪಿ ಬೆಂಬಲಿತರು; ಬಿಎಸ್ವೈ ಮನೆ‌ ಮೇಲೆ ಕಲ್ಲು ತೂರಾಟ ಅತ್ಯಂತ ನೋವುಂಟುಮಾಡಿದೆ: ಸಿಎಂ ಬೊಮ್ಮಾಯಿ

ಎಸ್ಸಿ ಪಟ್ಟಿಯಿಂದ ಹೊರಹಾಕುತ್ತಾರೆ ಎನ್ನುವ ಆತಂಕ ಬಂಜಾರ ಸಮುದಾಯದವರಿಗೆ ಇತ್ತು. ಈ‌ ಬಗ್ಗೆ ಫೆಬ್ರವರಿಯಲ್ಲೇ ಕೇಂದ್ರಕ್ಕೆ ಪತ್ರ ಬರೆದು ಶಾಶ್ವತವಾಗಿ ಇವರನ್ನು ಎಸ್ಸಿ ಪಟ್ಟಿಯಲ್ಲೇ ಇಡಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ (ಫೋಟೋ-ಫೈಲ್)
ಸಿಎಂ ಬಸವರಾಜ ಬೊಮ್ಮಾಯಿ (ಫೋಟೋ-ಫೈಲ್)

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯದ ಒಳಮೀಸಲಾತಿ ಕುರಿತ ಎಜೆ ಸದಾಶಿವ ಸಮಿತಿಯ ವರದಿ ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

ಬಂಜಾರ ಸಮುದಾಯದವರು ಸರ್ಕಾರದ ಈ ನಿರ್ಧಾರವನ್ನ ವಿರೋಧಿಸಿ ನಿನ್ನೆ (ಮಾರ್ಚ್ 27) ಶಿವಮೊಗ್ಗದ ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಂಜಾರ ಸಮುದಾಯ ನಮ್ಮ ಬೆಂಬಲಿತ ಸಮುದಾಯ. ಆದರೆ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲುತೂರಾಟ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ ಎಂದಿದ್ದಾರೆ.

ಅಂಬರೀಶ್ ಸ್ಮಾರಕ ಲೋಕಾರ್ಪಣೆ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋದವರು ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮವನ್ನ ಪ್ರಾರಂಭ ಮಾಡಿದ್ದರು. ಕೆಲವರ ತಪ್ಪು ಕಲ್ಪನೆಯಿಂದ ಮತ್ತು ಕೆಲವರ ಪ್ರಚೋದನೆಯಿಂದ ಅವರ ನಿವಾಸದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದವರ ಕೆಲಸ

ಶಿಕಾರಿಪುರಲ್ಲಿ ಹೀಗಾಗಿದೆ ಅಂದರೆ ರಾಜಕೀಯ ದುರುದ್ದೇಶ ಇದೆ. ಯಡಿಯೂರಪ್ಪ ಅವರ ಸೇವೆಯಿಂದ ಅವರಿಗೆ ಅಲ್ಲಿನ ಜನರ ಬೆಂಬಲ ಸದಾ ಇರುತ್ತದೆ. ಅದನ್ನು ಕದಲಿಸಲು‌ ವಿರೋಧ ಪಕ್ಷದವರು ಈ‌ ಕೆಲಸವನ್ನು ಮಾಡಿದ್ದಾರೆ. ಇದು ಅತ್ಯಂತ ಹೀನ ಮತ್ತು ಖಂಡನೀಯ ಕೆಲಸ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬಂಜಾರ ನಮ್ಮ ಸಮುದಾಯ:

ಬಂಜಾರ ಸಮುದಾಯ ನಮ್ಮ ಬೆಂಬಲಿತ ಸಮುದಾಯ. ಒಂದೂವರೆ ಲಕ್ಷ ಜನರಿಗೆ ಹಕ್ಕು ಪತ್ರ ಕೊಡಲಾಗಿದೆ. ಇವತ್ತೂ ಅವರಿಗೆ ಹಕ್ಕು ಪತ್ರಗಳನ್ನು ಕೊಟ್ಟಿದ್ದೇವೆ. ನಮ್ಮನ್ನು ಎಸ್ಸಿ ಪಟ್ಟಿಯಿಂದ ಹೊರಹಾಕುತ್ತಾರೆ ಎನ್ನುವ ಆತಂಕ ಇತ್ತು. ಈ‌ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಕೇಂದ್ರಕ್ಕೆ ಪತ್ರ ಬರೆದು ಶಾಶ್ವತವಾಗಿ ಇವರನ್ನು ಎಸ್ಸಿ ಪಟ್ಟಿಯಲ್ಲೇ ಇಡಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಪ್ರಚೋದನೆ ಮಾಡುವ ಕೆಲಸ ನಿಲ್ಲಿಸಿ:

ಯಾವ ವರದಿಯಲ್ಲಿ ಈ ಬಗ್ಗೆ ಆತಂಕ ಇತ್ತೋ, ಅದನ್ನು ನಾವು ಒಪ್ಪಿಕೊಂಡಿಲ್ಲ. ನಾವು ಕ್ಯಾಬಿನೆಟ್ ಸಬ್ ಕಮಿಟಿ ವರದಿಯಂತೆ 4.5 ರಷ್ಟು ಹೆಚ್ಚಳ ಮಾಡಿದ್ದೇವೆ. ಅವರ ಆತಂಕ ದೂರ ಮಾಡಿ ಹೆಚ್ಚಿನ ಮೀಸಲಾತಿ ಕೊಟ್ಟಿದ್ದೇವೆ. ರಾಜಕೀಯ ಪ್ರಚೋದನೆ ಮಾಡುವ ಕೆಲಸ ನಿಲ್ಲಬೇಕು. ಈ ಸಂಬಂಧ ಯಡಿಯೂರಪ್ಪ ಅವರಿಗೆ ಸಂಬಂಧವೇ ಇಲ್ಲ. ಅವರಿಗೆ ಹೀಗೆ ಮಾಡಿದ್ದು ನಿಜಕ್ಕೂ ನೋವು ತರಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಪ್ರಚೋದನೆ ಇದೆ:

ವಿರೋಧ ಪಕ್ಷಗಳ ಪ್ರಚೋದನೆಯಿಂದಲೇ ಈ ಘಟನೆ ಇದೆ. ನಮ್ಮ ನೀತಿಯಿಂದ ಇದು ಜರುಗಿಲ್ಲ.‌ ಎಲ್ಲರಿಗೂ ನ್ಯಾಯವನ್ನ ಕೊಟ್ಟಿದ್ದೀವಿ. ಇದು ರಾಜಕೀಯ ಪ್ರೇರಿತವಾದ ಘಟನೆ ಎಂದಿದ್ದಾರೆ.

ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ 'ಮೈತ್ರಿ' ನಿವಾಸದ ಬಳಿ ನಿನ್ನೆ ಜಮಾಯಿಸಿದ್ದ ಪ್ರತಿಭಟನಾಕಾರರು, ಕಲ್ಲು ತೂರಾಟ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದ್ದರು. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಿಂಸಾಚಾರದ ವೇಳೆ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಬಿಎಸ್​ವೈ ನಿವಾಸದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್​ವೈ ಸೇರಿದಂತೆ ಬಿಜೆಪಿ ನಾಯಕರ ಭಾವಚಿತ್ರ ಇರುವ ಪೋಸ್ಟರ್‌ಗಳನ್ನು ಸುಟ್ಟು ಹಾಕಿದ್ದಾರೆ. ತಾಲೂಕು ಬಿಜೆಪಿ ಕಚೇರಿ ಮೇಲೆ ಹತ್ತಿ ಪಕ್ಷದ ಬಾವುಟವನ್ನು ಕಿತ್ತು ಬಿಸಾಕಿದ್ದಾರೆ. ನಂತರ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

IPL_Entry_Point