ಬಂಟ್ವಾಳ ಕಂಚಿನಡ್ಕಪದವು ಎಂಬಲ್ಲಿ ಲಾರಿಗಳ ಅಪಘಾತ; ಬಿಸಿ ಡಾಂಬರು ಚೆಲ್ಲಿ ಸ್ಥಳದಲ್ಲೇ ಚಾಲಕನ ದಾರುಣ ಸಾವು
ಬಂಟ್ವಾಳ ತಾಲೂಕಿನ ಸಜೀಪದ ಕಂಚಿನಡ್ಕಪದವು ಎಂಬಲ್ಲಿ ಸಂಭವಿಸಿದ ಭೀಕರ ಲಾರಿ ಅಫಘಾತದಲ್ಲಿ ಬಿಸಿ ಡಾಂಬರು ಚೆಲ್ಲಿ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ಎಂಡಿಎಂಎ ಸೇವನೆ, ಮಾರಾಟ ಸಂಬಂಧಿಸಿ ಮೂವರ ಬಂಧನವಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಲಾರಿಗಳೆರಡು ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಜಲ್ಲಿ ಮಿಶ್ರಿತ ಬಿಸಿ ಡಾಂಬರು ಮೈಮೇಲೆ ಹರಿದು ಲಾರಿ ಚಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪದ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ. ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45) ಮೃತಪಟ್ಟ ವ್ಯಕ್ತಿ. ಉಳಿದಂತೆ ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಅವರ ಕೈ ಕಾಲುಗಳ ಮೇಲೆ ಡಾಂಬರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಅಲ್ಪಾಸ್ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಚಿನಡ್ಕಪದವು ಕಡೆಯಿಂದ ಸಜೀಪನಡು ಕಡೆಗೆ ಹೋಗುತ್ತಿದ್ದ ವೇಳೆ ಕಂಚಿನಡ್ಕಪದವು ಎಂಬಲ್ಲಿ ಅಪಘಾತ ಸಂಭವಿಸಿದೆ.
ಕಂಚಿನಡ್ಕಪದವಿನಲ್ಲಿ ಲಾರಿಗಳ ಅಪಘಾತ ಹೇಗಾಯಿತು
ಕೆಂಪು ಕಲ್ಲುಗಳನ್ನು ಸಾಗಿಸುವ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಡಾಮರು ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ಟಿಪ್ಪರ್ ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ. ಮತ್ತು ಟಿಪ್ಪರ್ ಲಾರಿಯಲ್ಲಿದ್ದ ಬಿಸಿಬಿಸಿ ಡಾಮರು ಮಿಶ್ರಿತ ಜಲ್ಲಿ ಕಲ್ಲುಗಳು ಕೆಂಪು ಕಲ್ಲು ಸಾಗಿಸುವ ಲಾರಿ ಚಾಲಕನ ಮೈ ಮೇಲೆ ಬಿದ್ದು ಬೆಂದುಹೋಗಿದೆ. ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಸಿಯಾದ ಡಾಮರುನಲ್ಲಿ ಬೆಂದು ಹೋಗಿದ್ದ ಚಾಲಕ ರಫೀಕ್ ಮೃತಪಟ್ಟಿದ್ದಾರೆ.
ಜೊತೆಗೆ ಇದ್ದ ಕ್ಲೀನರ್ ಯೂಸುಫ್ ಮೇಲೆಯೂ ಡಾಮರು ಬಿದ್ದಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಾಮರು ಲಾರಿಯಲ್ಲಿದ್ದ ರಿಜ್ವಾನ್ ಹಾಗೂ ಅಲ್ಪಾಸ್ ಎಂಬವರಿಗೆ ಅಪಘಾತದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಜೀಪನಡುವಿಲ್ಲಿ ರಸ್ತೆಗೆ ಡಾಮರು ಹಾಕುವ ಉದ್ದೇಶದಿಂದ ಡಾಮರು ಸಾಗಿಸುವ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂಡಿಎಂಎ ಸೇವನೆ, ಮಾರಾಟ: ಮೂವರ ಬಂಧನ, ಲಕ್ಷಾಂತರ ರೂ ಮೌಲ್ಯದ ಸೊತ್ತುಗಳು ವಶಕ್ಕೆ
ಎಂಡಿಎಂ ಮಾದಕ( ನಿಷೇಧಿತ ನಿದ್ರಾಜನಕ ಸೊತ್ತು) ವಸ್ತು ಸೇವಿಸಿ ಬಳಿಕ ಮಾರಾಟದ ಉದ್ದೇಶದಿಂದ ಅವಿತುಕೊಂಡಿದ್ದ ಮೂವರು ಆರೋಪಿಗಳ ಸಹಿತ ಲಕ್ಷ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ಬಂಟ್ವಾಳ ನಗರ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದೆ.
ನಂದಾವರ ಬಸ್ತಿಗುಡ್ಡೆ ನಿವಾಸಿ ಮೊಹಮ್ಮದ್ ಇಮ್ತಿಯಾಜ್ , ನಂದಾವರ ಬಸ್ತಿಗುಡ್ಡೆ ನಿವಾಸಿ ಯೂನಸ್, ಹಾಗೂ ಪುತ್ತೂರು ನರಿಮೊಗರು ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಕ್ಬಾಲ್ ಬಂಧಿತ ಆರೋಪಿಗಳು.
ಬಂಧಿತರಿಂದ 5000 ರೂಪಾಯಿ ಮೌಲ್ಯದ 2.99 ಗ್ರಾಂ ತೂಕದ ಎಂಡಿಎಂ ಸೊತ್ತು ಹಾಗೂ ಖಾಲಿ 5 ಪ್ಲಾಸ್ಟಿಕ್ ಕವರ್, 30 ಲಕ್ಷ ರೂಪಾಯಿ ಮೌಲ್ಯದ ಕಾರು, ಆರೋಪಿಗಳ ಕೈಯಲ್ಲಿದ್ದ 45,000 ರೂಪಾಯಿ ಮೌಲ್ಯದ 4 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ ನಗರ ಠಾಣಾ ಪೋಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಸಂಶಯದ ಮೇಲೆ ವಿಚಾರಿಸಿದಾಗ ಇವರು ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ನಂದಾವರದ ಗೌಸಿಯಾ ಎಂಬಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ನಿಷೇಧಿತ ನಿದ್ರಾಜನಕ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದ ವೇಳೆ ಎಸ್.ಐ.ರಾಮಕೃಷ್ಣ ನೇತ್ರತ್ವದಲ್ಲಿ ದಾಳಿ ಮಾಡಿದ್ದಾರೆ. ಈ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಧಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಕಾಂಗ್ರೆಸ್‌ನ ಮುಖಂಡ ವಿರುದ್ಧ ಬಿಜೆಪಿ ದೂರು
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ ವಿರುದ್ಧ ಬಿಜೆಪಿ ಒಬಿಸಿ ಮೋರ್ಚಾ ಬಂಟ್ವಾಳದಲ್ಲಿ ದೂರು ನೀಡಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಅವರ ಬಳಿ ನಿಯೋಗ ತೆರಳಿ ದೂರು ಸಲ್ಲಿಸಿತು.
ಭಾರತ ಮತ್ತು ಪಾಕಿಸ್ತಾನ ಯುದ್ಧದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್ಸಿನ ಅಮಳ ರಾಮಚಂದ್ರ ವಿರುದ್ದ ದೂರನ್ನು ಒಬಿಸಿ ಮೋರ್ಚಾದ ಬಂಟ್ವಾಳ ಮಂಡಲದ ವತಿಯಿಂದ, ದಾಖಲಿಸಲಾಯಿತು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ತುಂಗಪ್ಪ ಬಂಗೇರ ಮತ್ತು ರಮಾನಾಥ ರಾಯಿ, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಜಿಲ್ಲಾ ಹಿಂದುಳಿದ ವರ್ಗ ಪ್ರದನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಮಂಡಲಾಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ಹಿಂದುಳಿದ ವರ್ಗ ಮೋರ್ಚ ಬಂಟ್ವಾಳ ಮಂಡಲದ ಕೋಶಾಧಿಕಾರಿ ಪುನೀತ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ದಾಸ್, ಉಮೇಶ್ ಅರಳ ಹಾಗೂ ಉಪಾಧ್ಯಕ್ಷರಾದ ಅಶೋಕ್, ಮರ್ದೋಳಿ ಪ್ರಮುಖರಾದ ವೀರೇಂದ್ರ ಉಪಸ್ಥಿತರಿದ್ದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)