ದಡ್ಡಲಕಾಡು ಸರಕಾರಿ ಹೈಸ್ಕೂಲ್‌; 1200 ಮಕ್ಕಳಿಗೆ ಕೇವಲ 5 ಶಿಕ್ಷಕರು, ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ
ಕನ್ನಡ ಸುದ್ದಿ  /  ಕರ್ನಾಟಕ  /  ದಡ್ಡಲಕಾಡು ಸರಕಾರಿ ಹೈಸ್ಕೂಲ್‌; 1200 ಮಕ್ಕಳಿಗೆ ಕೇವಲ 5 ಶಿಕ್ಷಕರು, ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ

ದಡ್ಡಲಕಾಡು ಸರಕಾರಿ ಹೈಸ್ಕೂಲ್‌; 1200 ಮಕ್ಕಳಿಗೆ ಕೇವಲ 5 ಶಿಕ್ಷಕರು, ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ

ಬಂಟ್ವಾಳ ಸಮೀಪದ ದಡ್ಡಲಕಾಡು ಸರಕಾರಿ ಹೈಸ್ಕೂಲ್‌ನಲ್ಲಿ ಈಗ 1200 ಮಕ್ಕಳಿಗೆ ಕೇವಲ 5 ಶಿಕ್ಷಕರು ಮಾತ್ರ ಇರುವಂಥದ್ದು. ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ ಎಂಬ ಪ್ರಶ್ನೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿರುವ ಪಾಲಕರದ್ದು. (ವಿಶೇಷ ವರದಿ- ಹರೀಶ ಮಾಂಬಾಡಿ, ಮಂಗಳೂರು)

ದಡ್ಡಲಕಾಡು ಸರಕಾರಿ ಹೈಸ್ಕೂಲ್‌ನಲ್ಲಿ ಈಗ 1200 ಮಕ್ಕಳಿಗೆ ಕೇವಲ 5 ಶಿಕ್ಷಕರು. ಹಿಂದೊಮ್ಮೆ ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ. (ಸಾಂದರ್ಭಿಕ ಚಿತ್ರ)
ದಡ್ಡಲಕಾಡು ಸರಕಾರಿ ಹೈಸ್ಕೂಲ್‌ನಲ್ಲಿ ಈಗ 1200 ಮಕ್ಕಳಿಗೆ ಕೇವಲ 5 ಶಿಕ್ಷಕರು. ಹಿಂದೊಮ್ಮೆ ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ. (ಸಾಂದರ್ಭಿಕ ಚಿತ್ರ)

ಮಂಗಳೂರು: ಒಂದು ಕಾಲದಲ್ಲಿ ಈ ಶಾಲೆ ಮುಚ್ಚುತ್ತದೆ ಎನ್ನಲಾಗುತ್ತಿತ್ತು. ಕೇವಲ 28 ವಿದ್ಯಾರ್ಥಿಗಳು ಇದ್ದ ಸಂದರ್ಭ ಅಲ್ಲೇ ಕಲಿತವರು ಊರವರು ಒಟ್ಟು ಸೇರಿ, ತಮ್ಮ ಮಕ್ಕಳನ್ನೂ ಆ ಶಾಲೆಗೆ ಸೇರಿಸಿದರು. ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ಬಳಿಕ ದತ್ತು ತೆಗೆದುಕೊಂಡು ರಾಜ್ಯವೇ ಗಮನ ಸೆಳೆಯುವಂತೆ ಅಭಿವೃದ್ಧಿಯಾಯಿತು. ಆಗಿನ ರಾಜ್ಯಪಾಲ ವಜೂಭಾಯಿ ವಾಲಾ ಈ ಶಾಲೆಗೆ ಭೇಟಿ ನೀಡಿ ಸರಕಾರಿ ಶಾಲೆ ಎಂದರೆ ಹೀಗಿರಬೇಕು ಎಂದು ಹೊಗಳಿದ್ದರು. ಆದರೆ ಇವತ್ತಿಗೂ ಸರಕಾರ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರ ನೇಮಕ ಮಾಡಿಲ್ಲ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಡ್ಡಲಕಾಡು ಎಂಬಲ್ಲಿರುವ ಸರಕಾರಿ ಆಂಗ್ಲ ಮಾಧ್ಯಮ ಹೈಸ್ಕೂಲ್ ಕಥೆ. ಸಾವಿರಕ್ಕೂ ಅಧಿಕ ಮಕ್ಕಳ ಸಂಖ್ಯೆ ಇರುವುದು, ಹೈಸ್ಕೂಲ್ ಕಟ್ಟಡ, ಸ್ಮಾರ್ಟ್ ಕ್ಲಾಸ್ ಇರುವುದೆಲ್ಲಾ ಅಭಿವೃದ್ಧಿಯ ಯಶೋಗಾಥೆಯಾದರೆ, ಸರಕಾರ ಈ ಶಾಲೆಯಲ್ಲಿರುವ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಕ ಮಾಡದಿರುವುದು ಊರವರಿಗೂ ಬೇಸರ ತಂದಿದೆ.

ದಡ್ಡಲಕಾರು ಸರ್ಕಾರಿ ಶಾಲೆ ಈ ವರ್ಷ 108 ಮಕ್ಕಳ ಸೇರ್ಪಡೆ

ಈ ಶಾಲೆಯನ್ನು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಉದ್ಯಮಿ ಪ್ರಕಾಶ್ ಅಂಚನ್ ಸ್ವತಃ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ, ಊರವರನ್ನೂ ಶಾಲೆಗೆ ಬರುವಂತೆ ಪ್ರೇರೇಪಿಸಿದ್ದಾರೆ. ಜತೆಗೆ ಸರಕಾರಿ ಶಾಲೆ ಉಳಿಸುವ ಆಂದೋಲನವನ್ನೂ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ 28 ವಿದ್ಯಾರ್ಥಿಗಳಿಂದ ಮುಚ್ಚುವ ಸ್ಥಿತಿಗೆ ತಲುಪಿದ್ದ ದಡ್ಡಲಕಾಡು ಸರಕಾರಿ ಶಾಲೆಗೆ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆಯಾಗುತ್ತಿದೆ. ಶಾಲೆಗೆ ಬನ್ನಿ.. ಸರಕಾರಿ ಶಾಲೆಯನ್ನು ಉಳಿಸಿ ಎಂದು ಇಲ್ಲಿಗಂತೂ ಹೇಳಬೇಕಾಗಿಯೇ ಇಲ್ಲ. ಬ್ಯಾನರ್ ಪ್ರಚಾರ, ಮನೆಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳದೇ ಹೋದರೂ ಕೂಡ ಪಾಲಕರು ತಮ್ಮ ಮಕ್ಕಳನ್ನು ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿಲು ಪೈಪೋಟಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಶೈಕ್ಷಣಿಕ ವರ್ಷದಲ್ಲೂ 108 ಹೊಸ ವಿದ್ಯಾರ್ಥಿಗಳು ಶಾಲೆಗೆ ಸೇರುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಸರಕಾರಿ ಶಾಲೆಯಲ್ಲಿ 8 ಶಾಲಾ ಬಸ್ಸಿನ ವ್ಯವಸ್ಥೆ, ಸುಸಜ್ಜಿತ ಶಾಲಾ ಕಟ್ಟಡ, ಶೌಚಾಲಯ ವ್ಯವಸ್ಥೆ, ಆವರಣ ಗೋಡೆ, ಸಿಸಿಕ್ಯಾಮರ ಕಣ್ಗಾವಲು, ಆಂಗ್ಲಮಾಧ್ಯಮದಲ್ಲಿ ಶಿಕ್ಷಣ, ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್‌ನಿಂದ ಹೆಚ್ಚುವರಿ ಶಿಕ್ಷಕರ ನಿಯೋಜನೆ, ಎನ್‌ಸಿಸಿ, ಯೋಗ, ಕರಾಟೆ ಮೊದಲಾದ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶವಿರುವುದರಿಂದಾಗಿ ತಾಲೂಕಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ದಡ್ಡಲಕಾಡು ಶಾಲೆಗೆ ಸೇರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಆವರಣದಲ್ಲಿ ಪಿಯೂಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ.

ಶಾಲೆಗೆ ಮಕ್ಕಳು ಬರಲಿ, ಟೀಚರ್ ಗಳು ಬರ್ತಾರೆ ಎಂದಿದ್ದರು

ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಮುಚ್ಚುವ ಸ್ಥಿತಿಯಲ್ಲಿದ್ದಾಗ ಟೀಚರುಗಳನ್ನು ಒದಗಿಸಿ, ಮಕ್ಕಳನ್ನು ಸೇರಿಸ್ತೇವೆ ಎಂದಿದ್ದಕ್ಕೆ ಅಧಿಕಾರಿಗಳು ಶಾಲೆಗೆ ಮಕ್ಕಳು ಬರಲಿ, ಟೀಚರುಗಳನ್ನು ಕೊಡ್ತೇವೆ ಎಂದಿದ್ದರು. ಇದೀಗ ಶಾಲೆಗೆ ಮಕ್ಕಳ ಸಂಖ್ಯೆ ದಾಖಲೆಯಷ್ಟಿದೆ. ದತ್ತು ಪಡೆದ ಸಂಸ್ಥೆಯ ಮೂಲಕ ಮೂವತ್ತಕ್ಕೂ ಅಧಿಕ ಶಿಕ್ಷಕರನ್ನು ನೇಮಿಸಲಾಗಿದೆಯೇ ವಿನಃ ಶಾಲೆಗೆ ಇಲಾಖೆಯೇ ನೇಮಿಸಿದ ಶಿಕ್ಷಕರು ಬರುತ್ತಿಲ್ಲ. ಸರಕಾರಿ ಶಾಲೆ ಅಭಿವೃದ್ಧಿಯನ್ನು ಊರವರೆಲ್ಲಾ ಸೇರಿ ಮಾಡಿಕೊಟ್ಟ ಮೇಲೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಶಿಕ್ಷಕರನ್ನೂ ನೇಮಿಸಲು ಸಾಧ್ಯವಿಲ್ಲವೇ ಎಂದು ದತ್ತು ಸ್ವೀಕರಿಸಿದ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಅಂಚನ್ ಪ್ರಶ್ನಿಸಿದ್ದಾರೆ.

ಈ ಕುರಿತು ಅವರು ಶಿಕ್ಷಣಾಧಿಕಾರಿಗೆ ಮನವಿ ನೀಡಿದ್ದು, ಪ್ರತಿಭಟನೆಯನ್ನೂ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಎಲ್ಲರೂ ಬಂದು ಬಾಯ್ತುಂಬಾ ಹೊಗಳಿ ಹೋಗಿದ್ದಾರೆ. ಶಿಕ್ಷಣ ಸಚಿವರು, ಸಂಸದರು, ಮಂತ್ರಿಗಳು, ರಾಜ್ಯಪಾಲರು ಶಾಲೆಗೆ ಬಂದಿದ್ದಾರೆ. ಸುತ್ತಮುತ್ತಲಿನ ಸರಕಾರಿ ಶಾಲೆಗಳಿಗೆ ಹೋಗುವವರೂ ಅಲ್ಲಿಗೆ ಹೋಗದೆ ದಡ್ಡಲಕಾಡಿಗೆ ಹೋಗುವಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದೆ. ಆದರೆ ಶಿಕ್ಷಕರನ್ನು ಇಲಾಖೆ ಯಾಕೆ ನೇಮಿಸುತ್ತಿಲ್ಲ ಎಂಬುದಕ್ಕೆ ಕಾರಣ ಇನ್ನೂ ಸಿಕ್ಕಿಲ್ಲ.

(ವಿಶೇಷ ವರದಿ- ಹರೀಶ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner