ಬಂಟ್ವಾಳ ರಹಿಮಾನ್ ಹತ್ಯೆ ಕೇಸ್, ಮೂವರ ಬಂಧನ, ಉಳಿದವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ ಪೊಲೀಸರು; ರಹಿಮಾನ್ ಹತ್ಯೆಗೆ ಮುನ್ನ ಏನಾಯಿತು
ಇರಾಕೋಡಿ ರಹಿಮಾನ್ ಹತ್ಯೆ ಕೇಸ್‌ನಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ಧು, ಉಳಿದವರ ಪತ್ತೆಗೆ ಶೋಧ ನಡೆಸಿದ್ದಾರೆ. ರಹಿಮಾನ್ ಹತ್ಯೆಗೆ ಮುನ್ನ ಏನಾಯಿತು - ಇಲ್ಲಿದೆ ಆ ವಿವರ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ. 27ರಂದು ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಬಂಟ್ವಾಳ ರಹಿಮಾನ್ ಹತ್ಯೆ ಕೇಸ್, ಮೂವರ ಬಂಧನ
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಪ್ರಕಟಣೆ ಹೊರಡಿಸಿದ್ದು, ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಮುಂಡರಕೋಡಿಯ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಪ್ರಥ್ವೀರಾಜ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಚಿಂತನ್ (19) ಅವರು ವಶಕ್ಕೆ ಪಡೆಯಲಾಗಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಅವರು ತನಿಖಾಧಿಕಾರಿಯಾಗಿದ್ದು, ಐದು ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗಿದೆ. ತನಿಖಾ ತಂಡವು 29ರಂದು ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯವು ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಹಿಮಾನ್ ಕೊಲೆ ಮತ್ತು ಶಾಫಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈಗಾಗಲೇ ದಾಖಲಾಗಿದೆ.
ರಹಿಮಾನ್ ಹತ್ಯೆಗೆ ಮುನ್ನ ಏನಾಯಿತು
ಟೆಂಪೊ ಚಾಲಕ ರಹಿಮಾನ್ ಎಲ್ಲರಿಗೂ ಬೇಕಾದ ವ್ಯಕ್ತಿ. ‘ಪೊಯ್ಯೆ ಬೋಡು’ (ಮರಳು ಬೇಕು) ಎಂದು ಕರೆ ಬಂದರೆ ಸಾಕು, ಜಾಗ ಎಲ್ಲಿ ಎಂದು ಕೇಳಿ ಹೊರಟುಬಿಡುತ್ತಾರೆ. ಯಾವುದೇ ಧರ್ಮ, ಜಾತಿ ನೋಡಿದವರಲ್ಲ. ಅವರ ಗ್ರಾಹಕರಲ್ಲಿ ಎಲ್ಲ ಧರ್ಮದವರೂ ಇದ್ದರು.
ಮೇ 27 ರಂದು ಮಧ್ಯಾಹ್ನ ಅವರಿಗೆ ಕರೆ ಬಂದಿದೆ. ಕೂಡಲೇ ಹೊರಟ ರಹಿಮಾನ್, ಅಪರಾಹ್ನ ೩ರಿಂದ ೩.೩೦ರ ಅವಧಿಯಲ್ಲಿ ಕಲಂದರ್ ಶಾಫಿಯನ್ನು ಕರೆದುಕೊಂಡು ಹೊಳೆ ಬದಿಯಿಂದ ಮರಳು ಲೋಡ್ ಮಾಡಿ, ಕುರಿಯಾಳ ಗ್ರಾಮದ ಇರಾಕೋಡಿ ರಾಜೀವಿ ಎಂಬವರ ಮನೆ ಬಳಿ ಇಳಿಸಲು ಬಂದಿದ್ದಾರೆ.
ಸುಮಾರು 15 ಜನರ ಗುಂಪು ಸುತ್ತುವರಿದಾಗಲೇ ಅಪಾಯದ ಮುನ್ಸೂಚನೆ ರೆಹಮಾನ್ಗೆ ಸಿಕ್ಕಿದೆ. ಯೋಚನೆಗೂ ಅವಕಾಶವಿಲ್ಲದಂತೆ ಚಾಲಕನ ಸೀಟಿನಲ್ಲಿದ್ದ ರಹಿಮಾನ್ ಅವರನ್ನು ಹೊರಕ್ಕೆಳೆದವರೇ ಯದ್ವಾತದ್ವಾ ತಲವಾರಿನಿಂದ ಕಡಿದಿದ್ದಾರೆ.
ತಡೆಯಲು ಹೋದ ಶಾಫಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ರಹಿಮಾನ್ ಅವರನ್ನು ಆ ಜಾಗಕ್ಕೆ ಕರೆಸಿ ಕೊಲೆ ಮಾಡಲಾಯಿತೇ ಅಥವಾ ಅವರು ಅಲ್ಲಿಗೆ ಬರುವುದು ಗೊತ್ತಿದ್ದು ಕೊಲೆ ಮಾಡಲಾಯಿತೇ ಎಂಬ ಪ್ರಶ್ನೆ ಮೂಡಿದೆ. ಹಂತಕರು ರಹಿಮಾನ್ ಅವರನ್ನು ಫೋಲೋ ಮಾಡುತ್ತಲೇ ಇದ್ದಿರಬೇಕೆಂಬ ಶಂಕೆಯೇ ಬಲವಾಗುತ್ತಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)