ಕನ್ನಡ ಸುದ್ದಿ  /  Karnataka  /  Basanagouda Patil Yatnal Urges Bs Yediyurappa Resignation Over Corruption Charges

Basanagouda Patil Yatnal: ರಾಜಾಹುಲಿ ಕಾಡಿಗೋ, ಜೈಲಿಗೋ?: ಬಿಎಸ್‌ವೈ ರಾಜೀನಾಮೆಗೆ ಆಗ್ರಹಿಸಿದ ಯತ್ನಾಳ್!‌

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್‌ಗೆ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಈ ಕೂಡಲೇ ಬಿಎಸ್‌ವೈ ಬಿಜೆಪಿ ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒತ್ತಾಯಿಸಿದ್ದಾರೆ. ರಾಜಾಹುಲಿ ಆದರೇನು, ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು ಎಂದು ಯತ್ನಾಳ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ (ಸಂಗ್ರಹ ಚಿತ್ರ)
ಬಸನಗೌಡ ಪಾಟೀಲ್‌ ಯತ್ನಾಳ್‌ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಬಿಎಸ್‌ವೈಗೆ ಎದುರಾಗಿರುವ ಈ ಸಂಕಷ್ಟದ ಬಗ್ಗೆ ಸ್ವಪಕ್ಷದ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್‌, ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್ಐಆರ್ಗೆ‌ಗೆ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದರು. ತಮ್ಮನ್ನು ತಾವು ರಾಜಾಹುಲಿ ಎಂದು ಕರೆದುಕೊಳ್ಳುವವರು ಕೂಡ ಕಾನೂನಿನ ಮುಂದೆ ಸಮಾನರು. ಎಷ್ಟೇ ದೊಡ್ಡ ಹುಲಿ ಇರಲಿ, ಕಾನೂನಿಗೆ ತಲೆಬಾಗಲೇಬೇಕಾಗುತ್ತದೆ ಎಂದು ಗುಡುಗಿದರು.

ಈ ಹಿಂದೆ ಬಿಜೆಒಪಿ ಭೀಷ್ಮ ಎಲ್‌ಕೆ ಅಡ್ವಾಣಿ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆಗ ತಡಮಾಡದೇ ಎಲ್‌ಕೆ ಅಡ್ವಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮಾಜಿ ಮುಖ್ಯಮಂತ್ರಿ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ರಾಜಾಹುಲಿ ಇರಲಿ, ಯಾರಾದರೂ ಇರಲಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲು ಎಂದು ಯತ್ನಾಳ್‌ ಸವಾಲು ಹಾಕಿದರು.

ರಾಜಾಹುಲಿ ಅವರೇನು ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ ಅವರಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದ ಯತ್ನಾಳ್‌, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಎಸ್‌ವೈ, ಬಿಜೆಪಿ ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಬಿಎಸ್‌ವೈ ಅವರು ಎಲ್‌ಕೆ ಅಡ್ವಾಣಿ ಆದರ್ಶ ಪಾಲಿಸಬೇಕು ಎಂದು ಯತ್ನಾಳ್‌ ಆಗ್ರಹಿಸಿದರು.

ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ ಒಬ್ಬರು ಜೈಲಿಗೆ, ಮತ್ತೊಬ್ಬರು ಕಾಡಿಗೆ ಹೋಗಬೇಕಾಗುತ್ತದೆ. ಹೀಗಾಗಿಯೇ ಕೆಲವರು ನನ್ನನ್ನು ಮುಖ್ಯಮಂತ್ರಿ ಆಗದಂತೆ ತಡೆಯುತ್ತಿದ್ದಾರೆ ಎಂದು ಯತ್ನಾಳ್‌ ಕಿಡಿಕಾರಿದರು.

ಕಾಂಗ್ರೆಸ್‌ಗೆ ಬೊಮ್ಮಾಯಿ‌ ಭಯ ಇಲ್ಲ, ಯಡಿಯೂರಪ್ಪ ಭಯ ಇಲ್ಲ. ಕಾಂಗ್ರೆಸ್‌ ನಾಯಕರಿಗೆ ನನ್ನ ಭಯ ಕಾಡುತ್ತಿದೆ. ಯತ್ನಾಳ್ ಸಿಎಂ ಆದರೆ ನಾವೆಲ್ಲಾ ಜೈಲಿಗೆ ಹೋಗಬೇಕಗುತ್ತದೆ ಎಂಬ ಭಯ ಅವರಿಗೆ ಕಾಡುತ್ತಿದೆ. ನಾನೇನಾದರೂ ಸಿಎಂ ಆದರೆ ಒಬ್ಬರು ಜೈಲಿಗೆ, ಮತ್ತೊಬ್ಬರು ಕಾಡಿಗೆ ಹೋಗಬೇಕಾಗುತ್ತದೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಸದ್ದು ಮಾಡಕ್ಕಾಗಲ್ಲ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್‌ ವಿರುದ್ಧ ಯತ್ನಾಳ್‌ ತೀವ್ರ ವಾಗ್ದಾಳಿ ನಡೆಸಿದರು.

ಏನಿದು ಪ್ರಕರಣ?:

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಿಡಯೂಪ್ಪ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಅಲ್ಲದೇ ಈ ಕುರಿತು ಶೀಘ್ರದಲ್ಲೇ ತನಿಖೆ ಆರಂಭಿಸುವಂತೆಯೂ ಸೂಚನೆ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ, ‌ಹೈಕೋರ್ಟ್ ತನಿಖೆ ನಡೆಸುವಂತೆ ಆದೇಶ ಮಾಡಿತ್ತು. ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಖಾಸಗಿ ದೂರು ಸಲ್ಲಿಸಿದ್ದರು. ಪೂರ್ವಾನುಮತಿ ಇಲ್ಲ ಎಂಬ ಕಾರಣಕ್ಕೆ 2021ರ ಜುಲೈನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖಾಸಗಿ ದೂರನ್ನು ವಜಾಗೊಳಿಸಲಾಗಿತ್ತು.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಬ್ರಹಾಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಸೂಚನೆ ಮೇರೆಗೆ ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ‌‌ ನೀಡಿದೆ. ಇದನ್ನೇ ದಾಳವಾಗಿಸಿಕೊಂಡಿರುವ ಪ್ರತಿಪಕ್ಷಗಳು, ನಮ್ಮ ಅವಧಿಯ ಭ್ರಷ್ಟಾಚಾರದ ತನಿಖೆ ನಡೆಸುವುದಾಗಿ ಹೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗ ಬಿಎಸ್‌ವೈ ವಿರುದ್ಧವೂ ಕ್ರಮ ಕೈಗೊಳ್ಳುವರೇ ಎಂದು ಪ್ರಶ್ನಿಸಿವೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.