ಕನ್ನಡ ಸುದ್ದಿ  /  Karnataka  /  Basanagouda Patil Yatnal Urges For More Grant To Vijayapura Development Projects

Basanagouda Patil yatnal: ಬೊಮ್ಮಾಯಿ ಸಾಹೇಬ್ರು 500 ಕೋಟಿ ಕೊಟ್ರೆ ವಿಜಯಪುರವನ್ನು ಲಂಡನ್‌ ಮಾಡುತ್ತೇನೆ: ಯತ್ನಾಳ್!‌

ವಿಜಯಪುರ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 500 ಕೋಟಿ ರೂ. ಅನುದಾನ ನೀಡಿದರೆ, ವಿಜಯಪುರವನ್ನು ಲಂಡನ್‌ ನಗರದಂತೆ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಇದೇ ವೇಳೆ ನಗರದ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಘೋಷಿಸಿರುವ ಯೋಜನೆಗಳನ್ನು ಯತ್ನಾಳ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಶ್ರೀ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ಶ್ರೀ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (Verified Twitter)

ವಿಜಯಪುರ: ವಿಜಯಪುರ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 500 ಕೋಟಿ ರೂ. ಅನುದಾನ ನೀಡಿದರೆ, ವಿಜಯಪುರವನ್ನು ಲಂಡನ್‌ ನಗರದಂತೆ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ನಿನ್ನೆ(ಸೆ.30-ಶುಕ್ರವಾರ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಯತ್ನಾಳ್‌, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಹೇಳಿದರು.

ದ್ರಾಕ್ಷಿ ಬೆಳೆಗೆ ಉತ್ತೇಜನ ಸೇರಿದಂತೆ ವಿಜಯಪುರ ನಗರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸಿಎಂ ಬೊಮ್ಮಾಯಿ ಸಾಕಷ್ಟು ಅನುದಾನ ನೀಡಿದ್ದಾರೆ. ಇದಕ್ಕಾಗಿ ನಾನು ಸಿಎಂ ಬೊಮ್ಮಾಯಿ ಅವರನ್ನು ಹೃದಯದಿಂದ ಅಭಿನಂದಿಸುತ್ತೇನೆ. ಆದರೆ ನಗರದ ಸಂಪೂರ್ಣ ಅಭಿವೃದ್ಧಿಗಾಗಿ ಇನ್ನೂ 500 ಕೋಟಿ ರೂ. ನೀಡಿದರೆ, ಐತಿಹಾಸಿಕ ವಿಜಯಪುರ ನಗರವನ್ನು ಲಂಡನ್‌ ಮಾದರಿಯಲ್ಲಿ ಸ್ಮಾರ್ಟ್‌ ಸಿಟಿಯನ್ನಾಗಿ ಪರಿವರ್ತಿಸಿ ತೋರಿಸುವುದಾಗಿ ಯತ್ನಾಳ್‌ ಘೋಷಿಸಿದರು.

ವಿಜಯಪುರ ಒಣ ದ್ರಾಕ್ಷಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ. ನಗರದಲ್ಲಿ ದೊಡ್ಡ ಮಾರುಕಟ್ಟೆಯೂ ಇದೆ. ಹಾಗಾಗಿ ಇನ್ನಷ್ಟು ಅನುದಾನ ಬಿಡುಗಡೆ ಮಾಡಿದರೆ ವಿಜಯಪುರದ ಒಣ ದ್ರಾಕ್ಷಿಯ ವಹಿವಾಟಿಗೆ ವಿಶ್ವ ಮಾರುಕಟ್ಟೆಯೇ ಸೃಷ್ಟಿಯಾಗಲಿದೆ. ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳಿಗೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಮತ್ತಷ್ಟು ಅನುದಾನ ನೀಡಿದರೆ ವಿಜಯಪುರ ನಗರ ಲಂಡನ್‌ ನಗರವನ್ನು ಮೀರಿಸುವ ಸ್ಮಾರ್ಟ್‌ ಸಿಟಿಯಾಗಲಿದೆ ಎಂದು ಬಸವನಗೌಡ ಯತ್ನಾಳ್‌ ಹೇಳಿದರು.

ಈಗ ಲೋಕಾರ್ಪಣೆಗೊಂಡಿರುವ ಶ್ರೀ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಧ್ಯೇಯ ಹೊಂದಿದೆ. ಸಿದ್ದೇಶ್ವರ ಸಂಸ್ಥೆಯಿಂದ ಬರುವ ಆದಾಯವನ್ನು ಈ ಕಲ್ಯಾಣ ಕಾರ್ಯಕ್ಕೆ ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಬರುವ ಐದು ವರ್ಷಗಳಲ್ಲಿ ಈ ಆಸ್ಪತ್ರೆಯನ್ನು 1,008 ಬೆಡ್‌ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಗುರಿ ಇದೆ ಎಂದೂ ಯತ್ನಾಳ್‌ ನುಡಿದರು.

ವಿಜಯಪುರದಲ್ಲಿ ನೂರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಕೇವಲ ಆರು ತಿಂಗಳ ಅವಧಿಯಲ್ಲಿ ವಿಜಯಪುರ ನಗರ ಕರ್ನಾಟಕದ ನಂ.೧ ಸ್ಮಾರ್ಟ್‌ ಸಿಟಿಯಾಗಿ ಹೊರ ಹೊಮ್ಮಲಿದೆ ಎಂದು ಇದೇ ವೇಳೆ ಯತ್ನಾಳ್‌ ಭರವಸೆ ವ್ಯಕ್ತಪಡಿಸಿದರು. ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ನೆರವು ಒದಗಿಸಬೇಕು ಎಂದೂ ಯತ್ನಾಳ್‌ ಬೇಡಿಕೆ ಮಂಡಿಸಿದರು.

ಲೋಕ ಕಲ್ಯಾಣ ಟ್ರಸ್ಟ್‌ನಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರಲ್ಲಿ ಚಾರಿಟಬಲ್‌ ಆಸ್ಪತ್ರೆ ನಿರ್ಮಿಸಿದ್ದೇವೆ. ಆದರೆ ಈ ಆಸ್ಪತ್ರೆಗೆ ತಮ್ಮ ಹೆಸರು ಇಡುವುದು ಬೇಡ ಎಂದು ಸ್ವಾಮೀಜಿ ಮನವಿ ಮಾಡಿದ್ದರು. ಇಂತಹ ನಿಷ್ಕಲ್ಮಶ ಸ್ವಾಮೀಜಿ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಎಲ್ಲಿಯೂ ಸಿಗುವುದಿಲ್ಲ. ಇಂತಹ ಸರಳ ಜೀವಿ ಹಾಗೂ ನಿಸ್ವಾರ್ಥ ಸ್ವಾಮೀಜಿ ನಮ್ಮ ಮಧ್ಯದಲ್ಲಿರುವುದು ನಮ್ಮ ಸೌಭಾಗ್ಯ ಎಂದು ಯತ್ನಾಳ್‌ ಮೆಚ್ಚುಗೆಯ ಮಾತುಗಳನ್ನಾಡಿದರು.

ವಿಜಯಪುರ ನಗರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ನಗರ್‌ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ ಅನುದಾನ ಘೋಷಿಸಿದ್ದಾಅರೆ. ಇದಕ್ಕಾಗಿ ನಾನು ವಿಜಯಪುರ ನಗರದ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಮತ್ತಷ್ಟು ಅನುದಾನಕ್ಕೂ ಬೇಡಿಕೆ ಇಡುತ್ತೇನೆ ಎಂದು ಯತ್ನಾಳ್‌ ಹೇಳಿದಾಗ, ಸಿಎಂ ಬೊಮ್ಮಾಯಿ ಅವರೂ ಸೇರಿದಂತೆ ಎಲ್ಲರೂ ಮುಗುಳ್ನಕ್ಕರು.

ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಕೊಂಡಾಡಿದ ಯತ್ನಾಳ್‌, ಜೋಶಿ ಅವರು ದಿವಂಗತ ಅನಂತಕುಮಾರ್‌ ಹೆಗಡೆ ಅವರಂತೆಯೇ ನಮಗೆ ಮಾರ್ಗದರ್ಶಕರಾಗಿದ್ದಾರೆ. ಜೋಶಿ ನಮ್ಮನ್ನು ರಾಜಕಾರಣದಲ್ಲಿ ಕೈಹಿಡಿದು ನಡೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಾರ್ಮಿಕವಾಗಿ ಹೇಳಿದರು.

IPL_Entry_Point