ಕನ್ನಡ ಸುದ್ದಿ  /  ಕರ್ನಾಟಕ  /  ಎಚ್ಚರಿಕೆ! ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ; ಪಕ್ಕದಲ್ಲೇ ಇರುವ ಕ್ಯಾಮರಾ ನಿಮ್ಮನ್ನು ಸೆರೆ ಹಿಡಿಯುತ್ತೆ

ಎಚ್ಚರಿಕೆ! ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ; ಪಕ್ಕದಲ್ಲೇ ಇರುವ ಕ್ಯಾಮರಾ ನಿಮ್ಮನ್ನು ಸೆರೆ ಹಿಡಿಯುತ್ತೆ

ಉದ್ಯಾನ ನಗರಿ ಬೆಳೆಯುತ್ತಿದ್ದಂತೆ ನಗರದಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಕಸ ವಿಂಗಡಣೆ ಸೇರಿದಂತೆ ನಾಗರಿಕರಿಗೆ ಎಷ್ಟೇ ತಿಳಿ ಹೇಳಿದರೂ, ಎಲ್ಲೆಂದರಲ್ಲಿ ಕಸ ಎಸೆಯುವ ಪರಿಪಾಠ ಇನ್ನೂ ತಪ್ಪಿಲ್ಲ. ಇದೀಗ ಜನರ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಹೊರ ಕ್ರಮಕ್ಕೆ ಮುಂದಾಗಿದೆ.

ಎಚ್ಚರಿಕೆ! ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ (HT File)
ಎಚ್ಚರಿಕೆ! ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯುವಂತಿಲ್ಲ (HT File)

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿನೂತನ ಮಾರ್ಗವೊಂದನ್ನು ಕಂಡುಕೊಂಡಿದೆ. ಆದರೆ ಈ ಮಾರ್ಗವು ಯಶಸ್ವಿಯಾಗುವುದೇ ಎಂದು ಕಾಲವೇ ಉತ್ತರಿಸಬೇಕು. ನಗರದಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಿರುವ ಕಂಬಗಳಿಗೆ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಯಾರು ರಸ್ತೆಯಲ್ಲಿ ಕಸ ಸುರಿಯುತ್ತಾರೆ ಎನ್ನುವುದನ್ನು ಪತ್ತೆ ಹಚ್ಚಲು ನಿರ್ಧಾರ ಮಾಡಿದೆ. ದಿನಬಿಟ್ಟು ದಿನ ಕಸ ಸಂಗ್ರಹ ಮಾಡುತ್ತಿದ್ದರೂ ಅನೇಕ ನಾಗರಿಕರು ಕಸದ ಗಾಡಿಗಳಿಗೆ ಕಸ ನೀಡುವುದಕ್ಕೆ ಬದಲಾಗಿ ರಸ್ತೆಯಲ್ಲಿ ಕಸದ ಬ್ಯಾಗ್‌ಗಳನ್ನು ಎಸೆಯುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ರಸ್ತೆಗಳ ಸೌಂದರ್ಯ ಹಾಳಾಗುವುದರ ಜೊತೆಗೆ ನೀರು ಸರಾಗವಾಗಿ ಹರಿಯಲು ಅಡಚಣೆ ಉಂಟಾಗುತ್ತಿದೆ. ಅನೇಕ ರೋಗರುಜಿನಗಳು ಹರಡುವುದಕ್ಕೂ ಕಾರಣವಾಗಿದೆ. ಹೀಗಾಗಿ ಈ ಹೊಸ ಪ್ರಯೋಗ ಆರಂಭವಾಗುತ್ತಿದೆ.

ಕಸದ ರಾಶಿಯಿಂದ ನೀರು ಹರಿಯಲು ಅಡ್ಡಿಯಾಗಿ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗುತ್ತಿದೆ. ನಾಯಿಗಳು ಕೂಡಾ ಕಸದ ಚೀಲಗಳನ್ನು ಎಳೆದಾಡಿ ರಸ್ತೆಯವರೆಗೂ ಎಳೆದು ತರುತ್ತವೆ. ಆದ್ದರಿಂದ ಕ್ಯಾಮರಾಗಳನ್ನುಅಳವಡಿಸುವ ಮಾರ್ಗವನ್ನು ಅನುಸರಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿಗಳೂ ಆಗಿರುವ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ರಸ್ತೆಗಳಲ್ಲಿ ಕಸ ಹಾಕುವವರನ್ನು ಈ ಕ್ಯಾಮರಾಗಳ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ಮೂಲಕ ಕಸ ಸುರಿಯುವವರಿಗೆ ದಂಡ ಹಾಕುವುದು ಮತ್ತು ನೋಟಿಸ್‌ ನೀಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಈಗಾಗಲೇ ಬೆಂಗಳೂರು ನಗರಾದ್ಯಂತ ಎಲ್‌ಇಡಿ ದೀಪಗಳನ್ನು ಅಳವಡಿಸಲು ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದ್ದು, ಜೊತೆಗ ಕ್ಯಾಮರಾಗಳನ್ನು ಅಳವಡಿಸುವ ಸೆಕ್ಷನ್‌ ಸೇರ್ಪಡೆ ಮಾಡಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ರೋಗ ಹರಡುವುದನ್ನು ನಿಯಂತ್ರಿಸಲು ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಯಮ ಪಾಲನೆ ಆಗುತ್ತಿಲ್ಲ

ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿರುವುದೂ ಡೆಂಗ್ಯೂ ಹರಡಲು ಕಾರಣ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಬಿಬಿಎಂಪಿ ಕ್ಯಾಮರಾ ಅಳವಡಿಸುವ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರು ಕಸವನ್ನು ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಬೇಕು. ನಂತರ ಕಸ ಸಂಗ್ರಹದ ವಾಹನಗಳಿಗೆ ನೀಡಬೇಕು. ಆದರೆ ಈ ನಿಯಮವನ್ನು ಅಷ್ಟಾಗಿ ಪಾಲಿಸುತ್ತಿಲ್ಲ. ತಮಗೆ ಅನುಕೂಲವಾದಾಗ ರಸ್ತೆ, ಚರಂಡಿ ಅಥವಾ ಖಾಲಿ ನಿವೇಶನಗಳಲ್ಲಿ ಎಸೆದು ಬರುತ್ತಾರೆ.

ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆಯಾದರೂ ಸಾರ್ವಜನಿಕರು ಕ್ಯಾರೇ ಎನ್ನುತ್ತಿಲ್ಲ. ಕೆಲವು ದಿನಗಳ ಕಾಲ ಭಯದಿಂದ ಇದ್ದ ಜನ ಮತ್ತೆ ಎಂದಿನಂತೆ ಕಸ ಎಸೆಯುವುದನ್ನು ಮುಂದುವರೆಸಿದ್ದಾರೆ.

ಯಶಸ್ವಿಯಾಗದ ಕಾಂಪೋಸ್ಟ್‌ ಗೊಬ್ಬರ

ಬೆಂಗಳೂರಿನಲ್ಲಿ ಅಂದಾಜು ಪ್ರತಿನಿತ್ಯ 5,800 ಮೆಟ್ರಿಕ್‌ ಟನ್‌ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3,800 ಮೆಟ್ರಿಕ್‌ ಟನ್‌ ಹಸಿ ಕಸ ಮತ್ತು 2000 ಮೆಟ್ರಿಕ್‌ ಟನ್‌ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಸಿ ಕಸದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ಬಿಬಿಎಂಪಿ ಮುಂದಾಗಿತ್ತಾದರೂ ಯಶಸ್ವಿಯಾಗಿಲ್ಲ. ಜೊತೆಗೆ ತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡದಿರುವುದೂ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಸದ್ಯ ಬೆಂಗಳೂರಿನಲ್ಲಿ 7 ಕಸ ಸಂಸ್ಕರಣಾ ಘಟಕಗಳು ಕೆಲಸ ಮಾಡುತ್ತಿವೆ.

ಕ್ಯಾಮರಾಗಳು ಕಸ ಸುರಿಯುವುದನ್ನು ಸೆರೆ ಹಿಡಿಯುತ್ತವೆ ಮತ್ತು ದಂಡ ಕಟ್ಟಬೇಕಾಗುತ್ತದೆ ಎಂಬ ಭಯಕ್ಕಾದರೂ ಸಾರ್ವಜನಿಕರು ರಸ್ತೆಗಳಲ್ಲಿ ಕಸ ಎಸೆಯುವ ಹವ್ಯಾಸವನ್ನು ಬಿಡುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಬೆಂಗಳೂರಿನ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ವರದಿ: ಮಾರುತಿ ಎಚ್‌, ಬೆಂಗಳೂರು.

ಇದನ್ನೂ ಓದಿ | Bengaluru Crime: ಸಾಲ ಮರಳಿಸದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ್ದ ಫೈನಾನ್ಸಿಯರ್‌ ಅರೆಸ್ಟ್; ನಾಲ್ವರು ಬೈಕ್‌ ಕಳ್ಳರ ಬಂಧನ