BBMP Budget 2024: ಬೆಂಗಳೂರು ನೀರಿನ ಸಮಸ್ಯೆ ನಡುವೆ ಫೆ 29ಕ್ಕೆ ಬಿಬಿಎಂಪಿ ಬಜೆಟ್ ಮಂಡನೆ; ಆಸ್ತಿ ತೆರಿಗೆ ಹೆಚ್ಚಳ ನಿರೀಕ್ಷೆ
Bengaluru News: ಬೆಂಗಳೂರು ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ನಡುವೆ ಫೆ 29ರಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಪುರ ಭವನದಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಬೆಂಗಳೂರು: ತೀವ್ರ ನೀರಿನ ಸಮಸ್ಯೆಯ ನಡುವೆ ಫೆ 29, ಗುರುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024–25ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ.
ಆದಾಯವನ್ನು ವೃದ್ಧಿಸಿಕೊಳ್ಳಲು ಆಸ್ತಿ ತೆರಿಗೆ ಮತ್ತು ಜಾಹೀರಾತು ದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಈ ಬಾರಿ ಕಳೆದ ಬಜೆಟ್‌ನ ಗಾತ್ರಕ್ಕಿಂತ ಸುಮಾರು ಶೇ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಈ ವರ್ಷ ಅಂದಾಜು ಬಿಬಿಎಂಪಿ ಬಜೆಟ್ 13,000 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.
ಬಜೆಟ್ ಮಂಡಿಸಲಿರುವ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು
ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಅವರು ಗುರುವಾರ ಬೆಳಿಗ್ಗೆ 10.30ಕ್ಕೆ ಪುರಭವನದಲ್ಲಿ ಬಜೆಟ್ ಮಂಡಿಸಲಿದ್ದಾರೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳು ಆಯವ್ಯಯ ಸಿದ್ಧಪಡಿಸಿ ಮಂಡಿಸುತ್ತಿರುವುದು ಇದು ಸತತ ನಾಲ್ಕನೇ ವರ್ಷವಾಗಿದೆ. 2023–24ನೇ ಸಾಲಿನಲ್ಲಿ ರೂ. 11,163 ಕೋಟಿ ಬಜೆಟನ್ನು ಹಣಕಾಸು ವಿಭಾಗದ ಅಂದಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಾರ್ಚ್ 2ರಂದು ಮಂಡಿಸಿದ್ದರು. 2023-24 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪಾಲಿಕೆಗೆ ಹೆಚ್ಚುವರಿ ಅನುದಾನ ಸಿಕ್ಕಿದ್ದರಿಂದ 11,885 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು.
ದುರಂತ ಎಂದರೆ ಕಳೆದ ಬಜೆಟ್‌ನ ಶೇ. 25 ರಷ್ಟು ಅನುಷ್ಠಾನವಾಗಿಲ್ಲ. ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಯೋಜನೆಗಳೂ ಜಾರಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಬಜೆಟ್‌ನ ಗಾತ್ರ ಸುಮಾರು ಶೇ 10ರಷ್ಟು ಹೆಚ್ಚಾಗುತ್ತಿದ್ದು, ಈ ವರ್ಷವೂ ಹೆಚ್ಚಲಿದೆ. ಆದರೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾದ ಕಾರಣ ಬಿಬಿಎಂಪಿ ತನ್ನದೇ ಆದಾಯ ಮೂಲಗಳಿಂದ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಆಸ್ತಿ ತೆರಿಗೆ ಹೆಚ್ಚಳ, ಇತರೆ ಸಂಪನ್ಮೂಲಗಳ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ, ಹೊಸ ಯೋಜನೆಗಳನ್ನು ಪ್ರಕಟಿಸುವ ಸಂಭವವಿದೆ.
6000 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ
ಬಿಬಿಎಂಪಿ ಮೂಲಗಳ ಪ್ರಕಾರ ಸಂಬಳಕ್ಕೆ ಅಂದಾಜು 650 ಕೋಟಿ ರೂ.ಗಳ ಅವಶ್ಯಕತೆ ಇದೆ. ಪೌರ ಕಾರ್ಮಿಕರ ವೇತನಕ್ಕೆ ರೂ. 250 ಕೋಟಿ ರೂ.ಅವಶ್ಯಕತೆ ಇದೆ. ಘನ ತ್ಯಾಜ್ಯ ವಿಲೇವಾರಿಗೆ ಸುಮಾರು 600 ಕೋಟಿ ರೂಪಾಯಿ ಅನುದಾನ ಬೇಕಾಗುತ್ತದೆ. ರಾಜ್ಯ ಸರ್ಕಾರ ತನ್ನ ಇತ್ತೀಚಿನ ಬಜೆಟ್‌ನಲ್ಲಿ ಬಿಬಿಎಂಪಿಗೆ 3,589 ಕೋಟಿ ರೂಪಾಯಿ ಒದಗಿಸಿದೆ. ಕೇಂದ್ರ ಸರ್ಕಾರದ 15 ನೇ ಹಣಕಾಸು ಆಯೋಗ 500 ಕೋಟಿ ರೂಪಾಯಿ ಒದಗಿಸಿದೆ. 2023-24 ರಲ್ಲಿ ಆಸ್ತಿ ತೆರಿಗೆಯಿಂದ 4,790 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಜೊತೆಗೆ ಈ ವರ್ಷ ಬಿಬಿಎಂಪಿ ಆಸ್ತಿ ತೆರಿಗೆಯಿಂದ 6000 ಕೋಟಿ ರೂಪಾಯಿ ಆದಾಯ ಸಂಗ್ರಹದ ನಿರೀಕ್ಷೆಯಿದೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಬೇಕೆನ್ನುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಬಿಬಿಎಂಪಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ.
ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ಪಾಲಿಕೆಗೆ 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಪಾಲಿಕೆ ಪರಿಗಣಿಸಲಿದೆಯೇ ಕಾದು ನೋಡಬೇಕಿದೆ. ಬೆಂಗಳೂರಿನ ಉದ್ದಗಲಕ್ಕೂ ನೀರಿನ ಸಮಸ್ಯೆಯಿಂದ ನಾಗರೀಕರು ತತ್ತರಿಸುತ್ತಿದ್ದಾರೆ. ಹಣ ಕೊಟ್ಟರೂ ನೀರು ಸಿಗದ ಪರಿಸ್ಥಿತಿ ತಲುಪಿದ್ದೇವೆ. ಈ ಸಮಸ್ಯೆ ಪರಿಹರಿಸಲು ಬಿಬಿಎಂಪಿ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ವಿಭಾಗ