BBMP Budget 2025: ಬಿಬಿಎಂಪಿ ಬಜೆಟ್‌ ಮಂಡನೆಗೆ ದಿನಗಣನೆ; ಜನಪ್ರತಿನಿಧಿಗಳಿಲ್ಲದೆ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸುತ್ತಿರುವ ಆಯವ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Bbmp Budget 2025: ಬಿಬಿಎಂಪಿ ಬಜೆಟ್‌ ಮಂಡನೆಗೆ ದಿನಗಣನೆ; ಜನಪ್ರತಿನಿಧಿಗಳಿಲ್ಲದೆ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸುತ್ತಿರುವ ಆಯವ್ಯಯ

BBMP Budget 2025: ಬಿಬಿಎಂಪಿ ಬಜೆಟ್‌ ಮಂಡನೆಗೆ ದಿನಗಣನೆ; ಜನಪ್ರತಿನಿಧಿಗಳಿಲ್ಲದೆ ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡಿಸುತ್ತಿರುವ ಆಯವ್ಯಯ

BBMP Budget 2025: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸದಸ್ಯರೇ ಇಲ್ಲದೇ ಸತತ ಐದನೇ ಬಜೆಟ್‌ ಅನ್ನು ಮಂಡಿಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು. ಈ ಬಾರಿ ಬಜೆಟ್‌ ಗಾತ್ರ 20,000 ಕೋಟಿ ರೂ. ತಲುಪುವ ಅಂದಾಜಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬಿಬಿಎಂಪಿ ಬಜೆಟ್‌ ಮಾರ್ಚ್‌ ಮೂರನೇ ವಾರದಲ್ಲಿ ಮಂಡನೆಯಾಗಲಿದೆ.
ಬಿಬಿಎಂಪಿ ಬಜೆಟ್‌ ಮಾರ್ಚ್‌ ಮೂರನೇ ವಾರದಲ್ಲಿ ಮಂಡನೆಯಾಗಲಿದೆ.

BBMP Budget 2025: ಪಾಲಿಕೆ ಇತಿಹಾಸದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೇ ಮೊದಲ ಬಾರಿಗೆ ಅಂದಾಜು 18,000- 20,000 ಕೋಟಿ ರೂ. ಬಜಟ್‌ ಮಂಡಿಸಲು ತಯಾರಾಗುತ್ತಿದೆ. ಕಳೆದ ವರ್ಷ ಬಿಬಿಎಂಪಿ 13,116 ಕೋಟಿ ರೂ.ಗಳ ಬಜೆಟ್‌ ಮಂಡಿಸಿತ್ತು. ಕಳೆದ ವರ್ಷ ಬಿಬಿಎಂಪಿಗೆ 3000 ಕೋಟಿ ರೂ. ಅನುದಾನ ನೀಡಿದ್ದ ಸರ್ಕಾರ ಈ ವರ್ಷ 7000 ಕೋಟಿ ರೂ. ನೀಡಿದೆ. ಜತೆಗೆ ಕೇಂದ್ರ ಸರ್ಕಾರದ ಅನುದಾನವೂ ಇರಲಿದೆ. ಆದರೂ ಇಷ್ಟೊಂದು ಬೃಹತ್‌ ಅನುದಾನವನ್ನು ಪಾಲಿಕೆ ಹೇಗೆ ಖರ್ಚು ಮಾಡುತ್ತದೆ ಎನ್ನುವುದು ನಿಗೂಢವಾಗಿದೆ. ಪ್ರತಿ ವಾರ್ಡ್ ಗೆ ಎಷ್ಟು ಹಂಚಿಕೆ ಮಾಡಲಿದೆ, ಇಡೀ ನಗರಕ್ಕೆ ಯಾವ ಯಾವ ಯೋಜನೆಗಳನ್ನು ರೂಪಿಸುತ್ತದೆ, ಯಾವ ಆಧಾರದ ಮೇಲೆ ಅನುದಾನ ನಿಗದಿಪಡಿಸುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ರಹಸ್ಯವಾಗಿದೆ. ಪಾರದರ್ಶಕತೆ ಕೊರತೆ, ಅನುದಾನದ ಕೆಟ್ಟ ನಿರ್ವಹಣೆ ಮತ್ತು ನಿರಂತರ ಭ್ರಷ್ಟಾಚಾರದಿಂದ ಅನುದಾನ ಸೋರಿಕೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಲೇ ಬಂದಿದ್ದಾರೆ. ಒಟ್ಟಾರೆ 20 ಸಾವಿರ ಕೋಟಿ ರೂ ಹೇಗೆ ವೆಚ್ಚವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ ಎನ್ನಬಹುದು.

ಜನಪ್ರತಿನಿಧಿಗಳ ಅನುಪಸ್ಥಿತಿ, ಅಧಿಕಾರಿಗಳದ್ದೇ ಕಾರುಬಾರು

ಜನಪ್ರತಿನಿಧಿಗಳು ಇಲ್ಲದಿರುವುದು ಮತ್ತೊಂದು ಸಮಸ್ಯೆ. 2020 ರಿಂದ ಪಾಲಿಕೆ ಸದಸ್ಯರಿಲ್ಲದೆ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಅವರು ನಡೆಸಿದ್ದೇ ಆಡಳಿತ, ಪಾಲಿಕೆಯ ಐಎಎಸ್‌ ಅಧಿಕಾರಿಗಳು ನಡೆದಿದ್ದೇ ಹಾದಿ. ರಾಜಕೀಯ ಕಾರಣಗಳಿಗಾಗಿ ಪ್ರತಿಯೊಂದು ಪಕ್ಷದ ಸರ್ಕಾರವೂ ಒಂದಿಲ್ಲೊಂದು ಸಬೂಬು ಹೇಳುತ್ತಾ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ.

ವಾರ್ಡ್‌ ಗಳ ಸಂಖ್ಯೆ ಹೆಚ್ಚಳ, ಮೀಸಲಾತಿ, ವ್ಯಾಪ್ತಿ ವಿಸ್ತಾರದ ಹೆಸರಿನಲ್ಲಿ ಈ ಹಿಂದಿನ ಸರ್ಕಾರಗಳು ಪಾಲಿಕೆ ಚುನಾವಣೆಯನ್ನು ಮುಂದೂಡುತ್ತಾ ಬಂದವು. ಈಗಿನ ಸರ್ಕಾರ ಇದೀಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹೆಸರಿನಲ್ಲಿ ಚುನಾವಣೆ ನಡೆಸದೆ ಕಾಲಹರಣ ಮಾಡುತ್ತಿದೆ. ಜತೆಗೆ ಪಾಲಿಕೆಯನ್ನು ಹೋಳು ಮಾಡಿ ಏಳು ಪಾಲಿಕೆಗಳನ್ನಾಗಿ ಮಾಡಲು ಮಸೂದೆಯನ್ನೂ ಬಜೆಟ್‌ ಅಧಿವೇಶನದಲ್ಲಿ ಅಂಗೀಕಾರ ಮಾಡಿಕೊಂಡಿದೆ. ಹೀಗಾಗಿ ಪಾಲಿಕೆ ಬಜೆಟ್‌ನಲ್ಲಿ ಮತದಾರರ ಪ್ರತಿನಿಧಿಗಳೇ ಇಲ್ಲ.

ವೆಚ್ಚದ ಮಾಹಿತಿ ಇಲ್ಲ

ಜನರ ಸಮಸ್ಯೆಗಳೇನು? ಏನು ಬೇಕು ಎಂದು ಮಾತನಾಡುವವರೇ ಇಲ್ಲವಾಗಿದ್ದಾರೆ. ಅಧಿಕಾರಿಗಳು ಏಕಪಕ್ಷೀಯ, ದುರ್ಬಲ ಆಡಳಿತ, ಅವಾಸ್ತವಿಕ ಮತ್ತು ಅಪ್ರಾಯೋಗಿಕವಾಗಿ ಹಣವನ್ನು ವೆಚ್ಚ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಬೆಂಗಳೂರಿನ ಅನೇಕ ನಾಗರೀಕ ಸಂಸ್ಥೆಗಳು ಮಾಡುತ್ತಲೇ ಬಂದಿವೆ. ಉದಾಹರಣೆಗೆ ಕಳೆದ ವರ್ಷ 13 ಸಾವಿರ ಕೋಟಿ ಅನುದಾನವನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯೇ ಇಲ್ಲವಾಗಿದೆ.

ಚುನಾಯಿತ ಮಂಡಳಿ ಇಲ್ಲದೆ ವಾರ್ಡ್‌ ಮಟ್ಟದ ಸಮಸ್ಯೆಗಳೇನು ಎನ್ನುವುದು ಅಧಿಕಾರಿಗಳ ತಲೆಗೆ ಹೋಗುವುದಿಲ್ಲ. ತಳ ಮಟ್ಟದ ಸಮಸ್ಯೆಗಳೇನು ಎನ್ನುವುದು ಅರ್ಥವಾಗುವುದಿಲ್ಲ. ವಾರ್ಡ್‌ ಸಮಿತಿಗಳನ್ನು ರಚಿಸಲಾಗಿದೆಯಾದರೂ ಈ ಸಮಿತಿಗಳು ಚುನಾಯಿತ ಅಲ್ಲವಾದ್ದರಿಂದ ಯಾವುದೇ ಕಾನೂನು ಮಾನ್ಯತೆ ಹೊಂದಿರುವುದಿಲ್ಲ. ಕಳೆದ ವರ್ಷ ಬ್ರ್ಯಾಂಡ್‌ ಬೆಂಗಳೂರು ಯೋಜನೆಗೆ 1,600 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.

ಆದರೆ ಇಡೀ ಬೆಂಗಳೂರು ನಗರದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಾಣಿಸುತ್ತಿಲ್ಲ. ಹಿಂದಿನ ವರ್ಷಗಳಲ್ಲಿ ಇದ್ದ ಹಾಗೆಯೇ ಬೆಂಗಳೂರು ಕಂಡು ಬರುತ್ತಿದೆ. ಹಾಗಾದರೆ 1,600 ಕೋಟಿ ರೂ. ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಉತ್ತರ ದೊರಕಲಾರದು. ಸಾಮಾನ್ಯವಾಗಿ ಪಾಲಿಕೆ ಸದಸ್ಯರಿಗೆ ಸ್ಥಳೀಯ ಮಟ್ಟದ ಗಲ್ಲಿಗಲ್ಲಿಯ ಸಮಸ್ಯೆಗಳ ಅರಿವು ಇರುತ್ತದೆ. ಆದರೆ ಈಗ ಶಾಸಕರದ್ಧೇ ಪಾರುಪತ್ಯವಾಗಿದ್ದು, ವಾರ್ಡ್ ಸಮಸ್ಯೆಗಳು ಅವರಿಗೆ ಅರ್ಥವಾಗುವುದೇ ಇಲ್ಲ ಎಂದು ಅನೇಕ ಬಡಾವಣೆಗಳ ನಾಗರೀಕರು ಆಪಾದಿಸುತ್ತಾರೆ.

ಪಾಲಿಕೆ ಸದಸ್ಯರಿಗೆ ಮಾತ್ರ ಸಮಸ್ಯೆಗಳ ಅರಿವು!

ಬಜೆಟ್‌ ತಯಾರಿಕೆಯಲ್ಲಿ ಪಾಲಿಕೆ ಸದಸ್ಯರ ಉಪಸ್ಥಿತಿ ಅನಿವಾರ್ಯ. ಎಲ್ಲಿ ಯಾವ ಕೆಲಸ ಆಗಬೇಕು ಎಷ್ಟು ಹಣ ಬೇಕಾಗುತ್ತದೆ ಎಂಬ ಅರಿವು ಅವರಿಗೆ ಇರುತ್ತದೆ. ಹೊಡೆದಾಡಿ ಬಡಿದಾಡಿ ಅನುದಾನ ತರುತ್ತಾರೆ. ಒಂದಷ್ಟು ಸಮಸ್ಯೆಗಳಿಗೆ ಮುಕ್ತಿಯಾದರೂ ಸಿಗುತ್ತದೆ. ಅವರ ಅನುಪಸ್ಥಿತಿಯಲ್ಲಿ ಈಗ ಅವಾಸ್ತವಿಕ ಬಜೆಟ್‌ ತಯಾರಿ ನಡೆಯುತ್ತದೆ. ರಸ್ತೆಗಳ ಸಮಸ್ಯೆ, ಗುಂಡಿ ಇರುವ ರಸ್ತೆಗಳು, ತ್ಯಾಜ್ಯ ನಿರ್ವಹಣೆ, ಕಸ, ಆಟದ ಮೈದಾನ, ಪಾಲಿಕೆ ಆಸ್ಪತ್ರೆಗಳು, ಉದ್ಯಾನವನ, ನೀರು ಪೂರೈಕೆಯಂತಹ ಸಮಸ್ಯೆಗಳು ಪಾಲಿಕೆ ಸದಸ್ಯರಿಗೆ ಮಾತ್ರ ಗೋಚರಿಸುತ್ತವೆ. ಸಾರ್ವಜನಿಕರೂ ಅವರ ಗಮನಕ್ಕೆ ತರುತ್ತಾರೆ.

ಸಧ್ಯಕ್ಕೆ ಕೆಲವೇ ದಿನಗಳಲ್ಲಿ ಮಂಡನೆಯಾಗುವ ಬಜೆಟ್‌ ನಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಪಾಮಾಣಿಕ ಪ್ರಯತ್ನ ಮಾಡಬೇಕು. ಸತತ ಐದನೇ ಬಾರಿಗೆ ಅಧಿಕಾರಿಗಳೇ ಬಜೆಟ್‌ ಮಂಡಿಸುತ್ತಿದ್ದಾರೆ. ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುತ್ತವೆಯೋ ಅಥವಾ ಪರಿಹಾರ ಸಿಗಲಿದೆಯೋ ಕಾದು ನೋಡಬೇಕು.

ವರದಿ: ಎಚ್.‌ ಮಾರುತಿ, ಬೆಂಗಳೂರು

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.