ಕನ್ನಡ ಸುದ್ದಿ  /  Karnataka  /  Bbmp Budget To Get More 40 Percent Commission Says Aap Leader Mohan Dasari

BBMP Budget 2023: ಹಣ ಕೊಳ್ಳೆ ಹೊಡೆಯುವುದೊಂದೇ ಬಿಬಿಎಂಪಿ ಬಜೆಟ್ ಉದ್ದೇಶ: ಎಎಪಿ ಟೀಕೆ

ಯಾವುದೇ ಜನಪರ ಕಾಳಜಿ, ದೂರದೃಷ್ಟಿ ಇಲ್ಲದಂತಹ ಬಿಬಿಎಂಪಿ ಆಯವ್ಯಯವನ್ನು ಮಂಡಿಸಲಾಗಿದ್ದು, ಹಣವನ್ನು ಕೊಳ್ಳೆ ಹೊಡೆಯುವುದೊಂದೇ ಇದರ ಉದ್ದೇಶವಾಗಿದೆ ಎಂದು ಎಎಪಿ ಟೀಕಿಸಿದೆ.

ಆಮ್ ಆದ್ಮಿ ಪಾರ್ಟಿ
ಆಮ್ ಆದ್ಮಿ ಪಾರ್ಟಿ

ಬೆಂಗಳೂರು: ಇವತ್ತು ಮಂಡನೆಯಾಗಿರುವ ಬಿಬಿಎಂಪಿ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಬಜೆಟ್ ಅನ್ನು ಸ್ವಾಗತಿಸಿದರೆ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ನಾಯಕರು ತಮ್ಮ ರೀತಿಯಲ್ಲಿ ಟೀಕಿಸಿದ್ದಾರೆ.

ಯಾವುದೇ ಜನಪರ ಕಾಳಜಿ, ದೂರದೃಷ್ಟಿ ಇಲ್ಲದಂತಹ ಬಿಬಿಎಂಪಿ ಆಯವ್ಯಯವನ್ನು ಮಂಡಿಸಲಾಗಿದ್ದು, ಹಣವನ್ನು ಕೊಳ್ಳೆ ಹೊಡೆಯುವುದೊಂದೇ ಇದರ ಉದ್ದೇಶವಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್‌ ದಾಸರಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಮೋಹನ್‌ ದಾಸರಿ, ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯವನ್ನು ಸರಿಯಾಗಿ ಗಮನಿಸಿದರೆ, ರಾಜ್ಯದ ಸಚಿವರು ಹಾಗೂ ಶಾಸಕರು ಜನರ ತೆರಿಗೆ ಹಣವನ್ನು ಲೂಟಿ ಮಾಡಲೆಂದೇ ಬಜೆಟ್‌ ಮಂಡಿಸಿರುವುದು ಸ್ಪಷ್ಟವಾಗುತ್ತದೆ. ಯಾವುದೇ ಹೊಸ ಯೋಜನೆಗಳು ಈ ಬಜೆಟ್‌ನಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣ ಯೋಜನೆಗಳ ಕುರಿತೂ ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲದಿರುವುದು ವಿಪರ್ಯಾಸ. ಕೋವಿಡ್‌ ಮಹಾಮಾರಿಯನ್ನು ನೋಡಿದ ನಂತರವೂ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಖಂಡನೀಯ. ಬೆಂಗಳೂರಿನ ಬಹುದೊಡ್ಡ ಸಮಸ್ಯೆಯಾಗಿರುವ ರಸ್ತೆಗುಂಡಿಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿಯೂ ಬಜೆಟ್‌ ವಿಫಲವಾಗಿದೆ ಎಂದು ದಾಸರಿ ದೂರಿದ್ದಾರೆ.

ಮುಂದಿನ ವರ್ಷಗಳಲ್ಲಿ ಬೆಂಗಳೂರು ಯಾವ ರೀತಿ ಬೆಳೆಯಲಿದೆ ಎಂಬ ಮಾಹಿತಿಯನ್ನು ಆಧರಿಸಿ, ಅದಕ್ಕೆ ಈಗೇನು ಮಾಡಬೇಕು ಎಂದು ಯೋಚಿಸಿ ಬಜೆಟ್‌ ಮಂಡಿಸಬೇಕು. ಹೆಚ್ಚುತ್ತಿರುವ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ನೀರಿನ ವ್ಯವಸ್ಥೆ, ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. 40 ಪರ್ಸೆಂಟ್ ಕಮಿಷನ್‌ ಹೊಡೆದು, ಚುನಾವಣೆ ವಿಧಾನಸಭಾ ಚುನಾವಣೆ ಎದುರಿಸಲು ಬಿಜೆಪಿಯು ಈ ಬಜೆಟನ್ನು ಬಳಸಿಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.

ಬಿಬಿಎಂಪಿಗೆ ಚುನಾವಣೆ ನಡೆದು ಎಂಟು ವರ್ಷಗಳಾಗಿದ್ದರೂ, ಸದ್ಯದಲ್ಲೇ ಚುನಾವಣೆ ನಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಲಿ. ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸೋಲುವುದು ನಿಶ್ಚಿತವಾಗಿದೆ. ಇದನ್ನು ಅರಿತಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಕುಂಟು ನೆಪಗಳನ್ನು ಹುಡುಕಿಕೊಂಡು ಮುಖಭಂಗವನ್ನು ಮುಂದೂಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೋಹನ್‌ ದಾಸರಿ ಹೇಳಿದರು.

ಸತತ ಮೂರನೇ ವರ್ಷವೂ ಜನಪ್ರತಿನಿಧಿಗಳ ಆಡಳಿತ ಇಲ್ಲದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಂಗಡ ಪತ್ರವನ್ನು ಅಧಿಕಾರಿಗಳೇ ಮಂಡಿಸಿದ್ದಾರೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಇಂದು (ಮಾರ್ಚ್ 2, ಗುರುವಾರ) ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ಮಾಡಿದರು.

ಈ ಬಾರಿ 11,157.83 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗಿದೆ

ಒಟ್ಟು ಸ್ವೀಕೃತಿ 11,158 ಕೋಟಿ ರೂಪಾಯಿ

ರಾಜಸ್ವ ಸ್ವೀಕೃತಿ 6,376 ಕೋಟಿ ರೂಪಾಯಿ

ಬಂಡವಾಳ ಸ್ವೀಕೃತಿ 3,461 ಕೋಟಿ ರೂಪಾಯಿ

ಅಸಾಧರಣಾ ಸ್ವೀಕೃತಿ 1,321 ಕೋಟಿ ರೂಪಾಯಿ

ಒಟ್ಟು ವೆಚ್ಚ 11,157 ಕೋಟಿ ರೂಪಾಯಿ

ರಾಜಸ್ವ ವೆಚ್ಚ 4,400 ಕೋಟಿ ರೂಪಾಯಿ

ಬಂಡವಾಳ ವೆಚ್ಚ 6,264 ಕೋಟಿ ರೂಪಾಯಿ

ಅಸಾಧರಣಾ ವೆಚ್ಚ 493 ಕೋಟಿ ರೂಪಾಯಿ

ಉಳಿತಾಯ 6.14 ಕೋಟಿ ರೂಪಾಯಿ

ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವುದು, ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸುವುದು, ರಸ್ತೆಗಳ ವೈಟ್ ಟಾಪಿಂಗ್ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಸುಧಾರಿಸಲು ಒತ್ತು ನೀಡಿದೆ.

IPL_Entry_Point