ಕನ್ನಡ ಸುದ್ದಿ  /  Karnataka  /  Bbmp Directs To Remove Name Photos Posters Of Peoples Representative In Public Places

Model Code of Conduct: ಬಿಬಿಎಂಪಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳನ್ನು ತೆಗೆಯಲು ಸೂಚನೆ

ಇಂದು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ತೆಗೆಯಲು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್​​ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು: ಇಂದು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ತೆಗೆಯಲು ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್​​ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ವಲಯ ಜಂಟಿ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆಸಿದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಷಾರ್ ಗಿರಿನಾಥ್​​, ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಭಿತ್ತಿಪತ್ರಗಳು, ಗೋಡೆ ಬರಹಗಳು ಇರುವಂತಿಲ್ಲ. ಯಾರಾದರು ಪೋಸ್ಟರ್, ಬ್ಯಾನರ್ ಹಾಕಿದರೆ ಸಂಬಂಧಪಟ್ಟವರ ವಿರುದ್ಧ ಕೇಸ್ ಬುಕ್ ಮಾಡಿ ಎಂದು ಸೂಚನೆ ನೀಡಿದರು.

ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದಾದರು ಕಾರ್ಯಕ್ರಮ ಆಯೋಜಿಸಿದ್ದಲ್ಲಿ ತತ್‌ಕ್ಷಣ ಅದನ್ನು ರದ್ದುಪಡಿಸಬೇಕು. ಚುನಾವಣೆ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇರುವಂತಿಲ್ಲ. ಇದ್ದರೆ ಕೂಡಲೆ ಅದನ್ನು ತೆಗೆಯುವುದು ಅಥವಾ ಬಟ್ಟೆಯ ಮೂಲಕ ಕಾಣದಂತೆ ಮುಚ್ಚಬೇಕೆಂದು ಸೂಚನೆ ನೀಡಿದರು. ರಸ್ತೆ ಬದಿಯಿರುವ ನಾಮಫಲಕಗಳಲ್ಲಿರುವ ಜನಪ್ರತಿನಿಧಿಗಳ ಹೆಸರುಗಳನ್ನು ತೆಗೆಯಬೇಕು. ಎಲ್ಲೂ ಜನಪ್ರತಿನಿಧಿಗಳ ಹೆಸರಾಗಲಿ, ಸಂಪರ್ಕ ಸಂಖ್ಯೆಯಾಗಲಿ ಇರುವಂತಿಲ್ಲ ಎಂದು ತಿಳಿಸಿದರು.

ನೀತಿ ಸಂಹಿತೆಯು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸೂಚಿಸಿದ ನಿಯಮಗಳಾಗಿವೆ. ಈ ಚುನಾವಣಾ ನೀತಿ ಸಂಹಿತೆಯ ಯಾವುದೇ ನಿಯಮ ಉಲ್ಲಂಘನೆ ಆದರೂ ಶಿಕ್ಷೆ ಇದೆ. ಅದನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಮತದಾನ ವ್ಯವಸ್ಥೆಯನ್ನು ನಿರ್ವಹಿಸುವ ಕೇಂದ್ರ ಚುನಾವಣಾ ಆಯೋಗ ಜಾರಿ ಮಾಡುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದ್ದು, ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ವಿಧಾನಸಭೆಯಲ್ಲಿ 224 ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು 119 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 75 ಮತ್ತು ಜೆಡಿಎಸ್ 28 ಸ್ಥಾನಗಳನ್ನು ಹೊಂದಿದೆ.

ಇನ್ನು, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳ ವ್ಯಾಪ್ತಿಯಲ್ಲಿ ಯೋಜನಾ ವಿಭಾಗ, ಕೆರೆಗಳ ವಿಭಾಗ, ರಾಜಕಾಲುವೆ ವಿಭಾಗ ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪಟ್ಟಿಯನ್ನು ಕೂಡಲೆ ಕೊಡಲು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಕಾರ್ಯಾದೇಶ ನೀಡಿ ಕೆಲಸ ಪ್ರಾರಂಭಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು. ಹೊಸದಾಗಿ ಟೆಂಡರ್ ಕರೆಯುವುದಾಗಲಿ, ಹೊಸದಾಗಿ ಕಾರ್ಯಾದೇಶ ನೀಡುವುದಾಗಲಿ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ನಿಯಮ ಉಲ್ಲಂಘಿಸುವುದು ಕಂಡಬಂದರೆ ಚುನಾವಣಾ ಆಯೋಗದಿಂದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ, ಉಜ್ವಲ್ ಕುಮಾರ್ ಘೋಷ್, ಜಯರಾಮ ರಾಯಪುರ, ಎಲ್ಲಾ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಫಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

IPL_Entry_Point