BBMP Documents: ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ ಬಿಬಿಎಂಪಿ ಕಡತಗಳು ಎಲ್ಲಿ ಹೋದವು?!; ಯಾವ ಕಡತ? ಯಾಕಿಷ್ಟು ಮಹತ್ವ ಇಲ್ಲಿದೆ ವಿವರ
BBMP Documents: ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ ಬಿಬಿಎಂಪಿಯ ಮಹತ್ವದ ಕಡತಗಳು ಎಲ್ಲಿ ಹೋದವು? ಸ್ಥಳೀಯ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ನಿನ್ನೆಯಿಂದ ಪ್ರಸಾರವಾಗುತ್ತಿವೆ. ಏನಿದು ವಿದ್ಯಮಾನ? ವಿವರ ಇಲ್ಲಿದೆ.
ಬೆಂಗಳೂರು: ಮುಖ್ಯಮಂತ್ರಿ ಕಚೇರಿಗೆ ಬಿಬಿಎಂಪಿಯಿಂದ ರವಾನೆ ಆಗಿದ್ದ ಮುಖ್ಯ ಕಡತಗಳು ಎಲ್ಲಿ ಹೋದವು? ಈ ಕುರಿತ ಸುದ್ದಿ ನಿನ್ನೆಯಿಂದ ಮಾಧ್ಯಮದಲ್ಲಿ ಗಮನಸೆಳದಿವೆ. ಇದರೊಂದಿಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ತಲುಪಿದ್ದ ಮಹತ್ವದ ಕಡತಗಳು ಈಗ ಕಾಣುತ್ತಿಲ್ಲ. ಗರಿಷ್ಠ ಭದ್ರತೆ ಇರುವ ಸಿಎಂಒ ದಿಂದಲೇ ಕಡತ ನಾಪತ್ತೆಯಾಗಿವೆ ಎಂದರೆ ಅವುಗಳು, ಜಾಗತಪ್ಪಿ ಎಲ್ಲಾದರೂ ಹೋಗಿವೆಯಾ ಅಥವಾ ಕಳುವಾಗಿವೆಯಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಟಿವಿ9ಕನ್ನಡದ ವರದಿಯಲ್ಲೂ ಅನೇಕ ಸಂದೇಹಗಳನ್ನು ವ್ಯಕ್ತಪಡಿಸಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಕಡತವನ್ನು ಬಿಬಿಎಂಪಿ ಕಚೇರಿಯಿಂದ ಕಳುಹಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆಯಿಂದ ಈ ಕಡತ ಮುಖ್ಯಮಂತ್ರಿ ಕಚೇರಿಗೆ ಹೋಗಿತ್ತು. ಮುಖ್ಯಮಂತ್ರಿಗಳ ಮಾಹಿತಿಗಾಗಿ ಕಳುಹಿಸಲಾಗಿದ್ದ ಕಡತ ಇನ್ನೂ ಬಂದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಪತ್ರ ಬರೆದಿರುವುದಾಗಿ ಟಿವಿ9 ವರದಿ ಹೇಳಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಬಂಧಿಸಿದ ಮಹತ್ವದ ಫೈಲ್ ಒಂದು ಮಿಸ್ಸಿಂಗ್ ಆಗಿದೆ ಎನ್ನಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆ ಬೆಂಗಳೂರಿನಲ್ಲಿ ಜಾಹಿರಾತು ನಿಯಮ ವಿಚಾರಕ್ಕೆ ಸಂಬಂಧಿಸಿ ಕಳುಹಿಸಿದ್ದ ಕಡತ ಇದಾಗಿತ್ತು. 2021 ಡಿ.7ರಂದೇ ನಗರಾಭಿವೃದ್ಧಿ ಇಲಾಖೆ ಈ ಫೈಲ್ ನ್ನು ಸಿಎಂ ಕಚೇರಿಗೆ ಕಳುಹಿಸಿತ್ತು. ಆದರೆ ಫೈಲ್ ಇದುವರೆಗೂ ವಾಪಸ್ ಇಲಾಖೆಗೆ ಬಂದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಮುಖ್ಯಕಾರ್ಯದರ್ಶಿ, ಸಿಎಂ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಿಎಂ ಕಚೇರಿಗೆ ಕಳುಹಿಸಿದ್ದ ಫೈಲ್ ಕಾಣದಿರುವುದು ಇದೀಗ ಭದ್ರತೆಯಲ್ಲಿ ಲೋಪವೇ? ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಪ್ರತಿನಿಧಿ ವರದಿ ಮಾಡಿದೆ.
ಬಿಬಿಎಂಪಿಯ ಮಹತ್ವದ ಕಡತ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ನಾಪತ್ತೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಭಾರೀ ಸಂಚಲನ ಸೃಷ್ಟಿಯಾಗಿದೆ.
ಬೆಂಗಳೂರಿನ ಜಾಹೀರಾತು ನಿಯಮ-2019ರ ಕಡತ ಮತ್ತೆ ನಗರಾಭಿವೃದ್ಧಿ ಕಚೇರಿಗೆ ವಾಪಸ್ ಹೋಗಿಲ್ಲ ಎಂಬುದು ಸದ್ಯ ಗಮನಸೆಳೆದಿರುವ ವಿಚಾರ. ಸಿಎಂ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು ನ.22ರಂದು ಪತ್ರ ಬರೆದಿರುವ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, 2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಳುಹಿಸಲಾಗಿದ್ದ ಬಿಬಿಎಂಪಿ ಜಾಹೀರಾತು ನಿಯಮ-2019 ಫೈಲ್ ಇನ್ನೂ ವಾಪಸ್ ಬಂದಿಲ್ಲ. ತತ್‌ಕ್ಷಣವೇ ಕಳುಹಿಸಿ ಎಂದು ಮನವಿ ಮಾಡಿದ್ದಾಗಿ ಪಬ್ಲಿಕ್ ಟಿವಿ ವರದಿ ಮಾಡಿದೆ.
ಹೊಸ ಜಾಹೀರಾತು ನೀತಿಗೆ ಸಂಬಂಧಿಸಿದ ನಿಯಮಗಳ ಕಡತ
ಬಿಬಿಎಂಪಿಗೆ ಸಂಬಂಧಿಸಿದ ಈ ಮಹತ್ವದ ಫೈಲ್ ಲೆಕ್ಕಪತ್ರ ಸಮಿತಿಗೆ ಸಲ್ಲಿಸಲಾಗಿದೆಯೋ ಅಥವಾ ವಾಪಸಾಗಿದೆಯೋ ಎಂಬುದರ ಬಗ್ಗೆ ಅಧಿಕಾರಿಗಳಲ್ಲೇ ಗೊಂದಲ ಇದೆ. ಹೀಗಾಗಿ, ಈಗ ಪತ್ರ ಬರೆದು ಸಿಎಂ ಗಮನಕ್ಕೂ ತರುತ್ತಿದ್ದಾರೆ ಎಂದು ಮೂಲಗಳು ಹೇಳಿತ್ತಿವೆ.
ಸಾವಿರಾರು ಕೋಟಿ ರೂಪಾಯಿ ಜಾಹೀರಾತು ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪದ ಕಾರಣ ಹೊಸ ಜಾಹೀರಾತು ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಇದಕ್ಕೆ ಒಪ್ಪಿಗೆ ನೀಡಿ ಕಳುಹಿಸಿದ್ದರು. ಇದರ ಬಗ್ಗೆ ಚರ್ಚೆ ನಡೆದು ಅಂತಿಮ ರೂಪುರೇಷೆ ಸಿದ್ಧಪಡಿಸಿ ಕಡತವನ್ನು ಸಿಎಂ ಕಚೇರಿಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ. ಒಂದೊಮ್ಮೆ, ಸರ್ಕಾರದಿಂದ ಈ ಕಡತಕ್ಕೆ ಅನುಮೋದನೆ ಸಿಕ್ಕಿದ್ದರೆ ಈ ನಿಯಮ ಇಷ್ಟರಲ್ಲಾಗಲೇ ಜಾರಿಗೆ ಬರುತ್ತಿತ್ತು. ಆದರೆ, ಈಗ ಕಡತಗಳ ಸುಳಿವು ಇಲ್ಲದೇ ಇರುವುದು ಭಾರಿ ಸದ್ದು ಮಾಡಿದೆ. ನಿಯಮ ಜಾರಿಗೆ ಕಾಣದ ಕೈಗಳ ʻಹಸ್ತಕ್ಷೇಪʼ ಅಡ್ಡಿ ಮಾಡಿರುವುದು ಗಮನಸೆಳೆದಿದೆ ಎಂದು ಹೇಳಲಾಗುತ್ತಿದೆ.