ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟದಿದ್ದರೆ ನೋಟಿಸ್ ಉಚಿತ, ಬೀಗಮುದ್ರೆ ಖಚಿತ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಬಿಎಂಪಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟದಿದ್ದರೆ ನೋಟಿಸ್ ಉಚಿತ, ಬೀಗಮುದ್ರೆ ಖಚಿತ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟದಿದ್ದರೆ ನೋಟಿಸ್ ಉಚಿತ, ಬೀಗಮುದ್ರೆ ಖಚಿತ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟದ ಮಾಲೀಕರಿಗೆ ಬಿಸಿ ಮುಟ್ಟಿಸುತ್ತಿರುವ ಬಿಬಿಎಂಪಿ ಈಗಾಗಲೇ 1 ಸಾವಿರಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಬೀಗ ಜಡಿದಿದೆ.

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಗೆ ನೋಟಿಸ್ ನೀಡಿರುವ ಬಿಬಿಎಂಪಿ
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಗೆ ನೋಟಿಸ್ ನೀಡಿರುವ ಬಿಬಿಎಂಪಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂದಾಜು 40 ಲಕ್ಷ ಆಸ್ತಿಗಳಿದ್ದು, ತೆರಿಗೆ ಪಾವತಿಸುವವರು ಅರ್ಧದಷ್ಟು ಮಾತ್ರ. ಅಂದರೆ ಎ ಖಾತಾ ಮತ್ತು ಬಿ ಖಾತಾ ಎರಡೂ ಸೇರಿ 20 ಲಕ್ಷ ಆಸ್ತಿ ಮಾಲೀಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ತೆರಿಗೆ ಕಟ್ಟುತ್ತಿದ್ದಾರೆ.

ಬಿಬಿಎಂಪಿ ಮಾಹಿತಿ ಪ್ರಕಾರ 13.4 ಲಕ್ಷ ಎ ಖಾತಾ ಮತ್ತು 6.8 ಲಕ್ಷ ಬಿ ಖಾತೆಗಳಿವೆ. ಎ ಅಥವಾ ಬಿ ಎರಡೂ ಸೇರಿ 20.2 ಲಕ್ಷ ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದಾರೆ. ಎ ಮತ್ತು ಬಿ ಎರಡಕ್ಕೂ ಸೇರದ ಸುಮಾರು 15 ಲಕ್ಷ ಆಸ್ತಿಗಳಿದ್ದು, ಒಂದು ನಯಾ ಪೈಸೆ ತೆರಿಗೆಯನ್ನೂ ಪಾವತಿಸುತ್ತಿಲ್ಲ. ಈ ನಿಟ್ಟಿನಲ್ಲಿ ತೆರಿಗೆ ಕಟ್ಟದ 20 ಲಕ್ಷ ಆಸ್ತಿಗಳನ್ನು ಎ ಅಥವಾ ಬಿ ಖಾತಾ ವ್ಯಾಪ್ತಿಗೆ ಒಳಪಡಿಸಿ ತೆರಿಗೆ ಪಾವತಿ ಮಾಡುವಂತೆ ಮಾಡಲು ಬಿಬಿಎಂಪಿ ಯೋಜನೆಯನ್ನು ರೂಪಿಸಿದೆ. ಈ ಮೂಲಕ ಆದಾಯವನ್ನು ಹೆಚ್ಚಳ ಮಾಡಿಕೊಳ್ಳಲಿದೆ. ವಿವಿಧ ಏಜೆನ್ಸಿಗಳ ಮೂಲಕ ಸಮೀಕ್ಷೆ ನಡೆಸಿದಾಗ ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿರುವುದಾಗಿ ತಿಳಿದು ಬಂದಿದೆ.

ಅದರಲ್ಲೂ ಬಿ ಖಾತಾ ಆಸ್ತಿಗಳ ಮಾಲೀಕರು ತೆರಿಗೆ (Property Tax) ಪಾವತಿಸಲು ನಿರಾಕರಿಸುತ್ತಾರೆ. ಎ ಅಥವಾ ಬಿ ಖಾತಾ ಅಡಿಗೆ ಸೇರದೆ ಇರುವ ಆಸ್ತಿಗಳ ಸಮಸ್ಯೆಗಳನ್ನು ಬಗೆಹರಿಸಲು ಟೌನ್ ಪ್ಲಾನಿಂಗ್ ನಿಂದ ಪಡೆದುಕೊಂಡಿರುವ ಕಟ್ಟಡ ನಿರ್ಮಾಣ ಅನುಮತಿ ದಾಖಲೆಗಳನ್ನು ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ. ಈ ಮೂಲಕ ಇಂತಹ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಮುಂದಾಗಿದೆ.

ಬೆಂಗಳೂರಿನ 13.6 ಲಕ್ಷ ವಸತಿ ಆಸ್ತಿಗಳು, 1 ಲಕ್ಷಕ್ಕೂ ಹೆಚ್ಚು ವಸತಿಯೇತರ ಕಟ್ಟಡಗಳು, 8,069 ಕೈಗಾರಿಕಾ ಆಸ್ತಿಗಳು ಮತ್ತು 4.5 ಲಕ್ಷ ಇತರೆ ಆಸ್ತಿಗಳು ಬಿಬಿಎಂಪಿಗೆ ತೆರಿಗೆ ಪಾವತಿಸುತ್ತಿವೆ. ಬಿಬಿಎಂಪಿ 2023-24ರಲ್ಲಿ ಸೆಸ್ ಸೇರಿ 4,790 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ. 2022-23ರಲ್ಲಿ 3,155 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. 2023-24ರ ಆರ್ಥಿಕ ವರ್ಷದ ನವೆಂಬರ್ ಅಂತ್ಯದ ವರೆಗೆ ಈಗಾಗಲೇ 300 ಕೋಟಿ ರೂ. ಆಸ್ತಿ ಸಂಗ್ರಹವಾಗಿದೆ.

1 ಸಾವಿರಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಬೀಗ ಜಡಿದ ಬಿಬಿಎಂಪಿ

ಬಿಬಿಎಂಪಿ ಇತ್ತೀಚೆಗೆ ಆಸ್ತಿ ತೆರಿಗೆ ಪಾವತಿಸದವರ ವಾಹನಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮ ಅನುಸರಿಸುತ್ತಿದೆ. ಡಿಸೆಂಬರ್ 12 ರಿಂದ ಬೀಗಮುದ್ರೆ ಹಾಕುವ ಕಾರ್ಯ ಆರಂಭವಾಗಿದ್ದು, ಬೆಂಗಳೂರಿನ ಎಲ್ಲಾ 8 ವಲಯಗಳಲ್ಲಿ ಈಗಾಗಲೇ 1000ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. ಆಸ್ತಿಗಳ ಮಾಲೀಕರು ಕೆಲವು ವರ್ಷ ತೆರಿಗೆ ಕಟ್ಟಿದ್ದರೆ ಇನ್ನೂ ಕೆಲವು ವರ್ಷಗಳ ಬಾಕಿ ಉಳಿಸಿಕೊಂಡಿದ್ದಾರೆ. ಬಿಬಿಎಂಪಿ ಇಂತಹ 10,000 ಬಾಕಿದಾರರಿಗೆ ನೋಟಿಸ್ ನೀಡಿದೆ.

ಈ ಬಾಕಿದಾರರು ಸುಮಾರು 300 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ನವೆಂಬರ್‌ನಲ್ಲಿ ಬಿಬಿಎಂಪಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸರ್ಕಾರದ ಈ ಆದೇಶದ ನಂತರ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ.

Whats_app_banner