ಬಿಬಿಎಂಪಿ ಒಟಿಎಸ್ ಯೋಜನೆ ಇಂದು ಅಂತ್ಯ; ಪ್ರಯೋಜನ ಪಡೆಯದ ಬೆಂಗಳೂರು ತೆರಿಗೆದಾರರು; ನಾಳೆಯಿಂದ ದಂಡ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ
BBMP OTS Deadline: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಿರುವ ಒಂದು ಬಾರಿ ಸೆಟ್ಲ್‌ಮೆಂಟ್ ಅವಧಿ ಶನಿವಾರ ಮುಗಿಯಲಿದ್ದು, ಡಿಸೆಂಬರ್ 1ರಿಂದ ದಂಡ, ಬಡ್ಡಿ ಬೀಳಲಿದೆ.ವರದಿ: ಎಚ್.ಮಾರುತಿ, ಬೆಂಗಳೂರು
BBMP OTS Deadline: ಬೆಂಗಳೂರಿಗರಿಗೆ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಇಂದಿಗೆ ಅಂತ್ಯಗೊಳ್ಳಲಿದೆ. ತೆರಿಗೆ ಪಾವತಿಸದ 3.9 ಲಕ್ಷ ಸುಸ್ತಿದಾರರಲ್ಲಿ 2 ಲಕ್ಷ ತೆರಿಗೆದಾರರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಆದರೆ ಸುಸ್ತಿದಾರರು ನಿರೀಕ್ಷಿತ ಮಟ್ಟದಲ್ಲಿ ಈ ಯೋಜನೆಯ ಲಾಭ ಪಡೆದಿಲ್ಲ. ಈ ಯೋಜನೆಯ ಅಡಿಯಲ್ಲಿ ತೆರಿಗೆ ಪಾವತಿಸದ ಸುಸ್ಸಿದಾರರು ಯಾವುದೇ ದಂಡ ಅಥವಾ ಬಡ್ಡಿ ಇಲ್ಲದೆ ತೆರಿಗೆ ಪಾವತಿಸುವ ಅವಕಾಶ ನೀಡಲಾಗಿತ್ತು. ಅನೇಕ ಪ್ರಕರಣಗಳಲ್ಲಿ ತೆರಿಗೆ, ಬಡ್ಡಿ ಮತ್ತು ದಂಡ ಸೇರಿ ಕೋಟಿ ರೂ.ಗಳಿಗೂ ಮೀರಿದ ಪ್ರಕರಣಗಳೂ ಇದ್ದವು ಎಂದು ಪಾಲಿಕೆ ತಿಳಿಸಿದೆ. ಸುಸ್ತಿದಾರರಿಂದ ಸುಮಾರು 670 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದ್ದು, ಇನ್ನೂ 550 ಕೋಟಿ ರೂ ಸಂಗ್ರಹವಾಗಿಲ್ಲ. ಅಂದಾಜು ಅರ್ಧಕ್ಕಿಂತ ಸ್ವಲ್ಪ ಹೆಚ್ಚಿಗೆ ಸಂಗ್ರಹವಾಗಿದ್ದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ಏನಿದು ಯೋಜನೆ
ಸುಸ್ತಿದಾರರ ಅನುಕೂಲಕ್ಕಾಗಿ ಒಟಿಎಸ್ (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾಗಿತ್ತು. ಈ ಮೂಲಕ ತೆರಿಗೆದಾರರಿಗೆ ಬಾಕಿ ಮೇಲಿನ ಬಡ್ಡಿ ಚಕ್ರಬಡ್ಡಿ ಮತ್ತು ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಯೋಜನೆ ಇದಾಗಿತ್ತು. ನಂತರ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿತ್ತು. ಮೊದಲು ಸೆಪ್ಟಂಬರ್ 30 ಮತ್ತು ನಂತರ ನವಂಬರ್ 30 ರವೆಗೆ ಗಡುವು ವಿಸ್ತರಿಸಲಾಗಿತ್ತು.
ಇದೀಗ ಡಿಸೆಂಬರ್ 1ರಿಂದ ಬಾಕಿ ವಸೂಲಿಗೆ ಪಾಲಿಕೆ ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಪಾವತಿಸುವಂತೆ ಪಾಲಿಕೆ ಮನೆ ಮನೆ ಪ್ರಚಾರವನ್ನೂ ಕೈಗೊಂಡಿತ್ತು.
ತೆರಿಗೆಯನ್ನು ಲೆಕ್ಕ ಹಾಕುವಾಗ ಕೆಲವೊಂದು ತೊಂದರೆಗಳಾಗುತ್ತಿವೆ. ಇದಕ್ಕೆ ಪಾಲಿಕೆ ಅಧಿಕಾರಿಗಳೇ ಹೊಣೆಯಾಗಿದ್ದು, ಗಡುವನ್ನು ಇನ್ನೂ 15 ದಿನಗಳ ಕಾಲ ಮುಂದುವರೆಸಬೇಕು ಎಂದು ಇನ್ನೂ ತೆರಿಗೆ ಪಾವತಿಸದ ಅನೇಕ ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಆನ್ ಲೈನ್ ಮೂಲಕ ದಂಡ ಪಾವತಿಸುವುದು ತುಂಬಾ ಸರಳೀಕರಣವಾಗಿದ್ದರೂ ಗ್ರಾಹಕರು ಈ ಸೌಲಭ್ಯವನ್ನು ಪಡೆಯದಿರುವುದು ಅಚ್ಚರಿ ಮೂಡಿಸಿದೆ.
ಸುಸ್ತಿದಾರರು ಅಧಿಕ
ಪಾಲಿಕೆ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲೂ ಬಾಕಿ ಉಳಿಸಿಕೊಂಡವರಿದ್ದಾರೆ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ. ದಾಸರಹಳ್ಳಿ ವಲಯದಲ್ಲಿ ಕಡಿಮೆ ಬಾಕಿ ಇದೆ. ಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಅವರು ಒಟಿಎಸ್ ಪ್ರಯೋಜನ ಪಡೆಯಲು ಸುಸ್ತಿದಾರರಿಗೆ ಇದು ಕೊನೆಯ ಅವಕಾಶವಾಗಿತ್ತು. ಡಿಸೆಂಬರ್ 1ರಿಂದ ಬಾಕಿಯ ಬಡ್ಡಿ ದಂಡ ಸೇರಿ ಬಾಕಿ ತೆರಿಗೆಯ ಎರಡು ಮೂರು ಪಟ್ಟು ಹೆಚ್ಚಳವಾದರೂ ಆಗಬಹುದು ಎಂದು ತಿಳಿಸಿದ್ದಾರೆ.
ಇದುವರೆಗೂ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಜಪ್ತಿ ಮಾಡುವದರಿಂದ ಆಸ್ತಿ ಮಾಲೀಕರಿಗೆ ಗಂಭೀರ ತೊಂದರೆಯಾಗುತ್ತಿರಲಿಲ್ಲ. ಹೆಚ್ಚೆಂದರೆ ಜಪ್ತಿ ಮಾಡಲಾದ ಆಸ್ತಿಯ ಮೇಲೆ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಮುಂದೆ ಆಸ್ತಿಗಳಿಗೆ ಬೀಗಮುದ್ರೆ ಹಾಕಲು ಪಾಲಿಕೆ ನಿರ್ಧರಿಸಿದೆ. ಸುಸ್ತಿದಾರರಲ್ಲಿ ಬೃಹತ್ ವಾಣಿಜ್ಯ ಮಳಿಗೆಗಳೂ ಸೇರಿವೆ. ಬೀಗಮುದ್ರೆ ಹಾಕಿದರೆ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.
ದಂಡದ ಸ್ವರೂಪ ಹೇಗಿರುತ್ತದೆ?
ಡಿ.1ರಿಂದ ತೆರಿಗೆ, ಬಡ್ಡಿ, ದಂಡ ಎಲ್ಲವನ್ನೂ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಒಟಿಎಸ್ ಅಡಿಯಲ್ಲಿ 25 ಸಾವಿರ ರೂ. ಬಾಕಿ ಇದ್ದರೆ ಯೋಜನೆ ಅವಧಿ ಮುಗಿದ ಬಳಿಕ ಕನಿಷ್ಠ 63,000 ರೂ ಪಾವತಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ವರದಿ: ಎಚ್.ಮಾರುತಿ, ಬೆಂಗಳೂರು