ಬಿಬಿಎಂಪಿ ಇನ್ನಿಲ್ಲ; ಸಣ್ಣ ಸಣ್ಣ ಪಾಲಿಕೆಗಳ ರಚನೆಗೆ ಕಸರತ್ತು, 5 ಸಣ್ಣ ಪಾಲಿಕೆಗಳ ರಚನೆ, ಅನುದಾನ ಹಂಚಿಕೆ ಹೇಗೆ; ಇಲ್ಲಿದೆ ಆಯುಕ್ತರ ಉತ್ತರ
ಬಿಬಿಎಂಪಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲು ಸಣ್ಣ ಸಣ್ಣ ಪಾಲಿಕೆಗಳ ರಚನೆಗೆ ಕಸರತ್ತು ನಡೆಸುವ ಚಿಂತನೆ ನಡೆದಿದೆ. ಪಾಲಿಕೆಗಳ ರಚನೆ, ಅನುದಾನ ಹಂಚಿಕೆ ಹೇಗೆ? ಇಲ್ಲಿದೆ ಆಯುಕ್ತರ ಉತ್ತರ (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024 ಕುರಿತು ಪರಿಶೀಲನೆ ನಡೆಸಲು ರಚಿಸಲಾಗಿರುವ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದೆ. ಈ ಸಭೆಗಳಲ್ಲಿ ಸಾರ್ವಜನಿಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಹಲವು ಪಾಲಿಕೆಗಳನ್ನಾಗಿ ರಚಿಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗ್ರೇಟರ್ ಬೆಂಘಳೂರು ಪ್ರಾಧಿಕಾರ ಮತ್ತು ಅದರ ಹೊಣೆಗಾರಿಕೆ
ವಿಶೇಷವಾಗಿ ಆಸ್ತಿ ತೆರಿಗೆಯನ್ನು ಒಂದು ಪಾಲಿಕೆಯಿಂದ ಮತ್ತೊಂದು ಪಾಲಿಕೆಯೊಂದಿಗೆ ಹಂಚಿಕೊಳ್ಳಲು ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಸೂದೆಯ ಉದ್ದೇಶಗಳನ್ನು ವಿವರಿಸುತ್ತಾ, ಪ್ರಸ್ತುತ ಮಸೂದೆಯು ಬಿಬಿಎಂಪಿಯನ್ನು ಹತ್ತು ಪಾಲಿಕೆಗಳನ್ನಾಗಿ ವಿಭಜಿಸುವ ಉದ್ದೇಶ ಹೊಂದಿದೆ. ಪ್ರತಿ ಪಾಲಿಕೆಗೂ ಪ್ರತ್ಯೇಕ ಮೇಯರ್, ಆಯುಕ್ತರು, ಸ್ಥಾಯಿ ಸಮಿತಿಗಳು ಮತ್ತು ವಾರ್ಡ್ ಸಮಿತಿಗಳು ಇರುತ್ತವೆ. ಎಲ್ಲ ಪಾಲಿಕೆಗಳ ಮೇಲೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇರುತ್ತದೆ ಎಂದು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮೂರು ಪ್ರಮುಖ ಜವಬ್ದಾರಿಗಳಿರುತ್ತವೆ. ಪ್ರಾಧಿಕಾರವು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಬೆಂಗಳೂರು ನಗರ ಘನ ತ್ಯಾಜ್ಯ ನಿರ್ವಹಣಾ ಮಂಡಲಿಯೊಂದಿಗೆ ಸಮನ್ವಯ ಸಾದಿಸಲಿದೆ. ಎಲ್ಲ ಪಾಲಿಕೆಗಳ ನೇಮಕಾತಿಯನ್ನು ನಿರ್ವಹಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನದ ಜವಾಬ್ದಾರಿಯನ್ನೂ ನಿರ್ವಹಿಸಲಿದೆ.
ಎಲ್ಲ ಆದಾಯವನ್ನೂ ಆಯಾ ಪಾಲಿಕೆಯೇ ವೆಚ್ಚ ಮಾಡುವಂತಿಲ್ಲ. ಉದಾಹರಣೆಗೆ ಮಹದೇವಪುರ ವಲಯದಲ್ಲಿ ಸುಮಾರು 1,400 ಕೋಟಿ ರೂ ತೆರಿಗೆ ಸಂಗ್ರಹವಾಗುತ್ತದೆ. ಬೊಮ್ಮನಹಳ್ಳಿ ಅಥವಾ ಪಶ್ಚಿಮ ವಲಯದಲ್ಲಿ ಆದಾಯ ಸಂಗ್ರಹ ಕೊರತೆ ಇರುತ್ತದೆ. ಸ್ವತಂತ್ರವಾಗಿ ಪಾಲಿಕೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಡೀ ಬೆಂಗಳೂರು ಅಥವಾ ಎಲ್ಲ ಪಾಲಿಕೆಗಳ ಆದಾಯ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹೋಗುತ್ತದೆ. ರಾಜ್ಯ ಹಣಕಾಸು ಆಯೋಗ ಅನುದಾನ ಹಂಚಿಕೆ ಮಾಡಲಿದೆ. ದೆಹಲಿಯಲ್ಲಿ ಮೂರು ಪಾಲಿಕೆಗಳಿದ್ದು ಒಂದಕ್ಕೆ ಮಾತ್ರ ಆದಾಯವಿದೆ. ಉಳಿದ ಎರಡು ಪಾಲಿಕೆಗಳು ಆದಾಯ ಕೊರತೆಯನ್ನು ಎದುರಿಸುತ್ತಿವೆ. ಈ ಅನುಭವದ ಆಧಾರದ ಮೇಲೆ ಅದಾಯ ಸಂಗ್ರಹ ಪ್ರಾಧಿಕಾರಕ್ಕೆ ಹೋಗಿ ಮರು ಹಂಚಿಕೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು.
ಬಿಬಿಎಂಪಿ ಇನ್ನಿಲ್ಲ; 5ಸಣ್ಣ ಪಾಲಿಕೆಗಳ ರಚನೆ
ಗ್ರೇಟರ್ ಬೆಂಗಳೂರು ಆಡಳಿತ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಸ್ಪಷ್ಟನೆ ನೀಡಿ ರಾಜ್ಯ ಹಣಕಾಸು ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪ್ರಬಾವಕ್ಕೆ ಒಳಗಾಗದೆ ಅನುದಾನ ಹಂಚಿಕೆ ಮಾಡಲಿದೆ ಎಂದು ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ಚಿಕ್ಕ ಪಾಲಿಕೆಗಳಾಗಿ ವಿಂಗಡಿಸಬೇಕು.. ಮಸೂದೆ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ. ಸಮಿತಿಯು ಈಗಾಗಲೇ 17 ಸಭೆಗಳನ್ನು ನಡೆಸಿದೆ. ಹಲವು ಆಯಾಮಗಳಲ್ಲಿ ಚರ್ಚೆ ನಡೆಸಿದ ಬಳಿಕ ಮಸೂದೆಯನ್ನು ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಕುರಿತ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಮಂಗಳವಾರ ರಾಜರಾಜೇಶ್ವರಿನಗರ, ಪಶ್ಚಿಮ, ಬೊಮ್ಮನಹಳ್ಳಿ ಹಾಗೂ ದಕ್ಷಿಣ ವಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಲಹೆ ಸ್ವೀಕಾರ ಸಭೆಗಳಲ್ಲಿ 100ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ. ಸೋಮವಾರ ಪೂರ್ವ ವಲಯದಲ್ಲಿ ಸಭೆ ನಡೆಸಿದೆ. ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರದಲ್ಲಿ ಬೆಸ್ಕಾಂ, ಜಲಮಂಡಳಿಯನ್ನು ವಿಲೀನ ಮಾಡಿಕೊಳ್ಳಬೇಕು. ಗ್ರೇಟರ್ ಬೆಂಗಳೂರು ಬದಲು ಮಹಾನ್' ಬೆಂಗಳೂರು ಎಂದು ನಾಮಕರಣ ಮಾಡಬೇಕು ಎಂಬ ಸಲಹೆಗಳನ್ನು ನಾಗರಿಕರು ನೀಡಿದ್ದಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ಹೊರವಲಯ ಗ್ರಾಮ ಅಥವಾ ಹಳ್ಳಿಗಳಿಗೆ ತೆರಿಗೆ ಹೆಚ್ಚಿಸಬಾರದು. ಇದರಿಂದ ಆ ಭಾಗದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಎಲ್ಲ ಪಾಲಿಕೆಗಳಿಗೂ ಒಂದೇ ರೀತಿ ಅನುದಾನ ನೀಡಬೇಕು. ಪ್ರಾಯೋಗಿಕವಾಗಿ ವಿಂಗಡಣೆ ಮಾಡಿ ಪರಿಶೀಲಿಸಿ ಯಶಸ್ವಿಯಾದರೆ ಮಾತ್ರ ಬಿಬಿಎಂಪಿಯನ್ನು ವಿಭಜಿಸಬೇಕು ಎಂಬ ಸಲಹೆಗಳೂ ಕೇಳಿ ಬಂದಿವೆ.
ನಗರದ 6 ಭಾಗಗಳಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಯಲಿದೆ. ಫೆಬ್ರವರಿ 21 ರೊಳಗೆ ವರದಿಯನ್ನು ಸಲ್ಲಿಸಲಾಗುತ್ತದೆ. ಈ ವರ್ಷದ ಆಗಸ್ಟ್ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
