ಬಿಬಿಎಂಪಿಯಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ ಹೇಗಿತ್ತು? ಇನ್ನು ಮುಂದೆ ಹೇಗಿರಲಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  ಬಿಬಿಎಂಪಿಯಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ ಹೇಗಿತ್ತು? ಇನ್ನು ಮುಂದೆ ಹೇಗಿರಲಿದೆ?

ಬಿಬಿಎಂಪಿಯಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ ಹೇಗಿತ್ತು? ಇನ್ನು ಮುಂದೆ ಹೇಗಿರಲಿದೆ?

ಸಂಚಾರ ದಟ್ಟಣೆ, ಪ್ರವಾಹ, ಗುಂಡಿ ಬಿದ್ದ ರಸ್ತೆಗಳು, ಕಸ ಸಂಗ್ರಹದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ಕೋಟಿ ನಿವಾಸಿಗಳ ಕನಸು ನನಸಾದೀತೇ? ವರದಿ: ಎಚ್. ಮಾರುತಿ

ಬಿಬಿಎಂಪಿಯಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ
ಬಿಬಿಎಂಪಿಯಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದವರೆಗೆ ಬೆಂಗಳೂರು ನಡೆದು ಬಂದ ಹಾದಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಜಿಬಿಎ ಬೆಂಗಳೂರಿಗೆ ಹೊಸ ದಿಕ್ಕುದೆಸೆ ತೋರಲಿದೆ ಎಂದು ನಿರೀಕ್ಷಿಸಲಾಗಿದೆ. ಸಮಸ್ಯೆಗಳಿಗೆ ಮುಕ್ತಿ ಸಿಗಲಿದ್ದು ಹಲವು ಪಾಲಿಕೆಗಳು ರಚನೆಯಾಗಿ ಅಧಿಕಾರ ವಿಕೇಂದ್ರೀಕರಣವಾಗಿ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದು ಭಾವಿಸಲಾಗಿದೆ. ಬಿಬಿಎಂಪಿಯಿಂದ ಜಿಬಿಎವರೆಗಿನ ಹಾದಿ ಹೇಗಿತ್ತು ನೋಡೋಣ.

ಬಿಬಿಎಂಪಿ ರಚನೆ ಬದಲಾವಣೆ ಅಗತ್ಯವಾಗಿತ್ತೇ?

2007 ರಲ್ಲಿ ಅಸ್ತಿತ್ವಕ್ಕೆ ಬಂದ ಬಿಬಿಎಂಪಿ ಎಗ್ಗಿಲ್ಲದೆ ಬೆಳೆಯುತ್ತಿರುವ ನಗರದ ನಿರ್ವಹಣೆಗೆ ಹರಸಾಹಸ ಪಡುತ್ತಿತು. ಪಾಲಿಕೆ ವ್ಯಾಪ್ತಿ 709 ಚ.ಕಿಮೀಗೆ ಹಿಗ್ಗಿದ್ದು, 1 ಕೋಟಿಗೂ ಹೆಚ್ಚು ನಿವಾಸಿಗಳಿದ್ದಾರೆ. ಈ ಬೃಹತ್‌ ಗಾತ್ರದ ನಗರವನ್ನು ನಿಬಾಯಿಸುತ್ತಿದ್ದ ಬಿಬಿಎಂಪಿ ಮೆಚ್ಚುಗೆಗಿಂತ ಟೀಕೆಗೊಳಗಾಗಿದ್ದೇ ಹೆಚ್ಚು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಸಂಚಾರ ದಟ್ಟಣೆ, ಪ್ರವಾಹ, ಗುಂಡಿ ಬಿದ್ದ ರಸ್ತೆಗಳು, ಕಸ ಸಂಗ್ರಹ, ನೀರಿನ ಕೊರತೆಯ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂಬ ಹಂತ ತಲುಪಿತ್ತು. ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಆರ್‌ಸಿಎಲ್‌, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣಕ್ಕೆ ಸಮಸ್ಯೆಗಳ ಸರಮಾಲೆಯೇ ಉಂಟಾಗಿತ್ತು.

ನಿರ್ದಿಷ್ಟವಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಂದರೇನು?

ದೇಶದ ಐಟಿಬಿಟಿ ರಾಜಧಾನಿಯಾಗಿರುವ ಬೆಂಗಳೂರು ನಗರವನ್ನು ಮತ್ತಷ್ಟು ಸಮರ್ಥವಾಗಿ ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ಜಿಬಿಎ ರಚಿಸಲಾಗಿದೆ. ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ -2024ರ ಅಡಿಯಲ್ಲಿ ಜಿಬಿಎ ರಚನೆಯಾಗಿದೆ. ಬಿಬಿಎಂಪಿಗೆ ಬದಲಾಗಿ ಜಿಬಿಎ ನಗರದ ಆಡಳಿತ, ಯೋಜನೆ, ನಿರ್ವಹಣೆ, ವಿವಿಧ ವಿಭಾಗಗಳ ಮೇಲ್ವಿಚಾರಣೆ ಮಾಡುವುದರ ಜತೆಗೆ ಒಂದಕ್ಕಿಂತ ಹೆಚ್ಚು ಪಾಲಿಕೆಗಳನ್ನು ರಚಿಸಲಿದೆ. ಈ ಮೂಲಕ ಮತ್ತಷ್ಟು ಪಾರದರ್ಶಕ, ಬದ್ಧತೆ ಮೂಲಕ ನಿರ್ವಹಣೆ ನಗರವನ್ನು ನಿರ್ವಹಿಸಲಾಗುತ್ತದೆ. ಬೆಂಗಳೂರು ಪುನರ್‌ ರಚನಾ ಸಮಿತಿಯನ್ನು ಇನ್ನು ಮುಂದೆ ಬ್ರ್ಯಾಂಡ್‌ ಬೆಂಗಳೂರು ಸಮಿತಿ ಎಂದು ಕರೆಯಲಾಗುತ್ತದೆ.

ಜಿಬಿಎ ರಚನೆ ಹೇಗಿರಲಿದೆ?

ಮುಖ್ಯಮಂತ್ರಿಗಳು ಜಿಬಿಎ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಉಸ್ತುವಾರಿ ಸಚಿವರು ಅಥವಾ ಉಪ ಮುಖ್ಯಮಂತ್ರಿಗಳು ಉಪಾಧ್ಯಕ್ಷರಾಗಿರುತ್ತಾರೆ. ನಗರ ಯೋಜನೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ಚುನಾವಣೆ ನಡೆಯುವವರೆಗೆ ಯಾವುದೇ ಅಡಚಣೆ ಇಲ್ಲದೆ ಸುಗಮ ಆಡಳಿತ ನಡೆಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಆರ್‌ ಸಿಎಲ್‌, ಬಿಎಂಟಿಸಿ ಸಂಸ್ಥೆಗಳು ಜಿಬಿಎ ಭಾಗವಾಗಿರಲಿವೆ. ಈ ಎಲ್ಲ ಸಂಸ್ಥೆಗಳೂ ಸಮನ್ವಯದಿಂದ ಕಾರ್ಯ ನಿರ್ವಹಿಸಲಿವೆ.

ಬಿಬಿಎಂಪಿ ಎಷ್ಟು ಪಾಲಿಕೆಗಳಾಗಲಿದೆ?

ಜಿಬಿಎ ಮುಖ್ಯ ಉದ್ದೇಶವೇ ಬೆಂಗಳೂರು ನಗರವನ್ನು ಹಲವು ಪಾಲಿಕೆಗಳನ್ನಾಗಿ ರಚಿಸುವುದು. ಈ ಕಾಯಿದೆಯು 7 ಪಾಲಿಕೆಗಳವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸುತ್ತದೆಯಾದರೂ ಪ್ರಸ್ತುತ 3 ಇಲ್ಲವೇ 5 ಪಾಲಿಕೆಗಳು ಮಾತ್ರ ರಚನೆಯಾಗಲಿವೆ. ಪ್ರತಿ ಪಾಲಿಕೆಯೂ ತನ್ನ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ನಿರ್ವಹಣೆ ಮಾಡಲಿದೆ. ಚರಂಡಿ, ರಸ್ತೆ, ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯದ ಜವಬ್ಧಾರಿ ಹೊರಲಿದೆ.

ಹೊಸ ಪಾಲಿಕೆಗಳಿಗೆ ಜಿಬಿಎಗೆ ಮಾರ್ಗದರ್ಶನ ಮಾಡಲಿದೆ. ಲಂಡನ್‌, ನ್ಯೂಯಾರ್ಕ್‌ ಮೊದಲಾದ ನಗರಗಳಲ್ಲಿರುವಂತೆ ಕೇಂದ್ರ ಪ್ರಾಧಿಕಾರದ ಅಡಿಯಲ್ಲಿ ಉಳಿದ ಪಾಲಿಕೆಗಳು ಕರ್ತವ್ಯ ನಿರ್ವಹಿಸುವ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಆಡಳಿತವನ್ನು ಜನಸ್ನೇಹಿ, ಜವಾಬ್ದಾರಿ ಮತ್ತು ಹೊಸ ಕಾಯಕಲ್ಪ ನೀಡುವುದು ಜಿಬಿಎ ಉದ್ದೇಶ.

ಬಿಬಿಎಂಪಿ ಜಿಬಿಎ ಆಗಲು ಕಾರಣಗಳೇನು?

ಯಾವುದೇ ಅಡೆತಡೆ, ಅಡಚಣೆ ಇಲ್ಲದೆ ಕಸ ಸಂಗ್ರಹದಿಂದ ಹಿಡಿದು ಬೀದಿ ದೀಪ ನಿರ್ವಹಣೆ, ನೀರು ಸರಬರಾಜು ಒದಗಿಸುವುದೇ ಆಗಿದೆ. ಜತೆಗೆ ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣದ ಕನಸು ಹೊತ್ತಿರುವ ರಾಜ್ಯ ಸರ್ಕಾರ ಡಿಜಿಟಲ್‌ ವೇದಿಕೆಗಳ ಅಡಿಯಲ್ಲಿ ಕೇಂದ್ರೀಕೃತ ಸೇವೆಗಳು, ದೂರುಗಳ ಸ್ವೀಕಾರ ಮತ್ತು ನಿರ್ವಹಣೆ ಮಾಡಲಿದೆ.

ಜಿಬಿಎಗೆ ಪ್ರತಿಕ್ರಿಯೆ ಹೇಗಿದೆ?

ಜಿಬಿಎ ರಚನೆಗೆ ಸ್ವಾಗತ ಮತ್ತು ಟೀಕೆಗಳ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಗತಿಕ ನಗರ ಬೆಂಗಳೂರಿಗೆ ಕಾಯಕಲ್ಪ ನೀಡಲು ಜಿಬಿಎ ಅವಶ್ಯಕತೆ ಇತ್ತು ಎಂದು ಪ್ರತಿಪಾದಿಸಿದರೆ ವಿಪಕ್ಷ ಬಿಜೆಪಿ ಅಧಿಕಾರಿಗಳೇ ಮೇಲುಗೈ ಆಗಲಿದ್ದಾರೆ. ತೆರಿಗೆ ಹೆಚ್ಚಳವಾಗುತ್ತದೆ. ಅಧಿಕಾರ ಕೇಂದ್ರೀಕೃತವಾಗುತ್ತದೆ. ಜನಪ್ರತಿನಿಧಿಗಳಿಗೆ ಅಧಿಕಾರವೇ ಇರುವುದಿಲ್ಲ ಎಂದು ಟೀಕಿಸಿದೆ.

ವರದಿ: ಎಚ್.‌ ಮಾರುತಿ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in