ಬೆಂಗಳೂರಿಗರೇ ಗಮನಿಸಿ, ಕಸ ವಿಲೇವಾರಿಗಾಗಿ ಬಿಬಿಎಂಪಿಗೆ ಮಾಸಿಕ ಶುಲ್ಕ 400 ರೂ ಭರಿಸಲು ಸಜ್ಜಾಗಿ; ಸರ್ಕಾರದ ಒಪ್ಪಿಗೆ ಸಿಗುವುದಷ್ಟೆ ಬಾಕಿ
ಬೆಂಗಳೂರಿಗರೇ, ಕಸ ವಿಲೇವಾರಿಗೆ ಮಾಸಿಕ ಶುಲ್ಕ ಪಾವತಿಸುವುದಕ್ಕೆ ಸಜ್ಜಾಗಿ. ಹೌದು, ಬೆಂಗಳೂರಲ್ಲಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ 400 ರೂ ವಿಧಿಸಲು ಸಿದ್ಧತೆ ನಡೆದಿದೆ. ಸರ್ಕಾರದ ಒಪ್ಪಿಗೆಗೆ ಬಿಬಿಎಂಪಿ ಕಾಯುತ್ತಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹದ ಕೆಲಸಕ್ಕೆ ಮುಂದಿನ ವರ್ಷದಿಂದ ಅಂದರೆ 2025ರಿಂದ ತಿಂಗಳಿಗೆ 200 ರೂಪಾಯಿಯಿಂದ 400 ರೂಪಾಯಿ ತನಕ ಶುಲ್ಕ ಪಾವತಿಸಬೇಕಾಗಬಹುದು. ಈ ಸಂಬಂಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣ ಲಿಮಿಟೆಡ್ ಪ್ರಸ್ತಾವನೆ ಸಿದ್ಧಪಡಿಸಿ ಬಿಬಿಎಂಪಿಗೆ ಸಲ್ಲಿಸಿದೆ. ಬಿಬಿಎಂಪಿ ಇದನ್ನು ಸರ್ಕಾರದ ಮುಂದಿಟ್ಟಿದ್ದು, ಅನುಮತಿವಾಗಿ ಕಾಯುತ್ತಿದೆ. ಇದರ ಮೂಲಕ ವಾರ್ಷಿಕ 100 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಸದ್ಯ ಇದು ಪ್ರಸ್ತಾವನೆ ಹಂತದಲ್ಲಿದೆ. 2025-26ನೇ ಆರ್ಥಿಕ ವರ್ಷದಿಂದ ಈ ಮಾದರಿ ಶುಲ್ಕವನ್ನು 46 ಲಕ್ಷ ಮನೆಗಳಿಂದ ಸಂಗ್ರಹ ಮಾಡಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ. ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಈ ಮಾದರಿ ಶುಲ್ಕಕ್ಕೆ ಈಗ ಅಂತಿಮ ರೂಪ ನೀಡಿ ಪ್ರಸ್ತಾವನೆ ತಯಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಪ್ರಸ್ತಾವನೆಯಲ್ಲಿ ಏನಿದೆ
ಮನೆಯಿಂದ ಕಸ ಸಂಗ್ರಹ ಮಾಡಲು ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಜನರು ಆಸ್ತಿ ತೆರಿಗೆ ಪಾವತಿ ಮಾಡುವಾಗಲೇ ಕಸ ನಿರ್ವಹಣಾ ಶುಲ್ಕವನ್ನು ಸೇರಿಸಿ ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದ್ದು, ಸರ್ಕಾರ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ.
ಬೆಂಗಳೂರು ನಗರದ ಶಾಸಕರು ಪ್ರತಿ ಮನೆಗೆ 200 ರೂ. ಶುಲ್ಕವನ್ನು ಸಂಗ್ರಹ ಮಾಡಬಹುದು ಎಂದು ಕಳೆದ ವರ್ಷ ಸಲಹೆಗಳನ್ನು ನೀಡಿದ್ದರು. ಇವನ್ನೆಲ್ಲ ಪರಿಗಣಿಸಿ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಅಂತಿಮ ಒಪ್ಪಿಗೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಕಂಪನಿ ಇದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಡಿ. ಕೆ. ಶಿವಕುಮಾರ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ವರದಿ ಹೆಳಿದೆ.
ಆರು ವಿಭಾಗಗಳಲ್ಲಿ ಕಸ ಸಂಗ್ರಹ ಶುಲ್ಕ ಮತ್ತು ಆಸ್ತಿ ತೆರಿಗೆ ಜೊತೆ ಸಂಗ್ರಹ
ಕಸ ಸಂಗ್ರಹ ಶುಲ್ಕ ನಿಗದಿಗೆ ಒಟ್ಟು 6 ವಿಭಾಗ ಮಾಡಲಾಗಿದೆ. ಪ್ರತಿ ತಿಂಗಳು 200 ರೂಪಾಯಿಯಿಂದ 400 ರೂಪಾಯಿ ತನಕ ಶುಲ್ಕವನ್ನು ಸಂಗ್ರಹ ಮಾಡುವ ಪ್ರಸ್ತಾವನೆ ಇದಾಗಿದೆ. ಆದರೆ ಹೋಟೆಲ್, ವಾಣಿಜ್ಯ ಸಂಕೀರ್ಣ ಇವುಗಳಿಗೆ ಯಾವ ಮಾದರಿಯಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಇಲ್ಲ. ಕೇವಲ ಮನೆಯಿಂದ ಶುಲ್ಕ ಸಂಗ್ರಹ ಮಾಡುವ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವಿವರ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
ಬಿಬಿಎಂಪಿ ಕಸ ಸಂಗ್ರಹ ಶುಲ್ಕ ಸಂಗ್ರಹ ಮಾಡಲು ಘನ ತ್ಯಾಜ್ಯ ನಿರ್ವಹಣಾ ಬೈಲಾ 2019 ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020 ರ ಪ್ರಕಾರ ಕಾನೂನಿನ ಅಡೆತಡೆಗಳಿವೆ. ಹಸಿರು ನ್ಯಾಯಾಧೀಕರಣದ ಆದೇಶವನ್ನು ಪಾಲಿಕೆ ಪಾಲನೆ ಮಾಡಬೇಕಿದೆ. ಆದ್ದರಿಂದ ಇದನ್ನು ಆಸ್ತಿ ತೆರಿಗೆ ಜೊತೆಯೇ ಸೇರಿಸಿ ಸಂಗ್ರಹಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈಗ ದಂಡ ವಿಧಿಸುತ್ತಿರುವ ಕಾರಣ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಕಡಿಮೆಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವಂತೆ ಇಲ್ಲ. ವಾಹನಗಳಿಗೆ ನೀಡಬೇಕು. ತ್ಯಾಜ್ಯ ಶುಲ್ಕವನ್ನು ಆಸ್ತಿ ತೆರಿಗೆ ಜೊತೆಗೆ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾಗಿ ವರದಿ ಹೇಳಿದೆ.