ತ್ಯಾಜ್ಯ ನಿರ್ವಹಣೆಗೆ ಖಾಸಗಿ ಭೂಮಿ ಖರೀದಿಸಲು ಬಿಬಿಎಂಪಿ ನಿರ್ಧಾರ; ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ
ಕನ್ನಡ ಸುದ್ದಿ  /  ಕರ್ನಾಟಕ  /  ತ್ಯಾಜ್ಯ ನಿರ್ವಹಣೆಗೆ ಖಾಸಗಿ ಭೂಮಿ ಖರೀದಿಸಲು ಬಿಬಿಎಂಪಿ ನಿರ್ಧಾರ; ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ

ತ್ಯಾಜ್ಯ ನಿರ್ವಹಣೆಗೆ ಖಾಸಗಿ ಭೂಮಿ ಖರೀದಿಸಲು ಬಿಬಿಎಂಪಿ ನಿರ್ಧಾರ; ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ

ತ್ಯಾಜ್ಯ ನಿರ್ವಹಣೆಯ ಸಲುವಾಗಿ ಬಿಬಿಎಂಪಿ ಖಾಸಗಿ ಭೂಮಿ ಖರೀದಿಸಲು ನಿರ್ಧರಿಸಿದೆ. ದೊಡ್ಡಬಳ್ಳಾಪುರದಲ್ಲಿ ಮೊದಲ ಕಸ ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದ್ದು, ಇನ್ನೂ ಮೂರು ಘಟಕಗಳಿಗೆ ಖಾಸಗಿ ಭೂಮಿಯ ಹುಡುಕಾಟ ನಡೆದಿದೆ. (ವರದಿ: ಎಚ್.ಮಾರುತಿ)

ತ್ಯಾಜ್ಯ ನಿರ್ವಹಣೆಯ ಸಲುವಾಗಿ ಬಿಬಿಎಂಪಿ ಖಾಸಗಿ ಭೂಮಿ ಖರೀದಿಸಲು ನಿರ್ಧರಿಸಿದೆ
ತ್ಯಾಜ್ಯ ನಿರ್ವಹಣೆಯ ಸಲುವಾಗಿ ಬಿಬಿಎಂಪಿ ಖಾಸಗಿ ಭೂಮಿ ಖರೀದಿಸಲು ನಿರ್ಧರಿಸಿದೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತ್ಯಾಜ್ಯ ನಿರ್ವಹಣೆಗೆ ಬೆಂಗಳೂರಿನಲ್ಲಿ ಭೂಮಿ ಇಲ್ಲ. ಬೆಂಗಳೂರು ಹೊರವಲಯದಲ್ಲಿ ನಿರ್ವಹಣೆ ಮಾಡೋಣ ಎಂದರೆ ನಿಮ್ಮ ಕಸವನ್ನು ತಂದು ನಮ್ಮ ಊರಿನಲ್ಲಿ ಏಕೆ ಸುರಿಯುತ್ತೀರಿ ಎಂದು ಸ್ಥಳೀಯರು ವಿರೋಧಿಸುತ್ತಾರೆ. ಅವರ ವಿರೋಧವೂ ಸಕಾರಣವಾಗಿದೆ. ಕಸದಿಂದ ರೋಗರುಜಿನಗಳು ಹೆಚ್ಚಾಗುವ ಭೀತಿ ಇದ್ದೇ ಇರುತ್ತದೆ.

ಈ ಸಮಸ್ಯೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿದೆ. ಖಾಸಗಿ ಕಂಪನಿಯಿಂದ ಭೂಮಿ ಖರೀದಿಸಿ ತ್ಯಾಜ್ಯ ನಿರ್ವಹಣೆ ಮಾಡಲು ನಿರ್ಧರಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಷರತ್ತುಬದ್ಧ ಅನುಮೋದನೆ ನೀಡಿದೆ. ಇದೇ ಮೊದಲ ಬಾರಿಗೆ ಬಿಬಿಎಂಪಿ ಖಾಸಗಿ ಒಡೆತನದ ಭೂಮಿ ಖರೀದಿಗೆ ಮುಂದಾಗಿದೆ.

ಈ ಭೂಮಿಯನ್ನು ಟೆರ್ರಾ ಫರ್ಮಾ ಬಯೋಟೆಕ್ನಾಲಜೀಸ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಿಂದ ಖರೀದಿಸಲು ಬಿಬಿಎಂಪಿ ಮುಂದಾಗಿದೆ. ಈ ಕಂಪನಿ ದೊಡ್ಡಬಳ್ಳಾಪುರ ತಾಲೂಕಿನ ಗುಂಡಲಹಳ್ಳಿಯಲ್ಲಿರುವ 38 ಎಕರೆ 18 ಗುಂಟೆ ಭೂಮಿಯನ್ನು ಹೊಂದಿದ್ದು ಈ ಭೂಮಿಯನ್ನು ಪಾಲಿಕೆ ಖರೀದಿ ಮಾಡಲಿದೆ. ಟೆರ್‍ರಾ ಫರ್ಮಾ ಬಯೋಟೆಕ್ನಾಲಜಿ ಲಿಮಿಟೆಡ್ ಕಂಪನಿಯು 15

ವರ್ಷಗಳ ಹಿಂದೆಯೇ, ತ್ಯಾಜ್ಯ ಸಂಸ್ಕರಣೆಗಾಗಿ ಬೆಂಗಳೂರು ನಗರ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಗ್ರಾಮಸ್ಥರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ 2015 ರಲ್ಲಿಯೇ ಈ ಯೋಜನೆ ಸ್ಥಗಿತಗೊಂಡಿತ್ತು.

ಈ ಭೂಮಿಗೆ ಪರಿಹಾರವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದೇ ಭಾಗದಲ್ಲಿ ಬಿಬಿಎಂಪಿ 134 ಎಕರೆಯಲ್ಲಿ ಸಮಗ್ರ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಲು ಉದ್ದೇಶಿಸಿದ್ದು ಟೆರ್ರಾ ಫರ್ಮಾದ 38 ಎಕರೆಯೂ ಈ ಯೋಜನೆಯ ಭಾಗವಾಗಿದೆ. ಇಲ್ಲಿ ಬೆಂಗಳೂರಿನ ಶೇ.25ರಷ್ಟು ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ.

ಈ ಯೋಜನೆಯ ಒಟ್ಟು ಭೂ ಪ್ರದೇಶದಲ್ಲಿ ಕಂದಾಯ ಇಲಾಖೆ 46 ಎಕರೆ ಎಕರೆ ಭೂಮಿಯ ಮಾಲೀಕತ್ವ ಹೊಂದಿದೆ. 27 ಎಕರೆ ಖರಾಬ್ ಭೂಮಿ ಇದೆ. 38 ಎಕರೆ ಟೆರ್ರಾ ಫರ್ಮಾದ ಸ್ವಾಮ್ಯದಲ್ಲಿದೆ

ಮತ್ತು 22 ಎಕರೆ ಖಾಸಗಿ ಸ್ವತ್ತಾಗಿದ್ದು, ಟೆರ್ರಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಸಂಬಂಧಪಟ್ಟಂತೆ ಟೆರ್ರಾ ಫರ್ಮಾ ಮತ್ತು ಬಿಬಿಎಂಪಿ 2008ರಲ್ಲಿಯೇ ಒಪ್ಪಂದ ಮಾಡಿಕೊಂಡಿದವು. ಸಂಸ್ಕರಣೆಗೊಂಡ ಪ್ರತಿ ಟನ್‌ ಕಸಕ್ಕೆ 66 ರೂ. ನೀಡಲು ಬಿಬಿಎಂಪಿ ಸಮ್ಮತಿಸಿತ್ತು. ಟೆರ್ರಾ ಕಂಪನಿಯು ಪ್ರತಿದಿನ 1,000 ಟನ್‌ ಕಸವನ್ನು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಿತ್ತು. ಆದರೆ ಸ್ಥಳೀಯರ ವಿರೋಧ

ವ್ಯಕ್ತವಾದ್ದರಿಂದ ಒಪ್ಪಂದದ ಅವಧಿ ಮುಗಿಯುವುದಕ್ಕೂ 5 ಮೊದಲೇ ಅಂದರೆ 2015 ರಲ್ಲೇ ಘಟಕವನ್ನು ಮುಚ್ಚಲಾಗಿತ್ತು. ಇದರಿಂದ ನಷ್ಟ ಅನುಭವಿಸುತ್ತಿದ್ದ ಟೆರ್ರಾ ಕಂಪನಿಗೆ ಆರ್ಥಿಕ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ಕಸ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಸರ್ಕಾರ ಉದ್ದೇಶಿಸಿದ್ದು ಮೊದಲನೆಯದ್ದು ದೊಡ್ಡಬಳ್ಳಾಪುರದಲ್ಲಿ ಆರಂಭವಾಗಲಿದೆ. ಉಳಿದ ಮೂರು ಘಟಕಗಳಿಗೆ ಮೂರು ದಿಕ್ಕುಗಳಲ್ಲಿ ಪ್ರತಿ ಘಟಕಕ್ಕೆ ಕನಿಷ್ಠ 100 ಎಕರೆ ಭೂಮಿಯ ಹುಡುಕಾಟ ನಡೆದಿದೆ. ಈ ವಿಷಯದಲ್ಲಿ ಬೆಂಗಳೂರು ಉಸ್ತುವಾರಿ ಹೊಂದಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿಶೇಷ ಆಸಕ್ತಿ ಹೊಂದಿದ್ದಾರೆ.

ವರದಿ: ಎಚ್.ಮಾರುತಿ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in