DK Shivakumar: 'ಮತಗಳನ್ನು ಕದಿಯುವ ಕಿಲಾಡಿಗಳ ಬಗ್ಗೆ ಎಚ್ಚರಿಕೆಯಿಂದಿರಿ' - ಬಿಜೆಪಿ ವಿರುದ್ಧ ಡಿಕೆಶಿ ಹೇಳಿದ್ದಿಷ್ಟು
"ನೀವು ಪಿಕ್ ಪಾಕೆಟ್ ಮಾಡುವವರನ್ನು ನೋಡಿದ್ದೀರಿ. ಚಿನ್ನ ಕದಿಯುವವರನ್ನು ನೋಡಿದ್ದೀರಿ, ಚಪ್ಪಲಿ ಕದಿಯುವವರನ್ನು ನೋಡಿದ್ದೀರಿ. ಆದರೆ ಈ ಮತಗಳನ್ನು ಕದಿಯುವ ಕಿಲಾಡಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದವರ ಮತಗಳನ್ನು ಕಳ್ಳತನ ಮಾಡಲು ಬಿಜೆಪಿ ಮುಂದಾಗಿದೆ" ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿಜಯನಗರ: "ನೀವು ಪಿಕ್ ಪಾಕೆಟ್ ಮಾಡುವವರನ್ನು ನೋಡಿದ್ದೀರಿ. ಚಿನ್ನ ಕದಿಯುವವರನ್ನು ನೋಡಿದ್ದೀರಿ, ಚಪ್ಪಲಿ ಕದಿಯುವವರನ್ನು ನೋಡಿದ್ದೀರಿ. ಆದರೆ ಈ ಮತಗಳನ್ನು ಕದಿಯುವ ಕಿಲಾಡಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದವರ ಮತಗಳನ್ನು ಕಳ್ಳತನ ಮಾಡಲು ಬಿಜೆಪಿ ಮುಂದಾಗಿದೆ. ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಹಕ್ಕು ಉಳಿಸಿ, ಮುಕ್ತವಾದ ಮತದಾನ ಆಗಬೇಕು ಎಂದು ನಾವು ಹೋರಾಟ ಮಾಡಿದ್ದೇವೆ. ಹೀಗಾಗಿ ನೀವು ಈ ಪ್ರಜಾಧ್ವನಿಗೆ ಆಶೀರ್ವಾದ ಮಾಡಿ, ಕಾಂಗ್ರೆಸ್ ಸರ್ಕಾರವನ್ನು ತಂದೇ ತರುವ ವಿಶ್ವಾಸ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಹೊಸಪೇಟೆಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಕರ್ನಾಟಕ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯಗಳ ಪ್ರತಿಧ್ವನಿಯೇ ಈ ಪ್ರಜಾಧ್ವನಿ. ಜನಸಾಮಾನ್ಯರ ಸಂಕಷ್ಟಕ್ಕೆ ಪರಿಹಾರ ನೀಡುವುದೇ ಪ್ರಜಾಧ್ವನಿ. ಕಾಂಗ್ರೆಸ್ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ, ಅಭಿವೃದ್ಧಿಶೀಲ ಮಾಡಲು ಶ್ರಮಿಸಿದೆ. ದೇಶಕ್ಕೆ ಪ್ರಜಾಪ್ರಭುತ್ವ, ಸಂವಿಧಾನವನ್ನು ನೀಡಿ ಎಲ್ಲರನ್ನು ಕಾಪಾಡಿಕೊಂಡು ಬಂದಿದೆ ಎಂದರು.
ಇಂದಿರಾಗಾಂಧಿ ಅವರು ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ವಿಜಯನಗರ ಸ್ಟೀಲ್ ಕಾರ್ಖಾನೆಯನ್ನು ಆರಂಭಿಸಿದರು. ಸೋನಿಯಾ ಗಾಂಧಿ ಅವರು ಇಲ್ಲಿನ ಸಂಸದರಾಗಿ ಆಯ್ಕೆಯಾದಾಗ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಮಾಡಿದರು. ಕಾಂಗ್ರೆಸ್ ದೇಶದಲ್ಲಿ ಇಂತಹ ಅನೇಕ ಮಾದರಿ ಕೆಲಸ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಖಾಸಗಿ, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಸೃಷ್ಟಿಸಿ, ರಾಜ್ಯದ ಜನರ ಬದುಕು ಹಸನಾಗಿಸಲು ಅನೇಕ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಕಾಂಗ್ರೆಸ್ ನಿರ್ಮಿಸಿರುವ ಸಂಸ್ಥೆಗಳನ್ನು ಬಿಜೆಪಿ ಖಾಸಗಿಯವರಿಗೆ ಮಾರಾಟ ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ರಾಷ್ಟ್ರೀಕರಣ ಮಾಡಿದರೆ, ಬಿಜೆಪಿ ಖಾಸಗೀಕರಣ ಮಾಡುತ್ತಿದೆ ಎಂದು ಆರೋಪಿಸಿದರು.
ಡಿಕೆಶಿ ಭಾಷಣದ ಸಾರಾಂಶ
ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದೆಯಾ ಎಂಬ ಪ್ರಶ್ನೆಯನ್ನು ಎಲ್ಲ ಮತದಾರರಿಗೆ ಕೇಳಬೇಕಿದೆ. ಹತ್ತು ದಿನಗಳ ಹಿಂದೆ ಕರ್ಲಾಣ ಕರ್ನಾಟಕ ಭಾಗದ ಶಾಸಕರೆಲ್ಲರೂ ಸೇರಿ ಬಿಜೆಪಿ ಸರ್ಕಾರದ ಪಾಪದ ಪುರಾಣ ಪಟ್ಟಿಯನ್ನು ಬಿಡುಗಡೆ ಮಾಡಿದೆವು. ಈ ಬಗ್ಗೆ ಬಿಜೆಪಿಯ ಒಬ್ಬ ಮಂತ್ರಿ, ಮುಖ್ಯಮಂತ್ರಿ ಉತ್ತರ ನೀಡಲು ಆಗಿಲ್ಲ. ಬಿಜೆಪಿ ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ 550 ಅನ್ನು ಈಡೇರಿಸಿಲ್ಲ. ಈ ಬಗ್ಗೆ ನಾವು ದಿನನಿತ್ಯ ಪ್ರಶ್ನೆ ಹಾಕಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂದು ಕೇಳುತ್ತಿದ್ದು, ಸರ್ಕಾರದಿಂದ ಒಂದೇ ಒಂದು ಉತ್ತರವೂ ಬಂದಿಲ್ಲ.
ಬಿಜೆಪಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿತ್ತು. ನಿಮ್ಮ ಆದಾಯ ಡಬಲ್ ಆಗಿದೆಯಾ? ನಿಮ್ಮ ಖಾತೆಗೆ 15 ಲಕ್ಷ ರೂ. ಹಣ ಬಂದಿದೆಯಾ? ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು, ನಿಮ್ಮ ಕುಟುಂಬದವರಿಗೆ ಯಾರಿಗಾಗದರೂ ಕೆಲಸ ಸಿಕ್ಕಿದೆಯಾ? ಯಾವುದೂ ಇಲ್ಲ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಹುದ್ದೆಗೂ ಲಂಚ ಪಡೆಯುತ್ತಿದ್ದಾರೆ. ನಾವು ಅದನ್ನು ಬಯಲಿಗೆಳೆದೆವು. ಅಧಿಕಾರಿಗಳ ಸಮೇತ ದುಡ್ಡು ಕೊಟ್ಟವರು ಹಾಗೂ ಪಡೆದವರು ಈಗ ಜೈಲಿನಲ್ಲಿದ್ದಾರೆ. ಈ ದುಡ್ಡಿಗಾಗಿ ಬ್ರೋಕರ್ ಕೆಲಸ ಮಾಡಿದ ಶಾಸಕರು ಹಾಗೂ ಸಚಿವರುಗಳು ಮಾತ್ರ ಹೊರಗಡೆ ಇದ್ದಾರೆ. ಅವರು ಬ್ರೋಕರ್ ಕೆಲಸ ಮಾಡಿರುವ ಬಗ್ಗೆ ಟಿವಿ ಹಾಗೂ ಪತ್ರಿಕೆಗಗಳಲ್ಲಿ ಆಡಿಯೋ ಟೇಪ್ ವರದಿ ಆಗಿವೆ.
ಲಂಚ ಪ್ರಕರಣದಲ್ಲಿ ಈಶ್ವರಪ್ಪ ಸೇರಿ ಯಾವುದೇ ಮಂತ್ರಿಗಳ, ಕನಕಗಿರಿ ಶಾಸಕನ ಹೆಸರು ಬಂದರೂ ಎಲ್ಲ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗುತ್ತಿದೆ. ಇದೊಂದು ಬಿ ರಿಪೋರ್ಟ್ ಸರ್ಕಾರ. ಅಕ್ರಮ, ನೇಮಕಾತಿ, ಗುತ್ತಿಗೆ ಕಮಿಷನ್, ಅಂದಾಜು, ಸಂಸದರು ಹೇಳಿರುವಂತೆ ಕುಲಪತಿ ಹುದ್ದೆಗೆ ಕಾಸು ಸೇರಿದಂತೆ ಎಲ್ಲ ಪ್ರಕರಣದಲ್ಲೂ ಕೇಸ್ ದಾಖಲಿಸಿ ನಾವು ಮರು ತನಿಖೆ ಮಾಡುತ್ತೇವೆ.
ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ನೀವು ನೋವು ನಮಗೆ ಅರ್ಥವಾಗಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾವು ಈ ಯಾತ್ರೆ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ. ಗಾಂಧಿಜೀ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿಯಿಂದ ಆರಂಭಿಸಿದ್ದೇವೆ. ಅಲ್ಲಿ ನಾವು ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಪ್ರಕಟಿಸಿದೆವು. ಗೃಹಜ್ಯೋತಿ ಯೋಜನೆ ಮೂಲಕ ನಿಮ್ಮ ಮನೆಯಲ್ಲಿ ಬೆಳಕು, ಉದ್ಯೋಗ, ಉತ್ತಮ ಬದುಕು ನೀಡಲು ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ಬದ್ಧರಾಗಿದ್ದೇವೆ.
ಈಗ ಪ್ರತಿ ಯುನಿಟ್ ವಿದ್ಯುತ್ ಬೆಲೆ 7.20 ಆಗಿದ್ದು, ನಮ್ಮ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ಸುಮಾರು 1500 ರೂ. ವೆಚ್ಚ ಉಳಿಯುತ್ತದೆ. ವರ್ಷಕ್ಕೆ 18 ಸಾವಿರ ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆಯಿಂದ ಮನೆ ನಡೆಸಲು ಆಗುತ್ತಿಲ್ಲ. ಪ್ರತಿನಿತ್ಯ ನಿಮ್ಮೆಲ್ಲರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ. ಅಡುಗೆ ಎಣ್ಣೆ 90-250 ರೂ. ಹೆಚ್ಚಳ ಆಗಿದೆ. ಕಬ್ಬಿಣ್, ಸೀಮೆಂಟ್, ಹಾಲು, ಮೊಸರಿನ ಮೇಲೆ ಜಿಎಸ್ ಟಿ ಹಾಕಿ ಎಲ್ಲ ವಸ್ತುಗಳ ಬೆಲೆ ಹೆಚ್ಚಿಸಿದ್ದಾರೆ.
ಮಹಿಳೆಯರು ನಮ್ಮಿಂದ ಏನು ಬಯಸುತ್ತಿದ್ದಾರೆ ಎಂದು ಕೇಳಿದೆವು. ಸುಮಾರು 6 ಸಾವಿರ ಮಹಿಳೆಯರು ಅನೇಕ ಸಲಹೆ ನೀಡಿದ್ದಾರೆ. ಈ ಬಗ್ಗೆ ನಾವೆಲ್ಲ ಚರ್ಚೆ ಮಾಡಿ ಪ್ರಿಯಾಂಕಾ ಗಾಂಧಿ ಅವರಿಗೆ ತಿಳಿಸಿದೆವು. ಅವರು ಹಿಮಾಚಲ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಅಲ್ಲಿ ಅವರು ಆ ಭಾಗದ ಜನರಿಗೆ 1500 ಪ್ರತಿ ತಿಂಗಳು ನೀಡುವುದಾಗಿ ಮಾತು ನೀಡಿದ್ದರು. ನಮ್ಮ ರಾಜ್ಯ ಆರ್ಥಿಕವಾಗಿ ಬಲವಾಗಿದ್ದು, ನಾವು ಪ್ರಿಯಾಂಕಾ ಗಾಂಧಿ ಅವರ ಜತೆ ಚರ್ಚೆ ಮಾಡಿ ಪ್ರತಿ ಮನೆಯೊಡತಿಗೆ ಪ್ರತಿ ವರ್ಷ 24 ಸಾವಿರ ಹಣವನ್ನು ತಿಂಗಳಿಗೆ ಎರಡು ಸಾವಿರ ರೂ. ನಂತೆ ನೀಡಲಿದ್ದೆವೆ.
ನಾವು ಈ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಅವರು ಜಾಹೀರಾತು ನೀಡುತ್ತಿದ್ದಾರೆ. ಸಂಕ್ರಾಂತಿ ಮುಗಿದ ಮೇಲೆ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ. ಜತೆಗೆ ನಾವು ಮಹಿಳೆಯರಿಗೆ ಹೊಸ ಯೋಜನೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಿಮಗೆ ಕಳೆದ ಮೂರುವರೆ ವರ್ಷಗಳಿಂದ ಅಧಿಕಾರ ಇತ್ತಲ್ಲ ಆಗ ಯಾಕೆ ಯಾವುದೇ ಯೋಜನೆ ನೀಡಲಿಲ್ಲ?
ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನನ್ನೂ ಮಾಡದೆ, ಅಧಿಕಾರ ಹೋಗುವಾಗ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನು 60 ದಿನಗಳ ನಂತರ ನಮ್ಮ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇಲ್ಲಿರುವ ಶಾಸಕರು ವಿಧಾನಸೌಧದ ಮೂರನೇ ಮಹಡಿಗೆ ಹೋಗುತ್ತಾರೆ. ಇನ್ನೇನಿದ್ದರೂ ನಿಮ್ಮ ಓಡಾಟ ವಿಧಾನಸೌಧದಲ್ಲಿ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅವರ ಶ್ರಮದಿಂದ ಕಾಂಗ್ರೆಸ್ ಪಕ್ಷ 371ಜೆ ಮೂಲಕ ವಿಶೇಷ ಸ್ಥಾನಮಾನ ನೀಡಿ ನಿಮಗೆ ಶಕ್ತಿ ನೀಡಿದೆ. ಆ ಮೂಲಕ ನಿಮ್ಮ ಜೀವನದಲ್ಲಿ ಬದಲಾವಣೆ ತಂದಿದ್ದೇವೆ. ಬಿಜೆಪಿ ಸರ್ಕಾರದಿಂದ ಇದು ಸಾಧ್ಯವೇ? ಇದು ಕಾಂಗ್ರೆಸ್ ಸರ್ಕಾರದಲ್ಲಿ, ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಆಯಿತು. ಇದು ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಕೊಟ್ಟಿರುವ ಭಾಗ್ಯ. ಇದನ್ನು ನೀವು ಉಳಿಸಿಕೊಳ್ಳಬೇಕು.
ಇಂಧನ ಸಚಿವರು ಹಾಗೂ ಸಚಿವ ಅಶೋಕ್ ಅವರು ಡಿ.ಕೆ. ಶಿವಕುಮಾರ್ ಇಂಧನ ಸಚಿವನಾಗಿದ್ದಾಗ ಏನು ಮಾಡಿದ್ದ ಎಂದು ಕೇಳಿದ್ದಾರೆ. ನಾನು ಏನು ಮಾಡಿದ್ದೇನೆ ಎಂದು ನಿಮ್ಮ ಕೇಂದ್ರದ ಇಂಧನ ಸಚಿವರನ್ನು ಕೇಳಿ. ಈ ದೇಶದ ಪ್ರಧಾನಿಗಳು ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಪ್ರಶಸ್ತಿ ಪತ್ರ ನೀಡಿರುವ ಚಿತ್ರವನ್ನು ನಾನು ಬಿಡುಗಡೆ ಮಾಡಲು ಸಿದ್ಧ. 10 ಸಾವಿರ ಮೆ.ವ್ಯಾಟ್ ಪವರ್ ಇತ್ತು. ಸಿದ್ದರಾಮಯ್ಯ ಅವರು ನನ್ನನ್ನು ಸಚಿವನನ್ನಾಗಿ ಮಾಡಿದ ನಂತರ ಅಧಿಕಾರದಿಂದ ಕೆಳಗಿಳಿಯುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು 21 ಸಾವಿರ ಮೆ.ವ್ಯಾ ಗೆ ಏರಿಸಿ ದೇಶಕ್ಕೆ ಮಾದರಿ ಕೆಲಸ ಮಾಡಿದ್ದೆ. ನಾನು ಎಷ್ಟು ದಿನ ಬದುಕಿರುತ್ತೇನೆ ಗೊತ್ತಿಲ್ಲ. ಆದರೆ ದೇಶದ ಇತಿಹಾಸದಲ್ಲಿ ಒಂದೇ ಜಾಗದಲ್ಲಿ 14 ಸಾವಿರ ಎಕರೆಯಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಮಾಡಿ ಇತಿಹಾಸ ನಿರ್ಮಿಸಿದ್ದೇನೆ.
ಪ್ರತಿ ತಾಲೂಕಿಗೂ 20 ಮೆ.ವ್ಯಾ ಉತ್ಪಾದನೆ ಮಾಡಬಹುದು. ನನಗೆ ವಿದ್ಯುತ್ ಬಗ್ಗೆ ಏನು ಗೊತ್ತು ಎಂದು ಕೇಳುವ ಅಶೋಕ್ ಅವರೇ, ಸುನೀಲ್ ಅವರೇ, ನೀವು ಬೇಕಾದರೂ ಬನ್ನಿ, ನಿಮ್ಮ ಮುಖ್ಯಮಂತ್ರಿಯನ್ನಾದರೂ ಕಳಿಸಿ, ನಾವು ಈ ಯೋಜನೆಗಳಿಗೆ ಹೇಗೆ ಹಣ ತರುತ್ತೇವೆ, ಹೇಗೆ ನೀಡುತ್ತೇವೆ, ಬಡವರ ಮನೆ ಬೆಳಕನ್ನು ಹೇಗೆ ಹಚ್ಚುತ್ತೇವೆ ಎಂದು ಚರ್ಚೆ ಮಾಡಲು ಸಿದ್ಧನಿದ್ದೇನೆ.
ಪ್ರಿಯಾಂಕಾ ಗಾಂಧಿ ಅವರು ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಭತ್ಯೆ ನೀಡುವ ಯೋಜನೆ ಘೋಷಣೆ ಮಾಡಿದ್ದಕ್ಕೆ ವ್ಯಂಗ್ಯ ಮಾಡುತ್ತೀರಲ್ಲಾ, ಮುಖ್ಯಮಂತ್ರಿಗಳೇ ನೀವು ಬಜೆಟ್ ನಲ್ಲಿ ಮಹಿಳೆಯರಿಗೆ ಕಾರ್ಯಕ್ರಮ ನೀಡುತ್ತೀರಿ ಎಂದು ಹೇಳುತ್ತೀರಿ. ಅದನ್ನು ಹೇಗೆ ನೀಡುತ್ತೀರಿ? ನಿಮಗೆ ತಲೆ ಇರುವಂತೆ ನಮಗೆ ಇಲ್ಲವೇ? ಈ ಜನ ನಮ್ಮನ್ನು ಅಧಿಕಾರಕ್ಕೆ ತಂದ ಮೊದಲ ತಿಂಗಳಲ್ಲೇ ಮಹಿಳೆಯರ ಖಾತೆಗೆ ಹಣ ಹಾಕಿ ನಿಮ್ಮ ತಲೆಗಿಂತ ನಮ್ಮ ತಲೆ ಚೆನ್ನಾಗಿ ಓಡುತ್ತದೆ ಎಂದು ತೋರಿಸುತ್ತೇವೆ.
ಬಿಜೆಪಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ನಾಯಕರ ಜತೆ ಎಲ್ಲಿ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ಈ ಡಿ.ಕೆ. ಶಿವಕುಮಾರ್ ಸಿದ್ಧನಿದ್ದಾನೆ ಎಂದು ಸವಾಲೆಸೆದರು.