Belagavi assembly session: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ
ಕನ್ನಡ ಸುದ್ದಿ  /  ಕರ್ನಾಟಕ  /   Belagavi Assembly Session: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ

Belagavi assembly session: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ

ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಗಮನಸೆಳೆದಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ

ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ. 15 ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7ಕ್ಕೆ ಹೆಚ್ಚಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಗಮನಸೆಳೆದಿದೆ. ಈ ಭಾಷಣದಲ್ಲಿ ಅವರು ಮೀಸಲಾತಿಯ ಕುರಿತು ಅನೇಕ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಈ ಮುಂದಿನಂತೆ ಇವೆ.

ಮೀಸಲಾತಿ ನಡೆದು ಬಂದ ಹಾದಿ

- ಪರಿಶಿಷ್ಟ ಜಾತಿಗಳಿಗೆ ಈ ಮೊದಲು 15% ಮತ್ತು ಪರಿಶಿಷ್ಟ ವರ್ಗಕ್ಕೆ 3% ಮೀಸಲಾತಿ ಇತ್ತು. 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆ 17.15% ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆ 6.95%. ಎರಡೂ ಒಟ್ಟು ಸೇರಿಸಿ 24.10% ಜನಸಂಖ್ಯೆ ಇದೆ. 1950ರಿಂದ ಸಂವಿಧಾನ ಜಾರಿಗೆ ಬಂದ ದಿನದಿಂದ ಈ ವರ್ಗಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದಿದೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂಬುದನ್ನು ನಾವೆಲ್ಲ ಒಪ್ಪಿಕೊಂಡು ನೀಡುತ್ತಾ ಬಂದಿದ್ದೇವೆ. ಈ ಕಾರಣಕ್ಕಾಗಿಯೇ ನಾನು ಅವರ ಜನಸಂಖ್ಯೆಗೆ ಅನುಗುಣವಾಗಿ ಖರ್ಚು ಮಾಡಬೇಕು ಎಂದು ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಯನ್ನು ಬೆಳಗಾವಿ ಅಧಿವೇಶನದಲ್ಲಿ ಕಾನೂನು ಜಾರಿಗೆ ತಂದಿದ್ದೆ. ಈ ಕಾನೂನು ತಂದ ನಂತರ ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ರೂ.30,000 ಆಗಿತ್ತು, ಅಂದಿನ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ. ಈಗ ಈ ಯೋಜನೆಗೆ ನೀಡಿರುವ ಅನುದಾನ 28.324 ಕೋಟಿ ಇದೆ. ಈಗಿನ ಬಜೆಟ್‌ ಗಾತ್ರ 2,65,720 ಕೋಟಿ. ಬಜೆಟ್‌ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಅನುದಾನವೂ ಹೆಚ್ಚಾಗಬೇಕಿತ್ತು. 2008ರಿಂದ 2013ರ ವೆರೆಗೆ ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಗೆ ಖರ್ಚಾಗಿದ್ದ ಹಣ 22,000 ಕೋಟಿ. ಕಾನೂನನ್ನು ಜಾರಿಗೆ ತಂದ ಮೇಲೆ ಅದು 88,000 ಕೋಟಿಗೆ ಹೆಚ್ಚಾಯಿತು.

- ಸ್ವಾತಂತ್ರ್ಯ ನಂತರದಿಂದ ನಮ್ಮ ಸರ್ಕಾರದ ಕೊನೆಯ ಬಜೆಟ್‌ ವೇಳೆಗೆ ಇದ್ದ ಒಟ್ಟು ಸಾಲ 2,42,000 ಕೋಟಿ. ಈಗ ಇರುವ ಒಟ್ಟು ಸಾಲ 5,28,000 ಕೋಟಿ. ಕಳೆದ 5 ವರ್ಷಗಳಲ್ಲಿ ಸುಮಾರು 3 ಲಕ್ಷ ಕೋಟಿ ಸಾಲ ಮಾಡಲಾಗಿದೆ. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಒಟ್ಟು ಸಾಲ 1,18,000 ಕೋಟಿ ಇತ್ತು. ನಮ್ಮ ಸರ್ಕಾರದ 5 ವರ್ಷಗಳಲ್ಲಿ 1,24,000 ಕೋಟಿ ಆಗಿತ್ತು.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ) (PTI)

ಇತಿಹಾಸ

- ಮೀಸಲಾತಿ ಮತ್ತು ಸಾಮಾಜಿಕ ಕ್ಕೆ ದೇಶದಲ್ಲಿ ಸುಮಾರು 100 ವರ್ಷಗಳ ಇತಿಹಾಸ ಇದೆ. ಮೀಸಲಾತಿ ಎಂಬುದು ಬ್ರಿಟೀಷರ ಅವಧಿಯಲ್ಲೇ ಆರಂಭವಾಯಿತು. 1932ರ ದುಂಡು ಮೇಜಿನ ಸಮ್ಮೇಳನದಲ್ಲಿ ಆರಂಭವಾಯಿತು, ಕೊಲ್ಲಾಪುರದ ಸಾಹು ಮಹಾರಾಜ್‌ ಅವರು ತಮ್ಮ ಪ್ರಾಂತ್ಯದಲ್ಲಿ 1902ರಲ್ಲೇ ಮೀಸಲಾತಿ ಜಾರಿಗೆ ತಂದರು. 50% ಮೀಸಲಾತಿಯನ್ನು ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಿದರು. ಮೈಸೂರು ಪ್ರಾಂತ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮೇಲೆ ಬಹಳಷ್ಟು ಒತ್ತಡ ಬಂದಿದ್ದರಿಂದ 1918ರಲ್ಲಿ ಜಸ್ಟೀಸ್‌ ಮಿಲ್ಲರ್‌ ಅವರ ಆಯೋಗವನ್ನು ರಚನೆ ಮಾಡಿದರು. ಈ ಆಯೋಗ 1919ರಲ್ಲಿ ವರದಿ ನೀಡಿತು, ಇದನ್ನು ಜಾರಿ ಮಾಡದಂತೆ ಬಹಳ ಒತ್ತಡ ಬಂದಿತು, ಆದರೂ ಕೂಡ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು 1921ರಲ್ಲಿ ಮೀಸಲಾತಿ ಜಾರಿಗೆ ನೀಡಿದರು. ಬ್ರಾಹ್ಮಣರಿಗೆ 25% ಹಾಗೂ ಬ್ರಾಹ್ಮಣೇತರರಿಗೆ 75% ಮೀಸಲಾತಿ ನೀಡಿದರು. ತಮಿಳುನಾಡಿನಲ್ಲಿ ಜಸ್ಟೀಸ್‌ ಪಕ್ಷದವರು ದಲಿತರಿಗೆ ಹಿಂದುಳಿದವರಿಗೆ ಮೀಸಲಾತಿ ನೀಡಿದರು, ನಂತರ ಬಾಂಬೆ ಪ್ರೆಸಿಡೆಸ್ನಿ ಅವರು ಮೀಸಲಾತಿ ನೀಡಿದರು. ಮೀಸಲಾತಿ ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಒಂದು ಸಾಮಾಜಿಕ ಕಾರ್ಯಕ್ರಮ. ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಚತುರ್ವಣ ವ್ಯವಸ್ಥೆ ಕಾರಣಕ್ಕೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನತೆ ನಿರ್ಮಾಣವಾಗಿದೆ.

- ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು 1949 ನವೆಂಬರ್‌ 25ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ “ಸಂವಿಧಾನ ರಚನೆ ಆಗಿದೆ, 1950 ಜನವರಿ 26ರಿಂದ ಜಾರಿಗೆ ಕೊಡಬೇಕು ಎಂಬ ತೀರ್ಮಾನವಾಗಿದೆ. ಇದರ ಜಾರಿಯಾದ ನಂತರ ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಆರ್ಥಿಕವಾದ, ಸಾಮಾಜಿಕವಾದ ಅಸಮಾನತೆ ಇದೆ. ರಾಜಕೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ ಎಂದು ನೀಡುತ್ತಿದ್ದೇವೆ ಆದರೆ ಇದು ಸಾಮಾಜಿಕ ಮತ್ತು ಆರ್ಥಿಕ ಪ್ರಭುತ್ವದಲ್ಲಿ ಇಲ್ಲ. ನಾವು ಈ ಅಸಮಾನತೆಯನ್ನು ತೆಗೆದುಹಾಕದೆ ಹೋದರೆ ನಾವು ಕಟ್ಟಿರುವ ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಅಸಮಾನತೆಯಿಂದ ನರಳುವ ಜನರೇ ದ್ವಂಸ ಮಾಡುತ್ತಾರೆ” ಎಂದಿದ್ದರು. ಈ ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಮೀಸಲಾತಿ ಬೇಕು. ಮೀಸಲಾತಿ ಭಿಕ್ಷೆಯಲ್ಲ, ಇದು ಸಂವಿಧಾನಾತ್ಮಕ ಹಕ್ಕು.

- 1945ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯಲ್ಲಿ 1948ರಲ್ಲಿ ಮಾನವ ಹಕ್ಕುಗಳ ಘೋಷಣೆ ಆಯಿತು. ಮೀಸಲಾತಿ ಎಂಬುದು ಮಾನವ ಹಕ್ಕುಗಳ ರಕ್ಷಣೆ ಮಾಡಿದಂತೆ. ಮೀಸಲಾತಿ ಮೂಲಕವೇ ಅಸಮಾನತೆ, ಬಡತನ ಇವೆಲ್ಲವೂ ನಿರ್ಮೂಲನೆ ಆಗುತ್ತದೆ ಎಂದಲ್ಲ, ಆದರೆ ಇದೊಂದು ಮಾರ್ಗ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂಥಾ ವ್ಯವಸ್ಥೆ ಇದೆ. ನಮ್ಮಲ್ಲಿ ಸಂವಿಧಾನದ ಮೂಲಕ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದೇವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ (HT_PRINT)

- ನಮ್ಮ ದೇಶದಲ್ಲಿ 49.5% ಮೀಸಲಾತಿ ಇದೆ. ಇದರಲ್ಲಿ 22.5% ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ, 27% ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇದೆ. 2019ರಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ 10% ಮೀಸಲಾತಿಯನ್ನು ನೀಡಲಾಗಿದೆ. ಇದನ್ನು ಕೇಂದ್ರ ಸರ್ಕಾರ ಬಹಳಾ ತರಾತುರಿಯಲ್ಲಿ ಮಾಡಿದೆ. ಇದಕ್ಕೆ ಯಾವ ಯಾವ ಜಾತಿಗಳು ಸೇರುತ್ತವೆ ಎಂಬ ಬಗ್ಗೆ ನೋಟಿಷಿಕೇಷನ್‌ ಬಂದಿಲ್ಲ. ಈ ಮೀಸಲಾತಿ ಸಂವಿಧಾನದ 15(4), 16(4) ಪರಿಚ್ಛೇದಗಳಿಗೆ ವಿರುದ್ಧವಾಗಿದೆ. ಈ ಎರಡೂ ಆರ್ಟಿಕಲ್‌ ನಲ್ಲಿ ಯಾರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿರುತ್ತಾರೆ ಅವರಿಗೆ ಮೀಸಲಾತಿ ನೀಡಬೇಕು ಎಂದು ಹೇಳಿದೆ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದು ಹೇಳಿಲ್ಲ.

- ಶಿನೋ ಕಮಿಷನ್‌ ನ ವರದಿ ಪ್ರಕಾರ 48.4% ಬಡವರು ಎಸ್‌,ಟಿ ಯಲ್ಲಿ, 38.7% ಎಸ್‌,ಸಿ ಯಲ್ಲಿ ಮತ್ತು 33% ಹಿಂದುಳಿದ ಜಾತಿಗಳಲ್ಲಿ ಬಡವರಿದ್ದಾರೆ. ಇದಕ್ಕೆ ಹೋಲಿಕೆ ಮಾಡಿದರೆ ಸಾಮಾನ್ಯ ವರ್ಗದಲ್ಲಿರುವ ಬಡವರ ಪ್ರಮಾಣ ಯಾವ ಲೆಕ್ಕವೂ ಅಲ್ಲ.

- ಸಂವಿಧಾನವು ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂದು ಹೇಳುತ್ತದೆ, ಆದರೆ ಮೀಸಲಾತಿ ಮೂಲಕ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಬೇಕಿದೆ. 1956ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕು ಎಂದು ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಮೀಸಲಾತಿ ಈಗ 50% ಇದೆ. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮಂಡಲ್‌ ಕಮಿಷನ್‌ ವರದಿಯನ್ನು ಒಪ್ಪಿಕೊಳ್ಳುವ ಜೊತೆಗೆ ಕೆಲವು ನಿಬಂಧನೆಗಳನ್ನು ಹಾಕಿದ್ದಾರೆ. ಸಂವಿಧಾನದಲ್ಲಿ ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿಲ್ಲವಾದರೂ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಣೆಯಿಂದ ಇದಕ್ಕೆ ಮಿತಿ ವಿಧಿಸಿದೆ.

- ಈಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ವಿಧಿಸಿರುವ ಮಿತಿಗಿಂತ 6% ಹೆಚ್ಚು ಮೀಸಲಾತಿಯನ್ನು ನೀಡುತ್ತಿದೆ. ಇದರ ಜೊತೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿ ನೀಡಬೇಕಾಗಿದೆ. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಎಷ್ಟಾಗುತ್ತೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 1994ರಲ್ಲಿ ವೀರಪ್ಪ ಮೋಯಿಲಿ ಅವರು ಮುಖ್ಯಮಂತ್ರಿಯಾಗಿದ್ದಾಗ 73% ಮೀಸಲಾತಿಯನ್ನು ನೀಡಿದ್ದರು. ಇದನ್ನು ಸುಪ್ರೀಂ ಕೋರ್ಟ್‌ ನಲ್ಲಿ ಚಾಲೆಂಜ್‌ ಮಾಡಿದಾಗ ಕೋರ್ಟ್‌ ಈ ಮೀಸಲಾತಿಯನ್ನು ರದ್ದು ಮಾಡಿತು.

- ಪರಿಶಿಷ್ಟ ವರ್ಗಕ್ಕೆ ಜನಸಂಖ್ಯೆಗೆ ಅನುಗುಣವಾಗಿ 7.5% ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ 17.15% ಮೀಸಲಾತಿ ನೀಡಬೇಕು ಎಂಬ ಬೇಡಿಕೆಯಿತ್ತು. 2019ರ ಜೂನ್‌ ತಿಂಗಳಲ್ಲಿ ನಮ್ಮ ಪಕ್ಷದ ಪ್ರಿಯಾಂಕ್‌ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗ ರಚನೆ ಆಯಿತು, ಈ ಆಯೋಗ 2020ರ ಜುಲೈ ನಲ್ಲಿ ವರದಿ ನೀಡಿತು. ಈ ಸಮಿತಿಯ ಶಿಫಾರಸು ಏನೆಂದರೆ ಎಸ್‌,ಸಿ ಗಳಿಗೆ 15ರಿಂದ 17% ಗೆ ಹಾಗೂ ಎಸ್‌,ಸಿ ಗಳಿಗೆ 3ರಿಂದ 7% ಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದಿದೆ. ಇದರಿಂದ ಒಟ್ಟು ಮೀಸಲಾತಿ 56% ಆಯಿತು. ಸುಪ್ರೀಂ ಕೋರ್ಟ್‌ ವಿಧಿಸಿರುವ ಮಿತಿಯನ್ನು ದಾಟಿ ಮೀಸಲಾತಿ ನೀಡಲೇಬೇಕಾಗಿದೆ. ಈ ವರದಿ ಬಂದ ಕೂಡಲೇ ಮಾಡಿಲ್ಲ ಎರಡು ವರ್ಷ ಮೂರು ತಿಂಗಳ ನಂತರ ನಮ್ಮ ಪಕ್ಷದ ಶಾಸಕರು ಸದನದಲ್ಲಿ ಗಲಾಲೆ ಮಾಡಿದರು, ವಾಲ್ಮೀಕಿ ಸಮಾಜದ ಸ್ವಾಮೀಜಿಗಳು 257 ದಿನಗಳ ಕಾಲ ಧರಣಿ ಮಾಡಿದರು, ಆಗ ಅನಿವಾರ್ಯವಾಗಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಬೇಕಾಯಿತು. ಸರ್ಕಾರ ಯಾಕೆ ಇಷ್ಟು ವಿಳಂಬ ಮಾಡಿದ್ದು? ಧರಣಿ ಸ್ಥಳಕ್ಕೆ ನಾನು ಮೂರು ಬಾರಿ ಹೋಗಿದ್ದೆ, ಆಗ ಧರಣಿ ಕೈಬಿಡುವಂತೆ ಸ್ವಾಮೀಜಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದೆ, ಆದರೆ ಶ್ರೀಗಳು ನನ್ನ ಮನವಿಯನ್ನು ಪುರಸ್ಕರಿಸಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಗಮನಸೆಳೆದ ಸಿದ್ದರಾಮಯ್ಯ ಭಾಷಣ (HT_PRINT)

- ನಾಗಮೋಹನ್‌ ದಾಸ್‌ ಅವರ ಸಮಿತಿ ನೀಡಿರುವ ವರದಿಯ ಮೇಲೆ ನ್ಯಾ. ಸುಭಾಷ್‌ ಹಾಡಿ ಅವರ ಸಮಿತಿ ರಚನೆ ಮಾಡಿದರು. ಈ ಸಮಿತಿ ರಚನೆಗೆ ಕಾರಣ ನಾಗಮೋಹನ್‌ ದಾಸ್‌ ಅವರ ಸಮಿತಿ ನೀಡಿರುವ ವರದಿ ಅನುಷ್ಠಾನ ಮಾಡುವುದಕ್ಕೆ. ನಂತರ ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಶ್ರೀರಾಮುಲು ಅವರನ್ನು ಒಳಗೊಂಡ ಸಂಪುಟ ಉಪಸಮಿತಿಯನ್ನು ರಚನೆ ಮಾಡಲಾಯಿತು. ಶ್ರೀರಾಮುಲು ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಮೀಸಲಾತಿ ಹೆಚ್ಚಳ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಎರಡು ವರ್ಷ ಮೂರು ತಿಂಗಳು ಈ ಸರ್ಕಾರ ನಾಗಮೋಹನ್‌ ದಾಸ್‌ ಅವರ ಸಮಿತಿಯ ವರದಿಯನ್ನು ಇಟ್ಟುಕೊಂಡು ನಿದ್ರಾವಸ್ಥೆಯಲ್ಲಿ ಇತ್ತು.

- ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಬಿಜೆಪಿ ಯಾವಾಗಲಾದರೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಿದೆ? ಮಂಡಲ್‌ ಕಮಿಷನ್‌ ವರದಿಯನ್ನು ವಿರೋಧ ಮಾಡಿದವರು ಯಾರು? ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿಯನ್ನು ತಂದು ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದವರು ಯಾರು? ಬಿಜೆಪಿಯ ಉಪಾಧ್ಯಕ್ಷರು, ರಾಜ್ಯಸಭಾ ಸದಸ್ಯರು ಆಗಿದ್ದ ರಾಮಾಜೋಯಿಸ್‌ ಅವರು. ಸುಪ್ರೀಂಕೋರ್ಟ್‌ ನಲ್ಲಿ ಅವರು ಮನವಿ ಮಾಡಿದ ಹೊರತಾಗಿಯೂ ಕೋರ್ಟ್‌ ಅವರ ಮನವಿಯನ್ನು ತಿರಸ್ಕಾರ ಮಾಡಿತು, ಸ್ವತಂ ರಾಮಾಜೋಯಿಸ್‌ ಅವರೇ ಕೋರ್ಟ್‌ ನಲ್ಲಿ ವಾದ ಮಾಡಿದ್ದರು. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದವರು ಅರ್ಜುನ್‌ ಸಿಂಗ್‌ ಅವರು, ಆಗಲೂ ವಿರೋಧ ಮಾಡಿದವರು ಯಾರು ಎಂಬುದು ನಮಗೆಲ್ಲ ಗೊತ್ತಿದೆ.

- ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ. ಇದೇ ಕಾರಣಕ್ಕೆ ನಾವು ನಾಗಮೋಹನ್‌ ದಾಸ್‌ ಅವರ ಸಮಿತಿ ರಚನೆ ಮಾಡಿದ್ದು. ಈ ವರ್ಗದ ಜನರಿಗೆ ಮೀಸಲಾತಿ ನೀಡಲೇಬೇಕು ಆದರೆ ಇದು ಸುಪ್ರೀಂ ಕೋರ್ಟ್‌ ನ ತೀರ್ಪಿನ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕಾದರೆ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಆಗಬೇಕು. ಸಂವಿಧಾನದ 9ನೇ ಶೇಡ್ಯೂಲ್‌ ಗೆ ಸೇರಿಸಬೇಕು. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿದ ಕೂಡಲೇ, ಕಾನೂನು ತಂದ ಕೂಡಲೇ ಇದು ಸಂವಿಧಾನಬದ್ಧವಾಗಲ್ಲ.

- ನಮ್ಮ ಡಬ್ಬಲ್‌ ಇಂಜಿನ್‌ ಸರ್ಕಾರ ಎಂದು ಹೇಳುತ್ತೀರ, ನಾವು ನಿಮ್ಮೊಂದಿಗೆ ದೆಹಲಿಗೆ ಬರುತ್ತೇವೆ, ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸುವಂತೆ ಒತ್ತಾಯ ಮಾಡೋಣ.

- ರಾಜ್ಯಸಭೆಯಲ್ಲಿ ಕೇಂದ್ರದ ರಾಜ್ಯ ಖಾತೆಯ ಸಮಾಜ ಕಲ್ಯಾಣ ಸಚಿವರಾದ ಪ್ರತಿಮಾ ಪೌಲಿಕ್‌ ಅವರು 7/12/2022ರಲ್ಲಿ ಉತ್ತರ ನೀಡುವಾಗ, ಮೀಸಲಾತಿಯನ್ನು 50% ಗಿಂತ ಹೆಚ್ಚಿಗೆ ಮಾಡುವ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಅಂದರೆ ಸರ್ಕಾರ ಇವತ್ತಿನವರೆಗೆ ಬಿಲ್‌ ಅನ್ನೇ ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ. ಈ ಸರ್ಕಾರ ಚುನಾವಣೆ ಬಂದಿರುವುದರಿಂದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.

- ಲೋಕಸಭಾ ಸದಸ್ಯರಾದ ಎಸ್‌, ಮುನಿಸ್ವಾಮಿ ಪ್ರಶ್ನೆಗೆ 20/12/2022ರಲ್ಲಿ ಉತ್ತರ ನೀಡಿರುವ ಎ.ನಾರಾಯಣಸ್ವಾಮಿ ಅವರು, ಮೀಸಲಾತಿ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ, ನೀವು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಎಂದು ಒತ್ತಡ ಹಾಕಿದೆಯಾ? ರಾಜ್ಯದಿಂದ ಯಾರಾದರೂ ಕೇಂದ್ರ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರ? ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಿದ್ದಾರ? ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್‌ ಪಕ್ಷದ ಪೂರ್ಣ ಬೆಂಬಲ ಇದೆ. ನೀವು ಸರ್ವಪಕ್ಷ ಸಭೆ ಕರೆದು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾದರೆ ನಾವು ಸಿದ್ಧರಿದ್ದೇವೆ. ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ಕಳಕಳಿ. ನಾವು ಮೀಸಲಾತಿ ಪರವಾಗಿದ್ದೇವೆ ಎಂಬುದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ.

ಈಗ ಸಂಸತ್‌ ಅಧಿವೇಶನ ನಡೆಯುತ್ತಿತ್ತು, ಅಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪಾಸ್‌ ಮಾಡಿಕೊಳ್ಳದೆ ಹೋದರೆ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪದೇ ಹೋದರೆ ಸರ್ವ ಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋಗಿ ನಾವು ನಿಮ್ಮೊಂದಿಗೆ ಬರುತ್ತೇವೆ. ಈ ಅಧಿವೇಶನದ ಸಮಯದಲ್ಲೇ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸುವ ಕೆಲಸ ಆಗಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Whats_app_banner