ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ; ಪಾಕಿಸ್ತಾನದ ಪರ ಕಾಂಗ್ರೆಸ್ ಎಂದು ಟೀಕಿಸಿದ ಬಿಜೆಪಿ, 5 ಅಂಶಗಳು
Belagavi Banner Row: ಕಾಂಗ್ರೆಸ್ ಪಕ್ಷದ ವರಿಷ್ಠರು ಬಹಳ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಆಯೋಜಿಸಿದ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಈಗ ವಿವಾದಕ್ಕೀಡಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಹೀಗಾಗಿ, ಪಾಕಿಸ್ತಾನದ ಪರ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದೆ. ಇಲ್ಲಿದೆ 5 ಮುಖ್ಯ ಅಂಶಗಳು.
![ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಇದು ಪಾಕಿಸ್ತಾನದ ಪರ ಕಾಂಗ್ರೆಸ್ ನಿಲುವಿನ ಪ್ರತೀಕ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಇದು ಪಾಕಿಸ್ತಾನದ ಪರ ಕಾಂಗ್ರೆಸ್ ನಿಲುವಿನ ಪ್ರತೀಕ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.](https://images.hindustantimes.com/kannada/img/2024/12/26/550x309/Belagavi_Congress__1735202688573_1735202694923.png)
Belagavi Banner Row: ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ಪಕ್ಷವು 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದೆ. ಆದರೆ, ಬೆಳಗಾವಿಯ ಸ್ಥಳೀಯ ನಾಯಕರ ಎಡವಟ್ಟಿನಿಂದಾಗಿ ಈಗ ಪಕ್ಷ ಮುಜುಗರ ಅನುಭವಿಸುವಂತಾಗಿದೆ ಎಂದು ಹೇಳಲಾಗುತ್ತಿದೆ. ಈ ಶತಮಾನೋತ್ಸವ ಆಚರಣೆ ಮತ್ತು ಕಾಂಗ್ರೆಸ್ ಕ್ರಿಯಾ ಸಮಿತಿ (ಸಿಡಬ್ಲ್ಯುಸಿ) ಸಭೆಗೆ ಪಕ್ಷದ ಹಿರಿಯ ನಾಯಕರನ್ನು ಆಹ್ವಾನಿಸುವ ಸಲುವಾಗಿ ಬೆಳಗಾವಿ ನಗರದ ಉದ್ದಗಲಕ್ಕೂ ಸ್ವಾಗತ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿದೆ. ಈಗ ಈ ಬ್ಯಾನರ್ ಮತ್ತು ಫ್ಲೆಕ್ಸ್‌ಗಳೇ ಕಾಂಗ್ರೆಸ್‌ಗೆ ಮುಳುವಾಗಿದೆ. ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಅಂಥದ್ದೇನಾಯಿತು ಅಂತೀರಾ.. ಇಲ್ಲಿದೆ ನೋಡಿ ವಿವರ.
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆ; 5 ಅಂಶಗಳು
1) ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ 1924 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಿಸುವ ಸಲುವಾಗಿ ಕಾಂಗ್ರೆಸ್ ಕ್ರಿಯಾ ಸಮಿತಿ (ಸಿಡಬ್ಲ್ಯುಸಿ) ಇಂದು (ಡಿಸೆಂಬರ್ 26) ಮತ್ತು ನಾಳೆ (ಡಿಸೆಂಬರ್ 27) ಎರಡು ದಿನಗಳ ಅಧಿವೇಶನವನ್ನು ಆಯೋಜಿಸಿದೆ.
2) 1924 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿದ್ದು, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಅದರ ಮಹತ್ವವನ್ನು ಬಿಂಬಿಸುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದಾರೆ.
3) ಬೆಳಗಾವಿಯ ಸ್ಥಳೀಯ ನಾಯಕರು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು 1924 ರ ಅಧಿವೇಶನದ ಕಾಂಗ್ರೆಸ್ ಶತಮಾನೋತ್ಸವ ಆಚರಣೆಗೆ ಸ್ವಾಗತಿಸುವ ಸಲುವಾಗಿ ಬೆಳಗಾವಿ ನಗರದ ಪ್ರವೇಶ ದ್ವಾರದಲ್ಲಿ ಹಾಕಿದ್ದರು ಎನ್ನಲಾದ ಬ್ಯಾನರ್, ಸ್ವಾಗತ ಫ್ಲೆಕ್ಸ್‌ಗಳಲ್ಲಿ ಎಡವಟ್ಟಾಗಿದೆ. ಅದರಲ್ಲಿ ಅವರು ಭಾರತದ ಅಪೂರ್ಣ ಭೂಪಟವನ್ನು ಬಳಸಿದ್ದಾರೆ. ಅಂದರೆ ಅದರಲ್ಲಿ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಇಲ್ಲ. ಅವು ನಾಪತ್ತೆಯಾಗಿವೆ.
4) ಭಾರತ ಅಪೂರ್ಣ ಭೂಪಟಗಳನ್ನು ಕಾಂಗ್ರೆಸ್ ಪಕ್ಷದ ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಬಳಸಿರುವುದನ್ನು ಬಿಜೆಪಿ ಗುರುತಿಸಿದ್ದು, ಅದನ್ನು ಬಲವಾಗಿ ಟೀಕಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ಭಾರತದ ಭೌಗೋಳಿಕ ಸಾರ್ವಭೌಮತೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸಾರ್ವಜನಿಕವಾಗಿ ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
5) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ ಬಿಜೆಪಿ ನಾಯಕರು, ದೇಶವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪಕ್ಷವು ಅಮೆರಿಕದ ಹೂಡಿಕೆದಾರ ಜಾರ್ಜ್ ಸೊರಸ್ ಜತೆಗೆ ಕೈಜೋಡಿಸಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಪರ ಕಾಂಗ್ರೆಸ್ ಎಂದು ಟೀಕಿಸಿದ ಬಿಜೆಪಿ; ಯಾರು ಏನು ಹೇಳಿದರು
1) ಬಿಜೆಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ತಮ್ಮ ಬೆಳಗಾವಿ ಕಾರ್ಯಕ್ರಮದಲ್ಲಿ ಭಾರತದ ಅಪೂರ್ಣ ಭೂಪಟ ಬಳಸಿದ್ದು, ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಬಿಂಬಿಸಿದೆ. ಆ ಮೂಲಕ ಭಾರತದ ಸಾರ್ವಭೌಮತೆಗೆ ಸಂಪೂರ್ಣ ಅಗೌರವವನ್ನು ತೋರಿಸಿದೆ. ಇದೆಲ್ಲವೂ ಕೇವಲ ತಮ್ಮ ಮತ ಬ್ಯಾಂಕ್ ಅನ್ನು ಮೆಚ್ಚಿಸಲು ನಡೆಸಿರುವ ಕಸರತ್ತು ಎಂಬುದು ಮನವರಿಕೆಯಾಗುತ್ತದೆ. ಇದು ನಾಚಿಕೆಗೇಡಿನ ಸಂಗತಿ! ಎಂದು ಬಿಜೆಪಿ ಟ್ವೀಟ್ ಮಾಡಿದೆ.
2) ಅಮಿತ್ ಮಾಳವೀಯ: ಕಾಶ್ಮೀರಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಜಾರ್ಜ್ ಸೊರೊಸ್ ಫೋರಂ ಆಫ್ ಡೆಮಾಕ್ರಟಿಕ್ ಲೀಡರ್ಸ್ ಇನ್ ಏಷ್ಯಾ ಪೆಸಿಫಿಕ್ (ಎಫ್‌ಡಿಎಲ್-ಎಪಿ) ಫೌಂಡೇಶನ್‌ನ ಸಹ-ಅಧ್ಯಕ್ಷರಾಗಿ ಸೋನಿಯಾ ಗಾಂಧಿ ನೇಮಕವಾಗಿರುವುದು ಕಾಕತಾಳೀಯವಲ್ಲ, ಅದು ಕಾಂಗ್ರೆಸ್ ಪಕ್ಷದ ದೃಢವಾದ ನಂಬಿಕೆ. ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ, ಕಾಂಗ್ರೆಸ್ ತನ್ನ ಎಲ್ಲ ಹೋರ್ಡಿಂಗ್‌ಗಳ ಮೇಲೆ ಭಾರತದ ಅಪೂರ್ಣ ಭೂಪಟವನ್ನು ಬಳಸಿದೆ. ಅಷ್ಟೇ ಅಲ್ಲ, ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸುವಂತಹ ಹೋರ್ಡಿಂಗ್‌ಗಳಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಚಿತ್ರಗಳನ್ನೂ ಬಳಸಿದೆ. ಇದು ಪ್ರಮಾದವಲ್ಲ, ಇದು ಸ್ಪಷ್ಟ ಹೇಳಿಕೆ. ಇದು ಅವರ ತುಷ್ಟೀಕರಣ ರಾಜಕೀಯದ ಭಾಗವಾಗಿದೆ. ಭಾರತೀಯ ಮುಸ್ಲಿಮರು ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ನಿಷ್ಠರಾಗಿದ್ದಾರೆ ಎಂದು ಅವರು ನಂಬುತ್ತಾರೆ. ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಆಗಿದೆ. ಅದು ಮತ್ತೆ ಭಾರತವನ್ನು ಒಡೆಯಲು ಬಯಸುತ್ತದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
3) ಶೆಹಜಾದ್ ಪೂನಾವಾಲಾ: ಮತ್ತೊಮ್ಮೆ ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಬಿಂಬಿಸುವ ಪ್ರಯತ್ನ ಇದು. ಭಾರತದ ಅಪೂರ್ಣ ಭೂಪಟವನ್ನು ಬಳಸಿ ಕಾಶ್ಮೀರವು ಪಾಕಿಸ್ತಾನದ ಭಾಗ ಎಂದು ಬಿಂಬಿಸುವ ಮೂಲಕ ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಅಗೌರವವನ್ನು ಕಾಂಗ್ರೆಸ್ ಪಕ್ಷ ತೋರಿಸಿದೆ. ಆ ಮೂಲಕ ಪಾಕಿಸ್ತಾನಿ ರಾಗವನ್ನು ಪ್ರದರ್ಶಿಸಿದೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಭಾರತ್ ಜೋಡೋ ಮೇಲೂ ನಂಬಿಕೆ ಇಲ್ಲ. ಭಾರತ್ ತೋಡೋ ಎಂಬುದನ್ನೇ ಅವರು ನಂಬಿದ್ದಾರೆ. ಇಲ್ಹಾನ್ ಒಮರ್ ಅವರನ್ನು ಭೇಟಿ ಮಾಡಿ, ಅನುಚ್ಛೇದ 370 ಅನ್ನು ಬೆಂಬಲಿಸುವುದು, ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸುವುದು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದನ್ನು ಬೆಂಬಲಿಸುವ ಸಂಸ್ಥೆಯೊಂದರ ಸಹ ಅಧ್ಯಕ್ಷೆ ಸೋನಿಯಾ ಗಾಂಧಿ ಇವೆಲ್ಲವೂ ಸಹಯೋಗವಲ್ಲ. ಬದಲಾಗಿ, ವೋಟ್ ಬ್ಯಾಂಕ್‌ನ ಉದ್ಯೋಗ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಟೀಕಿಸಿದ್ದಾರೆ.
4) ಬಿವೈ ವಿಜಯೇಂದ್ರ: ಬೆಳಗಾವಿಯಲ್ಲಿ ಭಾರತದ ಅಪೂರ್ಣ ಭೂಪಟವನ್ನು ಕಾಂಗ್ರೆಸ್ ಪಕ್ಷದ ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಬಳಸಿರುವ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಆರೋಪ ವ್ಯಕ್ತವಾದ ಕೂಡಲೇ ಆ ಬ್ಯಾನರ್‌ಗಳು, ಫ್ಲೆಕ್ಸ್ ಕುರಿತ ವರದಿ ಮಾಧ್ಯಮಗಳಲ್ಲಿ ಕಾಣಿಸಿವೆ. ಕೂಡಲೇ ಕಾಂಗ್ರೆಸ್‌ನವರು ಅವುಗಳನ್ನು ತೆರವುಗೊಳಿಸಿದ್ದಾರೆ. ಆ ಬ್ಯಾನರ್, ಫ್ಲೆಕ್ಸ್‌ಗಳು ಕಾಂಗ್ರೆಸ್ ಮನಸ್ಥಿತಿಯನ್ನು ಬಿಂಬಿಸುತ್ತಿರುವುದು ಸತ್ಯ. ಬಿಜೆಪಿ ನಾಯಕರು, ಶಾಸಕರು ನಾಳೆ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.
5) ಸುಳ್ಳು ಸುದ್ದಿ ಹರಡುವುದೇ ಬಿಜೆಪಿಯವರ ಕೆಲಸ: ಬಿವಿ ಶ್ರೀನಿವಾಸ್
ಬಿಜೆಪಿಯವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಬೆಳಗಾವಿಯಲ್ಲಿ ನೋಡಿ, ಎಲ್ಲ ಬ್ಯಾನರ್‌ಗಳಲ್ಲೂ ಭಾರತ ಭೂಪಟ ಸರಿಯಾಗಿಯೇ ಇದೆ. 1924 ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ನೋಡಿ ಬಿಜೆಪಿಯವರಿಗೆ ನಿದ್ದೆ ಬರ್ತಾ ಇಲ್ಲ. ಇದು ಐತಿಹಾಸಿಕ ಮಹತ್ವದ ಅಧಿವೇಶನ. ಇಲ್ಲಿಯೇ ಮಹಾತ್ಮ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದು. ಈಗ ಆರೋಪ ಮಾಡಿರೋದು ಯಾರು ಸುಳ್ಳು ಹೇಳುವ ಮಾಳವೀಯ. ಅದು ಅವರ ಕೆಲಸ ಎಂದು ಯುವ ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಬೆಳಗಾವಿಯಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)