ಬೆಳಗಾವಿ ಭೀಮಗಡ ಅರಣ್ಯದಿಂದಲೂ ಶುರುವಾಯಿತು ನಿವಾಸಿಗಳ ಸ್ಥಳಾಂತರ, ಕರ್ನಾಟಕ ಅರಣ್ಯ ಇಲಾಖೆಯಿಂದಲೇ ಪ್ಯಾಕೇಜ್‌
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿ ಭೀಮಗಡ ಅರಣ್ಯದಿಂದಲೂ ಶುರುವಾಯಿತು ನಿವಾಸಿಗಳ ಸ್ಥಳಾಂತರ, ಕರ್ನಾಟಕ ಅರಣ್ಯ ಇಲಾಖೆಯಿಂದಲೇ ಪ್ಯಾಕೇಜ್‌

ಬೆಳಗಾವಿ ಭೀಮಗಡ ಅರಣ್ಯದಿಂದಲೂ ಶುರುವಾಯಿತು ನಿವಾಸಿಗಳ ಸ್ಥಳಾಂತರ, ಕರ್ನಾಟಕ ಅರಣ್ಯ ಇಲಾಖೆಯಿಂದಲೇ ಪ್ಯಾಕೇಜ್‌

ಕರ್ನಾಟಕದ ಅರಣ್ಯದಲ್ಲಿ ಶತಮಾನದಿಂದ ನೆಲೆ ಕಂಡುಕೊಂಡು ಮುಖ್ಯವಾಹಿನಿಗೆ ಬರಲು ಬಯಸುವವರಿಗೆ ಅರಣ್ಯ ಇಲಾಖೆಯಿಂದಲೇ ಪುನರ್ವಸತಿ ಪ್ಯಾಕೇಜ್‌ ಅನ್ನು ಬೆಳಗಾವಿಯ ಭೀಮಗಡದಲ್ಲಿ ಆರಂಭಿಸಲಾಗಿದೆ.

ಬೆಳಗಾವಿಯ ಭೀಮಗಡ ಅರಣ್ಯ ನಿವಾಸಿಗಳಿಗೆ ಚೆಕ್‌ ಅನ್ನು ವಿತರಣೆ ಮಾಡಲಾಯಿತು.
ಬೆಳಗಾವಿಯ ಭೀಮಗಡ ಅರಣ್ಯ ನಿವಾಸಿಗಳಿಗೆ ಚೆಕ್‌ ಅನ್ನು ವಿತರಣೆ ಮಾಡಲಾಯಿತು.

ಬೆಳಗಾವಿ: ಕರ್ನಾಟಕದ ಬಂಡೀಪುರ, ನಾಗರಹೊಳೆ, ಭದ್ರಾ ಸೇರಿದಂತೆ ಹುಲಿ ಯೋಜಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆರ್ಥಿಕ ನೆರವಿನೊಂದಿಗೆ ಈಗಾಗಲೇ ಅರಣ್ಯ ನಿವಾಸಿಗಳ ಸ್ಥಳಾಂತರ ಯೋಜನೆ ಜಾರಿಯಾಗಿವೆ. ನೂರಾರು ಗಿರಿಜನ,ಆದಿವಾಸಿ ಕುಟುಂಬಗಳ ಅರಣ್ಯದಿಂದ ಹೊರಗೆ ಬದುಕು ಕಟ್ಟಿಕೊಂಡಿವೆ. ಇದೇ ಮಾದರಿಯಲ್ಲಿ ಕರ್ನಾಟಕ- ಗೋವಾ ಗಡಿ ಭಾಗದಲ್ಲಿರುವ ಭೀಮಗಡ ಅಭಯಾರಣ್ಯದಲ್ಲಿ ಶತಮಾನಗಳಿಂದ ಬದುಕು ಕಂಡುಕೊಂಡಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಯೋಜನೆ ಆರಂಭಗೊಂಡಿದೆ. ಮೊದಲ ಬಾರಿಗೆ 27 ಕುಟುಂಬಗಳು ಭೀಮಗಡ ಅರಣ್ಯದಿಂದ ಹೊರಕ್ಕೆ ಬಂದಿದ್ದು, ಅವರಿಗೆ ಆರ್ಥಿಕ ನೆರವಿನ ಜತೆಗೆ ಮೂಲಸೌಕರ್ಯಗಳನ್ನು ಕರ್ನಾಟಕ ಅರಣ್ಯ ಇಲಾಖೆಯೇ ಒದಗಿಸಲಾಗುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯಿಂದಲೇ ರೂಪಿಸಿರುವ ಮೊದಲ ಸ್ಥಳಾಂತರ ಯೋಜನೆಯಿದು.

ಹೇಗಿರಲಿದೆ ಯೋಜನೆ

ಭೀಮಗಡ ಅಭಯಾರಣ್ಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು ಇಲ್ಲಿ ಸುಮಾರು 754 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ತಳೇವಾಡಿಯ 27 ಕುಟುಂಬಗಳು ಸ್ವಯಂ ಪ್ರೇರಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದೆ.

ಪ್ರಥಮ ಹಂತದಲ್ಲಿ ಇಂದು 27 ಕುಟುಂಬಗಳಿಗೆ ನಿಯಮಾನುಸಾರ ಮತ್ತು ಕಾನೂನು ಬದ್ಧವಾಗಿ ಪ್ರಥಮ ಹಂತದಲ್ಲಿ ಒಂದು ಪರಿವಾರದ ಘಟಕಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಉಳಿದ 5 ಲಕ್ಷ ರೂಪಾಯಿಗಳನ್ನು ಅವರು ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಿದ ತರುವಾಯ ನೀಡಲಾಗುತ್ತಿದೆ.

ಹುಲಿ ಯೋಜನೆ ಪ್ರದೇಶದಲ್ಲಿ ಹೇಗಿದೆ

ಹುಲಿ ಯೋಜನೆ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವೇ ಎರಡು ದಶಕದ ಹಿಂದೆ ಯೋಜನೆ ರೂಪಿಸಿತ್ತು.ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಹುಲಿ ಸಂರಕ್ಷಿತ ಪ್ರದೇಶಗಳನ್ನು ಜನಮುಕ್ತವಾಗಿಸಿ, ಅಲ್ಲಿ ವಾಸಿಸುವರರಿಗೆ 15 ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಸ್ಥಳಾಂತರಿಸುವ ಯೋಜನೆ ಪ್ರಕಟಿಸಲಾಗಿತ್ತು.

ಕರ್ನಾಟಕ ಮಾತ್ರವಲ್ಲದೇ ಹಲವು ರಾಜ್ಯಗಳಲ್ಲಿ ಇದು ಜಾರಿಯೂ ಆಗಿದೆ. ಆದರೆ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಇಲ್ಲದ ಭೀಮಗಡ ಸಹಿತ ಹಲವು ಭಾಗಗಳಲ್ಲಿ ಸ್ಥಳೀಯ ನಿವಾಸಿಗಳು ಈಗಲೂ ಇದ್ದಾರೆ. ಅವರೂ ಮುಖ್ಯವಾಹಿನಿಗೆ ಬರಲು ಆಸಕ್ತರಾಗಿದ್ದರೂ ಆರ್ಥಿಕ ನೆರವಿನ ಬೆಂಬಲ ಇರಲಿಲ್ಲ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದ ಕಾಂಪಾ ಅನುದಾನ ಹಾಗೂ ಅರಣ್ಯ ಇಲಾಖೆಯ ನೆರವಿನೊಂದಿಗೆ ಕುಟುಂಬಗಳ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ 15 ಲಕ್ಷ ರೂ.ಗಳನ್ನು ಕುಟುಂಬಕ್ಕೆ ನೀಡಲಿದೆ. ಇದಕ್ಕೂ ಮಾನದಂಡಗಳನ್ನು ರೂಪಿಸಲಾಗಿದ್ದು, ಭೀಮಗಡ ಅಭಯಾರಣ್ಯ ನಿವಾಸಿಗಳು ಒಪ್ಪಿದ್ದಾರೆ.

ಮಾನವನ ಹಸ್ತಕ್ಷೇಪ ಇಲ್ಲದಿದ್ದರೆ ಅರಣ್ಯ ಸಮೃದ್ಧವಾಗಿ ಬೆಳೆಯುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯದೊಳಗಿನ ವಾಸ ಕಷ್ಟಸಾಧ್ಯ. ಜಗತ್ತು ಆಧುನಿಕವಾಗಿ ಸಾಗುತ್ತಿರುವಾಗ, ದಶಕಗಳಿಂದ ಅರಣ್ಯದಲ್ಲೇ ಮೂಲಸೌಕರ್ಯ ಇಲ್ಲದೆ ಕೆಲವರು ವಾಸಿಸುತ್ತಿದ್ದಾರೆ ಇವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಈಗ ನಡೆಯುತ್ತಿದೆ. ಹಿಂದಿನ ತಲೆಮಾರಿನ ಅರಣ್ಯವಾಸಿಗಳಿಗೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಚೆನ್ನಾಗಿ ತಿಳಿದಿತ್ತು, ಆದರೆ ಇಂದಿನ ಪೀಳಿಗೆಯ ಅರಣ್ಯವಾಸಿಗಳಿಗೆ ಅಷ್ಟು ಪರಿಣತಿ ಇಲ್ಲ. ಹೀಗಾಗಿ ನಾಗರಿಕ ಸಮಾಜದಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಈ ಸ್ಥಳಾಂತರ ಸಹಕಾರಿಯಾಗಲಿದೆ ಎಂದ ಅಭಿಪ್ರಾಯವೂ ಇದೆ.

ಸಚಿವರು ಹೇಳೋದೇನು

ಅರಣ್ಯದೊಳಗಿಂದ ಅರಣ್ಯದ ಹೊರಕ್ಕೆ ವಸತಿ ಪ್ರದೇಶಗಳನ್ನು ಸ್ಥಳಾಂತರ ಮಾಡುವುದರಿಂದ ಅರಣ್ಯ ಮತ್ತು ಅರಣ್ಯ ಸಂಪತ್ತು ವೃದ್ಧಿಸುತ್ತದೆ. ಅರಣ್ಯವಾಸಿಗಳ ಬದುಕೂ ಹಸನಾಗುತ್ತದೆ.ಕಳೆದ ಡಿಸೆಂಬರ್ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ವೇಳೆ ಭೀಮಗಢಕ್ಕೆ ಭೇಟಿ ನೀಡಿದ್ದಾಗ, ಅರಣ್ಯದೊಳಗೆ ತಲೆಯ ಮೇಲೆ ದಿನಸಿ ಹೊತ್ತು ಬರುತ್ತಿದ್ದ ಮಹಿಳೆಯರನ್ನು ನೋಡಿ, ಕಾರು ನಿಲ್ಲಿಸಿ ಮಾತನಾಡಿಸಿದಾಗ, ಒಬ್ಬರು ತಮ್ಮ ಪತಿಯನ್ನು ಹುಲಿ ಕೊಂದು ಹಾಕಿತು ಎಂದು ದುಃಖ ತೋಡಿಕೊಂಡರೆ, ಮತ್ತೊಬ್ಬ ಮಹಿಳೆ ತಮ್ಮ ಪತಿಯ ಮೇಲೆ ಕರಡಿ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯ ಉಂಟಾಗಿದೆ ಎಂದರು. ಈ ಘಟನೆ ತಮ್ಮ ಮನ ಕಲಕಿತುತಳೇವಾಡಿಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬದ ಸದಸ್ಯರು ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಹೋಗಲು ತಾವು ಸಿದ್ಧವಿರುವುದಾಗಿ ತಿಳಿಸಿದರು. ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಇದು ಅದು ಸಾಕಾರವಾಗಿದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರ ಅಭಿಪ್ರಾಯ.

20 ವರ್ಷಗಳಿಂದ ಸ್ಥಳಾಂತರದ ಬೇಡಿಕೆ ಇತ್ತು. ಈಶ್ವರ ಖಂಡ್ರೆ ಅವರು ಬಹಳಷ್ಟು ಮುತುವರ್ಜಿ ವಹಿಸಿ ಜನಪರವಾದ ಮಹತ್ವದ ಯೋಜನೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಬೇಕು. ಅರಣ್ಯ ಇದ್ದರೆ ಮಾತ್ರ ಮಳೆ, ಬೆಳೆ ಆಗಲು ಸಾಧ್ಯ. ಅರಣ್ಯ ಉಳಿಸಲು ಪ್ರಯತ್ನಿಸಬೇಕು, ಜೊತೆಗೆ ನಾಗರಹೊಳೆ, ಬಂಡೀಪುರದ ರೀತಿಯಲ್ಲಿಯೇ ಇಲ್ಲಿಯೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಬೇಕು. ಇದೇ ವ್ಯಾಪ್ತಿಯ ಇತರ ತಾಂಡಾಗಳ ಜನರೂ ಸ್ವ ಇಚ್ಛೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸಿದರೆ ಸರ್ಕಾರ ಪ್ರಯತ್ನ ಮಾಡಲಿದೆ ಎಂದರು ಸತೀಶ್ ಜಾರಕಿಹೊಳಿ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.