ಬೆಳಗಾವಿ: ಆಟೋ ಚಾಲಕನೊಂದಿಗೆ ಗಲಾಟೆ, ಗೋವಾ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಕುಸಿದು ಬಿದ್ದು ಸಾವು
ಬೆಳಗಾವಿ: ಆಟೋ ಚಾಲಕನೊಂದಿಗೆ ಸಂಭವಿಸಿದ ಗಲಾಟೆ ವೇಳೆ ಹಲ್ಲೆಗೊಳಗಾದ ಗೋವಾದ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Lavoo Suryaji Mamledar Passes Away: ಬೆಳಗಾವಿಗೆ ಬಂದ ಗೋವಾದ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರ ಜತೆಗೆ ಆಟೋ ಚಾಲಕ ಸಂಘರ್ಷಕ್ಕೆ ಇಳಿದು ಹಲ್ಲೆ ನಡೆಸಿದ ಕಾರಣ ಅವರು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಅವರು ಗೋವಾ ವಿಧಾನಸಭೆಯಲ್ಲಿ ಪೋಂಡಾ ಕ್ಷೇತ್ರವನ್ನು 2012 ರಿಂದ 2017ರ ತನಕ ಪ್ರತಿನಿಧಿಸಿದ್ದರು.
ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಮೇಲೆ ಹಲ್ಲೆ, ಸಾವು
ಗೋವಾ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರ ಕಾರು ಬೆಳಗಾವಿಯ ಖಡೇಬಜಾರ್ ಬಳಿ ಆಟೋಗೆ ಒರೆಸಿಕೊಂಡು ಸಾಗಿತ್ತು. ಅದು ಅರಿವಿಗೆ ಬಾರದ ಕಾರು ಚಾಲಕ ತನ್ನ ಪಾಡಿಗೆ ಕಾರು ತಂದು ಶ್ರೀನಿವಾಸ ಲಾಡ್ಜ್ ಎದುರು ನಿಲ್ಲಿಸಿದ್ದ. ಕಾರಿನಿಂದ ಇಳಿದ ಲಾವೂ ಸೂರ್ಯಾಜಿ ಮಾಮಲೇದಾರ್ ಮೆಟ್ಟಿಲೇರಿ ಲಾಡ್ಜ್ ಒಳಗೆ ಹೊರಟಿದ್ದರು. ಆಗ ಲಾಡ್ಜ್ ಬಳಿಗೆ ಬಂದ ಆಟೋ ಚಾಲಕ ನೇರವಾಗಿ ಹೋಗಿ ಲಾವೂ ಸೂರ್ಯಾಜಿ ಮಾಮಲೇದಾರ್ ಜತೆಗೆ ಜಗಳಕ್ಕೆ ಇಳಿದು, ಮೇಲೆ ಏಕಾಕಿ ಹಲ್ಲೆ ನಡೆಸಿದ್ದ. ಇದರಿಂದ ಆಘಾತಕ್ಕೆ ಒಳಗಾದ ಲಾವೂ ಸೂರ್ಯಾಜಿ ಮಾಮಲೇದಾರ್ ಅಲ್ಲೇ ಕುಸಿದು ಬಿದ್ದಿದ್ಧಾರೆ. ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೃತದೇಹವನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಭೇಟಿ ನೀಡಿದರು.
ಘಟನೆ ಹೇಗಾಯಿತು- ಡಿಸಿಪಿ ರೋಹನ್ ಜಗದೀಶ್ ಸುದ್ದಿಗಾರರಿಗೆ ತಿಳಿಸಿದ್ದಿಷ್ಟು
ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು ಈ ಘಟನೆ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ್ದು, ಇಂದು (ಫೆ 15) ಮಧ್ಯಾಹ್ನ 1.30ರ ಹೊತ್ತಿಗೆ ಈ ಘಟನೆ ನಡೆದಿದೆ. ಗೋವಾದ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಶ್ರೀನಿವಾಸ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಅವರು ತಮ್ಮ ಕಾರಿನಲ್ಲಿ ಲಾಡ್ಜ್ ಕಡೆಗೆ ಬರುವಾಗ ಆಟೋಗೆ ಕಾರು ಒರೆಸಿಕೊಂಡು ಸಾಗಿದೆ. ಲಾಡ್ಜ್ ಎದುರು ಈ ವಿಚಾರವಾಗಿ ಆಟೋ ಚಾಲಕ ಹಾಗೂ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಕೋಪಗೊಂಡಿದ್ದ ಆಟೋ ಚಾಲಕ ಏಕಾಕಿಯಾಗಿ ಲಾವೂ ಸೂರ್ಯಾಜಿ ಮಾಮಲೇದಾರ್ ಅವರ ಕಪಾಳಕ್ಕೆ ಹೊಡೆದಿದ್ಧಾನೆ. ಇದಾಗಿ, ಮೆಟ್ಟಿಲು ಹತ್ತಿಕೊಂಡು ಹೋದ ಲಾವೂ ಸೂರ್ಯಾಜಿ ಮಾಮಲೇದಾರ್ ರೂಮಿನಲ್ಲಿ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರನ್ನು ದಾಖಲಿಸಿಕೊಂಡ ವೈದ್ಯರು ಕೂಡಲೇ ಇಸಿಜಿ ಸೇರಿ ತುರ್ತು ಚಿಕಿತ್ಸೆಗಳನ್ನು ನೀಡಿದ್ದಾರೆ. ಆದರೆ, ಅವರು ಬದುಕಿ ಉಳಿಯಲಿಲ್ಲ ಎಂದು ಡಾಕ್ಟರ್ ತಿಳಿಸಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ಧಾರೆ.
