Belagavi Congress Session: ಬೆಳಗಾವಿಯಲ್ಲಿ ಕಾಂಗ್ರೆಸ್ ಎರಡು ದಿನದ ವಿಶೇಷ ಅಧಿವೇಶನ, ಗಾಂಧೀಜಿ ಭೇಟಿ ಶತಮಾನದ ನೆನಪಿನ ಹಲವು ಕಾರ್ಯಕ್ರಮ
Belagavi Congress Session: ಬೆಳಗಾವಿಯಲ್ಲಿ ನೂರು ವರ್ಷದ ಹಿಂದೆ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಸವಿನೆನಪಿನಲ್ಲಿ ಈಗ ಎರಡು ದಿನಗಳ ಅಧಿವೇಶನ, ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರದಿಂದ ಚಟುವಟಿಕೆಗಳು ಶುರುವಾಗಲಿವೆ.
ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೆ ಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲು ಕುಂದಾ ನಗರಿ ಬೆಳಗಾವಿ ಅಣಿಯಾಗಿದೆ. ಡಿಸೆಂಬರ್ 26ರಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಗಾಂಧೀಜಿ ನೆನಪಿನ ಹಲವು ಚಟುವಟಿಕೆಗಳು, ಕಾಂಗ್ರೆಸ್ ವಿಶೇಷ ಅಧಿವೇಶನವೂ ಬೆಳಗಾವಿಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಘಟಾನುಘಟಿ ಕಾಂಗ್ರೆಸ್ ನಾಯಕರು, ಪ್ರಮುಖರು, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುವರು. ಆಚರಿಸುವ ಮೂಲಕ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸುವರ್ಣ ಸೌಧದಲ್ಲಿ ಮಹಾತ್ಮಾ ಗಾಂಧೀಜಿ ಅವರ ಬೃಹತ್ ಪ್ರತಿಮೆಯನ್ನು ಡಿ.27 ರಂದು ಮುಂಜಾನೆ 10 ಗಂಟೆಗೆ ಅನಾವರಣಗೊಳಿಸುವುದು ಪ್ರಮುಖ ಕಾರ್ಯಕ್ರಮ.
ಹೀಗಿತ್ತು ಶತಮಾನದ ಕಾರ್ಯಕ್ರಮ
ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು,ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗ ಗಂಗಾಧರ ದೇಶಪಾಂಡೆ ಹಾಗೂ ಜವಾಹರ್ ಲಾಲ್ ನೆಹರು ಅವರು ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಲು ಆಹ್ವಾನ ನೀಡಿದರು. ಆಗ ಇಲ್ಲಿ ಅಧಿವೇಶನ ನಡೆದಿತ್ತು. ಇದರ ಸ್ಮರಣೆಯ ಭಾಗವಾಗಿಯೇ ಕಾಂಗ್ರೆಸ್ ನೂರು ವರ್ಷದ ಕಾರ್ಯಕ್ರಮ, ಅಧಿವೇಶನ, ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.
ಆ ಅಧಿವೇಶನಕ್ಕೆ ಬಂದ ಬರುವ ಜನರಿಗೆ ಕುಡಿಯುವ ನೀರು ಕಲ್ಪಿಸಲು ಬಾವಿ ತೋಡಲಾಗಿತ್ತು. 100 ವರ್ಷಗಳ ನಂತರ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂದು ಗಾಂಧಿ ಇಂದು ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ಅನೇಕ ಮಹಾನ್ ನಾಯಕರು ಆ ಸ್ಥಾನ ಅಲಂಕರಿಸಿದ್ದಾರೆ. ನಿಜಲಿಂಗಪ್ಪನವರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕೂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈ ಬಾರಿಯ ಅಧಿವೇಶನವನ್ನು ಗುಜರಾತಿನ ಸಬರಮತಿ ಆಶ್ರಮದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಿತು. ನಂತರ ಎಐಸಿಸಿಗೆ ಬೆಳಗಾವಿಯಲ್ಲೇ ನಡೆಸುವ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಯಿತು. ಇದರ ನೆನಪಿನಲ್ಲಿಯೇ ಬಾವಿಯ ಪ್ರದೇಶದಲ್ಲಿಯೇ ಅಧಿವೇಶನ ನಡೆಯುತ್ತಿದೆ.
ವಿಶೇಷ ಸಭೆ ಇಂದು
ʼಗಾಂಧಿ ಭಾರತʼ ಕಾರ್ಯಕ್ರಮದ ಭಾಗವಾಗಿ ಅ. 2 ರಂದು ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ಹೆಜ್ಜೆ ಹಾಕಿದ್ದರು. ನಂತರ ಪಕ್ಷದ ವತಿಯಿಂದ ಗಾಂಧಿ ವೃತ್ತದಿಂದ ಭಾರತ ಜೋಡೋ ಭವನದವರೆಗೂ ಹೆಜ್ಜೆ ಹಾಕಲಾಗಿತ್ತು. ಈಗ ಮುಂದುವರಿದ ಭಾಗವಾಗಿ ಡಿ. 26 ರಂದು ಬೆಳಗಾವಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಎಲ್ಲ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಆಗಮಿಸಲಿದ್ದಾರೆ. ಶುಕ್ರವಾರ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪಂಚಾಯ್ತಿ ಸದಸ್ಯರು, ಸಮಿತಿ ಹಾಗೂ ನಿಗಮಗಳ ಸದಸ್ಯರು, ನಾಮನಿರ್ದೇಶಿತರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ.
ಗಾಂಧಿ ಪ್ರತಿಮೆ ಅನಾವರಣ ನಾಳೆ
ಸುವರ್ಣ ಸೌಧದಲ್ಲಿನ ಮಹಾತ್ಮಾ ಗಾಂಧೀಜಿ ಅವರ ಬೃಹತ್ ಪ್ರತಿಮೆಯನ್ನು ಡಿ.27 ರಂದು ಮುಂಜಾನೆ 10 ಗಂಟೆಗೆ ಅನಾವರಣಗೊಳಿಸಲಾಗುವುದು. ಈ ಬೃಹತ್ ಕಾರ್ಯಕ್ರಮಕ್ಕೆ ಸರ್ವ ಪಕ್ಷದ ನಾಯಕರು, ಸ್ವಾತಂತ್ರ್ಯ ಹೊರಾಟಗಾರರನ್ನು, ಆಹ್ವಾನಿಸಲಾಗಿದೆ. ಡಿ.26 ರಂದು ನಗರದ ವೀರಸೌಧದಲ್ಲಿನ ಗಾಂಧೀಜಿಯವರ ಪ್ರತಿಮೆ ಹಾಗೂ ರಾಮತೀರ್ಥ ನಗರದಲ್ಲಿನ ಗಂಗಾಧರ್ ರಾವ್ ದೇಶಪಾಂಡೆ ಅವರ ಸ್ಮಾರಕ ಭವನ ಉದ್ಘಾಟಿಸಲಾಗುವುದು.
ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಬಗ್ಗೆ ಸೋನಿಯಾ ಗಾಂಧಿ ಅವರು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕವನ್ನು ನಾನು ಕನ್ನಡಕ್ಕೆ ಅನುವಾದ ಮಾಡಿಸಿದ್ದು, ಗಾಂಧಿ ಭಾರತ ಕಾರ್ಯಕ್ರಮದ ವೇಳೆ ಬಿಡುಗಡೆ ಮಾಡಲಾಗುವುದು.
ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನ ಕೇವಲ ಪಕ್ಷದ ಅಧಿವೇಶನವಾಗಿರದೇ, ಸಾಮಾಜಿಕ ಸುಧಾರಣೆಯ ಅಸ್ತ್ರವಾಗಿತ್ತು. ಸಮಾಜದಲ್ಲಿನ ಅಸ್ಪ್ರಶ್ಯತೆಯನ್ನು ನಿವಾರಿಸಿ ಭ್ರಾತೃತ್ವ ಭಾವನೆಯನ್ನು ಬೆಸೆಯುವುದರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಲಾಯಿತು. 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೇಸ್ ಅಧಿವೇಶನ ಶತಮಾನೋತ್ಸವನ್ನು ಆಚರಿಸುವ ಮೂಲಕ ಇತಿಹಾಸ ಮರುಕಳಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸುವ ಉದ್ದೇಶದೊಂದಿಗೆ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರಕಾರ 41 ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎನ್ನುವುದು ಬೆಳಗಾವಿ ಅಧಿವೇಶನ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಚ್.ಕೆ.ಪಾಟೀಲ್ ವಿವರಣೆ.