Belagavi News: ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ, ಬಸವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ; ಸಿದ್ದರಾಮಯ್ಯ
ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಮುಖ ಸಮಾಜ ಸುಧಾರಕರ ಪೈಕಿ ಬಸವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ. ಆದ್ದರಿಂದ ಬಸವ ಜಯಂತಿಯ ದಿನ ಪ್ರಮಾಣವಚನ ಸ್ವೀಕರಿಸಿ ನುಡಿದಂತೆ ನಡೆದಿರುತ್ತೇವೆ. ಆದ್ದರಿಂದ ಜನರು ಮತ್ತೇ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಬೆಳಗಾವಿ: ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಮುಖ ಸಮಾಜ ಸುಧಾರಕರ ಪೈಕಿ ಬಸವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ. ಆದ್ದರಿಂದ ಬಸವ ಜಯಂತಿಯ ದಿನ ಪ್ರಮಾಣವಚನ ಸ್ವೀಕರಿಸಿ ನುಡಿದಂತೆ ನಡೆದಿರುತ್ತೇವೆ. ಆದ್ದರಿಂದ ಜನರು ಮತ್ತೇ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಪಶು ಸಂಪತ್ತು ಅಧಿಕವಾಗಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆಯ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ. ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಎಲ್ಲಾ ಬೇಡಿಕೆ ಹಂತ ಹಂತವಾಗಿ ಈಡೇರಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಯೋಜನೆ ಸಮರ್ಪಕ ಜಾರಿಗೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಅಥಣಿ ಶಾಸಕರ ನೀರಾವರಿ ಯೋಜನೆಗಳ ಕನಸು ದೊಡ್ಡದಾಗಿವೆ. ಇಡೀ ಕ್ಷೇತ್ರದ ಜನರ ಬದುಕು ಹಸನಾಗಿಸಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅವರು ಬಯಸಿದ್ದಾರೆ ಎಂದು ಹೇಳಿದರು.
ಈ ಭಾಗದ ಜನರು ಮಾತ್ರವಲ್ಲ, ಜಾನುವಾರುಗಳ ಅನುಕೂಲಕ್ಕಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಶಾಸಕ ಲಕ್ಷ್ಮಣ ಸವದಿ ಸ್ಥಾಪಿಸುವ ಮೂಲಕ ತಮ್ಮ ಕಳಕಳಿಯನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ, ಸರಕಾರ ನುಡಿದಂತೆ ನಡೆಯುತ್ತಿದ್ದು, ಐದೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ನೀರಾವರಿ ಯೋಜನೆಗೆ ಅನುದಾನ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಲೋಕಾರ್ಪಣೆಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯವು ಮುಂಬರುವ ದಿನಗಳಲ್ಲಿ ರೈತ ಸಮುದಾಯ, ವಿದ್ಯಾರ್ಥಿಗಳು ಹಾಗೂ ಈ ಭಾಗದ ಜಾನುವಾರುಗಳಿಗೆ ಅನುಕೂಲವಾಗಲಿದೆ. ಮಹಾವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗುವುದು. ಅಥಣಿ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಸರಕಾರ ನೀಡಲಿದೆ ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆ ಸೇವೆ ಉತ್ತಮ
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ಮತ್ತು ಜಾನುವಾರುಗಳನ್ನು ಸಾಕಿಕೊಂಡಿರುವ ರೈತ ಸಮುದಾಯಕ್ಕೆ ಪಶು ವೈದ್ಯಕೀಯ ಮಹಾವಿದ್ಯಾಲಯವು ಅನುಕೂಲವಾಗಲಿದೆ. ವೈದ್ಯರು, ಔಷಧಿಗಳ ಕೊರತೆಯ ಮಧ್ಯೆಯೂ ಪಶುಸಂಗೋಪನೆ ಇಲಾಖೆಯ ಉತ್ತಮ ಸೇವೆ ಒದಗಿಸುತ್ತಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಜಾನುವಾರುಗಳು ಇರುವ ಬೆಳಗಾವಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪರಿಗಣಿಸಿ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಬದ್ಧರಿದ್ದೇವೆ ಎಂದರು.
ನೀರಾವರಿ ಸೌಲಭ್ಯಕ್ಕೆ ಮನವಿ
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕ್ಷೇತ್ರದಲ್ಲಿ 70 ಸಾವಿರ ಎಕರೆ ಜಮೀನು ಇನ್ನೂ ನೀರಾವರಿಯಿಂದ ವಂಚಿತಗೊಂಡಿದ್ದು, ಇದಕ್ಕೆ ಅವಕಾಶ ಕಲ್ಪಿಸಬೇಕು. ಅದೇ ರೀತಿ ಒಂಬತ್ತು ಹಳ್ಳಿಗಳು ಮತ್ತು ಜಮೀನು ಸವಳು-ಜವಳು ಸಮಸ್ಯೆಯಿಂದ ಬಾಧಿತಗೊಂಡಿರುತ್ತವೆ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ತಕ್ಷಣಕ್ಕೆ 20 ಕೋಟಿ ಒದಗಿಸಬೇಕು. ಅಥಣಿ ಭಾಗದ ಒಣ ದ್ರಾಕ್ಷಿಯನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕಾಹಾರ ತಯಾರಿಕೆಗೆ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ವಿನಂತಿಸಿದರು.
ಬರಪೀಡಿತ ಎಂದು ಘೋಷಿಸಿ
ಕಾಗವಾಡ ಶಾಸಕ ಭರಮಗೌಡ ಕಾಗೆ ಮಾತನಾಡಿ, ನೂತನ ಕಾಗವಾಡ ತಾಲ್ಲೂಕಿಗೆ ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲ ಮೂಲಸೌಕರ್ಯ ಒದಗಿಸಬೇಕು. ಕಾಗವಾಡ ತಾಲ್ಲೂಕಿನ ಎರಡು ಹೋಬಳಿಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಸೌಲಭ್ಯಗಳಿಂದ ವಂಚಿತಗೊಂಡಿರುವ ಗಡಿಭಾಗದ ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ವಿನಂತಿಸಿದರು.
ಬಸವೇಶ್ವರರ ಪುತ್ಥಳಿ ಅನಾವರಣ
ಇದಕ್ಕೂ ಮುಂಚೆ ಅಥಣಿಯ ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲಾಗಿರುವ ಜಗಜ್ಯೋತಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಎನ್.ಎಸ್.ಭೋಸರಾಜು, ರಾಮಲಿಂಗಾರೆಡ್ಡಿ, ಸರಕಾರದ ವಿಧಾನಸಭೆ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಶಾಸಕರಾದ ಭರಮಗೌಡ ಕಾಗೆ, ವಿಶ್ವಾಸ ವೈದ್ಯ, ಜೆ.ಟಿ. ಪಾಟೀಲ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ್ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೀದರ್ ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ ಇದ್ದರು.