ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Indian Railway ಟಿಕೆಟ್‌ ತಪಾಸಣೆಗೆಂದು ಬಂದ ಸಿಬ್ಬಂದಿಗೆ ಚಾಕುವಿನಿಂದ ಇರಿದು ಆರೋಪಿ ರೈಲಿನಿಂದ ಧುಮುಕಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ರೈಲಿನಲ್ಲಿ ಚಾಕು ಇರಿತಕ್ಕೆ ಸಿಬ್ಬಂದಿ ಬಲಿಯಾಗಿದ್ದಾರೆ.
ರೈಲಿನಲ್ಲಿ ಚಾಕು ಇರಿತಕ್ಕೆ ಸಿಬ್ಬಂದಿ ಬಲಿಯಾಗಿದ್ದಾರೆ.

ಬೆಳಗಾವಿ: ರೈಲಿನಲ್ಲಿ ಟಿಕೆಟ್‌ ತಪಾಸಣೆ ಮಾಡುತ್ತಿದ್ದ ವೇಳೆ ಸಿಬ್ಬಂದಿಗೆ ಇರಿದ ವ್ಯಕ್ತಿಯೊಬ್ಬ ಆತನ ಸಾವಿಗೆ ಕಾರಣವಾಗಿದ್ದೂ ಅಲ್ಲದೇ ಇನ್ನೂ ಮೂವರ ಮೇಲೆ ಗಾಯಗೊಳಿಸಿ ಚಲಿಸುತ್ತಿದ್ದ ರೈಲಿನಿಂದಲೇ ಜಿಗಿದು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ರೈಲ್ವೆ ಬೋಗಿ ಅಟೆಂಡರ್‌ ಆಗಿದ್ದ ಉತ್ತರ ಭಾರತ ಮೂಲದ ದೇವ‌ಋಷಿ ವರ್ಮಾ (23)ಮೃತಪಟ್ಟಿದ್ದಾರೆ. ಟಿಕೆಟ್‌ ತಪಾಸಕ ಸೇರಿದಂತೆ ಇನ್ನೂ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಾರಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಾಂಡಿಚೇರಿಯಿಂದ ಬೆಂಗಳೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮಾರ್ಗವಾಗಿ ಮುಂಬೈಗೆ ಹೊರಟಿದ್ದ ಚಾಲುಕ್ಯ ಎಕ್ಸ್‌ಪ್ರೆಸ್‌ ( Chalukya express) ರೈಲು ಬೆಳಗಾವಿ ಜಿಲ್ಲೆಯಲ್ಲಿ ಚಲಿಸುತ್ತಿತ್ತು. ಧಾರವಾಡ ದಾಟಿಕೊಂಡು ಗುಂಜಿ–ಖಾನಾಪುರ ಮಧ್ಯದಲ್ಲಿ ಹೊರಟಿದ್ದಾಗ ಟಿಕೆಟ್‌ ತಪಾಸಕ( TTE) ಅಶ್ರಫ್‌ ಕಿತ್ತೂರು ಎನ್ನುವವರು ತಪಾಸಣೆಗೆ ಮುಂದಾಗಿದ್ದರು.

ಈ ವೇಳೆ ಅಲ್ಲಿದ್ದವರು ಟಿಕೆಟ್‌ ನೀಡುತ್ತಿದ್ದರು. ಮೂಲೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನ ಟಿಕೆಟ್‌ ಕೇಳಿದಾಗ ಆಗ ಇಲ್ಲ ಎಂದು ನಿರಾಕರಿಸಿದ್ದಾನೆ. ದಂಡ ಪಾವತಿಸುವಂತೆ ಅಶ್ರಫ್‌ ಹೇಳಿದ್ದಾರೆ. ಆತ ಆಗುವುದಿಲ್ಲ ಎಂದು ಹೇಳಿದ್ದು ಇಲ್ಲಿಂದ ಇಳಿಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಆತನನ್ನು ಬಿಡಿಸಲು ಅಲ್ಲಿದ್ದವರು ಮುಂದಾಗಿದ್ದಾರೆ. ಆಗ ಬೋಗಿ ಅಟೆಂಡರ್‌ ದೇವಋಷಿ ವರ್ಮಾ ಕೂಡ ಅಲ್ಲಿಗೆ ಆಗಮಿಸಿದ್ದು ಅಶ್ರಫ್‌ ಅವರಿಗೆ ದನಿಗೂಡಿಸಿದ್ದಾರೆ. ಆಗ ಆ ವ್ಯಕ್ತಿ ಏಕಾಏಕಿ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದಾನೆ.ಈ ವೇಳೆ ಟಿಕೆಟ್‌ ತಪಾಸಕ ಸೇರಿ ಇತರರ ಮೇಲೂ ದಾಳಿ ಮಾಡಿದ್ದಾನೆ. ಆತನನ್ನು ಹಿಡಿಯಲು ಅಲ್ಲಿದ್ದವರು ಮುಂದಾದಾ ಆತ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ.

ಸಂಜೆ ಬೆಳಗಾವಿಗೆ ರೈಲು ತಲುಪುತ್ತಿದ್ದಂತೆ ತೀವ್ರವಾಗಿ ಗಾಯಗೊಂಡಿದ್ದ ವರ್ಮಾ, ಆಶ್ರಫ್‌ ಹಾಗೂ ಇತರೆ ಇಬ್ಬರರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತಸ್ರಾವವಾಗಿದ್ದ ವರ್ಮಾ ಆಸ್ಪತ್ರೆಯಲ್ಲಿ ಸಂಜೆ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರು ರೈಲ್ವೆ ಪೊಲೀಸರಿಂದ ಘಟನೆ ಕುರಿತು ಮಾಹಿತಿ ಪಡೆದರು. ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ ರೈಲ್ವೆ ನಿಲ್ದಾಣಕ್ಕೂ ತೆರಳಿ ಮಾಹಿತಿ ಕಲೆ ಹಾಕಿದರು. ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್‌ ಗುಳೇದ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ನಂತರ ರೈಲುಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.

ಟಿಕೆಟ್‌ ಇಲ್ಲದೇ ಪ್ರಯಾಣಿಸುವವರ ಸಂಖ್ಯೆ ರೈಲಿನಲ್ಲಿ ಹೆಚ್ಚಿದೆ. ಕೆಲವರು ದಂಡ ಕಟ್ಟಿದರೆ ಮತ್ತೆ ಕೆಲವರು ಮನವಿ ಮಾಡಿಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿಯುತ್ತಾರೆ. ಕೆಲವರು ಜಗಳಕ್ಕೆ ಇಳಿಯವುದೂ ಇದೆ. ಚಾಲುಕ್ಯ ರೈಲಿನಲ್ಲಿ ಮುಸುಕು ಹಾಕಿಕೊಂಡು ಕುಳಿತಿದ್ದ ವ್ಯಕ್ತಿ ಟಿಕೆಟ್‌ ಕೇಳಿದ್ದಕ್ಕೆ ಹಲ್ಲೆ ಮಾಡಿ ಸಿಬ್ಬಂದಿಯನ್ನೇ ಕೊಲೆ ಮಾಡಿದ್ದಾನೆ. ಅಪರಿಚಿತನ ವಿರುದ್ದ ಕೊಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲುಗಳಲ್ಲಿ ಭದ್ರತೆ.ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ಹೀಗಿದ್ದರೂ ಇಂತಹ ಘಟನೆ ನಡೆಯುತ್ತವೆ. ಕೂಡಲೇ ರೈಲುಗಳಲ್ಲಿ ಇನ್ನಷ್ಟು ಭದ್ರತೆ ಹೆಚ್ಚಿಸಿ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ರಕ್ಷಣೆಗೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy appeared in Hindustan Times Kannada website. To read more like this please logon to kannada.hindustantimes.com)

IPL_Entry_Point