Gokak News: ಶಾಸಕರಿಗೆ ಏಕವಚನದಲ್ಲಿ ನಿಂದನೆ, ಗೋಕಾಕ ಡಿಸಿಎಫ್ ಅಮಾನತು
IFS officer Supspend ಕರ್ನಾಟಕದ ಬೆಳಗಾವಿ ವೃತ್ತ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಐಎಫ್‌ಎಸ್ ಅಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತುಗೊಳಿಸಲಾಗಿದೆ.
ಬೆಳಗಾವಿ: ಶಾಸಕರೊಬ್ಬರನ್ನು ಏಕವಚನದಲ್ಲಿ ನಿಂದಿಸಿದ ಆರೋಪದ ಮೇಲೆ ಐಎಫ್‌ಎಸ್ ಅಧಿಕಾರಿಯಾಗಿರುವ, ಗೋಕಾಕ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ( DFO) ಶಿವಾನಂದ ನಾಯಕವಾಡಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರನ್ನು ನಿಂದಿಸಿದ ಬಗ್ಗೆ ದೂರು ನೀಡಲಾಗಿತ್ತು. ಖುದ್ದು ಶಾಸಕ ದುರ್ಯೋಧನ ಔಹೊಳೇ ಅವರೂ ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತುಗೊಳಿಸಲಾಗಿದೆ.
ಗೋಕಾಕ ಅರಣ್ಯ ಉಪವಿಭಾಗ ವ್ಯಾಪ್ತಿಗೆ ರಾಯಬಾಗ ಕ್ಷೇತ್ರವು ಬರುತ್ತದೆ. ಕ್ಷೇತ್ರದಲ್ಲಿ ಅರಣ್ಯೀಕರಣ ಸೇರಿದಂತೆ ಹಲವು ವಿಚಾರದಲ್ಲಿ ಮಾತನಾಡಲು ಶಾಸಕ ದುರ್ಯೋಧನ ಐಹೊಳೆ ಮುಂದಾಗಿದ್ದರು. ಕೆಲವು ಯೋಜನೆಗಳ ಜಾರಿ ವಿಚಾರದಲ್ಲಿ ಶಾಸಕರ ಗಮನಕ್ಕೆ ತಾರದೇ ನಡೆಸಿದ ಬಗ್ಗೆಯೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಶಾಸಕರನ್ನು ಡಿಎಫ್‌ಒ ಅವರು ಏಕ ವಚನದಲ್ಲ ನಿಂದಿಸಿದ್ಧಾರೆ ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಇಬ್ಬರ ನಡುವಿನ ಮಾತಿನ ಚಕಮಕಿಯ ಆಡಿಯೋ ವೈರಲ್ ಕೂಡ ಆಗಿತ್ತು.
ಅರಣ್ಯ ಇಲಾಖೆಯ ಅಧಿಕಾರಿ ಶಾಸಕರೊಬ್ಬರ ಹಕ್ಕುಗಳನ್ನೇ ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿದ್ಧಾರೆ. ಅವರ ವಿರುದ್ದ ಕ್ರಮ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆಯನ್ನು ಶಾಸಕ ದುರ್ಯೋಧನ ಐಹೊಳೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಿದ ಕರ್ನಾಟಕ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಗೋಕಾಕ ಡಿಎಫ್‌ಒ ಅವರ ವಿರುದ್ದದ ಆರೋಪಗಳ ಕುರಿತು ಬೆಳಗಾವಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು. ಇದನ್ನಾಧರಿಸಿ ಡಿಎಫ್‌ಒ ಅವರನ್ನು ಅಮಾನತುಗೊಳಿಸಲಾಗಿದೆ. ಬೆಳಗಾವಿಯ ಡಿಎಫ್‌ಒ ಎಸ್.ಕೆ.ಕಲ್ಲೋಳಿಕರ್ ಅವರಿಗೆ ಗೋಕಾಕ ವಿಭಾಗದ ಪ್ರಭಾರ ವಹಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.