Belagavi News: ರಾಹುಲ್ ಗಾಂಧಿ ಚುನಾವಣೆ ಭರವಸೆಗಳ ಬಗ್ಗೆ ಎಚ್ಚರದಿಂದಿರಿ; ಕರ್ನಾಟಕ ಮತದಾರರಿಗೆ ಮಧ್ಯಪ್ರದೇಶ ಸಿಎಂ ಕರೆ
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ರಾಹುಲ್ ಗಾಂಧಿ ಚುನಾವಣೆ ಭರವಸೆಗಳ ಬಗ್ಗೆ ಎಚ್ಚರದಿಂದಿರಿ; ಕರ್ನಾಟಕ ಮತದಾರರಿಗೆ ಮಧ್ಯಪ್ರದೇಶ ಸಿಎಂ ಕರೆ

Belagavi News: ರಾಹುಲ್ ಗಾಂಧಿ ಚುನಾವಣೆ ಭರವಸೆಗಳ ಬಗ್ಗೆ ಎಚ್ಚರದಿಂದಿರಿ; ಕರ್ನಾಟಕ ಮತದಾರರಿಗೆ ಮಧ್ಯಪ್ರದೇಶ ಸಿಎಂ ಕರೆ

ಮತಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡಬಹುದು. ಆಕಾಶದಿಂದ ನಕ್ಷತ್ರಗಳನ್ನೇ ಕೊಡಿಸುವ ಭರವಸೆ ನೀಡಬಹುದು. ಕುಟುಂಬ ರಾಜಕಾರಣದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ ಬಲವರ್ಧನೆಯಾಗಲಿದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದ್ದಾರೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್. (ಫೈಲ್ ಫೋಟೋ)
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್. (ಫೈಲ್ ಫೋಟೋ)

ಗೋಕಾಕ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ (Ramesh Jarkiholi) ನೆರೆಯ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಚೌಹಾಣ್ (Shivaraj Chouhan) ಅವರು ಗೋಕಾಕ್‌ ವಿಧಾನಸಭಾ ಕ್ಷೇತ್ರಕ್ಕೆ ಬಂದು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಜನರಿಗೆ ಕರೆ ನೀಡಿದ ಅವರು, ಕಾಂಗ್ರೆಸ್‌ನ ಪೊಳ್ಳು ಭರವಸೆಗಳಿಗೆ ಮರುಳಾಗದಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದ ಸಿಎಂ ಹಾಗೂ ಬಿಜೆಪಿ ನಾಯಕ ಚೌಹಾಣ್‌ ರಾಜ್ಯಕ್ಕೆ ಬಂದು ಗೋಕಾಕ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಆದರೆ ಅಲ್ಲಿನ ಕಮಲ ಅಭ್ಯರ್ಥಿ ರಮೇಶ್, ಪ್ರಚಾರದ ವೇಳೆ ಹಾಜರಿರಲಿಲ್ಲ. ಬದಲಿಗೆ ರಮೇಶ್ ಸಹೋದರ ಹಾಗೂ ಅರಬಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಕೇಸರಿ ಪಾಳಯದ ಹಿರಿಯ ಮುಖಂಡರೊಂದಿಗೆ ಬುಧವಾರ (ಏಪ್ರಿಲ್‌ 26) ಪ್ರಚಾರದ ವೇಳೆ ಹಾಜರಿದ್ದರು.

ಆರು ಬಾರಿ ಶಾಸಕರಾಗಿರುವ ರಮೇಶ್ ಅವರು ತಮ್ಮ ತವರು ನೆಲದಲ್ಲಿ ಮಾತ್ರವಲ್ಲದೆ ಇಡೀ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಬಿಜೆಪಿಗೆ ಪಕ್ಷಾಂತರಗೊಂಡ 17 ಶಾಸಕರಲ್ಲಿ ಇವರು ಕೂಡಾ ಒಬ್ಬರು. ಬಂಡಾಯದೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದ ರಮೇಶ್‌ಗೆ, ತವರಿನಲ್ಲಿ ಅಪಾರ ಬೆಂಬಲಿಗರಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಶಾಸಕರ ಪಕ್ಷಾಂತರಕ್ಕೆ ಅವರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಬುಧವಾರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಚೌಹಾಣ್, ಬಿಜೆಪಿ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡಿದೆ. ಕಾಂಗ್ರೆಸ್‌ನಂತೆ ಭ್ರಷ್ಟಾಚಾರ, ಅಪರಾಧ ಮತ್ತು ಕಮಿಷನ್ ದಂಧೆ ನಡೆಸಿಲ್ಲ. ಅಲ್ಲದೆ ರಾಜ್ಯದಲ್ಲಿ ಲಿಂಗಾಯತ ವಿರೋಧಿ ಧೋರಣೆ ಕೂಡಾ ಹೊಂದಿಲ್ಲ. ಪ್ರತಿಪಕ್ಷಗಳು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಮತದಾರರು ಅದಕ್ಕೆ ಮರುಳಾಗಬಾರದು ಎಂದು ಮನವಿ ಮಾಡಿದರು. “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭರವಸೆಗಳ ಬಗ್ಗೆ ಎಚ್ಚರದಿಂದಿರಿ. ಅವರು ಮಧ್ಯಪ್ರದೇಶಕ್ಕೆ ಬಂದು ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ ಅವರಿಂದ ಏನೂ ಮಾಡಲಾಗಿಲ್ಲ,” ಎಂದು ಕುಟುಕಿದರು.

ಮತಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡಬಹುದು. ಆಕಾಶದಿಂದ ನಕ್ಷತ್ರಗಳನ್ನೇ ಕೊಡಿಸುವ ಭರವಸೆ ನೀಡಬಹುದು. ಕೈ ಪಕ್ಷ ಹಣ ಗಳಿಸಲು ಚುನಾವಣೆಯಲ್ಲಿ ಗೆಲ್ಲಲು ಬಯಸುತ್ತದೆ ಎಂದು ಆರೋಪಿಸಿದರು. ಕುಟುಂಬ ರಾಜಕಾರಣದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ ಬಲವರ್ಧನೆಯಾಗಲಿದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಅವರು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. “ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಏಕೈಕ ಪಕ್ಷ ಬಿಜೆಪಿ. ಕರ್ನಾಟಕವನ್ನು ಇನ್ನಷ್ಟು ಬಲಪಡಿಸುವ ಇರಾದೆ ಹೊಂದಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ,” ಎಂದು ಮತದಾರರಿಗೆ ಕರೆ ನೀಡಿದರು. ಕಾಂಗ್ರೆಸ್‌ನಿಂದ ಬಂಡಾಯವೆದ್ದು ದೇಶದ ಹಳೆಯ ಪಕ್ಷದ ಆಡಳಿತದಿಂದ ರಾಜ್ಯವನ್ನು ಉಳಿಸಿದ್ದಕ್ಕಾಗಿ ರಮೇಶ್‌ಗೆ ಚೌಹಾಣ್ ಧನ್ಯವಾದ ಅರ್ಪಿಸಿದರು.

ಗೋಕಾಕ್ ವಿಧಾನಸಭಾ ಕ್ಷೇತ್ರವು ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಒಂದು. ಬೆಂಗಳೂರು ನಗರ ಜಿಲ್ಲೆಯ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಬೆಳಗಾವಿ ಹೊಂದಿದೆ. ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಿಂದ ಮಹಾಂತೇಶ ಕಡಾಡಿ ಅವರನ್ನು ಕಣಕ್ಕಿಳಿಸಿದೆ.

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ ಹಾಗೂ 1,20,085 ಮಹಿಳಾ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 75,000 ಲಿಂಗಾಯತರು, 45,000 ಎಸ್‌ಸಿ ಹಾಗೂ ಎಸ್‌ಸಿ ಮತದಾರರು, 35000 ಮುಸ್ಲಿಂ ಮತದಾರರು. 25000 ಕುರುಬ ಹಾಗೂ ಉಪ್ಪಾರ ಸಮಾಜದ 14,000 ಮತದಾರರಿದ್ದಾರೆ.

Whats_app_banner