ಕನ್ನಡ ಸುದ್ದಿ  /  Karnataka  /  Belagavi News Mla Laxman Savadi Was Center Of Attraction In Athani Program As Cm Dcm Talked About Minister Ship Kub

Belagavi News: ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ, ಅಥಣಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೇಳಿದ್ದೇನು

Karnataka politics ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಾನಾ ಪ್ರಗತಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ಅವರ ರಾಜಕೀಯ ಭವಿಷ್ಯದ ಕುರಿತೂ ನಾಯಕರು ಪ್ರಸ್ತಾಪಿಸಿದರು.

ಬೆಳಗಾವಿಯ ಅಥಣಿಯಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಶಾಸಕ ಲಕ್ಷ್ಮಣ ಸವದಿ ಸಹಿತ ಹಲವರು ಚಾಲನೆ ನೀಡಿದರು.
ಬೆಳಗಾವಿಯ ಅಥಣಿಯಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಶಾಸಕ ಲಕ್ಷ್ಮಣ ಸವದಿ ಸಹಿತ ಹಲವರು ಚಾಲನೆ ನೀಡಿದರು.

ಬೆಳಗಾವಿ: ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ಸೇರಿಯೇ ಬಿಡುತ್ತಾರೆ ಎನ್ನುವ ಚರ್ಚೆ ಕಳೆದ ತಿಂಗಳು ಜೋರಾಗಿತ್ತು. ಅದರಲ್ಲೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ಮರಳಿದ ಮೇಲೆ ಲಕ್ಷ್ಮಣ ಸವದಿ ಕೂಡ ಅವರನ್ನು ಹಿಂಬಾಲಿಸುತ್ತಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಅವರಿಗೆ ಸಚಿವ ಸ್ಥಾನವನ್ನೂ ನೀಡಲಾಗುತ್ತದೆ ಎನ್ನುವ ಚರ್ಚೆಗಳಿಗೇನೂ ಕಡಿಮೆ ಇಲ್ಲ. ಆದರೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಬುಧವಾರ ನಡೆದ ನಾನಾ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ವೇಳೆ ಲಕ್ಷ್ಮಣ ಸವದಿ ಅವರ ಸಚಿವಸ್ಥಾನ ಕುರಿತು ಚರ್ಚೆಗಳೂ ನಡೆದವು.

ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್‌ನಲ್ಲಿಯೇ ಉತ್ತಮ ಭವಿಷ್ಯದಿಂದ ತಾಳ್ಮೆಯಿಂದ ಕಾಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರೆ. ಅವರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ನಿಮ್ಮ ಬಯಕೆಯೂ ಇದೆ. ಆಗಿದೆ. ಇದಕ್ಕಾಗಿ ಸ್ವಲ್ಪ ದಿನ ಕಾಯಲೇಬೇಕು.ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ. ಸವದಿ ಅವರಿಗೆ ಸಚಿವ ಸ್ಥಾನ ನೀಡೋಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ,

500 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ಕೊಡುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನಮ್ಮ ಕಾಂಗ್ರೆಸ್ ಸರ್ಕಾರ ಈ ಬೃಹತ್ ಯೋಜನೆಯನ್ನು ಬೆಳಗಾವಿ ಜಿಲ್ಲೆಗೆ ನೀಡಿದ್ದನ್ನು ಮರೆಯಲಾಗದು. ಇದರಿಂದ ಅಥಣಿ ತಾಲ್ಲೂಕಿನ ಶೇ95 ರಷ್ಟು ಭೂಮಿ, ಅಂದರೆ 50 ಸಾವಿರ ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆಯಲಿವೆ ಎಂದು ನುಡಿದರು.

ಈ ಯೋಜನೆಯಿಂದ ಎರಡು ರೀತಿಯ ಲಾಭ ಆಗಲಿದೆ. ಮೊದಲಿಗೆ ಒಣ ಭೂಮಿ ಇರುವ ಜಮೀನುಗಳಿಗೆ ನೀರು ಒದಗುತ್ತದೆ. ಎರಡನೆಯದಾಗಿ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಅಭಿವೃದ್ಧಿ ಕೂಡ ಆಗುತ್ತದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಉದಾಹರಣೆಗಳನ್ನು ನೀಡಿ ವಿವರಿಸಿದರು.

ಬಿಜೆಪಿ ಸಂಸದರು ಮಾತನಾಡುತ್ತಿಲ್ಲ

ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಒಂಚೂರು ಸಹಕಾರ ನೀಡುತ್ತಿಲ್ಲ. ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬೇ ಒಬ್ಬ ಸಂಸದ ಪಾರ್ಲಿಮೆಂಟಲ್ಲಿ ದ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.

ನೀರಾವರಿ ಯೋಜನೆಗಳ ಬಗ್ಗೆಯೂ ಈ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು ಹೇಳಿ. ಬಿಜೆಪಿ ಇವತ್ತಿನವರೆಗೂ ನುಡಿದಂತೆ ನಡೆದ ಒಂದೇ ಒಂದು ಉದಾಹರಣೆ ಇದೆಯಾ ನೀವೇ ವಿಚಾರ ಮಾಡಿ. ಕಾಂಗ್ರೆಸ್ ಸರ್ಕಾರ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ನೀವು ಕೊಟ್ಟ ಓಟಿಗೆ ಗೌರವ ಕೊಟ್ಟಿದ್ದೇವೆ. ಹೌದೋ ಇಲ್ಲವೋ ಎದೆ ಮುಟ್ಟಿಕೊಂಡು ಕೇಳಿಕೊಳ್ಳಿ ಎಂದು ಸಿಎಂ ಕರೆ ನೀಡಿದರು.

ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ, ಕುಟುಂಬದ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ಕೊಡುತ್ತಿರುವ ನಾವು ಬೇಕೋ-ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮ ಬದುಕಿಗೆ ವಂಚಿಸುತ್ತಿರುವ ಬಿಜೆಪಿ ಬೇಕಾ? ನಿಮ್ಮ ಹೃದಯವನ್ನು ಕೇಳಿಕೊಳ್ಳಿ. ನಿಮ್ಮ ಹೃದಯ ಹೇಳಿದವರಿಗೆ ಮತ ಹಾಕಿ ಎಂದು ಸಲಹೆ ನೀಡಿದರು.‌

ಕೂಲಿ ಕೊಡಿ

ನರೇಂದ್ರ ಮೋದಿಯವರ ಸುಳ್ಳುಗಳಿಗೆ, ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳಿಗೆ ಕೋಲೆ ಬಸವನಂತೆ ತಲೆ ಆಡಿಸುವ ಬಿಜೆಪಿಯನ್ನು ತಿರಸ್ಕರಿಸಿ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಕೆಲಸ ಮಾಡಿದವರಿಗೆ ನೀವು ಕೂಲಿ ಕೊಡಿ ಎಂದು ಮನವಿ ಮಾಡಿದರು.

ನಾಡಿನ ಬಡವರ, ಮಧ್ಯಮ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದು ತಪ್ಪಾ? ಆದರೆ ಬಿಜೆಪಿ ಇದನ್ನು ವಿರೋಧಿಸುತ್ತಿದೆ. ನಾಡಿನ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು BJP ಅವಮಾನಿಸುತ್ತಿದೆ. ನಿಮ್ಮನ್ನು ಅವಮಾನಿಸುವವರನ್ನು ಕ್ಷಮಿಸಬೇಡಿ ಎಂದು ಹೇಳಿದರು.

ಶಾಸಕರಾದ ಲಕ್ಷ್ಮಣ್ ಎಂ‌ ಸವದಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಎಂ ಪಟ್ಟಣ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.