Panchamasali Reservation: ವರ್ಷದ ಬಿಡುವಿನ ಬಳಿಕ ಮತ್ತೆ ಶುರುವಾಯ್ತು ಪಂಚಮಸಾಲಿ ಮೀಸಲು ಹೋರಾಟ
Belagavi News ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮ ಸಾಲಿ ಸಮಾಜದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಸಮಿತಿ ಮತ್ತೆ ಮನವಿ ನೀಡಿ ಹೋರಾಟ ಆರಂಭಿಸಿದೆ.

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಶುರುವಾಗಿದೆ. ಕೆಲವು ದಿನದಿಂದ ನಿಲುಗಡೆಯಾಗಿದ್ದ ಹೋರಾಟಕ್ಕೆ ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮರು ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಪಂಚಮ ಸಾಲಿ ಸಮಾಜಕ್ಕೆ ಸೇರಿದ ಸಚಿವರು, ಶಾಸಕರ ನಿವಾಸಿಗಳಿಗೆ ತೆರಳಿ ಮನವಿ ಸಲ್ಲಿಸುವ ಚಟುವಟಿಕೆ ನಡೆಸಲಾಗುತ್ತಿದೆ. ಆನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಪಂಚಮಸಾಲಿ ಮೀಸಲು ಜಾರಿಗೊಳಿಸಲು ಒತ್ತಾಯಿಸಲಾಗುತ್ತದೆ. ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಕುಎಂಪುನಗರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ನಿವಾಸಕ್ಕೆ ಭೇಟಿ ನೀಢಿ ಮನವಿಯನ್ನು ಸಲ್ಲಿಸಲಾಯಿತು. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ, ಗದಗ ಜಿಲ್ಲೆ ನರಗುಂದದ ಬಿಜೆಪಿ ಶಾಸಕ ಸಿ.ಸಿ.ಪಾಟೀಲ ಹಾಗೂ ಕಾಂಗ್ರೆಸ್ ಶಾಸಕ ಸಿಂದಗಿ ಕ್ಷೇತ್ರದ ಅಶೋಕ ಮನಗೂಳಿ ಅವರಿಗೆ ಮುಂದಿನ ಮೂರು ದಿನ ಮನವಿ ಸಲ್ಲಿಸುವ ಕಾರ್ಯಕ್ರಮವೂ ನಿಗದಿಯಾಗಿದೆ.
ಬೆಳಗಾವಿಯಲ್ಲಿ ಸಚಿವರಿಗೆ ಮನವಿ ನೀಡುವುದಕ್ಕೂ ಮುನ್ನ ಮಾತನಾಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಮೊದಲಿನಿಂದಲೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ 2ಡಿ ಮೀಸಲಾತಿ ಕೊಟ್ಟಿತ್ತು. ಅದು ನಮಗೆ ಬೇಡ. 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರೆಸಿದ್ದೇವೆ ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಈಶ್ವರ್ ಖಂಡ್ರೆ ಅವರು ಮೀಸಲಾತಿ ಪರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಅಧಿವೇಶನದಲ್ಲೂ ಮಾತನಾಡುವ ವಿಶ್ವಾಸವಿದೆ. ಎಲ್ಲರೂ ಸೇರಿ ಧ್ವನಿ ಎತ್ತಿದರೆ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುತ್ತಾರೆ. ಇಡೀ ಸಮಾಜವೇ ಅವರ ಜೊತೆಗಿರುತ್ತದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸಚಿವರ ಅಭಯ
ನಮ್ಮ ಇಡೀ ಕುಟುಂಬ ಪಂಚಮಸಾಲಿ ಸಮಾಜ ಮೀಸಲಾತಿ ಹೋರಾಟದಲ್ಲಿ ಇರುತ್ತದೆ. ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುತ್ತೇವೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮಘಟ್ಟ ತಲುಪಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಭಯ ನೀಡಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ , ಶ್ರೀಗಳ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ನಾವು ಬೇರೆ ಸಮಾಜಕ್ಕೆ ಅನ್ಯಾಯ ಮಾಡಿ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಈ ಮಾತನ್ನು ಶ್ರೀಗಳು ಹೋರಾಟದ ಮೊದಲ ದಿನವೇ ಹೇಳಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲಿ ಸಮಾಜದ ಎಲ್ಲ ಶಾಸಕ, ಸಚಿವರನ್ನು ಒಟ್ಟಿಗೆ ಸೇರಿಸಿ ಚರ್ಚೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ನಾವು ಬಸವ ತತ್ವದ ಮೇಲೆ ನಡೆಯುವವರು. ಸಮಯ ಪ್ರಜ್ಞೆ ನಮಗಿದ್ದು, ತಾಳ್ಮೆಯಿಂದ ಹೋರಾಡುತ್ತೇವೆ. ಆದರೆ, ನಮ್ಮ ತಾಳ್ಮೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗ ಮೀಸಲಾತಿ ತೆಗೆದುಕೊಂಡಿಲ್ಲ ಎಂದರೆ ಮುಂದೆ ಸಿಗಲು ಸಾಧ್ಯವಿಲ್ಲ. ಈಗ ನಿರ್ಣಾಯಕ ಘಟಕ್ಕೆ ಬಂದು ನಿಂತಿದೆ. ನಾನು ಕಿತ್ತೂರು ರಾಣಿ ಚನ್ನಮ್ಮನವರ ವಂಶಸ್ಥಳು. ಚನ್ನಮ್ಮ ಎದೆಗುಂದದೆ ಹೋರಾಟ ಮಾಡಿದ್ದಾಳೆ. ಗೆದ್ದಾಗ ಸೋಕ್ಕು ತೋರುವುದು, ಸೋತಾಗ ಸೊರಗುವುದು ನಮ್ಮ ಗುಣವಲ್ಲ. ರಾಜಕಾರಣ ನಿಂತ ನೀರಲ್ಲ. ಸಮಾಜದ ಎಲ್ಲಾ ಬಾಂಧವರು ನನ್ನ ಪರವಾಗಿ ನಿಂತಿರುವುದಕ್ಕೆ ನಾನು ಋಣಿಯಾಗಿದ್ದೇನೆ. ಸಮಾಜದ ಪರ ನಾನು ನನ್ನ ಬದ್ಧತೆ ಉಳಿಸಿಕೊಳ್ಳುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಆರ್.ಕೆ.ಪಾಟೀಲ್, ಗುಂಡು ಪಾಟೀಲ್, ಶಿವಾನಂದ ತಂಬಾಕಿ, ನಂದು ಕಾರಜೋಳ, ಬಸವರಾಜ ಪಾಟೀಲ್, ಸಿದ್ದನಗೌಡ ಪಾಟೀಲ್, ಆನಂದ ಗುಡಸ, ರಾವಸಾಬ್ ಪಾಟೀಲ್, ರಾಜು ಮಗದುಮ್ಮ, ಬಸವರಾಜ ಕೊಟ್ಟೂರಶೆಟ್ಟಿ, ಸುರೇಶ ಹೊಸಪೇಟ, ಶಿವಪ್ಪ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಭಾಗ