Belagavi News: ಸವದತ್ತಿ ಯಲ್ಲಮ್ಮನ ದೇಗುಲಕ್ಕೆ ದಾಖಲೆ ಆದಾಯ, ಶಕ್ತಿ ಯೋಜನೆಯೂ ಕಾರಣ
ಉತ್ತರ ಕರ್ನಾಟಕದ ಪ್ರಮುಖ ಶಕ್ತಿಪೀಠ ಸವದತ್ತಿ ಯಲ್ಲಮ್ಮನ ದೇಗುಲಕ್ಕೆ ದಾಖಲೆಯ ಆದಾಯ ಈ ವರ್ಷ ಹರಿದು ಬಂದಿದೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಪೀಠ ಯಲ್ಲಮ್ಮದೇವಿ ದೇಗುಲಕ್ಕೆ ದಾಖಲೆಯ ಆದಾಯ ಬಂದಿದೆ. ಹುಂಡಿ ಎಣಿಕೆಯ ಪ್ರಕಾರ ಹಿಂದಿನ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಆದಾಯದ ಪ್ರಮಾಣ ದಾಖಲೆಯೇ ಆಗಿದೆ. ಒಂದೇ ವರ್ಷದಲ್ಲಿ ಆದಾಯ ಪ್ರಮಾಣ ಶೇ.25 ರಷ್ಟು ಏರಿಕೆ ಕಂಡು ಬಂದಿದೆ. ಕರ್ನಾಟಕ ಸರ್ಕಾರ ಗ್ಯಾರಂಟಿಯಡಿ ಶಕ್ತಿ ಯೋಜನೆ ರೂಪಿಸಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸಿರುವುದು ಆದಾಯ ಏರಿಕೆಯ ಪ್ರಮುಖ ಅಂಶ. ಇದಲ್ಲದೇ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಬಾರಿ ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿರುವುದು ಕಂಡು ಬಂದಿದೆ.
ಶನಿವಾರವಷ್ಟೇ ಮುಗಿದಿರುವ 2023-24 ಆರ್ಥಿಕ ವರ್ಷದ ಕೊನೆ ಹುಂಡಿ ಎಣಿಕೆಯಲ್ಲಿ 11.23 ಕೋಟಿ ರೂ. ಆದಾಯ ಬಂದಿರುವುದು ಕಂಡು ಬಂದಿದೆ. ಇದರಲ್ಲಿ ನಗದು, ಚಿನ್ನಾಭರಣಗಳೂ ಸೇರಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯ ಪ್ರಮಾಣ 2.40 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
ಇದರಲ್ಲಿ ನಗದು ರೂಪದಲ್ಲಿಯೇ ಹುಂಡಿ, ಸೇವೆಗಳಿಂದ 10.22 ಕೋಟಿ ರೂ. ಬಂದಿದೆ. 84.14 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳು, 16.65 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳೂ ಸೇರಿವೆ. ನಗದು ಮಾತ್ರವಲ್ಲದೇ ಆಭರಣಗಳ ಸಂಗ್ರಹದಲ್ಲೂ ಏರಿಕೆಯಾಗಿರುವುದು ಹುಂಡಿ ಎಣಿಕೆ ವೇಳೆ ಗೊತ್ತಾಗಿದೆ.
ಕಳೆದ ವರ್ಷ ಅಂದರೆ 2022-23ರಲ್ಲಿ ದೇವಸ್ಥಾನಕ್ಕೆ 8.83 ಕೋಟಿ ರೂ. ಆದಾಯ ಬಂದಿತ್ತು. ಇದರಲ್ಲಿ 8.01 ಕೋಟಿ ರೂ. ನಗದು, 66.28 ಲಕ್ಷ ರೂ. ಚಿನ್ನದ ಆಭರಣಗಳು, 16.65 ಲಕ್ಷ ರೂ. ಬೆಳ್ಳಿ ಆಭರಣಗಳು ಸೇರಿದ್ದವು.
ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ತೆಲಂಗಾಣದಿಂದಲೂ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ತಮ್ಮ ಮನದಿಷ್ಟಾರ್ಥಗಳನ್ನು ಪೂರೈಸುವಂತೆ ದೇವಿಯಲ್ಲಿ ಪ್ರಾರ್ಥಿಸುತ್ತಾರೆ. ನಗದು ಮಾತ್ರವಲ್ಲದೇ ಚಿನ್ನ,ಬೆಳ್ಳಿ ಆಭರಣಗಳನ್ನು ಭಕ್ತಿಯ ರೂಪದಲ್ಲಿ ದೇವಿಗೆ ಸಮರ್ಪಿಸುತ್ತಾರೆ. ಅದರಲ್ಲೂ ಬೆಟ್ಟದಲ್ಲಿ ನಡೆಯುವ ಮೂರು ತಿಂಗಳ ಹುಣ್ಣಿಮೆ ಕಾರ್ಯಕ್ರಮಗಳಿಗೆ ಗಾಡಿ ಕಟ್ಟಿಕೊಂಡು ಭಕ್ತರು ಬರುವುದು ವಿಶೇಷ.
ಈ ಬಾರಿ ಶಕ್ತಿ ಯೋಜನೆ ಕೂಡ ಜಾರಿಯಾಗಿರುವುರಿಂದ ಕರ್ನಾಟಕದ ನಾನಾ ಭಾಗಗಳಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಯೇ ಆಗಮಿಸಿರುವುದನ್ನು ಗಮನಿಸಿದ್ದೇವೆ. ಈ ಕಾರಣದಿಂದಲೂ ಆದಾಯದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಧಿಕ ಯಲ್ಲಮ್ಮನಗುಡ್ಡ ದೇಗುಲ ಸಮಿತಿ ಅಧಿಕಾರಿಗಳು ಹೇಳುತ್ತಾರೆ.
ಯಲ್ಲಮ್ಮನಗುಡ್ಡದ ದೇಗುಲಕ್ಕೆ ಬರೋಬ್ಬರಿ 500 ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. 1514ರಲ್ಲಿ ಬೆಳಗಾವಿ ಜಿಲ್ಲೆ ರಾಯಭಾಗದ ಬೊಮ್ಮಪ್ಪ ನಾಯಕ ಅವರು ದೇಗುಲವನ್ನು ನಿರ್ಮಿಸಿದ್ದಾಗಿ ಇತಿಹಾಸ ಹೇಳುತ್ತದೆ. ದೇಗುಲದ ಆವರಣದಲ್ಲಿಯೇ ಗಣೇಶ, ಮಲ್ಲಿಕಾರ್ಜುನ, ಪರುಶುರಾಮ, ಏಕನಾಥ ಹಾಗೂ ಸಿದ್ದೇಶ್ವರ ದೇಗುಲಗಳೂ ಇವೆ. ಅದರಲ್ಲೂ ಒಂದು ಕಾಲಕ್ಕೆ ಇಲ್ಲಿ ದೇವದಾಸಿ ಸಂಸ್ಕೃತಿ ಯೂ ಇತ್ತು. ಹಲವು ದೇವದಾಸಿಯರು ದೇವಿಗೆ ನಡೆದುಕೊಳ್ಳುತ್ತಿದ್ದರು. ಈಗ ಅದೆಲ್ಲವೂ ಇಲ್ಲ. ಆದರೆ ಮಹಿಳೆಯರು ಮಾತ್ರ ವಿಶೇಷವಾಗಿ ದೇವಿಯನ್ನು ಆರಾಧಿಸುವ ಪ್ರಮಾಣ ಅಧಿಕ. ಹಲವಾರು ಕುಟುಂಬಗಳ ಕುಲದೇವತೆಯೂ ಹೌದು ಸವದತ್ತಿ ರೇಣುಕಾದೇವಿ. ಈಗ ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆಯ ನಿರ್ವಹಣೆಯಲ್ಲಿ ಈ ದೇಗುಲವಿದೆ.