Belagavi News: ತಾಂತ್ರಿಕ ದೋಷದಿಂದ ತರಬೇತಿ ವಿಮಾನ ಬೆಳಗಾವಿ ಹೊರವಲಯದ ಹೊಲದಲ್ಲಿ ತುರ್ತು ಭೂಸ್ಪರ್ಶ
ತರಬೇತಿ ನಿರತ ವಿಮಾನವೊಂದು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬೆಳಗಾವಿ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ: ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶ (Flight Emergency Landing) ಮಾಡಿರುವ ಘಟನೆ ಬೆಳಗಾವಿ (Belagavi) ಹೊರವಲಯದ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು (ಮೇ 30, ಮಂಗಳವಾರ) ಬೆಳಗ್ಗೆ ಈ ಘಟನೆ ನಡೆದಿದ್ದು, ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇದ್ದರು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರೆಡ್‌ಬರ್ಡ್ ಸಂಸ್ಥೆಗೆ ಸೇರಿದ ವಿಟಿ-ಆರ್ ಬಿಎಫ್ ತರಬೇತಿ ವಿಮಾನ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇಬ್ಬರು ಪ್ರಯಾಣಿಸುತ್ತಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಾಂಬ್ರಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ರನ್‌ವೇನಲ್ಲಿ ವಿಮಾನಕ್ಕೆ ಹಕ್ಕಿ ಡಿಕ್ಕಿ
ಕಳೆದ ಗುರುವಾರ (ಮೇ 25) ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ತಪ್ಪಿಸಿಕೊಂಡಿದ್ದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿತ್ತು.
ಗುರುವಾರ ಬೆಳಗ್ಗೆ ವಿಮಾನ ಟೇಕಾಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗಲೇ ರನ್ ವೇಯಲ್ಲಿ ವಿಮಾನದ ರೆಕ್ಕೆಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿತ್ತು. ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿತ್ತು.
ತಕ್ಷಣ ಅಪಾಯದ ಸೂಚನೆ ಅರಿತ ವಿಮಾನದ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಿಮಾನ ವಾಪಾಸ್ ಬಂದಿದೆ. ಬಳಿಕ ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ನಡೆಸಲಾಯಿತು. ಆಮೇಲೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರಿಗೆ ಸಾಗಲು ವ್ಯವಸ್ಥೆ ಮಾಡಲಾಯಿತು. ಈ ಘಟನೆ ಕೆಲಕಾಲ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.
ವಿಭಾಗ