ಮುಡಾ ಕೇಸ್‌ನಲ್ಲಿ ಹೈಕಮಾಂಡ್ ಬೆಂಬಲ ಸಿಕ್ತು, ಮುಂದೇನು ಅನ್ನೋದನ್ನು ವಿವರಿಸಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಡಾ ಪ್ರಕರಣವನ್ನು ಬಿಜೆಪಿ ಮತ್ತು ಜೆಡಿಎಸ್ ಗಂಭೀರವಾಗಿ ತೆಗೆದುಕೊಂಡಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅದನ್ನು ನಿರ್ಲಕ್ಷಿಸುವಂತೆ ಇಲ್ಲ. ಈಗಾಗಲೇ ಅವರಿಗೆ ಮುಡಾ ಕೇಸ್‌ನಲ್ಲಿ ಹೈಕಮಾಂಡ್ ಬೆಂಬಲ ಸಿಕ್ತು. ಇದರಲ್ಲಿ ಮುಂದೇನು ಅನ್ನೋದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ರು. ಅದರ ವಿವರ ಇಲ್ಲಿದೆ.
ಬೆಳಗಾವಿ: ಬಿಜೆಪಿ ಜೆಡಿಎಸ್ ನಾಯಕರ ಮೈಸೂರು ಪಾದಯಾತ್ರೆ ಕಾರಣ ಮುಡಾ ಕೇಸ್‌ನಲ್ಲಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ನಿಂತಿದ್ದು, ಭಾನುವಾರ ಪಕ್ಷದ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿಗೆ ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ನಿಂತರು. ಬಿಜೆಪಿ ಜೆಡಿಎಸ್ ನಾಯಕರು ತಮ್ಮ ಮಕ್ಕಳ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಟೀಕಿಸಿದ್ದರು.
ಈ ಮಹತ್ವದ ಮಾತುಕತೆ ಬಳಿಕ ಇಂದು ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಕೇಸ್ ವಿಚಾರವಾಗಿ ಅಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಮುಡಾ ಕೇಸ್ ಎದುರಿಸಲು ಕಾಂಗ್ರೆಸ್ ತಂತ್ರವೇನು; ವಿವರಿಸಿದ್ರು ಸಿಎಂ ಸಿದ್ದರಾಮಯ್ಯ
ಮುಡಾ ಪ್ರಕರಣವನ್ನು ಕಾನೂನು ಪ್ರಕಾರ ಹಾಗೂ ರಾಜಕೀಯವಾಗಿ ಸೂಕ್ತ ರೀತಿಯಲ್ಲೇ ಎದುರಿಸುತ್ತೇವೆ. ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಆಗಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮುಡಾ ಪ್ರಕರಣದ ಕುರಿತು ರಾಜ್ಯಪಾಲರು ನೀಡಿರುವ ಶೋಕಾಸ್ ನೊಟೀಸ್ ಹಿಂತೆಗೆದುಕೊಳ್ಳಬೇಕು. ಅದೇ ರೀತಿ ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ನೀಡಿರುವ ದೂರನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ. ಈ ಕುರಿತಾಗಿ ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದರು.
ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ; ಕೆ.ಸಿ. ವೇಣುಗೋಪಾಲ್
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ಗೆ ಇದು ರಾಜಕೀಯವಾಗಿ ನಷ್ಟ ಉಂಟು ಮಾಡಿದೆ. ಇದಲ್ಲದೆ, ಹಳೆಯ ಮತ್ತು ವಿವಿಧ ಪ್ರಕರಣಗಳ ತನಿಖೆಯಿಂದ ಆ ಪಕ್ಷಗಳ ನಾಯಕರಿಗೆ ವೈಯಕ್ತಿಕವಾಗಿಯೂ ತೊಂದರೆಯಾಗಲಿದೆ ಎಂಬುದು ಅವರ ಅರಿವಿಗೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಅವರನ್ನು ಹಿಮ್ಮೆಟ್ಟಿಸಲು ಅವರ ವಿರುದ್ಧವೇ ಕೆಲವು ಆರೋಪಗಳನ್ನು ಮಾಡಿದ್ದಾರೆ. ಆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ.
ರಾಜ್ಯಪಾಲರ ಬಳಕೆ ದುರದೃಷ್ಟಕರ: ಮುಡಾ ಪ್ರಕರಣದಲ್ಲಿ ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಂಡಿರುವುದು ದುರದೃಷ್ಟಕರ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟೀಸ್ ನೀಡುವ ಮೂಲಕ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ಈ ಪಿತೂರಿ ವಿರುದ್ಧ ಹೋರಾಡಲು ತೀರ್ಮಾನಿಸಿದೆ. ಸಚಿವರು, ಶಾಸಕರು ಜಿಲ್ಲೆಗಳು, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ, ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಬಿಜೆಪಿ-ಜೆಡಿಎಸ್ ನ ಹುನ್ನಾರವನ್ನು ಬಯಲಿಗೆಳೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೆಸಿ ವೇಣುಗೋಪಾಲ್ ವಿವರಿಸಿದರು.
ಕಾನೂನು ಕ್ರಮ ಕೈಗೊಳ್ಳಲಿ: ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಈ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲು ನಿತ್ಯವೂ ಎಂಬಂತೆ ಸಿದ್ದರಾಮಯ್ಯ ವಿರುದ್ಧ ಪದೇಪದೆ ಭ್ರಷ್ಟಾಚಾರ ಆರೋಪ ಹೊರಿಸುವುದ ಸರಿಯಲ್ಲ. ಕಾಂಗ್ರೆಸ್ ಬಡವರ ಪರವಾಗಿದೆ ಎಂದು ಅವರಿಗೂ ಗೊತ್ತಿದೆ. ಹಿಂದಿನ ಚುನಾವಣೆ ಕರ್ನಾಟಕದಲ್ಲಿ ಬಡವರು-ಶ್ರೀಮಂತರ ನಡುವೆ ಇತ್ತು. ಆದ್ದರಿಂದಲೇ 135 ಸೀಟುಗಳೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದೇವೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯದ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್ ಅವರು ಇಲ್ಲಿಂದಲೇ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ.ಸೀಮಿತ ಸಂಪನ್ಮೂಲದೊಂದಿಗೆ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ನೀಡುವ ಬದಲಿಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದರು.