ಕಾಗವಾಡ ಐನಾಪುರ ಗ್ರಾಮದಲ್ಲಿ ವಿವಸ್ತ್ರಗೊಳಿಸಿ ಮಹಿಳೆಯ ಮೇಲೆ ಹಲ್ಲೆ: ವರದಿ, ನೆನಪಾಗಿದೆ ವಂಟಮೂರಿ ಘಟನೆ
ಕಾಗವಾಡ ತಾಲೂಕಿನ ಐನಾಪುರದಲ್ಲಿ ಜಮೀನು ಒತ್ತುವರಿ ಪ್ರಶ್ನಿಸಿದ ಬಡಕುಟುಂಬದ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಮಾಧ್ಯಮ ವರದಿ ಹೇಳಿದೆ.

ಬೆಳಗಾವಿ: ವಂಟಮೂರಿ ಘಟನೆ ನೆನಪು ಮರೆಯಾಗುವ ಮೊದಲೇ ಅದೇ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ವಿವಸ್ತ್ರಗೊಳಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಜಮೀನು ಒತ್ತುವರಿ ಪ್ರಶ್ನಿಸಿದ ಬಡಕುಟುಂಬದ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಟಿವಿ9ಕನ್ನಡ ವರದಿ ಮಾಡಿದೆ.
ಕೆಲ ತಿಂಗಳುಗಳ ಹಿಂದೆ ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ನಡೆದಿತ್ತು. ಇದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತಲ್ಲದೆ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಾಗಿದ್ದು, ಈಗ ಮತ್ತೊಂದು ಮಹಿಳಾ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದ ಗಮನಸೆಳೆದಿದೆ.
ಐನಾಪುರದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಇದು
ಟಿವಿ9 ಕನ್ನಡದ ವರದಿ ಪ್ರಕಾರ, ಸಂತ್ರಸ್ತೆ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರ 1991ರಲ್ಲಿ ಮೂರು ಎಕರೆ ಜಮೀನು ಮಂಜೂರು ಮಾಡಿತ್ತು. ಈ ಜಮೀನಿನಲ್ಲಿ ಸಂತ್ರಸ್ತೆಯ ಕುಟುಂಬ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಈ ಜಮೀನು ಸಾರ್ವಜನಿಕ ರಸ್ತೆಗೆ ತಾಗಿಕೊಂಡಿತ್ತು.
ಈ ಬಡ ಕುಟುಂಬದ ಜಮೀನಿನ ಮೇಲೆ ಕಣ್ಣು ಹಾಕಿದ್ದ ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ಸಾರ್ವಜನಿಕ ರಸ್ತೆಗೆ ಮೀಸಲಾದ ಜಾಗದ ಜೊತೆಗೆ ಬಡ ಕುಟುಂಬದ 20 ಗುಂಟೆ ಜಮೀನನ್ನೂ ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಒತ್ತುವರಿ ಮಾಡಿರುವುದನ್ನು ಸಂತ್ರಸ್ತೆಯ ಕುಟುಂಬ ಪ್ರಶ್ನಿಸುತ್ತಲೇ ಇತ್ತು. ಇದರಿಂದ ಕಿರಿಕಿರಿಗೊಳಗಾದ ಒತ್ತುವರಿದಾರರು, ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದ ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಆಕೆಯ ಜೊತೆಗಿದ್ದ ಪುತ್ರನ ಮೇಲೂ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಪೊಲೀಸ್ ದೂರು ದಾಖಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿರುವುದಾಗಿ ಟಿವಿ9 ವರದಿ ಮಾಡಿದೆ.
ವಂಟಮೂರಿಯಲ್ಲಿ ಏನಾಗಿತ್ತು
ಬೆಳಗಾವಿ ಹೊರ ವಲಯದ ವಂಟಮೂರಿ ಎಂಬಲ್ಲಿ 2023ರ ಡಿಸೆಂಬರ್‌ನಲ್ಲಿ ಕೆಲವರು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಮಹಿಳೆಯ ಪುತ್ರನ ಜೊತೆಗೆ ಯುವತಿ ಓಡಿ ಹೋದಳು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿತ್ತು. ಸಂತ್ರಸ್ತೆ ಮತ್ತು ಹಲ್ಲೆ ನಡೆಸಿದವರು ಒಂದೇ ಸಮುದಾಯಕ್ಕೆ ಸೇರಿದವರು.
ಇದಕ್ಕೆ ಸಂಬಂಧಿಸಿ ಆ ಸಂದರ್ಭದಲ್ಲೇ 7 ಮಂದಿಯನ್ನು ಬೆಳಗಾವಿ ನಗರದ ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದರು. ಮುಂದೆ, ನಾಲ್ಕೈದು ದಿನದ ಅವಧಿಯಲ್ಲಿ ಕರ್ತವ್ಯ ಲೋಪದ ಕಾರಣಕ್ಕೆ ಕಾಕತಿಯ ಸಿಪಿಐ ವಿಜಯ ಕುಮಾರ್ ಸಿನ್ನೂರ ಅಮಾನತಾಗಿದ್ದರು.
ವಂಟಮೂರಿ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಯುವತಿ ಕೆಲ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ಎರಡೂ ಮನೆಯವರ ಒಪ್ಪಿಗೆ ಇರಲಿಲ್ಲ. ಈ ವಿಚಾರವಾಗಿ ಜಗಳಗಳೂ ಆಗಿದ್ದವು. ವಿರೋಧದ ನಡುವೆ ಯುವಕ ಹಾಗೂ ಯುವತಿ ಮದುವೆಯಾಗಲು ನಿರ್ಧಾರಕ್ಕೆ ಬಂದು ಊರಿನಿಂದ ಓಡಿ ಹೋಗಿದ್ದರು.
ಯುವತಿ ಕಾಣೆಯಾಗುತ್ತಿದ್ದಂತೆ ಆಕ್ರೋಶಗೊಂಡ ಆಕೆಯ ಕಡೆಯವರು ಯುವಕನ ಮನೆಗೆ ಅದೇ ದಿನ ಮಧ್ಯರಾತ್ರಿಯೇ ಆಗಮಿಸಿ ಮಾಹಿತಿ ಕೇಳಿದ್ದರು. ಯುವಕನ ತಾಯಿ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಂತೆ ನಿನ್ನ ಸಹಕಾರದಿಂದ ನಮ್ಮ ಮಗಳನ್ನು ಹೊತ್ತುಕೊಂಡು ಹೋಗಿದ್ದಾನೆ. ನಿನ್ನ ಮಗನ ಮಾಹಿತಿ ನಿನಗೆ ಇದೆ ಎಂದು ಆಕ್ರೋಶ ಹೊರ ಹಾಕಿ, ಹಲ್ಲೆ ನಡೆಸಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)
