ಇಂದಿನಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ
ಕನ್ನಡ ಸುದ್ದಿ  /  ಕರ್ನಾಟಕ  /  ಇಂದಿನಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

ಇಂದಿನಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆಗಳು ಆಗಿದ್ದು, ಆಡಳಿತರೂಢ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದ ಉತ್ಸಾಹದಲ್ಲಿದೆ. ವೈಫಲ್ಯಗಳನ್ನು ಎತ್ತಿ ಹಿಡಿಯಲು ಬಿಜೆಪಿ ಅಣಿಯಾಗಿದೆ. ಹತ್ತು ದಿನ ಅಧಿವೇಶನ ಜೋರಾಗಿರಲಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಳಗಾವಿ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.
ಬೆಳಗಾವಿ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.

ಬೆಳಗಾವಿ: ಎರಡು ವಾರಗಳ ಚಳಿಗಾಲದ ಅಧಿವೇಶನ ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾಗಲಿದೆ. ಉಪ ಚುನಾವಣೆಗಳ ಗೆಲುವು ಮತ್ತು ಐದು ಗ್ಯಾರಂಟಿಗಳ ರಕ್ಷಣೆ ಪಡೆಯಲು ಸರ್ಕಾರ ಮುಂದಾಗಿದ್ದರೆ, ಗ್ಯಾರಂಟಿಗಳಿಗಾಗಿ ಅಭಿವೃದ್ಧಿ ಕುಂಠಿತಗೊಂಡಿರುವುದು, ವಕ್ಫ್‌ ನೋಟಿಸ್‌, ಮುಡಾ ಹಗರಣ, ಸಿಎಂ ಹುದ್ದೆ ಹಂಚಿಕೆ ಸೇರಿದಂತೆ ವಿವಿಧ ಹಗರಣಗಳನ್ನು ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಕಟ್ಟಿ ಹಾಕಲು ತುದಿಗಾಲಲ್ಲಿ ನಿಂತಿದೆ. ಆದರೆ ಬಿಜೆಪಿಯ ಬಣ ಬಡಿದಾಟ, ಉಪ ಚುನಾವಣೆಗಳ ಸೋಲು ಒಂದು ಹೆಜ್ಜೆಯನ್ನು ಹಿಂದಿಡುವಂತೆ ಮಾಡಿದೆ.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಗರಣಗಳ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದೆ. ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಗೆಲುವಿನ ವಿಶ್ವಾಸದೊಂದಿಗೆ ಕಾಂಗ್ರೆಸ್‌ ಸರ್ಕಾರ ಬೆಳಗಾವಿಗೆ ಆಗಮಿಸುತ್ತಿದೆ.

ಬಿಜೆಪಿ ಒಡೆದ ಮನೆಯಾಗಿದೆ. ಪಕ್ಷದ ಅಧ್ಯಕ್ಷರನ್ನೇ ಶಿಸ್ತಿನ ಪಕ್ಷದೊಳಗಿನ ಒಂದು ಗುಂಪು ಪ್ರಬಲವಾಗಿ ಹಾದಿಬೀದಿಗಳಲ್ಲಿ ವಿರೋಧಿಸುತ್ತಿದೆ. ಪಕ್ಷದ ಅಧ್ಯಕ್ಷರ ವಿರುದ್ಧವೇ ಭ್ರಷ್ಟಾಚಾರ, ಸಿಎಂ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪಗಳನ್ನು ಮಾಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಚಿವ ಸಂಪುಟ ಪ್ರಾಮಾಣಿಕ ಆಡಳಿತವನ್ನೇನೂ ನೀಡುತ್ತಿಲ್ಲ. ವಾಲ್ಮೀಕಿ ಹಗರಣದಿಂದ ಹಿಡಿದು ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನವರೆಗೆ ಹತ್ತಾರು ಹಗರಣಗಳಿವೆ. ಆಳಕ್ಕಿಳಿದು ಬಗೆದರೆ ಇನ್ನೂ ಹಲವು ಹಗರಣಗಳ ಗಣಿಯನ್ನು ಮೇಲೆತ್ತಬಹುದು. ಮೇಲ್ಮನೆ ಮತ್ತು ಕೆಳಮನೆಯಲ್ಲಿ ದುರ್ಬಲ ಪ್ರತಿಪಕ್ಷಗಳ ನಾಯಕರು ಇರುವುದು ಕಾಂಗ್ರೆಸ್‌ ಸರ್ಕಾರಕ್ಕೆ ವರದಾನವಾಗಿದೆ.

ಸದನದಲ್ಲಿ ಗದ್ದಲ

ಸದನದಲ್ಲಿ ಮುಡಾ ಹಗರಣ ಪ್ರಮುಖವಾಗಿ ಪ್ರಸ್ತಾಪವಾಗಲಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರೇ ನೇರ ಫಲಾನುಭವಿಯಾಗಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು ವಿಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದು. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ನ್ಯಾಯಾಂಗ ನಿಂದನೆಯಾಗಲಿದೆ ಎಂದು ಸರ್ಕಾರ ಪ್ರತಿಪಕ್ಷದ ಬಾಯಿ ಮುಚ್ಚಿಸಬಹುದು.

ವಕ್ಫ್‌ ನೋಟಿಸ್‌ ಬಿಜೆಪಿಯ ನೆಚ್ಚಿನ ಅಸ್ತ್ರ. ನೇರವಾಗಿ ತನ್ನ ಮುಸಲ್ಮಾನ ವಿರೋಧಿ ಅಜೆಂಡಾಗೆ ಹೊಂದಾಣಿಕೆಯಾಗುವುದು ಮತ್ತೊಂದು ಕಾರಣ. ಈಗಾಗಲೇ ಸರ್ಕಾರ ನೋಟಿಸ್‌ ಗಳನ್ನು ಹಿಂಪಡೆದಿದೆ ಒಂದು ಕೋಮಿನ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಸರ್ಕಾರವನ್ನು ಝಾಡಿಸಬಹುದು.

ಬಾಣಂತಿಯರ ಸಾವು

ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವು ಗಂಭೀರವಾದ ಲೋಪ. ಜೀವವನ್ನೇ ತೆಗೆಯುವಂತಹ ಔಷಧಗಳನ್ನು ಸರಬರಾಜು ಮಾಡುತ್ತಿದೆ ಎಂದರೆ ನಿಜಕ್ಕೂ ಸರ್ಕಾರಕ್ಕೆ ನಾಚಿಕೆಗೆಡಿನ ಸಂಗತಿ. ಬಿಜೆಪಿ ಮತ್ತು ಜೆಡಿಎಸ್‌ ಗಂಭೀರವಾಗಿ ಪ್ರಸ್ತಾಪಿಸಬೇಕಾದ ವಿಷಯ ಇದು. ರಾಜ್ಯದ ಸರಕಾರಿ ಅಸ್ಪತ್ರೆಗಳಲ್ಲಿ ಔಷಧಿಗಳಿಲ್ಲದರುವುದು ಮತ್ತೊಂದು ಲೋಪ. ಈ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲು ವಿಪಕ್ಷ ನಾಯಕ ಆರ್. ಅಶೋಕ್‌ ಅವರಿಗೆ ಅವರದ್ದೇ ಪಕ್ಷದ ಸಹಕಾರ ಸಿಗುವುದು ಕಷ್ಟಸಾಧ್ಯ.

ಬಿಜೆಪಿ ಭಿನ್ನಮತದ ಬೇನೆ

ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ನಡುವಿನ ಭಿನ್ನಮತ ಹಾದಿರಂಪ ಬೀದಿರಂಪವಾಗಿ ಮಾರ್ಪಟ್ಟಿದೆ. ಯತ್ನಾಳ್‌ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ಲಾಭವನ್ನು ಆಡಳಿತಾರೂಢ ಕಾಂಗ್ರೆಸ್‌ ಪಡೆಯದೆ ಇರಲಾರದು.

ಮೂರು ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಕಾಂಗ್ರೆಸ್‌ ಮನೆಯಲ್ಲಿ ಎಲ್ಲವೂ ಸರಿ ಇದೆ ಎಂದು ಅರ್ಥವಲ್ಲ. ಕೈ ಮನೆಯಲ್ಲೂ ಗೊಂದಲಗಳಿವೆ. ಅಧಿಕಾರ ಹಂಚಿಕೆ ವಿವಾದ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ.

ಡಿಸಿಎಂ ಶಿವಕುಮಾರ್‌ ಸಂದರ್ಶನವೊಂದರಲ್ಲಿ ಅಧಿಕಾರ ಹಂಚಿಕೆ ಕುರಿತು ನಮ್ಮಿಬ್ಬರ ನಡುವೆ ಒಪ್ಪಂದವಾಗಿದೆ ಎಂದು ಹೇಳಿದ್ದರು. ನಂತರ ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಮತ್ತೊಂದು ಕಡೆ ಹಾಸನ ಸಮಾವೇಶ ಪಕ್ಷ ಮತ್ತು ಸರ್ಕಾರದ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಹೇಳಬಹುದಾದರೂ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು ಮತ್ತು ಶಾಸಕರಿಗೆ ಅಸಮಾಧಾನ ಉಂಟಾಗಿರುವುದಂತೂ ಸುಳ್ಳಲ್ಲ. ಸಿದ್ಸರಾಮೋತ್ಸವ ನಡೆಸಿ ಸಿದ್ದರಾಮಯ್ಯ ಅವರನ್ನು ವಿಜೃಂಭಿಸಬೇಕು ಎಂದು ಅವರ ಬೆಂಬಲಿಗರ ಇರಾದೆಯಾಗಿತ್ತು. ಆದರೆ ಶಿವಕುಮಾರ್‌ ದಿಢೀರನೆ ಸಮಾವೇಶವನ್ನು ಹಿಡಿತಕ್ಕೆ ತೆಗೆದುಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿರುವುದಂತೂ ಸುಳ್ಳಲ್ಲ. ಈ ವಿವಾದವನ್ನು ಬಿಜೆಪಿ ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದೆ ಎನ್ನುವ ಪ್ರಶ್ನೆಯಂತೂ ಇದೆ.

ಜೆಡಿಎಸ್‌ನಲ್ಲೂ ಎಲ್ಲವು ಸರಿಯಿಲ್ಲ

ಚನ್ನಪಟ್ಟಣ ಫಲಿತಾಂಶ ಜೆಡಿಎಸ್‌ ಉತ್ಸಾಹವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಎಚ್.ಡಿ.ರೇವಣ್ಣ ಅವರ ಕುಟುಂಬ ಲೈಂಗಿಕ ಹಗರಣಗಳಲ್ಲಿ ಸಿಲುಕಿದ್ದು, ರೇವಣ್ಣ ಬಾಯಿ ಬಿಡುವುದು ಕಷ್ಟಸಾಧ್ಯ. ವಿರೋಧಕ್ಕಾಗಿ ವಿರೋಧ ಮಾಡಬಹುದು ಅಷ್ಟೇ.

ಕೊನೆಯದಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ. ಆದರೆ ಉದ್ಧೇಶ ಈಡೇರುತ್ತಿಲ್ಲ ಎನ್ನುವುದು ಚರ್ಚೆಯಂತೂ ಗಟ್ಟಿಯಾಗಿದೆ.

ವರದಿ: ಎಚ್‌.ಮಾರುತಿ.ಬೆಂಗಳೂರು

Whats_app_banner