Belagavi News: ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾದ ಪತಿ ಹತ್ಯೆ: ಗಂಡನ ದೇಹ ತುಂಡು ಮಾಡಿ ಜಮೀನಿಗೆ ಎಸೆದ ಹೆಂಡತಿ; ಸಿನೆಮಾ ನೆನಪಿಸುವ ಘಟನೆ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದ ಈ ಘಟನೆ ಸಿನಮೀಯವಾಗಿಯೇ ಇದೆ. ಪತಿಯನ್ನು ಕೊಂದು ದೇಹ ತುಂಡು ಮಾಡಿ ಎಸೆದ ಮಹಿಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಇದಕ್ಕೆ ಕಾರಣವೂ ಕೂಡ ಆಸಕ್ತಿದಾಯಕವಾಗಿಯೇ ಇದೆ.
ಬೆಳಗಾವಿ: ಮೂರು ತಿಂಗಳ ಹಿಂದೆಯಷ್ಟೇ ತಾನು ಪ್ರೀತಿಯಿಸಿದ ಯುವತಿಯನ್ನು ಕೊಂದು ಮೂವತ್ತಕ್ಕೂ ಅಧಿಕ ತುಂಡುಗಳಾಗಿ ದೇಹ ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸಿದ್ದ ಬೆಂಗಳೂರು ಘಟನೆ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದೆ. ಪತ್ನಿ ಸರಸಕ್ಕೆ ಬರಲಿಲ್ಲ ಎನ್ನುವ ಸಿಟ್ಟಿನಲ್ಲಿ ಕುಡಿದ ನಿಷೆಯಲ್ಲಿಯೇ ಮಗಳ ಮೇಲೆ ಎರಗಲು ಯತ್ನಿಸಿದ ಪತಿಯನ್ನು ಭಾರೀ ಗಾತ್ರದ ಕಲ್ಲು ಎಸೆದು ಕೊಲೆ ಮಾಡಿದ ಮಹಿಳೆ ನಂತರ ದೇಹವನ್ನು ತುಂಡು ಮಾಡಿ ಎಸೆದಿರುವ ಘಟನೆಯಿದು. ಇದು ನಡೆದಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಉಮರಾಣಿಯಲ್ಲಿ. ಪತಿಯನ್ನು ಕೊಂದ ನಂತರ ಸಾಕ್ಷ್ಯ ಸಿಗದಂತೆ ಆಕೆ ಬಳಸಿದ್ದ ಆಯುಧ, ಕಲ್ಲು, ಧರಿಸಿದ್ದ ಬಟ್ಟೆಗಳನ್ನೆಲ್ಲಾ ಬಾವಿಗೆ ಎಸೆದಿದ್ದಳು. ಪತಿ ಕೊಲೆಯಾಗಿದ್ದಾನೆ ಎಂದು ಪೊಲೀಸರಿಗೆ ಅದೇ ಮಹಿಳೆ ದೂರು ನೀಡಿದ್ದರೂ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪತಿ ಜೀವ ಬಿಟ್ಟರೆ ಆಕೆ ಜೈಲು ಪಾಲಾಗಿದ್ದಾಳೆ. ಮಕ್ಕಳು ತಂದೆ ತಾಯಿ ಇಲ್ಲದ ಶೋಕದಲ್ಲಿ ಮುಳುಗಿದ್ದಾರೆ.
ಕೊಲೆ ಕೃತ್ಯ ಹೇಗಿದೆ
15 ವರ್ಷದ ಹಿಂದೆ ಮದುವೆಯಾಗಿದ್ದ ಉಮರಾಣಿ ಗ್ರಾಮದ ಶ್ರೀಮಂತ ಕೊಲೆಯಾದರೆ, ಆತನ ಪತಿ ಸಾವಿತ್ರಿ ಇಟ್ನಾಳೆ(30)ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಳೆ. ಗ್ರಾಮದಲ್ಲಿಯೇ ಕೃಷಿ ಕೆಲಸ ಮಾಡಿಕೊಂಡಿದ್ದ ಶ್ರೀಮಂತ ಇಟ್ನಾಳೆ ಇತ್ತೀಚಿಗೆ ಕುಡಿತದ ದಾಸನೂ ಆಗಿದ್ದ. ಈ ವಿಚಾರದಲ್ಲಿ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಲೇ ಇದ್ದವು. ಮಕ್ಕಳ ಎದುರೇ ಹೊಡೆಯುವುದು ನಡೆದಿತ್ತು. ಇದರಿಂದ ಸಾವಿತ್ರಿ ರೋಸಿ ಹೋಗಿದ್ದಳು. ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನುವ ಅನುಮಾನದಿಂದಲೂ ಶ್ರೀಮಂತ ಕಿರಿಕಿರಿ ಮಾಡುತ್ತಿದ್ದ.
ಹೊಸ ವರ್ಷದ ಮುನ್ನಾ ದಿನವಾದ ಮಂಗಳವಾರ ಮನೆಯಲ್ಲಿ ಮತ್ತೆ ಜಗಳವಾಗಿದೆ. ಕುಡಿದು ಬಂದಿದ್ದ ಶ್ರೀಮಂತ ಪತ್ನಿಯನ್ನು ಸರಸಕ್ಕೆ ಆಹ್ವಾನಿಸಿದ್ದ. ಆಕೆ ಪತಿಗೆ ಬೈದಿದ್ದಳು. ಕುಡಿದ ನಿಶೆಯಲ್ಲಿ ಮಗಳ ಮೇಲೆಯೇ ಆತನ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ವೇಳೆ ರೊಚ್ಚಿಗೆದ್ದ ಮಹಿಳೆ, ಅಪ್ಪನೇ ಇಂತಹ ನೀಚಕೃತ್ಯಕ್ಕೆ ಮುಂದಾಗಿದ್ದನ್ನು ಕಂಡು ಅಲ್ಲಿಯೇ ಇದ್ದ ಭಾರೀ ಗಾತ್ರದ ಕಲ್ಲನ್ನು ಆತನ ತಲೆಯ ಮೇಲೆ ಎಸೆದಿದ್ದಳು.
ದೇಹ ತುಂಡರಿಸಿದ ಪತ್ನಿ
ಪತಿ ಮೃತಪಟ್ಟಿರುವುದನ್ನು ಗಮನಿಸಿದ ಆಕೆ ಆತನ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಳು. ಅಲ್ಲದೇ ಮನೆಯಲ್ಲಿದ್ದ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಾಟ ಮಾಡಿದ್ದಳು. ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಹಾಕಿದ್ದ ಪತ್ನಿ ಬಳಿಕ ಕತ್ತರಿಸಿದ್ದ ದೇಹದ ಭಾಗವನ್ನು ಮತ್ತೆ ಜೋಡಿಸಿದ ರೀತಿಯಲ್ಲಿ ಹಾಕಿದ್ದಳು
ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದಿದ್ದಳು. ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್ ಮಾಡಿ ಆ ಚೀಲವನ್ನು ಸಮೀಪವೇ ಇರುವ ಬಾವಿಗೆ ತೆಗೆದುಕೊಂಡು ಹೋಗಿ ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದು ವಾಪಸಾಗಿದ್ದಳು.
ಮಗಳಿಗೆ ಬಾಯಿ ಬಿಡದಂತೆ ಸೂಚನೆ
ಮನೆ ಬಂದವಳೇ ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿದ್ದೂ ಅಲ್ಲದೇ ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದಿದ್ದಳು. ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ ನಲ್ಲಿ ಬಚ್ಚಿಟ್ಟಿದ್ದಳು. ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು. ಘಟನೆಗೆ ಸಂಬಂಧಿಸಿದ ಯಾವುದನ್ನೂ ಯಾರಿಗೂ ಬಹಿರಂಗಪಡಿಸದಂತೆ ಮಗಳಿಗೆ ಸೂಚಿಸಿದ್ದಳು.
ಮರು ದಿನ ಬೆಳಿಗ್ಗೆ ಆತನ ದೇಹ ಜಮೀನಿನ ಬಳಿ ಸಿಕ್ಕಾಗ ಸ್ಥಳೀಯರು ಮಾಹಿತಿ ನೀಡಿದ್ದರು. ಪೊಲೀಸರಿಗೂ ದೂರು ನೀಡಲಾಗಿತ್ತು. ವಿಚಾರಣೆಯನ್ನು ಪೊಲೀಸರು ಆರಂಭಿಸಿದಾಗ ಈಗ ತನಗೇನೂ ಅರಿವಿಲ್ಲದಂತೆಯೇ ಇದ್ದಳು. ಕೊನೆಗೆ ಪೊಲೀಸರು ಅನುಮಾನಗೊಂಡು ಸಾವಿತ್ರಿಯನ್ನು ವಿಚಾರಿಸಿದಾಗ ಈ ಘಟನೆಯನ್ನೆಲ್ಲಾ ಒಪ್ಪಿಕೊಂಡಿದ್ದಾಳೆ.
ಪೊಲೀಸರ ಮುಂದೆ ಹೇಳಿಕೆ
ಗಂಡನ ಕೊಂದ ಬಳಿಕ ಮಕ್ಕಳು ಅನಾಥರಾಗ್ತಾರೆ ಅಂತಾ ಸಿನಿಮೀಯ ರೀತಿಯಲ್ಲಿ ಇದನ್ನೆಲ್ಲಾ ಯೋಜಿಸಿದ್ದಾಗಿ, ಮನೆಯಲ್ಲಿ ಶವ ಇದ್ರೇ ಅರೆಸ್ಟ್ ಮಾಡ್ತಾರೆ ಎನ್ನುವ ಭಯದಿಂದ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ಧಾಳೆ.
ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದ ಗಂಡನ ಕಿರುಕುಳ ತಾಳಲಾಗಲಿಲ್ಲ. ಅಲ್ಲದೇ ಅಂದು ಮನೆಯಲ್ಲಿ ನಡೆದ ಘಟನೆ ಕಾರಣದಿಂದ ಕೊಲೆ ಮಾಡಿದ್ದಾಗಿ ವಿವರಿಸಿದ್ದಾಳೆ ಎಂದು ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ.