ರಸ್ತೆಗೆ ಹೆಸರಿಟ್ಟು ಐಎಎಸ್ ಅಧಿಕಾರಿಗೆ ಗೌರವ ಸಲ್ಲಿಸಿದ ಬಳ್ಳಾರಿ ಜನ: ಕೋವಿಡ್ ಸಂಕಷ್ಟ ಕಾಲದ ನಿಸ್ಪೃಹ ಸೇವೆಗೆ ನಮನ
ಬಳ್ಳಾರಿಯ ಬಡಾವಣೆಯ ರಸ್ತೆಯೊಂದಕ್ಕೆ ಕನ್ನಡಿಗ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ಹೆಸರನ್ನು ಅಲ್ಲಿನ ಜನತೆ ಇರಿಸಿದೆ. ಕೋವಿಡ್ ಸಮಯದಲ್ಲಿ ಇವರು ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಆ ಸಂಕಷ್ಟ ಕಾಲದಲ್ಲಿ ಇವರು ಮಾಡಿದ ನಿಸ್ಪೃಹ ಸೇವೆಗೆ ಈ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ.

ಬಳ್ಳಾರಿ: ಕೋವಿಡ್ 19 ದಿನಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಸತತ ಎರಡು ವರ್ಷ ಜಗತ್ತನ್ನು ಕಾಡಿದ ಈ ಸೋಂಕು ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡಿತು. ಈ ವೇಳೆ ಜನರ ಸುರಕ್ಷತೆಯ ಜತೆಗೆ ಜೀವ ಉಳಿಸಲು, ಸಂಕಷ್ಟದಲ್ಲಿದ್ದವರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ದುಡಿದವರು ಅದೆಷ್ಟೋ ಜನ. ಕೆಲವರಂತೂ ಪ್ರಾಣದ ಹಂಗನ್ನೂ ತೊರೆದು ಜನರಿಗೆ ಆಸರೆಯಾದ ಉದಾಹರಣೆಗಳೂ ಸಾಕಷ್ಟಿವೆ. ಇದೇ ರೀತಿ ಗಣಿ ನಾಡು ಬಳ್ಳಾರಿಯಲ್ಲಿ ಆಗ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ತಂಡವನ್ನು ರೂಪಿಸಿ ಅವಿರತವಾಗಿ ದುಡಿದು ಕೋವಿಡ್‌ಗೆ ಸಿಲುಕಿದವರ ಪರವಾಗಿ ನಿಂತು ಪ್ರಾಮಾಣಿಕವಾಗಿಯೇ ದುಡಿದರು. ಪ್ರತಿಷ್ಟೆಯನ್ನೆಲ್ಲಾ ಬದಿಗಿಟ್ಟು ಕೆಲಸ ಮಾಡಿದರು. ಇದಕ್ಕೆ ಬಳ್ಳಾರಿ ಜನತೆ ಆ ಅಧಿಕಾರಿಯ ಹೆಸರನ್ನು ಬಡಾವಣೆಯ ರಸ್ತೆಯೊಂದಕ್ಕೆ ಇರಿಸಿ ಗೌರವ ಸಲ್ಲಿಸಿದೆ.
ಸದ್ಯ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಕಾರ್ಯದರ್ಶಿಯಾಗಿರುವ ಕನ್ನಡಿಗ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ಗೌರವಕ್ಕೆ ಪಾತ್ರರಾದವರು.
ಜನರಿಗೆ ಸಹಾಯ ಹಸ್ತ
ಎಲ್ಲೆಡೆ ಕೋವಿಡ್ ಮಿತಿಮೀರಿತ್ತು. ಆಗ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳು ಯೋಜನೆಯ ಜತೆಗೆ ಜನರಕ್ಷಣೆಯ ಬದ್ದತೆಯಿಂದ ಕೆಲಸ ಮಾಡಿದರು. ಜನರಿಗೆ ಸರಿಯಾದ ಸಮಯಕ್ಕೆ ಆಹಾರ ಸಿಗುವಂತೆ ನೋಡಿಕೊಂಡರು. ಕೋವಿಡ್‌ಗೆ ಸಿಲುಕಿದವರಿಗೆ ಚಿಕಿತ್ಸೆ, ಆಮ್ಲಜನಕ, ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿರುವಂತೆ ಯೋಜಿಸಿದರು. ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಅದೆಷ್ಟೋ ಜನರ ಪ್ರಾಣವನ್ನೂ ಉಳಿಸಿದರು. ಎಲ್ಲೆಡೆ ಇದ್ದಂತೆ ಬಳ್ಳಾರಿಯಲ್ಲೂ ಕೋವಿಡ್ ಸಕ್ರಿಯವಾಗಿದ್ದಾಗ ಅಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್.ನಕುಲ್ ಅವರಂತೂ ವಿಶೇಷ ಮುತುವರ್ಜಿ ವಹಿಸಿ ಕಾಳಜಿಯಿಂದಲೇ ಕೆಲಸ ಮಾಡಿದರು. ಜನರಿಗೆ ತೊಂದರೆಯಾಗಬಾರದು, ಅವರಿಗೆ ಅಗತ್ಯ ಸೌಲಭ್ಯಗಳು ತುರ್ತು ಸಮಯದಲ್ಲಿ ದೊರಕಲು ಯೋಜಿಸಿದರು. ಕೆಳ ಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರು. ತಾವೇ ಎಲ್ಲೆಡೆ ಸುತ್ತಾಡಿ ಬೇಕು ಬೇಡಗಳಿಗೆ ಸ್ಪಂದಿಸಿದರು.
ಜಿಲ್ಲೆಯಲ್ಲಿ ಕೋವಿಡ್ ವೆಚ್ಚದ ಲೆಕ್ಕಪರಿಶೋಧನಾ ವರದಿಯನ್ನು ಸಿದ್ಧಪಡಿಸಿ ಅಪ್‌ಲೋಡ್ ಮಾಡಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬಳ್ಳಾರಿ ಪಾತ್ರವಾಯಿತು.
ಅವರ ಕೆಲಸದ ಪರಿ ವಿಭಿನ್ನ
ಅವರು ಬಳ್ಳಾರಿ ಜಿಲ್ಲೆಯ ಖನಿಜ ನಿಧಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು ಕೋವಿಡ್ ಪರಿಹಾರಕ್ಕಾಗಿ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ಗಳನ್ನು ಸ್ಥಾಪಿಸುವುದು, ಆಮ್ಲಜನಕ ಟ್ಯಾಂಕ್‌ಗಳ ನಿರ್ಮಾಣ, ಮಾಸ್ಕ್‌ಗಳು, ಪಿಪಿಇ ಕಿಟ್‌ಗಳು, ಔಷಧಗಳು ಮತ್ತು ಉಪಕರಣಗಳನ್ನು ಖರೀದಿಸುವಲ್ಲಿ ಬಳಸಿ ಅನುಕರಣೀಯ ಹಾಗು ದಕ್ಷತೆ ತೋರಿದ್ದು ಮೆಚ್ಚುಗೆ ಗಳಿಸಿತ್ತು. ಇದು ಬಳ್ಳಾರಿ ಜನರ ಪ್ರೀತಿಗೂ ಪಾತ್ರವಾಗಿತ್ತು. ಎರಡು ವರ್ಷ ಬಳ್ಳಾರಿ ಡಿಸಿಯಾಗಿ ಅವರು ಕೆಲಸ ಮಾಡಿದ ನಂತರ ಕೇಂದ್ರ ಸೇವೆಗೆ ತೆರಳಿದರು.
ಆದರೆ ಬಳ್ಳಾರಿಯಲ್ಲಿ ಸರಳ, ದಕ್ಷ ಅಧಿಕಾರಿ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ಸ್ಥಳೀಯರು ಯೋಚಿಸುತ್ತಿದ್ದರು. ಇದಕ್ಕಾಗಿ ಅವರು ಬಡಾವಣೆಯ ರಸ್ತೆಯೊಂದಕ್ಕೆ ಅವರ ಹೆಸರು ಇಡಲು ತೀರ್ಮಾನಿಸಿದರು. ಅದು ಬಳ್ಳಾರಿಯ ಕಪಗಲ್ಲು ರಸ್ತೆಯ ಬಡಾವಣೆಯೊಂದರ ಪ್ರಮುಖ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಯಿತು.
ಒಬ್ಬ ಅಧಿಕಾರಿ ಹೇಗೆ ಇರಬೇಕು. ಪ್ರಾಮಾಣಿಕವಾಗಿದ್ದುಕೊಂಡು ಜನಮುಖಿಯಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ನಕುಲ್ ಅವರೇ ಉದಾಹರಣೆ. ಈ ಕಾರಣದಿಂದ ಅವರ ಹೆಸರನ್ನು ರಸ್ತೆ ಇರಿಸಿ ಗೌರವ ಸಲ್ಲಿಸಿದ್ದೇವೆ ಎನ್ನುವುದು ಬಳ್ಳಾರಿ ನಾಗೇಂದ್ರ ರೆಡ್ಡಿ ಅವರು ನೀಡುವ ವಿವರಣೆ.
ಕೊಡಗು ಮೂಲದ ನಕುಲ್
ನಕುಲ್ ಅವರು 2010 ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೂಲತಃ ಕೊಡಗಿನ ಕುಶಾಲನಗರದವರು. ಬಳ್ಳಾರಿಯಲ್ಲಿಯೇ ಎರಡು ವರ್ಷ ಜಿಪಂ ಸಿಇಒ ಆಗಿದ್ದ ಅವರನ್ನು ಸರ್ಕಾರ ನಂತರ ಡಿಸಿಯಾಗಿ ನೇಮಿಸಿತ್ತು. ಬಳ್ಳಾರಿಯಲ್ಲಿ ಜಿಪಂ ಸಿಇಒ ಆಗಿದ್ದಾಗ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ತಮ್ಮ ಪತ್ನಿಯನ್ನು ಹೆರಿಗೆಗೆ ದಾಖಲಿಸಿ ಸರಳತೆ ಮೆರೆದಿದ್ದ ಅಧಿಕಾರಿ ನಕುಲ್.
ದಶಕಗಳ ಹಿಂದೆ ಬಳ್ಳಾರಿಯಲ್ಲಿ ಡಿಸಿಯಾಗಿದ್ದ ಗೌರಿ ತ್ರಿವೇದಿ ಅವರು ಪರಿಶಿಷ್ಟ ವರ್ಗದವರಿಗೆ ಪುನರ್ವಸತಿ ಯೋಜನೆ ರೂಪಿಸಿ ಐದುನೂರು ಮನೆ ನಿರ್ಮಿಸಿಕೊಟ್ಟಿದ್ದರು. ಇದಕ್ಕಾಗಿ ಅವರ ಹೆಸರನ್ನೇ ಬಡಾವಣೆಗೆ ಇಡಲಾಗಿದೆ. ಜನರಿಗಾಗಿ ಕೆಲಸ ಮಾಡಿದ ಅಧಿಕಾರಿಗಳನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎನ್ನುವುದಕ್ಕೆ ಇವು ನೈಜ ಉದಾಹರಣೆಗಳೂ ಎಂದು ಹಿರಿಯ ಕೆಎಎಸ್ ಅಧಿಕಾರಿಯೂ ಆಗಿರುವ ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಸಚಿವ ಎಸ್.ಎನ್.ರುದ್ರೇಶ ಹೇಳುತ್ತಾರೆ.
