Bellary Doctor Kidnap: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅಪಹರಣ, ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು
Bellary Doctor Kidnap: ಆಘಾತಕಾರಿ ವಿದ್ಯಮಾನ ಒಂದರಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅವರ ಅಪಹರಣ ನಡೆದಿದೆ. ಇಂದು (ಜನವರಿ 25) ಬೆಳಗ್ಗೆ ದುಷ್ಕರ್ಮಿಗಳು ಡಾ ಸುನಿಲ್ ಅವರನ್ನು ಅಪಹರಣ ಮಾಡಿದ್ದು, ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Bellary Doctor Kidnap: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅವರನ್ನು ಇಂದು ಬೆಳಗ್ಗೆ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಈ ಕುರಿತು ಅವರ ಸಹೋದರ ವೇಣು ಎಂಬುವವರು ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡಾ ಸುನಿಲ್ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರು ಡಾ ಸುನಿಲ್ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಅಲ್ಲಿಂದಲೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರ ಜತೆಗೂ ಮಾತನಾಡಿದ ಜನಾರ್ದನ ರೆಡ್ಡಿ, ಕೂಡಲೇ ಅಪಹರಣಕಾರರನ್ನು ಹಿಡಿಯುವಂತೆ ಮನವಿ ಮಾಡಿದರು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ ಸುನಿಲ್ ಅಪಹರಣ
ವಾಡಿಕೆಯಂತೆ ಡಾ ಸುನಿಲ್ ಅವರು ಇಂದು (ಜನವರಿ 25) ಬೆಳಗ್ಗೆ ವಾಯುವಿಹಾರಕ್ಕಾಗಿ ತೆರಳಿದ್ದರು. ಅವರು ಸೂರ್ಯನಾರಾಯಣ ಪೇಟೆ ಶನೇಶ್ವರ ಗುಡಿ ಸಮೀಪ ಹೋಗುತ್ತಿದ್ದಾಗ, ಟಾಟಾ ಇಂಡಿಗೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹೊಂಚು ಹಾಕಿ ಸುನಿಲ್ ಅವರ ಬಾಯಿ ಮುಚ್ಚಿ ಕಾರಿನೊಳಕ್ಕೆ ಎಳೆದುಕೊಂಡು ಹೋಗಿದ್ದಾರೆ ಎಂದು ಅವರ ಸಹೋದರ ವೇಣು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಡಾ ಸುನಿಲ್ ಅವರ ಸಹೋದರ ವೇಣು ಅವರು ಬಳ್ಳಾರಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ. ಅವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಗಾಂಧಿನಗರ ಪೊಲೀಸರು ತನಿಖೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ಶುರುಮಾಡಿದ್ದಾರೆ.
ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು
ಈ ನಡುವೆ, ಡಾ ಸುನಿಲ್ ಅವರನ್ನು ಅಪರಹಣ ಮಾಡಿರುವ ದುಷ್ಕರ್ಮಿಗಳು ವೇಣು ಅವರಿಗೆ ಕರೆ ಮಾಡಿದ್ದಾರೆ. ಡಾ ಸುನಿಲ್ ಅವರನ್ನು ಬಿಡುಗಡೆ ಮಾಡಬೇಕಾದರೆ ಭಾರಿ ಮೊತ್ತ ನೀಡಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಲಾಗುತ್ತಿದೆ. ಭಾರಿ ಮೊತ್ತ ಎಷ್ಟು ಎಂಬುದು ನಿಖರವಾಗಿ ಬಹಿರಂಗವಾಗಿಲ್ಲ. ಕೆಲವು ಮಾಧ್ಯಮಗಳಲ್ಲಿ 3 ಕೋಟಿ ರೂಪಾಯಿ ಎಂದೂ ಇನ್ನು ಕೆಲವು ಮಾಧ್ಯಮಗಳಲ್ಲಿ 6 ಕೋಟಿ ರೂಪಾಯಿಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ. ನಿಖರ ಮಾಹಿತಿ ಪಡೆಯಲು ವೇಣು ಅವರ ಸಂಪರ್ಕ ಸಾಧ್ಯವಾಗಿಲ್ಲ. ಪೊಲೀಸರು ಕೂಡ ಮೊತ್ತದ ವಿಚಾರ ಬಹಿರಂಗಪಡಿಸಿಲ್ಲ.
