Breaking News: ಬಳ್ಳಾರಿ ಜೈಲು ಎರಡನೇ ಬಾರಿ ದರ್ಶನ; ಆಗ ನಟ, ಈಗ ಆರೋಪಿ, ಬೆಳ್ಳಂಬೆಳಿಗ್ಗೆ ಹೊರಟ ನಟನಿದ್ದ ವಾಹನ
Darshan Updates ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಅವರನ್ನು ಭಾರೀ ಭದ್ರತೆ ನಡುವೆ ಬೆಂಗಳೂರಿನಿಂದ ಆಂಧ್ರಪ್ರದೇಶ ಮೂಲಕ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.(ವರದಿ: ಮಾರುತಿ.ಬೆಂಗಳೂರು)
ಬೆಂಗಳೂರು: ಕಳೆದ ಬಾರಿ ಬಳ್ಳಾರಿ ಜೈಲಿಗೆ ಖ್ಯಾತ ನಟ ದರ್ಶನ್ ಭೇಟಿ ನೀಡಿದಾಗ ಸಾವಿರಾರು ಅಭಿಮಾನಿಗಳು ಅವರಿಗೆ ಸ್ವಾಗತ ಕೋರಿದ್ದರು. ಹಾರ, ತುರಾಯಿ, ಹೂವಿನ ಮಳೆಗೈದಿದ್ದರು. 2017 ರಲ್ಲಿ ದರ್ಶನ್ ನಟಿಸಿದ ಚೌಕ ಚಿತ್ರ ಬಳ್ಳಾರಿ ಜೈಲಿನಲ್ಲಿ ಚಿತ್ರೀಕರಣಗೊಂಡಿತ್ತು. ಆ ಚಿತ್ರದ ಕೆಲವು ದೃಶ್ಯಗಳನ್ನು ಬಳ್ಳಾರಿ ಜೈಲಿನಲ್ಲಿ ಶೂಟಿಂಗ್ ಮಾಡಲಾಗಿತ್ತು. ಅವರ ಅನೇಕ ಅಭಿಮಾನಿಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡಿದ್ದರು.
ಆದರೆ ಈಗ ಎಲ್ಲವೂ ಬದಲಾಗಿದೆ. ದರ್ಶನ್ ಜೈಲಿಗೆ ಬಂದಿದ್ದಾರೆ ಅಷ್ಟೇ. ಲೈಟ್ ಕ್ಯಾಮೆರಾ ಆಕ್ಷನ್ ಹೇಳುವವರಿಲ್ಲ.
ಬುಧವಾರ ರಾತ್ರಿ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಆಗ ನಟನಾಗಿ ಬಂದಿದ್ದ ದರ್ಶನ್ ಇಂದು ನಿಜ ಜೀವನದಲ್ಲಿ ಆರೋಪಿಯಾಗಿ ಬಂದಿದ್ದಾರೆ.
ಜೈಲಿನಲ್ಲಿರುವ ಇತರೆ ಆರೋಪಿಗಳು ಮತ್ತು ಅಪರಾಧಿಗಳು ಈಗಲೂ ನಟನೊಬ್ಬನನ್ನು ಹತ್ತಿರದಿಂದ ನೋಡಿದ್ದಾರೆ. ತೆರೆಯ ಮೇಲೆ ಹೀರೋ ಆಗಿ ನೋಡುವುದಕ್ಕೂ ಆರೋಪಿಯಾಗಿ ನೋಡುವುದಕ್ಕೂ ವ್ಯತ್ಯಾಸ ಕಂಡುಕೊಂಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುವುದು ಸುಲಭ ಅಲ್ಲ. ತಪ್ಪು ಮಾಡಿದರೆ ಬಳ್ಳಾರಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಆಗುತ್ತಿತ್ತು. ಅಷ್ಟೊಂದು ಸೆಖೆ. ಸಾಲದ್ದಕ್ಕೆ ಹಳೆಯ ಕಟ್ಟಡ. ಶೂಟಿಂಗ್ ಗೆ ಬಂದಿದ್ದಾಗ ಕೊಡೆ ಹಿಡಿಯುವವರು ಇದ್ದರು. ಇಲ್ಲಿ ಎಷ್ಟೊಂದು ಸೆಖೆ ಎಂದು ದರ್ಶನ್ ಉದ್ಗಾರ ತೆಗೆದಿದ್ದರು.
ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದರು. ದರ್ಶನ್ ದರ್ಶನಕ್ಕೆ ಕಾಯುತ್ತಿದ್ದರು. ಬಳ್ಳಾರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ತಾಲೂಕುಗಳಿಂದಲೂ ಬಂದಿದ್ದ ಅಭಿಮಾನಿಗಳ ದಂಡು ನೆರೆದಿತ್ತು.
ದರ್ಶನ್ ಕೃತ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಅಷ್ಟೊಂದು ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ಅಣ್ಣ ಅಪರಾಧ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯ ನಿರ್ಧರಿಸುತ್ತದೆ. ನಮ್ಮ ಪಾಲಿಗೆ ಆತ ಹೀರೋ. ಅವರು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಅಭಿಮಾನಿಯೊಬ್ಬ ಹೇಳುತ್ತಿದ್ದ.
ಬೆಂಗಳೂರಿನಲ್ಲಿ ಇರಲು ಉತ್ತಮ ರೆಸಾರ್ಟ್ ಯಾವುದು ಎಂದರೆ ಪರಪ್ಪನ ಅಗ್ರಹಾರ ಜೈಲು ಎಂಬ ಜೋಕ್ ಮೂರು ದಿನಗಳಿಂದ ಹರಿದಾಡುತ್ತಿದೆ. ಬಳ್ಳಾರಿ ಜೈಲಿನಲ್ಲಿದ್ದವರಿಗೆ ಇದು ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ರಾಜ್ಯದ ಕೆಟ್ಟ ಜೈಲುಗಳಲ್ಲಿ ಬಳ್ಳಾರಿ ಜೈಲಿಗೆ ಅಗ್ರಸ್ಥಾನ ಇದೆ. ಬಳ್ಳಾರಿ ಜೈಲಿನಲ್ಲಿ ವಾಸಿಸುವುದು ಕಷ್ಟ. ಇಲ್ಲಿನ ವ್ಯವಸ್ಥೆಗಳು ಹದಗೆಟ್ಟಿವೆ. ಊಟ ತಿಂಡಿ, ಕೋಣೆ ಯಾವುದೂ ಸರಿ ಇಲ್ಲ ಎಂದು ಇಲ್ಲಿ ಸಜೆ ಅನುಭವಿಸಿದ್ದವರೊಬ್ಬರು ಹೇಳುತ್ತಾರೆ.
ದರ್ಶನ್ ಅವರನ್ನು ಬಳ್ಳಾರಿಗೆ ಏಕೆ ಕರೆ ತಂದರು ಎನ್ನುವುದು ಇನ್ನೂ ನಿಗೂಢವಾಗಿದೆ. ಹಣವಂತರಿಗೆ ಇಲ್ಲಿ ಸಕಲ ಸೌಲಭ್ಯಗಳೂ ಲಭ್ಯ. ಬಿರಿಯಾನಿ, ಸಿಗರೇಟು, ಗಾಂಜಾ ಕೂಡಾ ಸಿಗುತ್ತದೆ. ಆದರೆ ಹಣ ಕೊಡಬೇಕು ಅಷ್ಟೇ ಎನ್ನುವ ಗಂಭೀರ ಆರೋಪಗಳಿವೆ. ಈ ಕಾರಣದಿಂದಲೇ ದರ್ಶನ್ ಬೆಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರಗೊಂಡಿದ್ದಾರೆ.
ಗುರುವಾರ ಬೆಂಗಳೂರಿನಿಂದ ಭಾರಿ ಬಿಗಿ ಭದ್ರತೆ ನಡುವೆ ಬೆಳಗಿನ ಜಾವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆ ತರಲಾಗಿದೆ. ಆಂಧ್ರ ಪ್ರದೇಶದ ಮಾರ್ಗವಾಗಿ ಬಳ್ಳಾರಿಗೆ ದರ್ಶನ್ ಅವರನ್ನು ಭಾರೀ ಬಿಗಿ ಭದ್ರತೆ ನಡುವೆ ಕರೆ ತರಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಇತರೆ ಹತ್ತು ಆರೋಪಿಗಳನ್ನು ಮೈಸೂರು, ವಿಜಯಪುರ, ಕಲಬುರಗಿ, ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
(ವರದಿ: ಎಚ್. ಮಾರುತಿ , ಬೆಂಗಳೂರು)