ಬೆಳ್ತಂಗಡಿ ಮಾಲಾಡಿಯಲ್ಲಿ ಕುಟುಂಬವೊಂದಕ್ಕೆ ಪ್ರೇತಕಾಟದ ಶಂಕೆ, ಕುಟುಂಬದ ಫೋಟೋಗಳು ಮತ್ತು ವಿಡಿಯೋ ವೈರಲ್
Belthangady Ghost Story: ಬೆಳ್ತಂಗಡಿ ತಾಲೂಕು ಮಾಲಾಡಿಯ ಮನೆಯೊಂದರಲ್ಲಿ ಪ್ರೇತಕಾಟದ ಶಂಕೆ ವ್ಯಕ್ತವಾಗಿದೆ. ಅಲ್ಲಿ ವಾಸವಿರುವ ಕುಟುಂಬ ಪ್ರೇತಕಾಟದ ಸುದ್ದಿ ಹರಡಿದ್ದು, ನಿತ್ಯವೂ ಹಲವಾರು ಜನ ಇಲ್ಲಿಗೆ ಆಗಮಿಸತೊಡಗಿದ್ದು, ಸತ್ಯಶೋಧನೆಗೆ ಮುಂದಾಗಿದ್ಧಾರೆ. ಇದು ಕಿರಿಕಿರಿ ಉಂಟುಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕುಟುಂಬದ ಫೋಟೋಗಳು, ವಿಡಿಯೋ ವೈರಲ್ ಆಗಿವೆ.

Belthangady Ghost Story: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಮಾಲಾಡಿ ಸಮೀಪದ ಮನೆಯೊಂದರಲ್ಲಿ ಪ್ರೇತಕಾಟದ ಶಂಕೆ ವ್ಯಕ್ತವಾಗಿದೆ. ಮಾಟ - ಮಂತ್ರದ ಭಯದೊಂದಿಗೆ ಊರು ತುಂಬಾ ಪ್ರೇತದ ಕಾಟ ಎಂದು ಆ ಮನೆಯಲ್ಲಿ ವಾಸವಿದ್ದ ಕುಟುಂಬ ಹೇಳಿಕೊಂಡು ಬಂದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರೇತಕಾಟ ನಿಜವೋ ಅಥವಾ ಸುಳ್ಳೋ ಎಂಬುದನ್ನು ದೃಢೀಕರಿಸುವುದು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ಸಾಧ್ಯವಾಗಿಲ್ಲ. ಆದಾಗ್ಯೂ, ಈ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿರುವ ಕಾರಣ ಮಾಹಿತಿ ದೃಷ್ಟಿಯಿಂದ ಇಲ್ಲಿ ನೀಡಲಾಗಿದೆ.
ಬೆಳ್ತಂಗಡಿ ಮಾಲಾಡಿಯಲ್ಲಿ ಕುಟುಂಬವೊಂದಕ್ಕೆ ಪ್ರೇತಕಾಟದ ಶಂಕೆ
ಮಾಲಾಡಿಯ ಮನೆಯವರು ಪ್ರೇತಾತ್ಮ ಕಾಟದ ಬಗ್ಗೆ ಹೇಳಿಕೊಳ್ಳುತ್ತಿದ್ದು, ಇಡೀ ಕುಟುಂಬ ಹಲವು ರೀತಿಯ ಅನುಭವಗಳನ್ನು ಊರು ತುಂಬಾ ಹೇಳಿಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಮನೆಯ ಬಾಲಕಿ ಕೂಡ ಪ್ರೇತಾತ್ಮದ ಅನುಭವ ಹೇಳುತ್ತಿದ್ದು, ಮೊಬೈಲ್‌ನಲ್ಲಿ ಫೋಟೋ ತೆಗೆದಾಗ ಕಂಡ ವಿಚಿತ್ರ ರೂಪ ಇದು ಎಂದು ಫೋಟೋವನ್ನು ತೋರಿಸಿದ್ದು, ಅದು ಕೂಡ ಈಗ ವೈರಲ್ ಆಗಿದೆ.
ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಾಲಾಡಿಯ ಈ ಮನೆಯಲ್ಲಿ ವಾಸವಿರುವ ಕುಟುಂಬದ ಮುಖ್ಯಸ್ಥ ಊರು ತುಂಬಾ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಮನೆಯ ವಿಡಿಯೋ, ಮನೆಯ ಮಹಿಳೆಯ ವಿಚಿತ್ರ ವರ್ತನೆಯ ವಿಡಿಯೋ, ಕತ್ತಲಲ್ಲಿ ಕಂಡ ಮಾಸ್ಕ್‌ನ ಫೋಟೋವನ್ನು ಊರು ತುಂಬಾ ಶೇರ್ ಮಾಡಿದ್ದಾರೆ.
ಮೂರು ತಿಂಗಳಿಂದ ಈ ರೀತಿ ವಿಚಿತ್ರ ಅನುಭವವಾಗುತ್ತಿದೆ ಎಂದು ಹೇಳಿಕೊಂಡಿರುವ ಕುಟುಂಬ, ರಾತ್ರಿ ವೇಳೆ ಮನೆಯಲ್ಲಿ ಮಲಗಿ ನಿದ್ರಿಸೋದು ಸಾಧ್ಯವಾಗುತ್ತಿಲ್ಲ. ಕತ್ತು ಹಿಸುಕಿದ ಅನುಭವವಾಗುತ್ತಿದೆ. ಬಟ್ಟೆಗಳನ್ನು ಸುಟ್ಟುಹಾಕುತ್ತಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಬಿಸಾಕಿರುವುದು ಕಂಡುಬರುತ್ತದೆ. ಯಾರೋ ಮನೆ ತುಂಬಾ ಓಡಾಡುತ್ತಿರುವ ಅನುಭವವಾಗುತ್ತಿದೆ ಎಂದು ಕುಟುಂಬ ಮುಖ್ಯಸ್ಥರು ಹೇಳಿಕೊಂಡಿರುವುದು ಮಾಧ್ಯಮಗಳಲ್ಲೂ ಬಿತ್ತರವಾಗಿದೆ.
ಗ್ರಾಮಸ್ಥರು ಹೇಳುವುದಿಷ್ಟು
ಮಾಲಾಡಿಯ ಈ ಮನೆಯಲ್ಲಿದ್ದವರಿಗೆ ಪ್ರೇತಕಾಟ ಇರುವ ಸುದ್ದಿ ಊರು ತುಂಬಾ ಹರಿದಾಡಿದೆ. ಹೀಗಾಗಿ ನಿತ್ಯವೂ ಇಲ್ಲಿಗೆ ನೂರಾರು ಜನ ಬರುತ್ತಿದ್ದಾರೆ. ಅನೇಕರು ಸತ್ಯಶೋಧನೆಗೆ ಮುಂದಾಗುತ್ತಾರೆ. ಮಧ್ಯರಾತ್ರಿಯೂ ಇಲ್ಲಿಗೆ ಜನ ಬರುತ್ತಿದ್ದು, ಗ್ರಾಮಸ್ಥರಿಗೆ, ಅಕ್ಕಪಕ್ಕದ ಮನೆಯವರಿಗೆಲ್ಲ ಕಿರಿಕಿರಿಯಾಗತೊಡಗಿದೆ ಎಂದು ಮಾಲಾಡಿ ಗ್ರಾಮಸ್ಥ ದಿನೇಶ್ ಅಳಲು ತೋಡಿಕೊಂಡಿದ್ದಾರೆ.
